ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಸ್ಥಿತಿ ಕುರಿತು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಪುಟ ಕಾರ್ಯದರ್ಶಿಯವರಿಂದ ಪರಿಶೀಲನಾ ಸಭೆ


11 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೋವಿಡ್ ಪರಿಸ್ಥಿತಿ ‘ತೀವ್ರ ಕಳವಳಕಾರಿ’

ವಿಶೇಷವಾಗಿ ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್ಗಢದಲ್ಲಿ ಆತಂಕದ ಪರಿಸ್ಥಿತಿ

ಸೋಂಕು ಏರಿಕೆಯನ್ನು ತಡೆಯಲು ಪರೀಕ್ಷೆಗಳ ಹೆಚ್ಚಳ, ಕಟ್ಟುನಿಟ್ಟಿನ ನಿಯಂತ್ರಣ, ಸಂಪರ್ಕಿತರ ಪ್ರಾಮಾಣಿಕ ಪತ್ತೆ ಮತ್ತು ಕೋವಿಡ್ ಸೂಕ್ತ ನಡವಳಿಕೆ ಹಾಗೂ ಲಸಿಕೆಗೆ ಒತ್ತು

Posted On: 02 APR 2021 6:26PM by PIB Bengaluru

ಕಳೆದ ಎರಡು ವಾರಗಳಿಂದ ಕೋವಿಡ್-19 ದೈನಂದಿನ ಪ್ರಕರಣಗಳು ಮತ್ತು ಮರಣ ಪ್ರಮಾಣ ಹೆಚ್ಚಾಗಿ ವರದಿಯಾಗುತ್ತಿರುವ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಕೇಂದ್ರೀಕರಿಸಿ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು ಇಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಕೋವಿಡ್-19 ನಿರ್ವಹಣೆ ಮತ್ತು ಪ್ರತಿಕ್ರಿಯೆ ಕಾರ್ಯತಂತ್ರವನ್ನು ಪರಿಶೀಲಿಸುವ ಮತ್ತು ಚರ್ಚಿಸುವ ಸಭೆಯಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿಗಳು ಮತ್ತು ಹಿರಿಯ ಆರೋಗ್ಯ ವೃತ್ತಿಪರರು ಮತ್ತು ನೀತಿ ಆಯೋಗದ ಸದಸ್ಯರು (ಆರೋಗ್ಯ), ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ, ಕೇಂದ್ರ ಕಾರ್ಯದರ್ಶಿ (ವಾರ್ತಾ ಮತ್ತು ಪ್ರಸಾರ), ಐಸಿಎಂಆರ್ ಮಹಾನಿರ್ದೇಶಕರು ಮತ್ತು ಎನ್‌ಸಿಡಿಸಿ ನಿರ್ದೇಶಕರು ಸಭೆಯಲ್ಲಿ ಬಾಗವಹಿಸಿದ್ದರು.

