ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (ಎಫ್‌ಐಸಿಸಿಐ)ಯ 93ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 12 DEC 2020 2:12PM by PIB Bengaluru

ನಮಸ್ಕಾರ!

ಎಫ್ ಐಸಿಸಿಐನ ಅಧ್ಯಕ್ಷರಾದ ಸಂಗೀತಾರೆಡ್ಡಿಜಿ, ಮಹಾಪ್ರಧಾನ ಕಾರ್ಯದರ್ಶಿ ದಿಲೀಪ್ ಚೆನೋಯ್ ಜಿ, ಉದ್ಯಮದ ಮಿತ್ರರೇ, ಸಹೋದರ ಮತ್ತು ಸಹೋದರಿಯರೇ..!!

ಟ್ವೆಂಟಿ-20 ಪಂದ್ಯಗಳಲ್ಲಿ ಕ್ಷಿಪ್ರವಾಗಿ ಸಾಕಷ್ಟು ಬದಲಾವಣೆಗಳಾಗುವುದನ್ನು ನಾವು ಕಂಡಿದ್ದೇವೆ. ಆದರೆ 2020ನೇ ವರ್ಷ ನಮ್ಮೆಲ್ಲರನ್ನೂ ಸೋಲಿಸಿದೆ. ರಾಷ್ಟ್ರ ಹಾಗೂ ಇಡೀ ವಿಶ್ವ ಹಲವು ಏರಿಳಿತಗಳನ್ನು ಕಂಡಿದೆ ಮತ್ತು ಕೆಲವು ವರ್ಷಗಳ ನಂತರ ನಾವು ಕೊರೊನಾ ಸಮಯವನ್ನು ನೆನಪಿಸಿಕೊಂಡರೇ ಖಂಡಿತಾ ಇದನ್ನು ನಂಬುವುದಿಲ್ಲ. ಆದರೆ ಇದು ಒಳ್ಳೆಯದು, ಎಷ್ಟು ಬೇಗ ಪರಿಸ್ಥಿತಿ ದುಸ್ಥತಿಗೆ ಇಳಿದಿತ್ತೋ, ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಲೂ ಇದೆ. ಸಾಂಕ್ರಾಮಿಕದ ಚಕ್ರ, ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆರಂಭವಾಗುತ್ತಿದ್ದಂತೆಯೇ, ನಾವು ಗೋಚರಿಸದ ಶತೃವಿನ ವಿರುದ್ಧ ಹೋರಾಟ ಆರಂಭಿಸಿದೆವು. ಹಲವು ಅನಿಶ್ಚಿತತೆಗಳು ಎದುರಾದವು, ಅದು ಉತ್ಪಾದನೆಯಲ್ಲಾಗಿರಬಹುದು, ಸಾರಿಗೆ ವ್ಯವಸ್ಥೆಯಲ್ಲಾಗಿರಬಹುದು ಅಥವಾ ಆರ್ಥಿಕ ಪುನಶ್ಚೇತನದಲ್ಲಾಗಿರಬಹುದು, ಹಲವು ವಿಷಯಗಳು ಎದುರಾದವು. ಪ್ರತಿಯೊಬ್ಬರ ಮನಸ್ಸಿನಲ್ಲೂ, ಇದು ಎಷ್ಟು ದಿನ ಹೀಗೆ ಮುಂದುವರಿಯುತ್ತದೆ ಮತ್ತು ಹೇಗೆ ಪರಿಸ್ಥಿತಿ ಸುಧಾರಿಸಲಿದೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡವು. ಇಡೀ ಜಗತ್ತಿನ ಮನುಕುಲ ಪ್ರಶ್ನೆಗಳು, ಸವಾಲುಗಳು ಮತ್ತು ಆತಂಕಗಳನ್ನು ಎದುರಿಸುವಂತಾಯಿತು. ಇದೀಗ ನಾವು ಡಿಸೆಂಬರ್ ತಿಂಗಳಲ್ಲಿದ್ದೇವೆ, ಪರಿಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ. ನಾವು ಪ್ರತಿಯೊಂದಕ್ಕೂ ಉತ್ತರ ಮತ್ತು ನೀಲನಕ್ಷೆಯನ್ನು ಹೊಂದಿದ್ದೇವೆ. ಆರ್ಥಿಕ ಮಾನದಂಡಗಳು ತುಂಬಾ ಉತ್ತೇಜನಕಾರಿಯಾಗಿವೆ. ಬಿಕ್ಕಟ್ಟಿನ ವೇಳೆ ದೇಶ ಕಲಿತ ಹಲವು ಪಾಠಗಳಿಂದ ನಾವು ಭವಿಷ್ಯದಲ್ಲಿ ಎಂತಹುದೇ ಸವಾಲು ಬಂದರೂ ಎದುರಿಸುವ ದೃಢತೆ ಮೂಡಿಸಿದೆ. ಮತ್ತು ಇದರಲ್ಲಿ ಬಹು ದೊಡ್ಡ ಪಾಲು ನಮ್ಮ ಉದ್ಯಮಿಗಳು, ಯುವ ಪೀಳಿಗೆ, ರೈತರು , ಕೈಗಾರಿಕೋದ್ಯಮಿಗಳು ಮತ್ತು ಇಡೀ ದೇಶದ ವಾಸಿಗಳದ್ದಿದೆ.

