ಪ್ರಧಾನ ಮಂತ್ರಿಯವರ ಕಛೇರಿ
ಒಲಿಂಪಿಕ್ಸ್ ತಯಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನ ಮಂತ್ರಿ
ಕ್ರೀಡೆ ನಮ್ಮ ರಾಷ್ಟ್ರೀಯ ಗುಣ ನಡತೆಯಲ್ಲಿ ಹೃದಯದ ಸ್ಥಾನದಲ್ಲಿದೆ ಮತ್ತು ನಮ್ಮ ಯುವಕರು ಬಲಿಷ್ಠ ಹಾಗು ರೋಮಾಂಚಕಾರಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ: ಪ್ರಧಾನ ಮಂತ್ರಿ
135 ಕೋಟಿ ಭಾರತೀಯರ ಹಾರೈಕೆಗಳು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಯುವಜನತೆಯ ಮೇಲಿರಲಿವೆ: ಪ್ರಧಾನ ಮಂತ್ರಿ
ಲಸಿಕಾಕರಣದಿಂದ ಹಿಡಿದು ತರಬೇತಿ ಸೌಲಭ್ಯಗಳವರೆಗೆ, ನಮ್ಮ ಕ್ರೀಡಾಳುಗಳ ಪ್ರತೀ ಆವಶ್ಯಕತೆಯನ್ನು ಗರಿಷ್ಠ ಆದ್ಯತೆಯಲ್ಲಿ ಈಡೇರಿಸಬೇಕು: ಪ್ರಧಾನ ಮಂತ್ರಿ
ಜಾಗತಿಕ ವೇದಿಕೆಯ ಮೇಲೆ ಮಿಂಚುವ ಪ್ರತೀ ಕ್ರೀಡಾಳುವಿನಿಂದಾಗಿ ಮತ್ತೆ ಸಾವಿರಕ್ಕೂ ಅಧಿಕ ಮಂದಿ ಕ್ರೀಡೆಗೆ ಬರಲು ಪ್ರೇರಣೆ ಪಡೆಯುತ್ತಾರೆ: ಪ್ರಧಾನ ಮಂತ್ರಿ
ಕ್ರೀಡಾಳುಗಳಿಗೆ ಉತ್ತೇಜನ ನೀಡಲು ಮತ್ತು ಹೆಮ್ಮೆಯ ದೇಶ ಅವರೊಂದಿಗೆ ಇರುತ್ತದೆ ಎಂದು ಭರವಸೆ ನೀಡಲು ಜುಲೈಯಲ್ಲಿ ನಮ್ಮ ಒಲಿಂಪಿಕ್ ತಂಡದ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಾನು ಸಂಪರ್ಕದಲ್ಲಿರುತ್ತೇನೆ: ಪ್ರಧಾನ ಮಂತ್ರಿ
Posted On:
03 JUN 2021 4:31PM by PIB Bengaluru
ಟೋಕಿಯೋ ಒಲಿಂಪಿಕ್ಸ್ ಗೆ 50 ದಿನಗಳಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಒಲಿಂಪಿಕ್ಸ್ ಸಿದ್ಧತೆಗಳ ಬಗ್ಗೆ ಇಂದು ಪ್ರಗತಿ ಪರಿಶೀಲನೆ ನಡೆಸಿದರು. ಬರಲಿರುವ ಟೊಕಿಯೋ ಒಲಿಂಪಿಕ್ಸ್ ಗೆ ಕಾರ್ಯಾಚರಣಾ ಸಿದ್ದತಾಸ್ಥಿತಿಯ ವಿವಿಧ ಆಯಾಮಗಳ ಬಗ್ಗೆ ಅಧಿಕಾರಿಗಳು ಪ್ರದರ್ಶಿಕೆಯನ್ನು ಪ್ರಸ್ತುತಪಡಿಸಿದರು. ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಗೆ ಜಾಗತಿಕ ಸಾಂಕ್ರಾಮಿಕದ ನಡುವೆಯೂ ಕ್ರೀಡಾಳುಗಳಿಗೆ ಅಡೆ ತಡೆರಹಿತ ತರಬೇತಿ ಖಾತ್ರಿಪಡಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಲಾಯಿತು ಹಾಗು ಒಲಿಂಪಿಕ್ ಕೋಟಾ ಗೆಲ್ಲಲು ಅಂತಾರಾಷ್ಟ್ರೀಯ ಸ್ಪರ್ದೆಗಳಲ್ಲಿ ಭಾಗವಹಿಸಲು ಕೈಗೊಂಡ ಕ್ರಮಗಳು, ಕ್ರೀಡಾಳುಗಳಿಗೆ ಲಸಿಕೆ ನೀಡುವಿಕೆ ಮತ್ತು ಅವರಿಗೆ ವೈಯಕ್ತಿಕ ನೆಲೆಯಲ್ಲಿ ಬೆಂಬಲ ಕುರಿತೂ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು.