ಕಳೆದ ಹದಿನೈದು ದಿನಗಳಲ್ಲಿ ಕೋವಿಡ್ ಪರಿಸ್ಥಿತಿಯು ನಿರಂತರವಾಗಿ ಬಿಗಡಾಯಿಸುತ್ತಿದ್ದು ಮಾರ್ಚ್ 2021 ರಲ್ಲಿ ಕೋವಿಡ್ ಪ್ರಕರಣಗಳ ಬೆಳವಣಿಗೆಯ ದರವು ಶೇ.6.8 ರಷ್ಟಾಗಿದ್ದು, ಇದು 2020ರ ಜೂನ್ ದಾಖಲೆಯನ್ನು ಮೀರಿಸಿರುವ ಬಗ್ಗೆ ಸಂಪುಟ ಕಾರ್ಯದರ್ಶಿ ಗಮನ ಸೆಳೆದರು. ಈ ಅವಧಿಯಲ್ಲಿ ದೈನಂದಿನ ಕೋವಿಡ್ ಸಾವುಗಳಲ್ಲಿ ದೇಶದಲ್ಲಿ ಶೇ.5.5ರಷ್ಟು ಬೆಳವಣಿಗೆಯ ದರ ವರದಿಯಾಗಿದೆ. ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದ 2020 ರ ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಸುಮಾರು 97,000 ದೈನಂದಿನ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು, ದೇಶವು ಈಗ 81,000 ದೈನಂದಿನ ಹೊಸ ಕೋವಿಡ್ ಪ್ರಕರಣಗಳಿಗೆ ತಲುಪಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ವಿವರವಾದ ಮತ್ತು ಸಮಗ್ರ ಪ್ರಸ್ತುತಿಯ ಮೂಲಕ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರಸ್ತುತ ಕೋವಿಡ್ ಪರಿಸ್ಥಿತಿಯ ವಿವರಿಸಿದರು.ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರು ಜನರಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ತರಲು ಪರಿಣಾಮಕಾರಿ ವರ್ತನೆ ಬದಲಾವಣೆಯ ಸಂವಹನದ ಮಾರ್ಗಗಳನ್ನು ಪ್ರದರ್ಶಿಸಿದರು. ವೈರಾಣುವಿನ ರೂಪಾಂತರಿತ ತಳಿಯ ಬಗ್ಗೆ ಹೆಚ್ಚು ವಿವರವಾದ ಜೀನೋಮ್ ಸೀಕ್ವೆನ್ಸಿಂಗ್ ಅಧ್ಯಯನಕ್ಕಾಗಿ ಕ್ಲಿನಿಕಲ್ ಮತ್ತು ಎಪಿಡೆಮಿಯೋಲಾಜಿಕಲ್ ಡೇಟಾವನ್ನು ಹಂಚಿಕೊಳ್ಳಲು ಪ್ರೋಟೋಕಾಲ್ ಅನ್ನು ಅನುಸರಿಸಬೇಕಾದ ಅಗತ್ಯದ ಬಗ್ಗೆ ಡಾ. ವಿ. ಕೆ. ಪಾಲ್ ಅವರು ಒತ್ತಿ ಹೇಳಿದರು. ದೈನಂದಿನ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ  11 ರಾಜ್ಯಗಳು ಮತ್ತು ಯುಟಿಗಳು ನಿಯಂತ್ರಣ ಚಟುವಟಿಕೆಗಳನ್ನು ಹೆಚ್ಚಿಸಿಲ್ಲದಿರುವ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಗಮನಸೆಳೆದರು. ಈ ನಿಟ್ಟಿನಲ್ಲಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದರು.

ಹೆಚ್ಚುತ್ತಿರುವ ದೈನಂದಿನ ಪ್ರಕರಣ ಮತ್ತು ಹೆಚ್ಚಿನ ದೈನಂದಿನ ಸಾವುಗಳ ಕಾರಣದಿಂದಾಗಿ 11 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು "ತೀವ್ರ ಕಳವಳಕಾರಿಯ ರಾಜ್ಯಗಳು" ಎಂದು ವರ್ಗೀಕರಿಸಲಾಗಿದೆ. ಈ ರಾಜ್ಯಗಳಲ್ಲಿ ಕಳೆದ 14 ದಿನಗಳಲ್ಲಿ ದೇಶದ ಶೇ. 90 ರಷ್ಟು ಪ್ರಕರಣಗಳು (ಮಾರ್ಚ್ 31 ರಂತೆ) ವರದಿಯಾಗಿವೆ ಮತ್ತು ಶೇ.90.5 ರಷ್ಟು ಸಾವುಗಳು (ಮಾರ್ಚ್ 31 ರಂತೆ) ಸಂಭವಿಸಿವೆ. ಕಳೆದ ವರ್ಷ ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗ ವರದಿಯಾದ ಪ್ರಕರಣಗಳನ್ನು ದಾಟಿವೆ / ಅಥವಾ ಅದಕ್ಕೆ ಹತ್ತಿರದಲ್ಲಿವೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಈ ಹಿಂದೆ ಹಂಚಿಕೊಂಡಿರುವ ಮಾದರಿ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರವನ್ನು  ಅನುಸರಿಸುವ ಮೂಲಕ ಸಕ್ರಿಯ ಪ್ರಕರಣಗಳು ಮತ್ತು ದೈನಂದಿನ ಸಾವುಗಳನ್ನು ನಿಯಂತ್ರಿಸಲು ತಕ್ಷಣದ ಮತ್ತು ಹೆಚ್ಚು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆ ರಾಜ್ಯಕ್ಕೆ ಸೂಚಿಸಲಾಯಿತು.

ಮತ್ತೊಂದು ಆತಂಕಕಾರಿ ಅಂಶವೆಂದರೆ, 2 ಮತ್ತು 3 ನೇ ಶ್ರೇಣಿಯ  ನಗರಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಇತ್ತೀಚಿಗೆ ಹೆಚ್ಚಿನ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಪ್ರದೇಶಗಳಿಂದ ದುರ್ಬಲ ಆರೋಗ್ಯ ಮೂಲಸೌಕರ್ಯ ಹೊಂದಿರುವ ಗ್ರಾಮೀಣ ಪ್ರದೇಶಗಳಿಗೆ ಸೋಂಕು ಹರಡಿದರೆ ಸ್ಥಳೀಯ ಆಡಳಿತಕ್ಕೆ ಭಾರೀ ತಲೆನೋವಾಗಿ ಪರಿಣಮಿಸುತ್ತದೆ ಎಂಬ ಬಗ್ಗೆ ಚರ್ಚಿಸಲಾಯಿತು.

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳ ವಿವರವಾದ ಮತ್ತು ಸಮಗ್ರ ಪರಿಶೀಲನೆಯ ನಂತರ, ಲಸಿಕೆ ನೀಡಿಕೆಯನ್ನು ಹೆಚ್ಚಿಸುವುದು ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ನಿಯಂತ್ರಣ ಮತ್ತು ಕಣ್ಗಾವಲು ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಬಗ್ಗೆ ನಿಖರವಾದ ಮತ್ತು ಕಠಿಣ ಪರಿಶ್ರಮದ ಅಗತ್ಯವನ್ನು ಸಂಪುಟ ಕಾರ್ಯದರ್ಶಿಯವರು  ಪುನರುಚ್ಚರಿಸಿದರು.

ರಾಜ್ಯಗಳು ನಿರ್ದಿಷ್ಟವಾಗಿ ಕೈಗೊಳ್ಳಬೇಕಾದ ಕ್ರಮಗಳು:

  • ಪಾಸಿಟಿವ್ ಪ್ರಕರಣಗಳ ಸಂಖ್ಯೆಯು ಶೇ.5 ಅಥವಾ ಅದಕ್ಕಿಂತ ಕಡಿಮೆಯಾಗುವವರೆಗೂ ಎಂದು ಪರೀಕ್ಷೆಯನ್ನು ನಿರಂತರವಾಗಿ ಹೆಚ್ಚಿಸಬೇಕು
  • ಒಟ್ಟು ಪರೀಕ್ಷೆಗಳ ಪೈಕಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಶೇ. 70 ರಷ್ಟು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು
  • ಪರೀಕ್ಷಾ ಪ್ರಯೋಗಾಲಯಗಳೊಂದಿಗೆ ನಿಯಮಿತ ಪರಾಮರ್ಶೆಯೊಂದಿಗೆ ಪರೀಕ್ಷಾ ಫಲಿತಾಂಶಗಳ ಕಾಯುವ ಸಮಯವನ್ನು ಕಡಿಮೆ ಮಾಡಬೇಕು
  • ರಾಪಿಡ್ ಆಂಟಿಜೆನ್ ಟೆಸ್ಟ್ (ರಾಟ್) ಅನ್ನು ಜನನಿಬಿಡ ಪ್ರದೇಶಗಳಲ್ಲಿ ಮತ್ತು ಹೊಸ ಕ್ಲಸ್ಟರ್‌ಗಳು ಹೊರಹೊಮ್ಮುತ್ತಿರುವ ಸ್ಥಳಗಳಲ್ಲಿ ಸ್ಕ್ರೀನಿಂಗ್ ಪರೀಕ್ಷೆಯಾಗಿ ಮಾಡಬೇಕು
  • ರೋಗಲಕ್ಷಣವಿರುವ ಎಲ್ಲಾ ರಾಪಿಡ್ ಆಂಟಿಜೆನ್ ಟೆಸ್ಟ್ ನೆಗೆಟಿವ್ ಪ್ರಕರಣಗಳನ್ನು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಬೇಕು.
  • ಸಾಂಸ್ಥಿಕ ಸೌಲಭ್ಯಗಳಲ್ಲಿ (ಕೋವಿಡ್ ಆರೈಕೆ ಕೇಂದ್ರಗಳು) ಸೋಂಕಿತರನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಪ್ರತ್ಯೇಕಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಮನೆಯಲ್ಲಿ ಪ್ರತ್ಯೇಕವಾಗಿರುವ ರೋಗಿಗಳನ್ನು ಪ್ರತಿದಿನವೂ ಮೇಲ್ವಿಚಾರಣೆ ಮಾಡಬೇಕು. ಪ್ರತ್ಯೇಕಿತ ಸೋಂಕಿತ ವ್ಯಕ್ತಿಗಳನ್ನು ಅಗತ್ಯವಿದ್ದರೆ ತಕ್ಷಣವೇ ಆರೋಗ್ಯ ಸೌಲಭ್ಯಗಳಿಗೆ ಸ್ಥಳಾಂತರಿಸಬೇಕು.
  • ಪ್ರತಿ ಸೋಂಕಿತ ವ್ಯಕ್ತಿಯ 25 ರಿಂದ 30 ನಿಕಟ ಸಂಪರ್ಕಗಳನ್ನು ಪತ್ತೆ ಮಾಡಬೇಕು. ನಿಕಟ ಸಂಪರ್ಕಗಳ ಪತ್ತೆ ಮತ್ತು ಅವುಗಳ ಪ್ರತ್ಯೇಕತೆಯನ್ನು 72 ಗಂಟೆಗಳಲ್ಲಿ ಮಾಡಬೇಕು.
  • ಸಾಂಕ್ರಾಮಿಕದ ಪ್ರಸರಣ ಸರಪಳಿಯನ್ನು ತುಂಡರಿಸಲು ಕಂಟೈನ್‌ಮೆಂಟ್ ವಲಯಗಳು / ಮೈಕ್ರೋ ಕಂಟೈನ್‌ಮೆಂಟ್ ವಲಯಗಳನ್ನು ಸ್ಥಾಪಿಸಬೇಕು

ಆಸ್ಪತ್ರೆಯ ಮಟ್ಟದಲ್ಲಿ ಪ್ರಕರಣಗಳ ಮಾರಣಾಂತಿಕ ದರ ಪರೀಕ್ಷಿಸಲು, ಸೂಕ್ತ ಕಾರ್ಯತಂತ್ರವನ್ನು ರೂಪಿಸಲು ಮತ್ತು ಆಸ್ಪತ್ರೆಗಳಲ್ಲಿ ತಡವಾಗಿ ದಾಖಲು ಮಾಡಿಕೊಳ್ಳುವ ಮತ್ತು ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್ ಅನ್ನು ಪಾಲಿಸದಿರುವ ಬಗ್ಗೆ ಇರುವ ಕಳವಳವನ್ನು ಕಡಿಮೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಯಿತು. ಪ್ರಕರಣಗಳ ಮ್ಯಾಪಿಂಗ್, ವಾರ್ಡ್ / ಬ್ಲಾಕ್ ಮಟ್ಟದಲ್ಲಿ ಸೂಚಕಗಳ ಪರಿಶೀಲನೆ, 24 * 7 ತುರ್ತು ಕಾರ್ಯಾಚರಣೆ ಕೇಂದ್ರ, ಘಟನೆ ಆಜ್ಞಾ ವ್ಯವಸ್ಥೆ (ಪ್ರದೇಶ ನಿರ್ದಿಷ್ಟ ತ್ವರಿತ ಪ್ರತಿಕ್ರಿಯೆ ತಂಡ ಮತ್ತು ಸಮಯಕ್ಕೆ ಸರಿಯಾಗಿ ಮಾಹಿತಿಯನ್ನು ಹಂಚಿಕೊಳ್ಳುವುದು) ಕೇಂದ್ರೀಕರಿಸಿ ಜಿಲ್ಲಾ ಕ್ರಿಯಾ ಯೋಜನೆಗಳನ್ನು ರೂಪಿಸುವ ಅಗತ್ಯವನ್ನು ಒತ್ತಿಹೇಳಲಾಯಿತು.

ದೈನಂದಿನ ಸಾವುಗಳನ್ನು ಕಡಿಮೆ ಮಾಡಲು, ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಬಗ್ಗೆ ರಾಜ್ಯಗಳಿಗೆ ಸೂಚಿಸಲಾಯಿತು.

ಈ ಕುರಿತು ರಾಜ್ಯಗಳು ಕೈಗೊಳ್ಳಬೇಕಾದ ಕ್ರಮಗಳು:

  • ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಹಾಸಿಗೆಗಳು, ಆಮ್ಲಜನಕ ಹಾಸಿಗೆಗಳು, ವೆಂಟಿಲೇಟರ್‌ಗಳು / ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು
  • ಸಾಕಷ್ಟು ಆಮ್ಲಜನಕ ಪೂರೈಕೆಗಾಗಿ ಯೋಜಿಸಬೇಕು
  • ಆಂಬ್ಯುಲೆನ್ಸ್ ಸೇವೆಯನ್ನು ಬಲಪಡಿಸಬೇಕು ಮತ್ತು ಸ್ಥಳೀಯ ಆಡಳಿತದ ನಿಯಮಿತ ಮೇಲ್ವಿಚಾರಣೆಯೊಂದಿಗೆ ಪ್ರತಿಕ್ರಿಯಿಸುವ ಸಮಯ ಮತ್ತು ನಿರಾಕರಣೆ ದರವನ್ನು ಕಡಿಮೆ ಮಾಡಬೇಕು
  • ಸಾಕಷ್ಟು ಸಂಖ್ಯೆಯ ಗುತ್ತಿಗೆ ಸಿಬ್ಬಂದಿ ಮತ್ತು ಪಾಳಿಗಳ ಗರಿಷ್ಠ ರೋಸ್ಟರಿಂಗ್ ಅನ್ನು ಖಚಿತಪಡಿಸಿಕೊಳ್ಳಬೇಕು.
  • ನವದೆಹಲಿಯ ಏಮ್ಸ್ ಅಥವಾ ರಾಜ್ಯ ಕೋರ್ ತಂಡದೊಂದಿಗೆ ಜಿಲ್ಲೆಗಳಲ್ಲಿ ಐಸಿಯು ವೈದ್ಯರ ನಿಯಮಿತ ದೂರವಾಣಿ ಸಮಾಲೋಚನೆಯನ್ನು ಯೋಜಿಸಬೇಕು. ನವದೆಹಲಿಯ ಏಮ್ಸ್ ವಾರದಲ್ಲಿ ಎರಡು ಬಾರಿ ಮಂಗಳವಾರ ಮತ್ತು ಶುಕ್ರವಾರದಂದು ಟೆಲಿ-ಸಮಾಲೋಚನೆ ನಡೆಸುತ್ತಿದೆ.
  • ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಕ್ಷಣದಲ್ಲಿ ಈ ಕೆಳಗಿನವುಗಳನ್ನು ಅನುಸರಿಸಬೇಕೆಂದು ಒತ್ತಿಹೇಳಲಾಯಿತು:
  • ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಇತರ ಕಾನೂನು / ಆಡಳಿತಾತ್ಮಕ ನಿಬಂಧನೆಗಳ ಬಳಕೆ ಮಾಡಬೇಕು.
  • ಮುಖಗವಸುಗಳನ್ನು ಸರಿಯಾಗಿ ಧರಿಸುವುದು ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಮಾಹಿತಿಯನ್ನು ಪ್ರಸಾರ ಮಾಡಲು ಸ್ಥಳೀಯ ಅಧಿಕಾರಿಗಳು, ರಾಜಕೀಯ, ಸಾಂಸ್ಕೃತಿಕ, ಕ್ರೀಡೆ, ಧಾರ್ಮಿಕ ಮುಖಂಡರನ್ನು ಬಳಸಿಕೊಳ್ಳುವುದು
  • ಹೆಚ್ಚು ಸೋಂಕು ಹರಡಬಹುದಾದ ಮಾರುಕಟ್ಟೆಗಳು, ಜಾತ್ರೆ / ಮೇಳಗಳು, ಸಾಮಾಜಿಕ ಮತ್ತು ಧಾರ್ಮಿಕ ಸಭೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು
  • ಲಸಿಕೆಯಷ್ಟೇ ಕೋವಿಡ್ ಸೂಕ್ತ ನಡಳಿಕೆಯೂ ಮುಖ್ಯವಾಗಿದೆ ಮತ್ತು ಲಸಿಕೆ ಪಡೆದ ನಂತರವೂ ಇದನ್ನು ಅನುಸರಿಸಬೇಕಾಗುತ್ತದೆ.ಎಂಬ ಅರಿವನ್ನು ಹೆಚ್ಚಿಸಬೇಕು
  • ‘ಔಷಧ ಮತ್ತು ಎಚ್ಚರಿಕೆ’ಎಂಬ ಸಂದೇಶವನ್ನು ಬಹು ಮಾಧ್ಯಮ ಮತ್ತು ವೇದಿಕೆಗಳ ಮೂಲಕ ಪರಿಣಾಮಕಾರಿಯಾಗಿ ಪ್ರಸಾರ ಮಾಡಬೇಕು

ದೈನಂದಿನ ಕೋವಿಡ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಜಿಲ್ಲೆಗಳಲ್ಲಿ ಆದ್ಯತೆಯ ವಯಸ್ಸಿನವರಿಗೆ ಲಸಿಕೆಯನ್ನು ನೀಡಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕೆಳಗಿನ ಸೂಚನೆ ನೀಡಲಾಗಿದೆ:.

  • ಅರ್ಹ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಅರ್ಹ ವಯಸ್ಸಿನವರಿಗೆ ಶೇ.100 ರಷ್ಟು ಲಸಿಕೆ ನೀಡಲು ಸಮಯ ನಿಗದಿತ ಯೋಜನೆ ರೂಪಿಸಬೇಕು.
  • ಸಾಕಷ್ಟು ಲಸಿಕೆ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಬೇಕು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆಗಳ ಕೊರತೆಯಿಲ್ಲ ಎಂದು ಒತ್ತಿಹೇಳಲಾಯಿತು; ಕೇಂದ್ರ ಸರ್ಕಾರವು ನಿರಂತರವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಗತ್ಯವನ್ನು ಪೂರೈಸುತ್ತದೆ.
  • ಅಗತ್ಯವನ್ನು ತಿಳಿಯಲು ರಾಜ್ಯ ಮಟ್ಟದಲ್ಲಿ ಪ್ರತಿ ಕೋಲ್ಡ್ ಚೈನ್ ಪಾಯಿಂಟ್‌ನಿಂದ ಲಸಿಕೆ ಬಳಕೆಯ ಬಗ್ಗೆ ದೈನಂದಿನ ಪರಾಮರ್ಶೆ ಮಾಡಬೇಕು.

ಇತ್ತೀಚೆಗೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ರಾಜ್ಯ ಆಡಳಿತವನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಂಪುಟ ಕಾರ್ಯದರ್ಶಿಯವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. "ಸಂಪೂರ್ಣ ಸರ್ಕಾರ" ವಿಧಾನದ ಮೂಲಕ ಆರೋಗ್ಯ ಇಲಾಖೆಯಲ್ಲದೇ ಇತರ ಇಲಾಖೆಗಳಿಗೂ ಪ್ರಯತ್ನಗಳನ್ನು ವಿಸ್ತರಿಸುವ ಅಗತ್ಯವನ್ನು ಇಂದಿನ ಸಭೆಯಲ್ಲಿ ಮತ್ತೆ ಒತ್ತಿ ಹೇಳಲಾಯಿತು. ಕೋವಿಡ್-19 ವಿರುದ್ಧ ಹೋರಾಡಲು ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಕ್ಲಿನಿಕಲ್ ನಿರ್ವಹಣೆಗಾಗಿ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸುತ್ತಿರುವುದನ್ನು ಮುಂದುವರೆಸಲಿದೆ ಎಂದು ಸಭೆಯಲ್ಲಿ ಒತ್ತಿಹೇಳಲಾಯಿತು.

 

******


(Release ID: 1709265) Visitor Counter : 282