ಮಿತ್ರರೇ,

ಜಾಗತಿಕ ಸಾಂಕ್ರಾಮಿಕಗಳ ಕುರಿತು ಸದಾ ಇತಿಹಾಸ ಮತ್ತು ಪಾಠಗಳೆರಡೂ ಸಹ ಜೊತೆಯಲ್ಲಿಯೇ ಸದಾ ಇರುತ್ತವೆ. ಯಾವ ದೇಶ ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚು ಹೆಚ್ಚು ತನ್ನ ಜನರನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುವುದೋ ದೇಶ ಅಷ್ಟೇ ವೇಗದಲ್ಲಿ ಪುಟ್ಟಿದೇಳಲಿದೆ. ಸಾಂಕ್ರಾಮಿಕದ ವೇಳೆ ಭಾರತ ತನ್ನ ಪ್ರಜೆಗಳ ಪ್ರಾಣಕ್ಕೆ ಅತಿ ಹೆಚ್ಚಿನ ಆದ್ಯತೆಯನ್ನು ನೀಡಿತು ಮತ್ತು ಸಾಕಷ್ಟು ಸಂಖ್ಯೆಯ ಜನರ ಪ್ರಾಣವನ್ನು ಉಳಿಸಿತು ಮತ್ತು ಫಲಿತಾಂಶ ದೇಶದ ಮುಂದೆ ಹಾಗೂ ಇಡೀ ವಿಶ್ವದ ಮುಂದೆಯೂ ಇದೆ. ಭಾರತ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಸಾಮೂಹಿಕವಾಗಿ ಹೋರಾಟ ನಡೆಸಿದ ಬಗೆಗೆ ಇಡೀ ವಿಶ್ವವೇ ಅಚ್ಚರಿಯಿಂದ ನೋಡುತ್ತಿದೆ, ಹಲವು ದಿಟ್ಟ ನೀತಿ ಮತ್ತು ನಿರ್ಧಾರಗಳ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆರು ವರ್ಷಗಳಿಂದೀಚೆಗೆ ಭಾರತದ ಬಗೆಗೆ ವಿಶ್ವಕ್ಕಿದ್ದ ನಂಬಿಕೆ ಕಳೆದ ಆರು ತಿಂಗಳಲ್ಲಿ ಇನ್ನಷ್ಟು ಬಲವರ್ಧನೆಯಾಗಿದೆ. ಅದು ಎಫ್ ಡಿಐನಲ್ಲಾಗಿರಬಹುದು ಅಥವಾ ಎಫ್ ಪಿಐ ನಲ್ಲಾಗಿರಬಹುದು, ವಿದೇಶಿ ಹೂಡಿಕೆದಾರರು ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಹಣ ಹೂಡಿದ್ದಾರೆ ಮತ್ತು ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ.

ಮಿತ್ರರೇ,

ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಆತ್ಮನಿರ್ಭರ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲು ಬದ್ಧತೆ ತೋರುತ್ತಿದ್ದಾರೆ ಮತ್ತು ಅವರು ಸ್ಪಳೀಯ ಉತ್ಪನ್ನಗಳಿಗೆ ಧ್ವನಿಯಾಗುತ್ತಿದ್ದಾರೆ. ಇದು ದೇಶ ತನ್ನ ಖಾಸಗಿ ವಲಯ ಸಾಮರ್ಥ್ಯದ ಮೇಲೆ ಎಷ್ಟು ನಂಬಿಕೆ ಇಟ್ಟಿದೆ ಎನ್ನುವುದಕ್ಕೆ ಜೀವಂತ ಉದಾಹರಣೆಯಾಗಿದೆ. ಭಾರತದ ಖಾಸಗಿ ವಲಯ ಕೇವಲ ನಮ್ಮ ದೇಶಿಯ ಅಗತ್ಯತೆಗಳನ್ನಷ್ಟೇ ಪೂರೈಸುತ್ತಿಲ್ಲ, ಆದರೆ ಅದು ಜಾಗತಿಕವಾಗಿ ತನ್ನ ಅಸ್ಮಿತೆಯನ್ನು ಅತ್ಯಂತ ಪ್ರಭಾವಿಯಾಗಿ ಸ್ಥಾಪಿಸಲು ಸಾಧ್ಯವಾಗಿದೆ.

ಮಿತ್ರರೇ,

ಆತ್ಮ ನಿರ್ಭರ ಭಾರತ ಅಭಿಯಾನ, ಭಾರತದಲ್ಲಿ ಗುಣಮಟ್ಟದ ವಸ್ತುಗಳನ್ನು ತಯಾರಿಸಲು ಒಂದು ವಿಧಾನವೂ ಆಗಿದೆ ಮತ್ತು ಭಾರತೀಯ ಉದ್ಯಮ ಹೆಚ್ಚು ಸ್ಪರ್ಧಾತ್ಮಕಗೊಳ್ಳಲು ನೆರವಾಗಲಿದೆ. 2014ರಲ್ಲಿ ಮೊದಲ ಬಾರಿಗೆ ಕೆಂಪು ಕೋಟೆಯಿಂದ ನನಗೆ ಭಾಷಣ ಮಾಡುವ ಅವಕಾಶ ದೊರೆತಾಗ, ನಾನು ನಮ್ಮ ಗುರಿ ಶೂನ್ಯ ದೋಷ ಮತ್ತು ಶೂನ್ಯ ಪರಿಣಾಮವಾಗಿರಬೇಕು ಎಂದು ಹೇಳಿದ್ದೆ.

ಮಿತ್ರರೇ,

ಹಿಂದಿನ ಕೆಲವು ನೀತಿಗಳಲ್ಲಿ ಹಲವು ವಲಯಗಳಲ್ಲಿನ ಅದಕ್ಷತೆಯನ್ನು ರಕ್ಷಿಸುವಂತಹ ಅನುಭವಗಳಾಗಿವೆ ಮತ್ತು ಹೊಸ ಪ್ರಯೋಗಗಳನ್ನು ನಿಯಂತ್ರಿಸುವೆ, ಆದರೆ ಆತ್ಮ ನಿರ್ಭರ ಭಾರತ ಅಭಿಯಾನದಲ್ಲಿ ಪ್ರತಿಯೊಂದು ವಲಯದಲ್ಲೂ ದಕ್ಷತೆಯನ್ನು ಉತ್ತೇಜಿಸುತ್ತದೆ. ದೀರ್ಘಾವಧಿಯಲ್ಲಿ ಹೆಚ್ಚಿನ ಅನುಕೂಲಗಳಿರುವ ಮತ್ತು ತಂತ್ರಜ್ಞಾನ ಆಧಾರಿತ ಉದ್ದಿಮೆಗಳ ವಲಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗ ಬಾಲ್ಯವಸ್ಥೆಯಲ್ಲಿರುವ ನಮ್ಮ ಉದ್ಯಮಗಳೂ ಸಹ ಭವಿಷ್ಯದಲ್ಲಿ ಹೆಚ್ಚು ಸದೃಢ ಮತ್ತು ಸ್ವತಂತ್ರವಾಗಿ ಬೆಳೆಯಬೇಕು ಎಂಬುದು ನಮ್ಮ ಬಯಕೆಯಾಗಿದೆ. ಆದ್ದರಿಂದ, ಮತ್ತೊಂದು ಪ್ರಮುಖ ಕ್ರಮವನ್ನು ಕೈಗೊಂಡಿರುವುದನ್ನು ನೀವೆಲ್ಲಾ ಗಮನಿಸಿರಬಹುದು. ಅದೆಂದರೆ ದೇಶದಲ್ಲಿ ಉತ್ಪಾದನೆಆಧರಿತ ಪ್ರೋತ್ಸಾಹಕರ ಯೋಜನೆಗೆ ಚಾಲನೆ ನೀಡಿರುವುದು. ಯೋಜನೆ ಜಾಗತಿಕ ಚಾಂಪಿಯನ್ ಗಳನ್ನಾಗುವ ಸಾಮರ್ಥ್ಯವಿರುವ ಭಾರತದ ಕೈಗಾರಿಕೆಗಳಿಗಾಗಿ ರೂಪಿಸಲಾಗಿದೆ. ಯಾರು ಉತ್ತಮ ಸಾಧನೆ ಮಾಡುತ್ತಾರೋ, ಯಾರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಾರೋ ಮತ್ತು ತಮ್ಮ ವಲಯದಲ್ಲಿ ಭಾರತ ಸ್ವಾವಲಂಬಿಯಾಗಲು ಕಾರ್ಯ ನಿರ್ವಹಿಸುತ್ತಾರೋ ಅವರೆಲ್ಲಾ ಪ್ರೋತ್ಸಾಹ ಧನಕ್ಕೆ ಅರ್ಹರು. ಮಿತ್ರರೇ, ನಾವು ಜೀವನದಲ್ಲಿ ಮತ್ತು ಆಡಳಿತದಲ್ಲಿ ಸದಾ ನೋಡುತ್ತಿರುತ್ತೇವೆ. ವಿಶ್ವಾಸವಿರುವ ಮನುಷ್ಯ ಬೇರೆಯವರಿಗೆ ಸ್ಥಳಾವಕಾಶ ನೀಡಲು ಹಿಂಜರಿಯುವುದಿಲ್ಲ. ಆದರೆ ಯಾವ ವ್ಯಕ್ತಿಗೆ ತನ್ನ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಅವಕಾಶಗಳನ್ನು ನೀಡುವ ಬಗ್ಗೆ ಭಯ ಮತ್ತು ಅಭದ್ರತೆ ಇರುತ್ತದೋ ಆತ ಬೇರೆಯವರಿಗೆ ಅವಕಾಶ ನೀಡುವುದಿಲ್ಲ. ಇದು ಬಹುತೇಕ ಸಂದರ್ಭಗಳಲ್ಲಿ ಸರ್ಕಾರಗಳಲ್ಲಿಯೂ ಆಗುತ್ತದೆ. ಸರ್ಕಾರಕ್ಕೆ ವಿಶ್ವಾಸ ಮತ್ತು ಬದ್ಧತೆಯಿದೆ, ಜೊತೆಗೆ ಜನರೂ ಸಹ ಸರ್ಕಾರಕ್ಕೆ ಭಾರಿ ಬೆಂಬಲ ನೀಡಿ, ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಸಬ್ ಸಾತ್ , ಸಬ್ ವಿಕಾಸ್ ಮತ್ತು ಸಬ್ ವಿಶ್ವಾಸ್ ಮಂತ್ರವನ್ನು ನನಸಾಗಿಸಲು ಬದ್ಧವಾಗಿದೆ. ನಿರ್ಣಾಯಕ ಸರ್ಕಾರ ಸದಾ ಬೇರೆಯವರಿಗೆ ಆಗಿರುವ ತೊಡಕುಗಳನ್ನು ನಿವಾರಿಸಲು ಪ್ರಯತ್ನಿಸುತ್ತಿರುತ್ತದೆ. ಅಂತೆಯೇ ನಿರ್ಣಾಯಕ ಸರ್ಕಾರ, ಸದಾ ಸಮಾಜಕ್ಕೆ ಮತ್ತು ದೇಶಕ್ಕೆ ಗರಿಷ್ಠ ಕೊಡುಗೆಯನ್ನು ನೀಡಲು ಬಯಸುತ್ತದೆ. ಹಾಗೆಯೇ, ನಿರ್ಣಾಯಕ ಮತ್ತು ಸ್ವಾವಲಂಬಿ ಸರ್ಕಾರ ಎಲ್ಲ ನಿಯಂತ್ರಣಗಳನ್ನು ತನ್ನಲ್ಲಿಯೇ ಇಟ್ಟುಕೊಳ್ಳಲು ಬಯಸುವುದಿಲ್ಲ ಮತ್ತು ಮತ್ತು ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಬಿಟ್ಟುಬಿಡುವುದೂ ಇಲ್ಲ.

ಹಿಂದಿನ ಸರ್ಕಾರಗಳಲ್ಲಿ ನೀವು ಸದಾ ಇಂತಹ ಮನೋಭಾವನೆಗೆ ಸಾಕ್ಷಿಯಾಗಿರಬಹುದು ಮತ್ತು ಅದಕ್ಕೆ ಇಡೀ ದೇಶ ಸಂತ್ರಸ್ತವಾಗಿದೆ. ಸರ್ಕಾರ ಎಲ್ಲವನ್ನೂ ಮಾಡುತ್ತದೆ ಎಂಬುದು ಸರಿಯಲ್ಲ, ಕೈಗಡಿಯಾರ, ಸ್ಕೂಟರ್, ಟಿ.ವಿ ಅಥವಾ ಬ್ರೆಡ್ ಮತ್ತು ಕೇಕ್ ಹೀಗೆ ಎಲ್ಲವನ್ನೂ ಸರ್ಕಾರ ಮಾಡುತ್ತಿತ್ತು. ಧೋರಣೆಯಿಂದಾಗಿ ನಾವು ಹಾಳಾಗಿರುವುದನ್ನು ನೋಡಿದ್ದೇವೆ. ಅದಕ್ಕೆ ವ್ಯತಿರಿಕ್ತವಾಗಿ ದೂರದೃಷ್ಟಿಯುಳ್ಳ ಮತ್ತು ನಿರ್ಣಾಯಕ ಸರ್ಕಾರ ಎಲ್ಲ ಭಾಗಿದಾರರನ್ನು ಉತ್ತೇಜಿಸುತ್ತದೆ, ಮೂಲಕ ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವರಿಗೆ ನೆರವಾಗುತ್ತದೆ.

ಮಿತ್ರರೇ,

ಕಳೆದ ಆರು ವರ್ಷಗಳಲ್ಲಿ, ಭಾರತ ದೇಶದ 130 ಕೋಟಿ ಜನರ ಕನಸುಗಳನ್ನು ಸಕಾರಗೊಳಿಸಲು ಬದ್ಧವಿರುವ ಸರ್ಕಾರವನ್ನು ನೋಡುತ್ತಿದೆ ಮತ್ತು ಅದು ಎಲ್ಲ ವಲಯಗಳನ್ನೂ ಉತ್ತೇಜಿಸುತ್ತಿದೆ. ಇಂದು ಭಾರತ, ಪ್ರತಿಯೊಂದು ವಲಯದಲ್ಲೂ ಪ್ರತಿಯೊಬ್ಬ ಪಾಲುದಾರ ಸಹಭಾಗಿತ್ವ ಹೆಚ್ಚಿಸಲು ಉತ್ಸುಕವಾಗಿದೆ. ಅದೇ ಮನೋಭಾವದೊಂದಿಗೆ ಉತ್ಪಾದನೆಯಿಂದ ಹಿಡಿದು ಎಂಎಸ್ ಎಂಇವರೆಗೆ, ಕೃಷಿಯಿಂದ ಮೂಲಸೌಕರ್ಯದವರೆಗೆ, ತಂತ್ರಜ್ಞಾನ ಉದ್ಯಮದಿಂದ ತೆರಿಗೆವರೆಗೆ ಮತ್ತು ರಿಯಲ್ ಎಸ್ಟೇಟ್ ನಿಂದ ಹಿಡಿದು ನಿಯಂತ್ರಣ ಸಡಿಲಿಕೆವರೆಗೆ ಹಲವು ವಲಯಗಳಲ್ಲಿ ಸಮಗ್ರ ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ಇಂದು ಇಡೀ ವಿಶ್ವದಲ್ಲೇ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಇಂದು ಭಾರತ ಮುಖಾಮುಖಿ ರಹಿತ ಮೌಲ್ಯಮಾಪನ ಮತ್ತು ಮುಖಾಮುಖಿ ರಹಿತ ಮೇಲ್ಮನವಿಗಳ ವಿಚಾರಣೆ ಉತ್ತೇಜಿಸುತ್ತಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಒಂದಾಗಿದೆ. ಇನ್ಸ್ ಪೆಕ್ಟರ್ ರಾಜ್ ಮತ್ತು ತೆರಿಗೆ ಭಯೋತ್ಪಾದನೆ ಯುಗವನ್ನು ಬದಿಗೊತ್ತಿ ಭಾರತ ನಮ್ಮ ದೇಶದ ಉದ್ಯಮಿಗಳ ಸಾಮರ್ಥ್ಯನ್ನು ಅವಲಂಬಿಸಿ ಮುನ್ನಡೆ ಸಾಗುತ್ತಿದೆ. ಒಂದು ರೀತಿಯಲ್ಲಿ ಗಣಿಗಾರಿಕೆ, ರಕ್ಷಣಾ, ಬಾಹ್ಯಾಕಾಶ ಮತ್ತು ಹೂಡಿಕೆ ಸೇರಿದಂತೆ ಬಹುತೇಕ ವಲಯಗಳಲ್ಲಿ ಅಸಂಖ್ಯಾತ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ದೇಶದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸ್ಪರ್ಧಾತ್ಮಕಗೊಳಿಸಲು ಬಹು ಮಾದರಿಯ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಮಿತ್ರರೇ,

ಕ್ರಿಯಾಶೀಲ ಆರ್ಥಿಕತೆಯಲ್ಲಿ ಒಂದು ವಲಯ ಪ್ರಗತಿ ಸಾಧಿಸಿದರೆ ಅದು ನೇರವಾಗಿ ಇತರ ವಲಯಗಳ ಮೇಲೂ ಪ್ರಭಾವ ಬೀರುತ್ತದೆ. ಆದರೆ ನೀವೆ ಊಹಿಸಿಕೊಳ್ಳಿ ಒಮ್ಮೆ ಉದ್ಯಮಗಳ ನಡುವೆ ಅನಗತ್ಯವಾಗಿ ಗೋಡೆಗಳನ್ನು ಸೃಷ್ಟಿಸಿದಾಗ ಏನಾಗುತ್ತದೆ ಎಂಬುದನ್ನು. ವೇಳೆ ಯಾವ ಉದ್ಯಮಗಳೂ ಸಹ ತನ್ನ ಸಾಮರ್ಥ್ಯದ ಮೇಲೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಒಂದು ವೇಳೆ ಉದ್ಯಮ ಬೆಳೆದರೂ ಅದರ ಪರಿಣಾಮ ಇತರೆ ವಲಯಗಳ ಮೇಲಾಗುವುದಿಲ್ಲ. ಅಂತಹ ಗೋಡೆಗಳು ಹಲವು ವಲಯಗಳಲ್ಲಿ ದೇಶದ ಆರ್ಥಿಕತೆ ಮತ್ತು ಜನರ ಮೇಲೆ ಭೀಕರ ಹಾನಿಯನ್ನು ಉಂಟುಮಾಡುತ್ತವೆ. ಅಂತಹ ಗೋಡೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ ಹಲವು ಸುಧಾರಣೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇತ್ತೀಚಿನ ಕೃಷಿ ಸುಧಾರಣೆಗಳೂ ಸಹ ಸರಣಿಯ ಒಂದು ಭಾಗವಾಗಿದೆ. ನಾವು ಅಂತಹ ಗೋಡೆಗಳನ್ನು ಕೃಷಿ ವಲಯ ಮತ್ತು ಅದಕ್ಕೆ ಸಂಬಂಧಿಸಿದ ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ, ದಾಸ್ತಾನು ಅಥವಾ ಶೀತ ಸರಪಳಿ ವಲಯದಲ್ಲೂ ಸಹ ಕಾಣಬಹುದಾಗಿತ್ತು. ಇದೀಗ ಅಂತಹ ಗೋಡೆಗಳನ್ನು ಒಡೆದು ಹಾಕಲಾಗಿದೆ ಮತ್ತು ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ. ಸುಧಾರಣೆಗಳ ಮೂಲಕ ಅಂತಹ ಗೋಡೆಗಳನ್ನು ತೆರವುಗೊಳಿಸಿ, ಹೊಸ ಮಾರುಕಟ್ಟೆಗಳು ಮತ್ತು ಹೊಸ ಅವಕಾಶಗಳು ಹಾಗೂ ಶೈತ್ಯಾಗಾರಗಳ ಮೂಲಸೌಕರ್ಯವನ್ನು ರೈತರಿಗೆ ವೃದ್ಧಿಸಲಾಗಿದ್ದು, ಅವುಗಳನ್ನು ಆಧುನೀಕರಣಗೊಳಿಸುವ ಮೂಲಕ ತಂತ್ರಜ್ಞಾನದ ಸಹಾಯದಿಂದ ಹೆಚ್ಚಿನ ಅನುಕೂಲಗಳನ್ನು ಒದಗಿಸಿಕೊಡಲಾಗುತ್ತಿದೆ. ಇದರಿಂದಾಗಿ ಕೃಷಿ ವಲಯಕ್ಕೆ ಭಾರೀ ಬಂಡವಾಳ ಹರಿದು ಬರುವುದಲ್ಲದೇ ನಮ್ಮ ದೇಶದ ರೈತರಿಗೆ ಪ್ರಯೋಜನವಾಗಲಿದೆ. ಜೊತೆಗೆ ಸಣ್ಣ ಭೂ ಹಿಡುವಳಿದಾರರ ಜೀವನ ಸುಧಾರಿಸಲಿದೆ. ನಮ್ಮ ದೇಶದ ಆರ್ಥಿಕತೆಯಲ್ಲಿ ನಾನಾ ವಲಯಗಳ ನಡುವೆ ಗೋಡೆಗಳು ಬೇಕಾಗಿಲ್ಲ. ಆದರೆ ಪರಸ್ಪರ ಬೆಂಬಲ ನೀಡುವಂತಹ ಸೇತುವೆಗಳು ಅಗತ್ಯವಿದೆ.

ಮಿತ್ರರೇ,

ಕಳೆದ ಕೆಲವು ವರ್ಷಗಳಿಂದೀಚೆಗೆ ಅಂತಹ ಗೋಡೆಗಳನ್ನು ಕೆಡವಿ, ಯೋಜಿತ ಮತ್ತು ಸಮಗ್ರ ರೀತಿಯಲ್ಲಿ ಸುಧಾರಣೆಗಳನ್ನು ಕೈಗೊಂಡಿರುವ ಹಲವು ಅತ್ಯುತ್ತಮ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ಹಣಕಾಸು ಒಳಗೊಳ್ಳುವಿಕೆಯಲ್ಲಿ ದೇಶದ ಕೋಟ್ಯಾಂತರ ಜನರು ಭಾಗಿಯಾದರು, ಬ್ಯಾಂಕಿಂಗ್ ವಲಯದಲ್ಲಿ ನಾವು ಹೆಚ್ಚು ಒಳಗೊಳ್ಳುವ ರಾಷ್ಟ್ರವಾಗಿದ್ದೇವೆ. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಆಧಾರ್ ಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡಿರುವುದಕ್ಕೆ ನೀವು ಸಾಕ್ಷಿಯಾಗಿದ್ದೀರಿ. ನಾವು ಬ್ಯಾಂಕ್ ಗಳ ಜೊತೆ ಸಂಯೋಜಿಸಿದ್ದೇವೆ. ನಾವು ಬಡವರಲ್ಲಿ ಅತಿ ಕಡುಬಡವರಿಗೂ ಕಡಿಮೆ ದರದಲ್ಲಿ ಮೊಬೈಲ್ ಡಾಟಾ ಮತ್ತು ಕಡಿಮೆ ದರದಲ್ಲಿ ಮೊಬೈಲ್ ಲಭ್ಯವಾಗುವಂತೆ ಮಾಡಿದ್ದೇವೆ. ಜನ-ಧನ್ ಖಾತೆ, ಆಧಾರ್ ಮತ್ತು ಮೊಬೈಲ್ಜಾಮ್ ದೇಶದ ಎಲ್ಲ ಜನರಿಗೂ ಲಭ್ಯವಾಗಿದೆ.

ಮಿತ್ರರೇ,

ಇಂದು ಭಾರತದಲ್ಲಿ ವಿಶ್ವದ ಅತಿ ದೊಡ್ಡ ನೇರ ನಗದು ವರ್ಗಾವಣೆ ವ್ಯವಸ್ಥೆ ಚಾಲ್ತಿಯಲ್ಲಿದೆ. ನೀವು ಇತ್ತೀಚಿನ ಅಂತಾರಾಷ್ಟ್ರೀಯ ಜರ್ನಲ್ ವರದಿಯನ್ನು ಓದಿರಬಹುದು. ಅದರಲ್ಲಿ ದೇಶೀಯ ವ್ಯವಸ್ಥೆಯ ಬಗ್ಗೆ ಅತ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಕೊರೊನಾ ಸಮಯದಲ್ಲಿ ಹಲವು ದೇಶಗಳಲ್ಲಿ ಜನರು ತಮ್ಮ ಅವಲಂಬಿತರಿಗೆ ಹಣವನ್ನು ವರ್ಗಾಯಿಸಲು ಚೆಕ್ ಗಳು ಮತ್ತು ಅಂಚೆ ಇಲಾಖೆಗಳ ಮೂಲಕ ಸಾಕಷ್ಟು ಕಷ್ಟ ಅನುಭವಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಭಾರತದಲ್ಲಿ ಕೆಲವೇ ಕ್ಷಣಗಳಲ್ಲಿ ಒಂದು ಬಟನ್ ಒತ್ತುವ ಮೂಲಕ ಕೋಟ್ಯಾಂತರ ಜನರ ಖಾತೆಗಳಿಗೆ ಒಮ್ಮೆಲೇ ನಗದು ವರ್ಗಾವಣೆ ಮಾಡಲಾಯಿತು. ಅದು ಬ್ಯಾಂಕ್ ಗಳು ಮುಚ್ಚಿದ್ದ ಮತ್ತು ದೇಶದಲ್ಲಿ ಲಾಕ್ ಡೌನ್ ಇದ್ದ ಸಮಯದಲ್ಲಿ. ಅಂತಾರಾಷ್ಟ್ರೀಯ ಜಗತ್ತಿನ ಹಲವು ಪ್ರಮುಖ ತಜ್ಞರು ಭಾರತದ ಪದ್ಧತಿಯಿಂದ ಇತರೆ ದೇಶಗಳು ಕಲಿತುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಬಗ್ಗೆ ಓದಲು ಮತ್ತು ಕೇಳಲು ಯಾರು ತಾನೆ ಹೆಮ್ಮೆ ಪಡುವುದಿಲ್ಲ ಹೇಳಿ?