ಕ್ರೀಡಾಳುಗಳ ಪೂರಕ ಸಿಬ್ಬಂದಿಗೆ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ವರದಿ ಸಲ್ಲಿಸಿದಾಗ ಪ್ರಧಾನ ಮಂತ್ರಿ ಅವರು ಪ್ರತೀ ಅರ್ಹ/ ಸಂಭಾವ್ಯ ಕ್ರೀಡಾಳು, ಪೂರಕ ಸಿಬ್ಬಂದಿ ಮತ್ತು ಟೊಕಿಯೋ ಒಲಿಂಪಿಕ್ಸ್ ಗೆ ಪ್ರಯಾಣಿಸುವ ಅಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ನಮ್ಮ ಒಲಿಂಪಿಕ್ಸ್ ತಂಡದ ಜೊತೆ ಜುಲೈ ತಿಂಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ತಾವು ಸಂಪರ್ಕದಲ್ಲಿರುವುದಾಗಿ ಹೇಳಿದ ಪ್ರಧಾನ ಮಂತ್ರಿಗಳು ಅವರಿಗೆ ಪ್ರೋತ್ಸಾಹ, ಉತ್ತೇಜನ ನೀಡಿ ಎಲ್ಲಾ ಭಾರತೀಯರ ಪರವಾಗಿ ಶುಭ ಹಾರೈಸುವುದಾಗಿಯೂ ಹೇಳಿದರು. ಕ್ರೀಡೆ ನಮ್ಮ ರಾಷ್ಟ್ರೀಯ ಗುಣ ನಡತೆಯ ಹೃದಯ ಭಾಗದಲ್ಲಿದೆ ಮತ್ತು ನಮ್ಮ ಯುವಕರು ಬಲಿಷ್ಠ ಹಾಗು ರೋಮಾಂಚಕ ಕ್ರೀಡಾ ಸಂಸ್ಕೃತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದರು. 135 ಕೋಟಿ ಭಾರತೀಯರ ಶುಭ ಹಾರೈಕೆಗಳು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ನಮ್ಮ ಯುವ ಜನತೆಯೊಂದಿಗೆ ಇರುತ್ತವೆ ಎಂದರು. ಜಾಗತಿಕ ವೇದಿಕೆಯಲ್ಲಿ ಮಿಂಚುವ ಪ್ರತೀ ಯುವ ಕ್ರೀಡಾಳುವಿನಿಂದಾಗಿ ಸಾವಿರಾರು ಮಂದಿ ಕ್ರೀಡಾ ಕ್ಷೇತ್ರಕ್ಕೆ ಬರಲು ಸ್ಫೂರ್ತಿ ಪಡೆಯುತ್ತಾರೆ ಎಂದರು.
ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವಾಗ ಕ್ರೀಡಾಳುಗಳನ್ನು ಉತ್ತೇಜಿಸಲು ಮತ್ತು ಅವರ ನೈತಿಕ ಶಕ್ತಿಯನ್ನು ಉದ್ದೀಪಿಸಲು ವಿಶೇಷ ಗಮನ ನೀಡಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದರು. ಆದುದರಿಂದ ಅವರ ಪೋಷಕರ ಜೊತೆ ಮತ್ತು ಭಾರತದಲ್ಲಿರುವ ಅವರ ಕುಟುಂಬದ ಸದಸ್ಯರ ಜೊತೆ ಸ್ಪರ್ಧೆಯ ಸಮಯದಲ್ಲಿ ನಿಯಮಿತವಾಗಿ ವೀಡಿಯೋ ಕಾನ್ಫರೆನ್ಸ್ ನಡೆಸಲಾಗುತ್ತದೆ ಎಂದೂ ಅವರು ತಿಳಿಸಿದರು.
11 ಕ್ರೀಡಾ ಕ್ಷೇತ್ರಗಳಲ್ಲಿ 100 ಮಂದಿ ಕ್ರೀಡಾಳುಗಳು ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದ್ದಾರೆ ಹಾಗು ಇನ್ನೂ 25 ಮಂದಿ ಕ್ರೀಡಾಳುಗಳು ಟೊಕಿಯೋ ಒಲಿಂಪಿಕ್ಸ್ ಗೆ ಅರ್ಹರಾಗುವ ಸಾಧ್ಯತೆ ಇದೆ, ಇದರ ವಿವರಗಳು 2021 ರ ಜೂನ್ ಅಂತ್ಯದೊಳಗೆ ಲಭ್ಯವಾಗಲಿವೆ. 2016ರಲ್ಲಿ ರಿಯೋಡಿಜನೈರೋದಲ್ಲಿ ನಡೆದ ಪ್ಯಾರಾಒಲಿಂಪಿಕ್ಸ್ ನಲ್ಲಿ 19 ಭಾರತೀಯ ಕ್ರೀಡಾಳುಗಳು ಭಾಗವಹಿಸಿದ್ದರು. 26 ಪ್ಯಾರಾ ಕ್ರೀಡಾಳುಗಳು ಅರ್ಹತೆ ಗಳಿಸಿದ್ದು, ಇನ್ನೂ 16 ಕ್ರೀಡಾಳುಗಳು ಟೊಕಿಯೋ ಒಲಿಂಪಿಕ್ಸ್ ಗೆ ಅರ್ಹರಾಗುವ ಸಾಧ್ಯತೆ ಇದೆ ಎಂದು ಪ್ರಧಾನ ಮಂತ್ರಿ ಅವರಿಗೆ ತಿಳಿಸಲಾಯಿತು.
***
(Release ID: 1724172)
Visitor Counter : 220
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam