ಪ್ರಧಾನ ಮಂತ್ರಿಯವರ ಕಛೇರಿ

ಆಗ್ರಾ ಮೆಟ್ರೋ ಯೋಜನೆ ನಿರ್ಮಾಣ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 07 DEC 2020 2:12PM by PIB Bengaluru

ನಮಸ್ಕಾರ

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಹರ್ದೀಪ್ ಸಿಂಗ್ ಪುರಿ ಜೀ, ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ ಜೀ, ಉತ್ತರ ಪ್ರದೇಶ ಸರಕಾರದ ಸಚಿವರಾದ ಚೌಧರಿ ಉದಯಭಾನ್ ಸಿಂಗ್ ಜೀ, ಡಾ. ಜಿ.ಎಸ್. ಧರ್ಮೇಶ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳಾದ ಪ್ರೊ. ಎಸ್.ಪಿ.ಸಿಂಗ್ ಬಾಘೇಲ್ ಜೀ, ಶ್ರೀ ರಾಜಕುಮಾರ್ ಚಾಹರ್ ಜೀ, ಶ್ರೀ ಹರಿದ್ವಾರ್ ದುಭೇ ಜೀ, ಇತರ ಜನಪ್ರತಿನಿಧಿಗಳೇ, ಮತ್ತು ಆಗ್ರಾದ ನನ್ನ ಪ್ರೀತಿಯ ಸಹೋದರ ಹಾಗು ಸಹೋದರಿಯರೇ!. ಮೆಟ್ರೋ ಯೋಜನೆಯ ನಿರ್ಮಾಣ ಕಾಮಗಾರಿಯ ಉದ್ಘಾಟನೆಗಾಗಿ ನಿಮಗೆ ಅಭಿನಂದನೆಗಳು. ಆಗ್ರಾಕ್ಕೆ ಬಹಳ ಪುರಾತನದ  ಗುರುತಿಸುವಿಕೆ ಇದೆ. ಈಗ ಅದಕ್ಕೆ ಆಧುನಿಕತೆಯ ಹೊಸ ಆಯಾಮವನ್ನು ಸೇರಿಸಲಾಗುತ್ತಿದೆ. ನೂರಾರು ವರ್ಷಗಳ ಚರಿತ್ರೆಯ ಜೊತೆ ನಗರವು ಈಗ 21 ನೇ ಶತಮಾನದ ಜೊತೆ ಮುಂದಡಿ ಇಡಲು ಸಿದ್ಧಗೊಳ್ಳುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಆಗ್ರಾದಲ್ಲಿ ಸ್ಮಾರ್ಟ್ ಸೌಲಭ್ಯಗಳನ್ನು ಅಭಿವೃದ್ಧಿ ಮಾಡಲು ಈಗಾಗಲೇ 1,000 ಕೋ.ರೂ.ಗಳ ಯೋಜನೆಗಳು ಈಗಾಗಲೇ ಪ್ರಗತಿಯಲ್ಲಿವೆ. ಕಳೆದ ವರ್ಷ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಕ್ಕೆ ಶಿಲಾನ್ಯಾಸ ಮಾಡುವ ಸೌಭಾಗ್ಯ ನನಗೆ ಒದಗಿ ಬಂದಿತ್ತು. ಮತ್ತು ಅದೀಗ ಸಿದ್ಧಗೊಂಡಿದೆ. ಕೇಂದ್ರವು ಕೊರೊನಾ ಅವಧಿಯಲ್ಲಿ ಬಹಳ ಉಪಯೋಗಕ್ಕೆ ಬಂದಿತು ಎಂದು ನನಗೆ ತಿಳಿಸಲಾಗಿದೆ. ಈಗ, 8,000 ಕೋ.ರೂ. ಗಳ ಮೆಟ್ರೋ ಯೋಜನೆ ಆಗ್ರಾದಲ್ಲಿ ಸ್ಮಾರ್ಟ್ ಸೌಲಭ್ಯಗಳನ್ನು ನಿರ್ಮಾಣ ಮಾಡುವ ಪ್ರಯತ್ನಗಳಿಗೆ ಇನ್ನಷ್ಟು ಉತ್ತೇಜನ ಒದಗಿಸಲಿದೆ.