ಮಿತ್ರರೇ,

ಬಡತನ ಮತ್ತು ಅನಕ್ಷರತೆಯ ವಾತಾವರಣದಲ್ಲಿ ಭಾರತ ಹೇಗೆ ತಂತ್ರಜ್ಞಾನದ ಮೂಲಕ ತನ್ನ ಸಾಮಾನ್ಯ ನಾಗರಿಕರಿಗೆ ಸವಲತ್ತುಗಳನ್ನು ತಲುಪಿಸಲು ಸಾಧ್ಯ ಎಂದು ಹಲವು ದೇಶಗಳ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದ ಕಾಲವೊಂದಿತ್ತು. ಆದರೆ ಭಾರತ ಇದನ್ನು ಸಾಧಿಸಿ ತೋರಿಸಿದೆ ಮತ್ತು ಭಾರೀ ಯಶಸ್ಸಿನೊಂದಿಗೆ ಕೆಲಸ ಮಾಡಿದ್ದು ಮತ್ತು ಅದು ನಿರಂತರವಾಗಿ ಮುಂದುವರಿದಿದೆ. ಇಂದು ಯುಪಿಐ ವೇದಿಕೆಯೊಂದರಲ್ಲೇ ಪ್ರತಿ ತಿಂಗಳು ಸುಮಾರು 4 ಲಕ್ಷ ಕೋಟಿ ರೂ.ಗಳ ವಹಿವಾಟು ನಡೆಯುತ್ತಿದೆ. ಪ್ರತಿ ತಿಂಗಳು ನಾಲ್ಕು ಲಕ್ಷ ಕೋಟಿಗೂ ಅಧಿಕ ವಹಿವಾಟುಗಳು ನಡೆಯುತ್ತಿರುವ ಜೊತೆಗೆ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಇಂದು ಡಿಜಿಟಲ್ ಪಾವತಿ, ಹಳ್ಳಿಗಳಲ್ಲಿ ಮತ್ತು ಸಣ್ಣ ಬೀದಿ ಬದಿ ಮಳಿಗೆಗಳಲ್ಲೂ ಸಹ ಸಾಧ್ಯವಾಗಿದೆ. ಭಾರತದ ಉದ್ಯಮ ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಮುನ್ನಡೆಯುತ್ತಿದೆ.

ಮಿತ್ರರೇ,

ನಾವು ಟಿವಿ ಅಥವಾ ಚಿತ್ರಗಳಲ್ಲಿ ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳ ವಾತಾವರಣವನ್ನು ನೋಡಿಕೊಂಡು ಬೆಳೆದಿದ್ದೇವೆ. ಬಗ್ಗೆ ಭಿನ್ನ ಗ್ರಹಿಕೆ ಹೊಂದಿರುವುದು ಸ್ವಾಭಾವಿಕವಾಗಿದೆ. ಗ್ರಾಮಗಳು ಮತ್ತು ನಗರಗಳ ನಡುವೆ ಹಿಂದೆ ಇದ್ದ ಭೌತಿಕ ಅಂತರ ಈಗ ಉಳಿದಿಲ್ಲ. ಕೆಲವರಿಗೆ ಹಳ್ಳಿ ಎಂದರೆ ಸಂವಹನಕ್ಕೆ ಕಷ್ಟಕರವಾದ ಸ್ಥಳ, ಅಲ್ಲಿ ಕೆಲವೇ ಕೆಲವು ಸೌಕರ್ಯಗಳಿರುತ್ತವೆ, ಅಲ್ಪ ಅಭಿವೃದ್ಧಿಯಾಗಿರುತ್ತದೆ ಮತ್ತು ಒಟ್ಟಾರೆ ಹಿಂದುಳಿದಿರುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಇಂದು ನೀವು ಯಾವುದೇ ಗ್ರಾಮೀಣ ಅಥವಾ ಅರೆ ನಗರ ಪ್ರದೇಶಗಳಿಗೆ ಹೋದರೂ ನೀವು ಭಿನ್ನ ರೂಪವನ್ನು ಕಾಣಬಹುದು. ಅಲ್ಲಿ ಹೊಸ ಭರವಸೆ, ಹೊಸ ವಿಶ್ವಾಸ ಎದ್ದು ಕಾಣುತ್ತಿದೆ. ಇಂದಿನ ಗ್ರಾಮೀಣ ಭಾರತದಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಭಾರತದಲ್ಲಿ ಹೆಚ್ಚಿನ ಅಂತರ್ಜಾಲ ಸಂಪರ್ಕಗಳು ಸಕ್ರಿಯವಾಗಿರುವುದು ನಿಮಗೆ ಗೊತ್ತೇ ? ಭಾರತದ ಅರ್ಧದಷ್ಟು ನವೋದ್ಯಮಗಳು ನಮ್ಮ ಎರಡನೇ ದರ್ಜೆ ಮತ್ತು ಮೂರನೇ ದರ್ಜೆ ನಗರಗಳಲ್ಲಿ ಇವೆ ಎಂಬುದು ತಿಳಿದಿದೆಯೇ ? ದೇಶದ ಶೇ.98ರಷ್ಟು ಜನವಸತಿಗಳಿಗೆ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿ ಸಂಪರ್ಕ ಕಲ್ಪಿಸಲಾಗಿದೆ.

ಅದರ ಅರ್ಥ ಗ್ರಾಮೀಣ ಜನರು ಇದೀಗ ಹೆಚ್ಚಾಗಿ ಮಾರುಕಟ್ಟೆ, ಶಾಲೆಗಳು, ಆಸ್ಪತ್ರೆಗಳು ಹಾಗೂ ಇತರೆ ಸೌಕರ್ಯಗಳ ಸಂಪರ್ಕವನ್ನು ಪಡೆಯುತ್ತಿದ್ದಾರೆ ಎಂದು. ಗ್ರಾಮೀಣ ಜನರಲ್ಲಿ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯಗಳಿಸುವ ಪ್ರೇರಣೆ ಹೆಚ್ಚಾಗಿದೆ. ಸರ್ಕಾರ ಆಶೋತ್ತರಗಳನ್ನು ಈಡೇರಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಉದಾಹರಣೆಗೆ ಇತ್ತೀಚೆಗೆ ಆರಂಭಿಸಿದ ಪಿಎಂ-ವಾಣಿ ಯೋಜನೆಯನ್ನೇ ತೆಗೆದುಕೊಳ್ಳಿ. ಯೋಜನೆ ಅಡಿ ದೇಶಾದ್ಯಂತ ಸಾರ್ವಜನಿಕ ವೈ-ಫೈ ಹಾಟ್ ಸ್ಪಾಟ್ ಗಳ ಜಾಲವನ್ನು ಸೃಷ್ಟಿಸಲಾಗುತ್ತಿದೆ. ಇದರಿಂದಾಗಿ ಗ್ರಾಮಗಳಲ್ಲಿ ಸಮಗ್ರ ಸಂಪರ್ಕ ವಿಸ್ತರಣೆ ಸಾಧ್ಯವಾಗಲಿದೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸಂಪರ್ಕಗಳನ್ನು ಒದಗಿಸುವ ಪ್ರಯತ್ನಗಳಲ್ಲಿ ಎಲ್ಲ ಉದ್ಯಮಿಗಳು ಭಾಗಿಯಾಗಿ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ನಾನು ಕರೆ ನೀಡುತ್ತೇನೆ. ಸಣ್ಣ ಗ್ರಾಮಗಳು ಮತ್ತು ನಗರಗಳು 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ಖಂಡಿತ ಬೆಂಬಲ ನೀಡುತ್ತವೆ, ಆದ್ದರಿಂದ ನೀವು ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಹೂಡಿಕೆಗೆ ಅವಕಾಶಗಳು ಸಿಕ್ಕಾಗ ಅವುಗಳನ್ನು ಕಳೆದುಕೊಳ್ಳಬೇಡಿ. ನೀವು ಮಾಡುವ ಹೂಡಿಕೆಗಳಿಂದಾಗಿ ನಮ್ಮ ಕೃಷಿ ವಲಯದಲ್ಲಿ ಹೊಸ ಅವಕಾಶದ ಬಾಗಿಲುಗಳು ತೆರೆಯುತ್ತವೆ ಹಾಗೂ ನಮ್ಮ ಗ್ರಾಮಗಳಲ್ಲಿ ವಾಸಿಸುತ್ತಿರುವ ಸಹೋದರ ಸಹೋದರಿಯರ ಜೀವನದಲ್ಲೂ ಹೊಸತನ ಆರಂಭವಾಗಲಿದೆ.

ಮಿತ್ರರೇ,

ಭಾರತ ಕಳೆದ ಕೆಲವು ವರ್ಷಗಳಿಂದೀಚೆಗೆ ದೇಶದ ಕೃಷಿ ವಲಯವನ್ನು ಬಲವರ್ಧನೆಗೊಳಿಸಲು ಸುಸ್ಥಿರ ರೀತಿಯಲ್ಲಿ ಕಾರ್ಯೋನ್ಮುಖವಾಗಿದೆ. ಇಂದು ಭಾರತದ ಕೃಷಿ ವಲಯ ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿದೆ. ಇಂದು ಭಾರತದ ರೈತರು ಮಾರುಕಟ್ಟೆಗಳ ಹೊರಗೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಭಾರತದಲ್ಲಿ ಇಂದು ಮಂಡಿಗಳು ಮಾತ್ರ ಆಧುನೀಕರಣಗೊಂಡಿಲ್ಲ, ರೈತರಿಗೆ ತಮ್ಮ ಉತ್ಪನ್ನಗಳನ್ನು ಡಿಜಿಟಲ್ ವೇದಿಕೆಗಳಲ್ಲೂ ಖರೀದಿ ಮತ್ತು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಪ್ರಯತ್ನಗಳ ಉದ್ದೇಶ ರೈತರ ಆದಾಯವನ್ನು ವೃದ್ಧಿಸುವುದು ಮತ್ತು ಅವರ ಏಳಿಗೆಯಾಗುವಂತೆ ಮಾಡುವುದು. ದೇಶದ ರೈತರು ಏಳಿಗೆಯಾದರೆ ದೇಶವೂ ಅಭ್ಯುದಯವಾಗಲಿದೆ. ಹಿಂದೆ ಹೇಗೆ ನಮ್ಮ ಕೃಷಿ ವಲಯವನ್ನು ನಿರ್ವಹಿಸಲಾಗುತ್ತಿತ್ತು ಎಂಬುದಕ್ಕೆ ನಾನು ನಿಮಗೆ ಮತ್ತೊಂದು ಉದಾಹರಣೆಯನ್ನು ನೀಡುತ್ತೇನೆ.

ಮಿತ್ರರೇ,

ಹಿಂದೆ ಎಥೆನಾಲ್ ಗೆ ದೇಶದಲ್ಲಿ ಆದ್ಯತೆ ನೀಡಲಾಗುತ್ತಿತ್ತು ಮತ್ತು ಅದನ್ನು ಆಮದು ಮಾಡಿಕೊಳ್ಳಲಾಗಿತ್ತು. ಆದರೆ ನಮ್ಮ ಕಬ್ಬು ಬೆಳೆಗಾರರು ತಮ್ಮ ಕಬ್ಬನ್ನು ಮಾರಾಟ ಮಾಡಲಾಗುತ್ತಿರಲಿಲ್ಲ ಅಥವಾ ತಮಗೆ ಬರಬೇಕಾಗಿದ್ದ ಕೋಟ್ಯಾಂತರ ರೂ.ಗಳ ಬಾಕಿಯನ್ನು ಪಡೆಯಲಾಗುತ್ತಿರಲಿಲ್ಲ. ನಾವು ಪರಿಸ್ಥಿತಿಯನ್ನು ಬದಲಾಯಿಸಿದ್ದೇವೆ, ನಾವು ದೇಶದಲ್ಲಿಯೇ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸಿದ್ದೇವೆ. ಹಿಂದೆ ಸಕ್ಕರೆ ಅಥವಾ ಬೆಲ್ಲವನ್ನು ಮಾಡಲಾಗುತ್ತಿತ್ತು. ಕೆಲವೊಮ್ಮೆ ಸಕ್ಕರೆ ಬೆಲೆ ಕುಸಿತವಾಗುತ್ತಿತ್ತು, ರೈತರಿಗೆ ಹಣ ಸಿಗುತ್ತಿರಲಿಲ್ಲ, ಕೆಲವೊಮ್ಮೆ ಸಕ್ಕರೆ ಬೆಲೆ ಏರಿಕೆಯಾಗುತ್ತಿತ್ತು, ಅಂತಹ ಸಂದರ್ಭದಲ್ಲಿ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದರು, ಅದಕ್ಕೆ ಯಾವುದೇ ವ್ಯವಸ್ಥೆ ಜಾರಿಯಲ್ಲಿರಲಿಲ್ಲ. ಮತ್ತೊಂದೆಡೆ ನಾವು ನಮ್ಮ ಕಾರು ಮತ್ತು ಸ್ಕೂಟರ್ ಗಳಿಗೆ ಪೆಟ್ರೋಲ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬದಲಾಗಿ ಎಥೆನಾಲ್ ಕೂಡ ಬಳಸಬಹುದಾಗಿದೆ. ಇದೀಗ ದೇಶದಲ್ಲಿ ಪೆಟ್ರೋಲ್ ಜೊತೆ ಶೇ.10ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇದರಿಂದ ಆಗುವ ಬದಲಾವಣೆಗಳನ್ನು ಗಮನಿಸಿ. ಇದರಿಂದ ಕಬ್ಬು ಬೆಳೆಗಾರರ ಆದಾಯ ವೃದ್ಧಿಯಾಗುವುದಷ್ಟೇ ಅಲ್ಲದೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

ಮಿತ್ರರೇ,

ಇಂದು ಹಿರಿಯ ಕೈಗಾರಿಕೋದ್ಯಮಿಗಳಲ್ಲಿ ನಾನು ಒಬ್ಬನಾಗಿದ್ದರೆ ನಾನು ಖಡಾಖಂಡಿತವಾಗಿ ದೇಶದ ಕೃಷಿ ವಲಯದಲ್ಲಿ ಖಾಸಗಿ ವಲಯದವರು ಎಷ್ಟು ಹೂಡಿಕೆ ಮಾಡಬೇಕಿತ್ತು ಅಷ್ಟು ಪ್ರಮಾಣದಲ್ಲಿ ಹೂಡಿಕೆಯಾಗಿಲ್ಲ ಎಂದು ಧೈರ್ಯದಿಂದ ಹೇಳುತ್ತಿದ್ದೆ. ಅದು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ವಲಯದಲ್ಲಿ ಖಾಸಗಿ ವಲಯದವರೂ ಹೆಚ್ಚಾಗಿ ಅವಕಾಶಗಳನ್ನು ಬಳಸಿಕೊಂಡಿಲ್ಲ. ನಮಗೆ ಶೈತ್ಯಾಗಾರಗಳ ಸಮಸ್ಯೆಗಳು ಇವೆ. ಪೂರೈಕೆ ಸರಣಿ ಅತ್ಯಂತ ಸೀಮಿತ ರೀತಿಯಲ್ಲಿದ್ದು, ಅದಕ್ಕೆ ಖಾಸಗಿ ವಲಯದ ಬೆಂಬಲವಿಲ್ಲ. ನೀವು ರಸಗೊಬ್ಬರ ಕೊರತೆಯ ಬಗ್ಗೆಯ ಸಹ ಕೇಳಿರಬಹುದು. ಎಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆಯೂ ಸಹ ನೀವು ತಿಳಿದಿರಬಹುದು. ಕೃಷಿ ವಲಯದಲ್ಲಿ ಇಂತಹ ಹಲವು ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಇದಕ್ಕೆ ನಿಮ್ಮ ಆಸಕ್ತಿ ಮತ್ತು ಬಂಡವಾಳ ಎರಡೂ ಕೂಡ ಅತ್ಯಗತ್ಯವಾಗಿದೆ. ಹಲವು ಕೃಷಿ ಕಂಪನಿಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬ ನಂಬಿಕೆ ನನಗಿದೆ. ಆದರೆ ಅದು ಸಾಕಾಗುತ್ತಿಲ್ಲ. ಬೆಳೆಹಾನಿ ಮತ್ತು ರೈತರ ಆದಾಯವೃದ್ಧಿ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಹೆಚ್ಚಿನ ಬೆಂಬಲ ನೀಡಬೇಕಾಗಿದೆ. ನಾನಾ ಬೆಳೆ, ಹಣ್ಣು, ತರಕಾರಿಗಳನ್ನು ಬೆಳೆಯುವಂತಹ ರೈತರು ಆಧುನಿಕ ವ್ಯಾಪಾರ ತಂತ್ರಗಳನ್ನು ಪಾಲಿಸಬೇಕು. ಅದಕ್ಕೆ ತಕ್ಕಂತೆ ನಾವು ಹೂಡಿಕೆಯನ್ನೂ ಸಹ ಮಾಡಬೇಕಿದೆ. ಇಂದು ಗ್ರಾಮೀಣ ಭಾಗದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ವಿಪುಲ ಅವಕಾಶಗಳಿವೆ. ಹಿಂದಿನ ನೀತಿಗಳು ಏನೇ ಆಗಿರಬಹುದು, ಆದರೆ ಇಂದಿನ ನೀತಿಗಳು ಗ್ರಾಮೀಣ ಕೃಷಿ ಆಧಾರಿತ ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚು ಪೂರಕವಾಗಿವೆ. ಉತ್ತಮ ನೀತಿ ಮತ್ತು ಉದ್ದೇಶಗಳೊಂದಿಗೆ ಸರ್ಕಾರ ರೈತರ ಹಿತರಕ್ಷಣೆ ಸಂಪೂರ್ಣ ಬದ್ಧವಾಗಿದೆ.

ಮಿತ್ರರೇ,

ಕೃಷಿ, ಸೇವಾ, ಉತ್ಪಾದನಾ ಮತ್ತು ