ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಚಾಲನಾ ಪರವಾನಿಗೆ (ಡಿ.ಎಲ್), ನೋಂದಣಿ ಪತ್ರ (ಆರ್.ಸಿ), ಮತ್ತಿತರ ವಾಹನಗಳ ದಾಖಲೆಗಳ ಸಿಂಧುತ್ವ 2021ರ ಮಾರ್ಚ್ 31ವರೆಗೆ ವಿಸ್ತರಣೆ:


ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಾರಿಗೆ ಸೂಚನೆ

Posted On: 27 DEC 2020 2:55PM by PIB Bengaluru

ಕೋವಿಡ್-19 ಸೋಂಕು ತಡೆಗಟ್ಟುವಿಕೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್ ಟಿಎಚ್ ) ಡಿ.ಎಲ್, ಆರ್ ಸಿ, ಪರ್ಮಿಟ್ ಗಳು ಸೇರಿದಂತೆ ವಾಹನಗಳ ಎಲ್ಲ ದಾಖಲೆಗಳ ಸಿಂಧುತ್ವದ ಅವಧಿಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿದೆ. ಈ ಕುರಿತಂತೆ ಸಚಿವಾಲಯ  ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ನೀಡಿದೆ.
ಸಚಿವಾಲಯ ಈ ಮೊದಲು 2020ರ ಮಾರ್ಚ್ 30, 2020ರ ಜೂನ್ 9 ಮತ್ತು 2020ರ ಆಗಸ್ಟ್ 24ರಂದು ಮೋಟಾರು ವಾಹನ ಕಾಯಿದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನಗಳ ನಿಯಮ 1989ರ ಅನ್ವಯ ವಾಹನಗಳ ದಾಖಲೆಗಳ ಸಿಂಧುತ್ವದ ಅವಧಿಯನ್ನು ವಿಸ್ತರಣೆ ಮಾಡಿ ಅಗತ್ಯ  ಸೂಚನೆಗಳನ್ನು ಹೊರಡಿಸಿತ್ತು. ಎಲ್ಲ ಬಗೆಯ ಕ್ಷಮತಾ ಪತ್ರ, ಪರ್ಮಿಟ್ ಗಳು (ಎಲ್ಲ ವಿಧದ), ಲೈಸನ್ಸ್, ನೋಂದಣಿ ಮತ್ತು ಇನ್ನಿತರೆ ಸಂಬಂಧಿಸಿದ ದಾಖಲೆಗಳನ್ನು 2020ರ ಡಿಸೆಂಬರ್ ವರೆಗೆ ಸಿಂಧು ಎಂದು ಪರಿಗಣಿಸಲು ಸೂಚನೆ ನೀಡಲಾಗಿತ್ತು.
“ಇದೀಗ ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಅಗತ್ಯತೆಯನ್ನು ಮನಗಂಡು, ಮೇಲೆ ಉಲ್ಲೇಖಿಸಿದ ಎಲ್ಲ ದಾಖಲೆಗಳ ಸಿಂಧುತ್ವ ಅವಧಿಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗುವುದು. ಇದು 2020ರ ಫೆಬ್ರವರಿ 1ರ ನಂತರ ಅವಧಿ ಪೂರ್ಣಗೊಂಡ ಎಲ್ಲ ದಾಖಲೆಗಳಿಗೂ ಅನ್ವಯಿಸಲಿದ್ದು, ಅವುಗಳ ಮುಕ್ತಾಯದ ಅವಧಿ 2021ರ ಮಾರ್ಚ್ 31ರವರೆಗೆ ಎಂದು ಪರಿಗಣಿಸತಕ್ಕದು’’ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸುತ್ತೋಲೆಯಲ್ಲಿ “ಸಕ್ಷಮ ಅಧಿಕಾರಿಗಳು ಅಂತಹ ದಾಖಲೆಗಳನ್ನು 2021ರ ಮಾರ್ಚ್ 31ರವರೆಗೆ ಮಾನ್ಯತೆ ಹೊಂದಿರುತ್ತವೆ ಎಂದು ಪರಿಗಣಿಸುವಂತೆ ಸೂಚಿಸಲಾಗಿದೆ. ಇದರಿಂದ ವಾಹನ ಸಂಬಂಧಿ ಸೇವೆಗಳ ವೇಳೆ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತದೆ ‘’ಎಂದು ತಿಳಿಸಲಾಗಿದೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ನಿರ್ದೇಶನಗಳನ್ನು ವಸ್ತುಶಃ ಪಾಲನೆ ಮಾಡುವಂತೆ ಕೇಂದ್ರ ಸಚಿವಾಲಯ ಸೂಚನೆ ನೀಡಿದ್ದು, ಇದರಿಂದಾಗಿ ಸಾರಿಗೆ ಮತ್ತು ಇತರೆ ಸಂಸ್ಥೆಗಳಲ್ಲಿ ಕೋವಿಡ್ ನಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಅಥವಾ ಹೆಚ್ಚು ಕಷ್ಟಗಳನ್ನು ಅನುಭವಿಸಬೇಕಾಗಿಲ್ಲ.


*******



(Release ID: 1684029) Visitor Counter : 235