ಸ್ನೇಹಿತರೇ,

ಉತ್ತರ ಪ್ರದೇಶವೂ ಸೇರಿದಂತೆ, ದೇಶಾದ್ಯಂತ ಕಳೆದ ಆರು ವರ್ಷಗಳಲ್ಲಿ ಕೈಗೆತ್ತಿಕೊಳ್ಳಲಾದ ಮೆಟ್ರೋ ಕಾಮಗಾರಿಗಳು, ಅದರ ವೇಗ ಹಾಗು ಪ್ರಮಾಣ ಸರಕಾರದ ಬದ್ಧತೆಗೆ ಪ್ರತೀಕವಾಗಿದೆ. 2014 ರವರೆಗೆ ದೇಶದಲ್ಲಿ ಸುಮಾರು 215 ಕಿಲೋ ಮೀಟರ್ ಮೆಟ್ರೋ ಮಾರ್ಗ ಕಾರ್ಯಾಚರಣೆಯಲ್ಲಿತ್ತು. 2014 ಬಳಿಕದ ಆರು ವರ್ಷಗಳಲ್ಲಿ ದೇಶಾದ್ಯಂತ 450 ಕಿಲೋ ಮೀಟರಿಗೂ ಅಧಿಕ ಮೆಟ್ರೋ ಮಾರ್ಗ ಕಾರ್ಯಾಚರಣೆಗೆ ಲಭ್ಯವಾಗಿದೆ. ಮತ್ತು ಸುಮಾರು 1000 ಮೆಟ್ರೋ ಮಾರ್ಗದ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ. ಇಂದು ದೇಶದ 27 ನಗರಗಳಲ್ಲಿ ಮೆಟ್ರೋ ಕಾಮಗಾರಿ ಒಂದೋ ಮುಗಿದಿದೆ ಅಥವಾ ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ನಾವು ಉತ್ತರ ಪ್ರದೇಶ ಒಂದರ ಬಗ್ಗೆಯೇ ಮಾತನಾಡುವುದಾದರೆ, ಮೆಟ್ರೋ ಸೌಲಭ್ಯಗಳೊಂದಿಗೆ ಸಂಪರ್ಕ ಬೆಸೆಯಲ್ಪಡುತ್ತಿರುವ ನಗರಗಳಲ್ಲಿ ಆಗ್ರಾ ಏಳನೇಯದ್ದು, ಮತ್ತು ಇಲ್ಲಿ ಬಹಳ ಮುಖವಾದ ಸಂಗತಿ ಇದೆ, ಅದೆಂದರೆ ದೇಶದಲ್ಲಿ ಮೆಟ್ರೋ ರೈಲು ಜಾಲವನ್ನು ಮಾತ್ರವೇ ನಿರ್ಮಾಣ ಮಾಡುತ್ತಿರುವುದಲ್ಲ, ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ಮೆಟ್ರೋ ಬೋಗಿಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಅಷ್ಟು ಮಾತ್ರವಲ್ಲ ಭಾರತದಲ್ಲಿಯೇ ಸಿಗ್ನಲ್ ವ್ಯವಸ್ಥೆಯನ್ನು ರೂಪಿಸುವುದಕ್ಕೂ ಪ್ರಯತ್ನಗಳು ನಡೆದಿವೆ, ಅಂದರೆ ಭಾರತವು ಮೆಟ್ರೋ ಜಾಲದಲ್ಲಿ ಸ್ವಾವಲಂಬನೆಯನ್ನು ಸಾಧಿಸುತ್ತಿದೆ

ಸಹೋದರರೇ ಮತ್ತು ಸಹೋದರಿಯರೇ,

ಇಂದಿನ ನವ ಭಾರತದ ಕನಸುಗಳು ಬಹಳಷ್ಟಿವೆ, ಆದರೆ ಕನಸು ಕಾಣುವುದರಿಂದಲಷ್ಟೇ ಫಲ ಲಭಿಸದು, ಕನಸುಗಳನ್ನು ದೈರ್ಯದಿಂದ ನನಸು ಮಾಡಬೇಕು. ದೈರ್ಯ ಮತ್ತು ಬದ್ಧತೆಯಿಂದ ಮುಂದೆ ಸಾಗಿದರೆ ನಿಮ್ಮನ್ನು ಯಾವ ಅಡೆ ತಡೆಯೂ ತಡೆದು ನಿಲ್ಲಿಸಲಾರದು. ಇಂದು, ಭಾರತದ ಸಾಮಾನ್ಯ ಜನತೆ, ಭಾರತದ ಸಣ್ಣ ನಗರಗಳು ಅಂತಹ ಧೈರ್ಯ ಮತ್ತು ಬದ್ದತೆಯನ್ನು ತೋರಿಸುತ್ತಿವೆ. ದೇಶದ ಮೆಟ್ರೋ ನಗರಗಳು 20 ನೇ ಶತಮಾನದಲ್ಲಿ ವಹಿಸಿದ ಪಾತ್ರದ ಕಾರಣದಿಂದಾಗಿ ಆಗ್ರಾದಂತಹ ಸಣ್ಣ ನಗರಗಳಿಗೆ ಈಗ ಪ್ರಾಮುಖ್ಯತೆ ದೊರೆಯುತ್ತಿದೆ. ಸಣ್ಣ ನಗರಗಳನ್ನು ಭಾರತದ ಸ್ವಾವಲಂಬನೆಯ ಕೇಂದ್ರಗಳನ್ನಾಗಿಸುವುದಕ್ಕಾಗಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಪಶ್ಚಿಮ ಉತ್ತರ ಪ್ರದೇಶದ ನಗರಗಳು ನಮಗೆ ಸ್ವಾವಲಂಬನೆಗೆ ಬೇಕಾದುದನ್ನೆಲ್ಲಾ ಹೊಂದಿವೆ. ಇದರ ಭೂಮಿ ಮತ್ತು ರೈತರು ಭಾರೀ ಸಾಮರ್ಥ್ಯವನ್ನು ಹೊಂದಿದ್ದಾರೆ. ಜಾನುವಾರು, ಪಶುಪಾಲನೆಗೆ ಸಂಬಂಧಿಸಿ ದೇಶದಲ್ಲಿ ವಲಯ ಮುಂಚೂಣಿಯಲ್ಲಿದೆ. ಹೈನು ಉದ್ಯಮ ಮತ್ತು ಆಹಾರ ಸಂಸ್ಕರಣೆ ಉದ್ಯಮಕ್ಕೆ ಇಲ್ಲಿ ವಿಪುಲ ಅವಕಾಶಗಳಿವೆ. ಇದರ ಜೊತೆಗೆ, ವಲಯವು ಸೇವಾ ಮತ್ತು ಉತ್ಪಾದನಾ ವಲಯಗಳಲ್ಲಿಯೂ ಮುನ್ನಡೆಯುತ್ತಿದೆ.

ಸ್ನೇಹಿತರೇ,

ಪಶ್ಚಿಮ ಉತ್ತರ ಪ್ರದೇಶದ ಸಾಮರ್ಥ್ಯ ಆಧುನಿಕ ಸೌಲಭ್ಯಗಳು ಮತ್ತು ಸಂಪರ್ಕದಿಂದಾಗಿ ಇನ್ನಷ್ಟು ವೃದ್ಧಿಯಾಗಲಿದೆ. ದೇಶದ ಮೊದಲ ತ್ವರಿತ ರೈಲು ಸಾರಿಗೆ ವ್ಯವಸ್ಥೆಯನ್ನು ಮೀರತ್ತಿನಿಂದ ದಿಲ್ಲಿವರೆಗೆ ನಿರ್ಮಿಸಲಾಗುತ್ತಿದೆ. ದಿಲ್ಲಿ-ಮೀರತ್ ನಡುವಣ 14 ಪಥಗಳ ಎಕ್ಸ್ ಪ್ರೆಸ್ ರಸ್ತೆ ವಲಯದ ಜನರ ಸೇವೆಗೆ ಶೀಘ್ರವೇ ಲಭ್ಯವಾಗಲಿದೆ. ಯೋಗೀ ಜೀ ಅವರ ಸರಕಾರ ಪಶ್ಚಿಮ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳನ್ನು ಸಂಪರ್ಕಿಸುವ ಗಂಗಾ ಎಕ್ಸ್ ಪ್ರೆಸ್ ಹೆದ್ದಾರಿಗೆ ಈಗಾಗಲೇ ಅನುಮೋದನೆ ನೀಡಿದೆ. ಇದಲ್ಲದೆ ಉತ್ತರ ಪ್ರದೇಶದಲ್ಲಿ ಡಜನ್ನುಗಟ್ಟಲೆ ವಿಮಾನ ನಿಲ್ದಾಣಗಳು ಪ್ರಾದೇಶಿಕ ಸಂಪರ್ಕಕ್ಕಾಗಿ ಸಿದ್ದಗೊಳ್ಳುತ್ತಿವೆ. ಇವುಗಳಲ್ಲಿ ಹೆಚ್ಚಿನವು ಪಶ್ಚಿಮ ಉತ್ತರ ಪ್ರದೇಶದಲ್ಲಿವೆ.

ಆಧುನಿಕ , ವಿಶ್ವ ದರ್ಜೆಯ ಹೊಸ ವಿಮಾನ ನಿಲ್ದಾಣ ಜೇವಾರಿನ್ ಬೃಹತ್ ನೊಯಿಡಾದಲ್ಲಿ ನಿರ್ಮಾಣವಾಗುವುದರ ಮೂಲಕ ಇಡೀ ವಲಯದ ಗುರುತಿಸುವಿಕೆಯೇ ಸಂಪೂರ್ಣವಾಗಿ ಬದಲಾಗಲಿದೆ

ಸ್ನೇಹಿತರೇ,

ದೇಶದ ಮೂಲಸೌಕರ್ಯಗಳಲ್ಲಿ ಸದಾ ಪ್ರಮುಖ ಸಮಸ್ಯೆಯೊಂದು ಕಾಡುತ್ತಿರುತ್ತದೆ. ಹೊಸ ಯೋಜನೆಗಳನ್ನು ಘೋಷಿಸಿದಾಗ, ಅಲ್ಲಿ ಹಣ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಸಾಕಷ್ಟು ಗಮನವನ್ನು ಕೊಡಲಾಗುವುದಿಲ್ಲ. ಇದರ ಪರಿಣಾಮವಾಗಿ ಯೋಜನೆಗಳು ವರ್ಷಗಳ ಕಾಲ ಅನುಷ್ಟಾನಕ್ಕೆ ಬಾರದೆ ಉಳಿಯುತ್ತವೆ. ಮತ್ತು ಕಾಮಗಾರಿ ಕೂಡಾ ನಿಧಾನಗತಿಯಿಂದ ಸಾಗುತ್ತದೆ. ಅಲ್ಲಿ ಕೆಲಸ ಬಹಳ ಕ್ಷೀಣ ಪ್ರಮಾಣದಲ್ಲಿರುತ್ತದೆ. ಹೊಸ ಯೋಜನೆಗಳನ್ನು ಉದ್ಘಾಟಿಸುತ್ತಲೇ, ನಮ್ಮ  ಸರಕಾರವು ಅವಶ್ಯ ಹಣಕಾಸನ್ನು ಹೊಂದಿಸುವುದಕ್ಕೂ ಅಷ್ಟೇ ಗಮನ ಕೊಡುತ್ತದೆ. ದೇಶದಲ್ಲಿ ಈಗ ಸಂಪರ್ಕ ಮತ್ತು ಆಧುನಿಕ ಮೂಲಸೌಕರ್ಯಕ್ಕೆ ವ್ಯಯಿಸುವಷ್ಟು ಮೊತ್ತವನ್ನು ಹಿಂದೆಂದೂ ವ್ಯಯಿಸಲಾಗಿಲ್ಲ. ನಾವು 100 ಲಕ್ಷ ಕೋ.ರೂ. ಗಳಿಗೂ ಅಧಿಕ ಮೊತ್ತವನ್ನು ರಾಷ್ಟ್ರೀಯ ಮೂಲಸೌಕರ್ಯ ಕೊಳವೆಮಾರ್ಗ ಯೋಜನೆ ಅಡಿಯಲ್ಲಿ ವ್ಯಯಿಸಲು ಮುಂದಾಗಿದ್ದೇವೆ. ಬಹು ಮಾದರಿ ಸಂಪರ್ಕ ಮೂಲಸೌಕರ್ಯ ಮಹಾ ಯೋಜನೆಗೆ ಸಂಬಂಧಿಸಿದ ಕೆಲಸ ಪ್ರಗತಿಯಲ್ಲಿದೆ. ದೇಶದ ಮೂಲಸೌಕರ್ಯವನ್ನು ಸುಧಾರಿಸಲು ಜಗತ್ತಿನಾದ್ಯಂತದಿಂದ ಹೂಡಿಕೆಯನ್ನು ಆಕರ್ಷಿಸುವುದು ಯೋಜನೆಯ ಉದ್ದೇಶ. ಮೂಲಸೌಕರ್ಯದಲ್ಲಿ ಮತ್ತು ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ವಿದೇಶೀ ಹೂಡಿಕೆಯನ್ನು ಸರಳಗೊಳಿಸಲು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸ್ನೇಹಿತರೇ,

ಉತ್ತಮ ಮೂಲಸೌಕರ್ಯಗಳಿಂದ ಮತ್ತು ಸಂಪರ್ಕ ವ್ಯವಸ್ಥೆಯಿಂದ ನಮ್ಮ ಪ್ರವಾಸೋದ್ಯಮ ವಲಯಕ್ಕೆ ಬಹಳಷ್ಟು ಲಾಭವಾಗುತ್ತದೆ. ಪ್ರವಾಸೋದ್ಯಮ ಎಲ್ಲರಿಗೂ ಗಳಿಕೆಯ ಹಾದಿಯನ್ನು ತೋರಿಸುತ್ತದೆ ಎಂಬುದಾಗಿ ನಾನು ಸದಾ ನಂಬುತ್ತೇನೆ. ಕನಿಷ್ಟ ಹೂಡಿಕೆಯೊಂದಿಗೆ, ಗರಿಷ್ಟ ಆದಾಯ ಪ್ರವಾಸೋದ್ಯಮದಲ್ಲಿ ಸಾಧ್ಯವಿದೆ. ಚಿಂತನೆಯೊಂದಿಗೆ, ಸ್ಥಳೀಯ ಪ್ರವಾಸೋದ್ಯಮಕ್ಕೆ ಆದ್ಯತೆ ಒದಗಿಸುವುದಕ್ಕಾಗಿ, ದೇಶದಲ್ಲಿ ಹಲವಾರು ಸ್ತರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಪಾರಂಪರಿಕ ತಾಣವಾಗಿರುವ ತಾಜ್ ಮಹಲ್ ಸುತ್ತ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರವಾಸಿಗರಿಗೆ ಸುಲಭ ಸಂಚಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಕ್ರಮವಹಿಸಲಾಗುತ್ತಿದೆ. -ವೀಸಾ ಯೋಜನೆ ಅಡಿಯಲ್ಲಿ ದೇಶಗಳ ಸಂಖ್ಯೆಯನ್ನು ಸರಕಾರ ಹೆಚ್ಚಿಸಿರುವುದು ಮಾತ್ರವಲ್ಲ, ಹೊಟೇಲು ಕೊಠಡಿಗಳ ಮೇಲಣ ತೆರಿಗೆಯನ್ನೂ ಗಣನೀಯವಾಗಿ ಕಡಿತ ಮಾಡಿದೆ. ಸ್ವದೇಶ ದರ್ಶನ್ ಮತ್ತು ಪ್ರಸಾದ್ ಯೋಜನೆ ಅಡಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಸರಕಾರದ ಪ್ರಯತ್ನಗಳ ಫಲವಾಗಿ ಭಾರತವು ಈಗ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 34 ನೇ ಸ್ಥಾನದಲ್ಲಿದೆ. 2013 ರಲ್ಲಿ ಭಾರತವು ಸೂಚ್ಯಂಕದಲ್ಲಿ 65 ನೇ ಸ್ಥಾನದಲ್ಲಿತ್ತು. ಇಂದು ಅಂದಿಗೆ ಹೋಲಿಸಿದರೆ ಬಹಳಷ್ಟು ಪ್ರಗತಿಯಾಗಿದೆ.

ಕೊರೊನಾ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದ್ದಂತೆ ಪ್ರವಾಸೋದ್ಯಮ ವಲಯ ಮತ್ತೆ ಹಿಂದಿನಂತೆ ಚಿಗುರಲಿದೆ ಎಂಬ ಭರವಸೆ ನನಗಿದೆ.

ಸ್ನೇಹಿತರೇ,

ಹೊಸ ಸವಲತ್ತುಗಳಿಗೆ ಮತ್ತು ವ್ಯವಸ್ಥೆಗಳಿಗೆ ಸುಧಾರಣೆಗಳು ಬಹಳ ಮುಖ್ಯ. ಕಳೆದ ಶತಮಾನಗಳ ಕಾಯ್ದೆಗಳನ್ನು ಹಿಡಿದುಕೊಂಡು ನಾವು ಮುಂದಿನ ಶತಮಾನವನ್ನು ನಿರ್ಮಿಸಲಾರೆವು. ಕಳೆದ ಶತಮಾನದಲ್ಲಿ ಬಹಳ ಉಪಯುಕ್ತವೆನಿಸಿಕೊಂಡಿದ್ದ ಕಾನೂನುಗಳು ಮುಂದಿನ ಶತಮಾನಕ್ಕೆ ಹೊರೆಯಾಗುತ್ತವೆ. ಮತ್ತು ಕಾರಣದಿಂದಾಗಿ ಸುಧಾರಣೆಗಳ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಜನರು ಈಗ ನಡೆಯುತ್ತಿರುವ ಸುಧಾರಣೆಗಳು ಹಿಂದಿಗಿಂತಲೂ ಉತ್ತಮವಾಗಿವೆ ಯಾಕೆಎಂದು ಕೇಳುತ್ತಾರೆ. ಹಿಂದಿನದಕ್ಕಿಂತ ವಿಭಿನ್ನವಾಗಿ ಈಗ ಏನು ನಡೆಯುತ್ತಿದೆ?. ಕಾರಣ ಬಹಳ ಸರಳ. ಮೊದಲು ಸುಧಾರಣೆಗಳು ತುಂಡು ತುಂಡುಗಳಾಗಿ ನಡೆಯುತ್ತಿದ್ದವು. ಬರೇ ಕೆಲವು ವಲಯಗಳನ್ನು ಅಥವಾ ಇಲಾಖೆಗಳನ್ನು ಮಾತ್ರವೇ ಪರಿಗಣಿಸಲಾಗುತ್ತಿತ್ತು. ಈಗ ಸುಧಾರಣೆಗಳನ್ನು ಪೂರ್ಣವಾಗಿ ಮಾಡಲಾಗುತ್ತಿದೆ. ಈಗ, ನಾವು ನಗರಗಳ ಅಭಿವೃದ್ಧಿಯ ಉದಾಹರಣೆಯನ್ನು ತೆಗೆದುಕೊಳ್ಳುವ. ನಾವು ನಗರಗಳ ಅಭಿವೃದ್ಧಿಗೆ ಸಂಬಂಧಿಸಿ ನಾಲ್ಕು ಸ್ತರಗಳಲ್ಲಿ ಕಾರ್ಯ ನಿರತರಾಗಿದ್ದೇವೆಅಲ್ಲಿ ಹಿಂದಿನಿಂದ ಬಂದಿರುವ ಸಮಸ್ಯೆಗಳಿಗೆ ಪರಿಹಾರಗಳಿರಬೇಕು. ಬದುಕು ಸುಲಭವಾಗಬೇಕು, ಅಲ್ಲಿ ಗರಿಷ್ಟ ಹೂಡಿಕೆ ಇರಬೇಕು, ಮತ್ತು ಅಲ್ಲಿಯ ವ್ಯವಸ್ಥೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿರಬೇಕು.

ಸಹೋದರರೇ ಮತ್ತು ಸಹೋದರಿಯರೇ,

ರಿಯಲ್ ಎಸ್ಟೇಟ್ ವಲಯದ ಪರಿಸ್ಥಿತಿಯ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ.

ಅಲ್ಲಿ ಬಿಲ್ಡರುಗಳು ಮತ್ತು ಮನೆ ಖರೀದಿ ಮಾಡುವವರ ನಡುವೆ ವಿಶ್ವಾಸದ ಕೊರತೆ ಇತ್ತು.

ಕೆಲವು  ನೀತಿರಹಿತ ಜನರು ಇಡೀ ರಿಯಲ್ ಎಸ್ಟೇಟ್ ವಲಯಕ್ಕೆ ಕಳಂಕ ತಂದರು ಮತ್ತು ನಮ್ಮ ಮಧ್ಯಮ ವರ್ಗಕ್ಕೆ ಕಿರುಕುಳ ನೀಡಿದರು. ಸಮಸ್ಯೆಯನ್ನು ಪರಿಹರಿಸಲು ರೇರಾ ವನ್ನು ಜಾರಿಗೆ ತರಲಾಯಿತು. ಕಾನೂನಿನ ಬಳಿಕ ಮಧ್ಯಮ ವರ್ಗದವರ ಮನೆಗಳು ಬೇಗ ಪೂರ್ಣಗೊಂಡುದನ್ನು ಹೇಳುವ ವರದಿಗಳು ಬರುತ್ತಿವೆ. ಅದೇ ರೀತಿ ನಮ್ಮ ನಗರಗಳಲ್ಲಿ ಇನ್ನೊಂದು ಪ್ರಮುಖ ಸಮಸ್ಯೆ ಇದೆ. ಖಾಲಿ ಮನೆಗಳು ಇಲ್ಲಿ ದೊಡ್ಡ ಸಂಖ್ಯೆಯಲ್ಲಿವೆ. ಬಹಳಷ್ಟು ಮಂದಿ ಬಾಡಿಗೆ ಮನೆ ದೊರಕದೆ ಬಳಲುತ್ತಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲು ಮಾದರಿ ಕಾನೂನನ್ನು ಜಾರಿ ಮಾಡಿ ರಾಜ್ಯಗಳ ಜೊತೆ ಹಂಚಿಕೊಳ್ಳಲಾಗಿದೆ.

ಸ್ನೇಹಿತರೇ,

ನಗರಗಳ ಜನರ ಜೀವನಕ್ಕೆ ಅನುಕೂಲತೆಗಳನ್ನು ಒದಗಿಸಲು ಆಧುನಿಕ ಸಾರ್ವಜನಿಕ ಸಾರಿಗೆಯಿಂದ ಹಿಡಿದು ವಸತಿಯವರೆಗೆ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಆಗ್ರಾದಿಂದಲೇ ಆರಂಭವಾಗಿತ್ತು. ಯೋಜನೆ ಅಡಿಯಲ್ಲಿ ನಗರ ಬಡವರಿಗಾಗಿ 1 ಕೋಟಿಗೂ ಅಧಿಕ  ಮನೆಗಳನ್ನು ಮಂಜೂರು ಮಾಡಲಾಗಿದೆ. ನಗರಗಳ ಮಧ್ಯಮ ವರ್ಗದವರಿಗೂ ಸಹಾಯ ಹಸ್ತ ವಿಸ್ತರಿಸಲಾಗಿದೆ. ಇದರಿಂದ ಅವರು ಕೂಡಾ ಮೊದಲ ಬಾರಿಗೆ ಮನೆಯನ್ನು ಕೊಂಡುಕೊಳ್ಳಬಹುದಾಗಿದೆ. ಇದುವರೆಗೆ 12 ಲಕ್ಷ ನಗರ ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಖರೀದಿಸಲು 28,000 ಕೋ.ರೂ. ನೆರವನ್ನು ಒದಗಿಸಲಾಗಿದೆ. ಅಮೃತ್ ಯೋಜನೆ ಅಡಿಯಲ್ಲಿ ದೇಶದ ನೂರಾರು ನಗರಗಳಲ್ಲಿ ಮೂಲಸೌಕರ್ಯಗಳಾದ ನೀರು, ಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ನಗರಗಳಲ್ಲಿ ಸಾರ್ವಜನಿಕ ಶೌಚಾಲಯ ಸೌಲಭ್ಯ ಸುಧಾರಣೆಗಾಗಿ ಮತ್ತು ಆಧುನಿಕ ಮಾದರಿಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೆರವು ಒದಗಿಸಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, ನಗರ ಬಡವರು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಔಷಧಿಗಳು ಲಭಿಸುತ್ತಿವೆ ಹಾಗು ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಸರಕಾರದ ಪ್ರಯತ್ನಗಳ ಫಲವಾಗಿ ವಿದ್ಯುತ್ತಿನಿಂದ ಹಿಡಿದು ಮೊಬೈಲ್ ಫೋನುಗಳವರೆಗೆ ಖರ್ಚು ಕಡಿಮೆಯಾಗಿದೆ. ಶಿಕ್ಷಣ ಸಾಲ ಮತ್ತು ಮನೆ ಸಾಲಗಳ ಮೇಲಣ ಬಡ್ಡಿಯ ದರವನ್ನು ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ಬೀದಿ ವ್ಯಾಪಾರಿಗಳು ಸಹಿತ ಸಣ್ಣ ವ್ಯಾಪಾರಿಗಳಿಗೆ ಇದೇ ಮೊದಲ ಬಾರಿಗೆ ಬ್ಯಾಂಕುಗಳಿಂದ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ಒದಗಿಸಲಾಗಿದೆ. ಇದುವೇ  ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್

ಸಹೋದರರೇ ಮತ್ತು ಸಹೋದರಿಯರೇ,

ಈಗ ಚಾಲ್ತಿಯಲ್ಲಿರುವ ಸುಧಾರಣೆಗಳು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ. ದೇಶದ ಸಹೋದರಿಯರಿಗೆ ಮತ್ತು ಪುತ್ರಿಯರನ್ನು ಸರಕಾರಿ ಸವಲತ್ತುಗಳು ತಲುಪುತ್ತಿರುವ ರೀತಿಯನ್ನು ನೀವು ನೋಡಿದರೆ ಬಹಳ ಸಂತುಷ್ಟರಾಗುತ್ತೀರಿ. ಮೊದಲಿಗೆ ಹೋಲಿಸಿದರೆ ನೀವೂ ಕೂಡಾ ಹೊಸ ಭರವಸೆಯ ಭಾವನೆಯನ್ನು ಅನುಭವಿಸುತ್ತೀರಿ. ಪ್ರತೀ ದಿನ ನಾನು ದುರ್ಗಮ ಪ್ರದೇಶಗಳಿಂದ ಹಲವಾರು ಪತ್ರಗಳನ್ನು ಪಡೆಯುತ್ತಿದ್ದೇನೆ. ಮಾಧ್ಯಮಗಳ ಮೂಲಕ ಸಹೋದರಿಯರ ಮತ್ತು ಪುತ್ರಿಯರ  ಭಾವನೆಗಳು ನನಗೆ ತಲುಪುತ್ತಿವೆ. ನಾನು ತಾಯಂದಿರ ಮತ್ತು ಸಹೋದರಿಯರ ಆಶೀರ್ವಾದದಿಂದ ಭಾವುಕನಾಗಿದ್ದೇನೆ. ದೇಶದ ಸಹೋದರಿಯರು, ಪುತ್ರಿಯರು, ಯುವಜನತೆ, ರೈತರು, ಕಾರ್ಮಿಕರು, ಉದ್ಯೋಗಸ್ಥರು, ವ್ಯಾಪಾರಿಗಳ ನಂಬಿಕೆ ಮತ್ತು ವಿಶ್ವಾಸ ಪ್ರತೀ ಚುನಾವಣೆಯಲ್ಲೂ ಕಾಣಬರುತ್ತಿದೆ. ಉತ್ತರ ಪ್ರದೇಶ ಸಹಿತ ದೇಶದ ಪ್ರತೀ ಮೂಲೆ ಮೂಲೆಗಳಲ್ಲಿಯೂ ಚುನಾವಣಾ ಫಲಿತಾಂಶಗಳಲ್ಲಿ ನಂಬಿಕೆ ಪ್ರತಿಫಲನಗೊಳ್ಳುತ್ತಿದೆ. ಹೈದರಾಬಾದ್ ಮತ್ತು ತೆಲಂಗಾಣದ ಬಡವರು ಮತ್ತು ಮಧ್ಯಮ ವರ್ಗದವರು 2-3 ದಿನಗಳ ಹಿಂದೆ ಸರಕಾರದ ಪ್ರಯತ್ನಗಳಿಗೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ. ನಿಮ್ಮ ಬೆಂಬಲವೇ ನನಗೆ ಪ್ರೇರಣೆ. ದೇಶವಾಸಿಗಳ ಸಣ್ಣ ಸಂತೋಷಕ್ಕೆ ಕಾರಣವಾಗುವ ಹೊಸ ಸಂಗತಿಗಳನ್ನು ಮಾಡಲು ಅದು ನನಗೆ ಶಕ್ತಿಯನ್ನು ಕೊಡುತ್ತದೆ. ನಿಮ್ಮ ಕಲ್ಯಾಣಕ್ಕೆ ಹೊಸ ಉಪಕ್ರಮಗಳನ್ನು ಕೈಗೊಂಡು ಕಾರ್ಯಗತಗೊಳಿಸುವ ಶಕ್ತಿಯನ್ನು ಅದು ನನಗೆ ಕೊಡುತ್ತದೆ. ಆಶಯದೊಂದಿಗೆ, ಸ್ವಾವಲಂಬನೆಯ ವಿಶ್ವಾಸದೊಂದಿಗೆ, ಮತ್ತು ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಲೇ ಇರಲಿ ಎಂಬ ಆಶಯದೊಂದಿಗೆ ಮೆಟ್ರೋ ಯೋಜನೆಗಾಗಿ ನಿಮಗೆ ಮಗದೊಮ್ಮೆ ಬಹಳ ಬಹಳ ಅಭಿನಂದನೆಗಳು.

ಆದರೆ ಒಂದು ಸಂಗತಿಯನ್ನು ನಾನು ನಿಮಗೆ ಖಚಿತವಾಗಿ ನೆನಪಿಸಿಕೊಡಲು ಇಚ್ಛಿಸುತ್ತೇನೆ ಏನೆಂದರೆ ಕೊರೊನಾ ಲಸಿಕೆಗಾಗಿ ಕಾಯಲಾಗುತ್ತಿದೆ, ನಾನು ಇತ್ತೀಚೆಗೆ ವಿಜ್ಞಾನಿಗಳನ್ನು ಭೇಟಿಯಾದ ಬಳಿಕ , ನಿಟ್ಟಿನಲ್ಲಿ ಇನ್ನು ವಿಳಂಬವಾಗಲಾರದು. ಆದರೆ ಸೋಂಕನ್ನು ತಡೆಯುವ ನಮ್ಮ ಮುಂಜಾಗರೂಕತಾ ಕ್ರಮಗಳಲ್ಲಿ ಯಾವುದೇ ಕೊರತೆ ಬರಬಾರದು. ಮುಖಗವಸು ಮತ್ತು ಎರಡು ಗಜ ಅಂತರ ಬಹಳ ಮುಖ್ಯ. ಇದಕ್ಕೆ ತಾವು ಬದ್ಧರಾಗಿರುತ್ತೀರಿ ಎಂಬ  ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು

ಧನ್ಯವಾದ

ಘೋಷಣೆ: ಪ್ರಧಾನಮಂತ್ರಿ ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು. ಇದು ಅದರ ಅಂಶಗಳನ್ನಾಧರಿಸಿದ ಅನುವಾದ.

***


(Release ID: 1680695) Visitor Counter : 277