ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಘನತೆವೆತ್ತ ಜಪಾನ್ ಪ್ರಧಾನಿ ಶ್ರೀ ಸುಗಾ ಯೋಶಿಹಿಡೆ ಅವರ ನಡುವೆ ದೂರವಾಣಿ ಸಂಭಾಷಣೆ

Posted On: 26 APR 2021 2:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಿ ಶ್ರೀ ಸುಗಾ ಯೋಶಿಹಿಡೆ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಉಭಯ ನಾಯಕರೂ ಆಯಾ ದೇಶದ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಮತ್ತು ಸಾಂಕ್ರಾಮಿಕ ರೋಗವು ಒಡ್ಡಿರುವ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಸವಾಲುಗಳನ್ನು ಎದುರಿಸಲು ಭಾರತ-ಜಪಾನ್ ನಡುವಿನ ನಿಕಟ ಸಹಕಾರದ ಮಹತ್ವವನ್ನು ಅವರು ಎತ್ತಿ ಹೇಳಿದರು. ವೈವಿಧ್ಯಮಯ, ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ರಚಿಸಲು ಒಟ್ಟಾಗಿ ಕೆಲಸ ಮಾಡುವುದು; ನಿರ್ಣಾಯಕ ಸರಕುಗಳು ಮತ್ತು ತಂತ್ರಜ್ಞಾನಗಳ ವಿಶ್ವಾಸಾರ್ಹ ಪೂರೈಕೆಯನ್ನು ಖಾತರಿಪಡಿಸುವುದು; ಉತ್ಪಾದನೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಹೊಸ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವುದು ಮುಂತಾದವು ಸವಾಲುಗಳಲ್ಲಿ ಸೇರಿವೆ.

ಉಭಯ ದೇಶಗಳೂ ತಮ್ಮ ಸಾಮರ್ಥ್ಯಗಳನ್ನು ಸಮನ್ವಯಗೊಳಿಸಲು ಮತ್ತು ಪರಸ್ಪರ ಪ್ರಯೋಜನಕಾರಿ ಫಲಿತಾಂಶಗಳನ್ನು ಸಾಧಿಸಲು ʻನಿರ್ದಿಷ್ಟ ನುರಿತ ಕಾರ್ಮಿಕರ (ಎಸ್‌ಎಸ್‌ಡಬ್ಲ್ಯೂ) ಒಪ್ಪಂದʼ ತ್ವರಿತ ಕಾರ್ಯಾನುಷ್ಠಾನದ ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (ಎಂಎಎಚ್ಎಸ್ಆರ್) ಯೋಜನೆಯನ್ನು ತಮ್ಮ ಸಹಕಾರದ ಜ್ವಲಂತ ಉದಾಹರಣೆ ಎಂದು ಒತ್ತಿ ಹೇಳಿದ ಅವರು, ಅದರ ಅನುಷ್ಠಾನದಲ್ಲಿ ಸ್ಥಿರವಾದ ಪ್ರಗತಿಯನ್ನು ಸ್ವಾಗತಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎರಡೂ ದೇಶದಲ್ಲಿ ವಾಸಿಸುವ ನಾಗರಿಕರಿಗೆ ಪರಸ್ಪರ ಒದಗಿಸಲಾದ ಬೆಂಬಲ ಮತ್ತು ಸೌಲಭ್ಯವನ್ನು ಉಭಯ ನಾಯಕರು ಶ್ಲಾಘಿಸಿದರು. ಸಮನ್ವಯವನ್ನು ಮುಂದುವರಿಸಲು ಒಪ್ಪಿಕೊಂಡರು.

ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತಕ್ಕೆ ನೆರವು ನೀಡಿದ್ದಕ್ಕಾಗಿ ಪ್ರಧಾನಿ ಸುಗಾ ಅವರಿಗೆ ಮೋದಿ ಅವರು ಧನ್ಯವಾದ ಅರ್ಪಿಸಿದರು. ಕೋವಿಡ್-19 ಪರಿಸ್ಥಿತಿ ಸುಧಾರಿಸಿದ ನಂತರ ಮುಂದಿನ ದಿನಗಳಲ್ಲಿ ಪ್ರಧಾನಿ ಸುಗಾ ಅವರನ್ನು ಆದಷ್ಟು ಬೇಗ ಭಾರತದಲ್ಲಿ ಸ್ವಾಗತಿಸುವ  ಆಶಯವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.

***



(Release ID: 1714137) Visitor Counter : 244