ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

5ಜಿ ತಂತ್ರಜ್ಞಾನ ಮತ್ತು ಕೋವಿಡ್-19 ಹರಡುವಿಕೆ ನಡುವೆ ಸಂಬಂಧವಿಲ್ಲ

Posted On: 10 MAY 2021 8:16PM by PIB Bengaluru

5ಜಿ ಮೊಬೈಲ್ ಟವರ್ ಗಳ ಪರೀಕ್ಷೆಯಿಂದಾಗಿ ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿದೆ ಎಂಬ ಕುರಿತು ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಗೆಯ ಸುಳ್ಳು ಮತ್ತು ದಿಕ್ಕು ತಪ್ಪಿಸುವ ಸಂದೇಶಗಳು ಹರಿದಾಡುತ್ತಿರುವುದು ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆ (ಡಿಒಟಿ) ಗಮನಕ್ಕೆ ಬಂದಿದೆ. ಡಿಒಟಿ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಸಂದೇಶಗಳು ಸುಳ್ಳು ಮತ್ತು ತಪ್ಪುಗಳಿಂದ ಕೂಡಿವೆ. ಕೋವಿಡ್-19 ಹರಡುವುದು ಮತ್ತು 5ಜಿ ತಂತ್ರಜ್ಞಾನದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗುತ್ತಿದೆ. ರೀತಿಯ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡಿ ಜನರನ್ನು ದಾರಿತಪ್ಪಿಸಬಾರದು ಎಂದು ಇಲಾಖೆ ಮನವಿ ಮಾಡಿದೆ. 5ಜಿ ತಂತ್ರಜ್ಞಾನದ ಜೊತೆ ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧ ಕಲ್ಪಿಸಿರುವುದು ತಪ್ಪು ಮತ್ತು ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಇಲಾಖೆ ಪ್ರತಿಪಾದಿಸಿದೆ. ಅಲ್ಲದೆ ಭಾರತದಲ್ಲಿ ಎಲ್ಲೂ 5ಜಿ ಜಾಲದ ಪರೀಕ್ಷೆ ಇನ್ನೂ ಆರಂಭವಾಗಿಯೇ ಇಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ. ಆದ್ದರಿಂದ 5ಜಿ ತಂತ್ರಜ್ಞಾನದ ಪರೀಕ್ಷೆ ಅಥವಾ ಸಂಪರ್ಕ ಜಾಲ ಭಾರತದಲ್ಲಿ ಕೊರೊನಾ ಸೋಂಕು ಹರಡಲು ಕಾರಣವಾಗುತ್ತಿದೆ ಎಂಬುದು ನಿರಾಧಾರ ಮತ್ತು ಸುಳ್ಳು ಎಂದು ಇಲಾಖೆ ಹೇಳಿದೆ.

ಮೊಬೈಲ್ ಟವರ್ ಗಳು  ನಾನ್ ಅಯೊನೈಜಿಂಗ್ ರೇಡಿಯೋ ತರಂಗಾಂತರಗಳನ್ನು ಹೊರಹಾಕಲಿದ್ದು, ಅವು ಅತ್ಯಂತ ಕಡಿಮೆ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಮನುಷ್ಯರು ಸೇರಿದಂತೆ ಜೀವಂತ ಕೋಶಗಳ ಮೇಲೆ ಯಾವುದೇ ರೀತಿಯ ಹಾನಿಯನ್ನು ಮಾಡುವ ಸಾಮರ್ಥ್ಯ ಅವುಗಳಿಗಿರುವುದಿಲ್ಲ. ದೂರಸಂಪರ್ಕ ಇಲಾಖೆ(ಡಿಒಟಿ) ರೇಡಿಯೋ ತರಂಗಾಂತರ ಕ್ಷೇತ್ರ(ಅಂದರೆ ಬೇಸ್ ಸ್ಟೇಷನ್ ಎಮಿಷನ್ಸ್)ಕ್ಕೆ ತೆರೆದುಕೊಳ್ಳಬಹುದಾದ ಮಿತಿಯನ್ನು ನಿಗದಿಪಡಿಸಿದೆ. ಅವು ಸುರಕ್ಷಿತ ಅಂತಾರಾಷ್ಟ್ರೀಯ ನಾನ್ ಅಯೊನೈಜಿಂಗ್ ರೇಡಿಯೇಷನ್ ಪ್ರೊಟೆಕ್ಷನ್ ಕಮಿಷನ್(ಐಸಿಎನ್ಐಆರ್ ಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿರುವ ಸುರಕ್ಷತಾ ಮಾನದಂಡಗಳಿಗಿಂತ ಹತ್ತು ಪಟ್ಟು ಕಠಿಣವಾಗಿವೆ.

ಡಿಒಟಿ ಈಗಾಗಲೇ ಕೈಗೊಂಡಿರುವ ಉಪಕ್ರಮಗಳು:

ದೂರಸಂಪರ್ಕ ಇಲಾಖೆ, ಟಿಎಸ್ ಪಿಗಳು ಕಡ್ಡಾಯವಾಗಿ ನಿಗದಿತ ಮಾನದಂಡಗಳನ್ನು ಪಾಲನೆ ಮಾಡುವ ಪ್ರಕ್ರಿಯೆ ಕುರಿತು ಅತ್ಯಂತ ವ್ಯವಸ್ಥಿತವಾದ ಪ್ರಕ್ರಿಯೆಯನ್ನು ನಿಗದಿಪಡಿಸಿದೆ. ಆದರೆ ಯಾರಿಗಾದರೂ ಯಾವುದೇ ಮೊಬೈಲ್ ಟವರ್, ಇಲಾಖೆ ನಿಗದಿಪಡಿಸಿದ  ಸುರಕ್ಷಿತ ಮಿತಿಗಿಂತ ಹೆಚ್ಚಿನ ರೇಡಿಯೋ ಕಿರಣಗಳನ್ನು ಹೊರಹಾಕುತ್ತಿದೆ ಎಂದೆನಿಸಿದರೆ ಅವರು ತರಂಗ ಸಂಚಾರ್ ಪೋರ್ಟಲ್ https://tarangsanchar.gov.in/emfportal  ಮೂಲಕ ಇಎಂಎಫ್  ಪರೀಕ್ಷೆ ಮಾಡಿಸಲು ಮನವಿ ಮಾಡಬಹುದು.

ಮೊಬೈಲ್ ಟವರ್ ಗಳು ಹೊರಹಾಕುವ ಇಎಂಎಫ್ ಕಿರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ ಎಂಬ ಕುರಿತು ಜನಸಾಮಾನ್ಯರಲ್ಲಿರುವ ಭಯವನ್ನು ಹೋಗಲಾಡಿಸಲು ದೂರಸಂಪರ್ಕ ಇಲಾಖೆ ಇಎಂಎಫ್ ವಿಕಿರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳೆಂದರೆ ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮ, ಇಎಂಎಫ್ ಗೆ ಸಂಬಂಧಿಸಿದ ನಾನಾ ವಿಷಯಗಳ ಕುರಿತ ಕರಪತ್ರ/ಮಾಹಿತಿ ಕೈಪಿಡಿ ವಿತರಣೆ, ಡಿಒಟಿ ವೆಬ್ ಸೈಟ್ ನಲ್ಲಿ ಇಎಂಎಫ್ ಗೆ ಸಂಬಂಧಿಸಿದ ವಿಸ್ತೃತ ಮಾಹಿತಿ ಪ್ರಕಟಣೆ ತರಂಗ್ ಸಂಚಾರ್ಪೋರ್ಟಲ್ ಆರಂಭ ಕುರಿತು ದಿನಪತ್ರಿಕೆಗಳಲ್ಲಿ ಜಾಹಿರಾತು ಮತ್ತಿತರ ಕ್ರಮಗಳು ಸೇರಿವೆ. ದೂರಸಂಪರ್ಕ ಇಲಾಖೆಯ ಕ್ಷೇತ್ರ ಘಟಕಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚು ಹೆಚ್ಚು ಜನರಿಗೆ ಮೊಬೈಲ್ ಟವರ್ ಗಳು ಹೊರಹಾಕುವ ಇಎಂಎಫ್ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಕುರಿತ ವೈಜ್ಞಾನಿಕ ವಾಸ್ತವಾಂಶಗಳ ಬಗ್ಗೆ ಅರಿವು ಮೂಡಿಸುತ್ತಿದೆ

***(Release ID: 1717727) Visitor Counter : 185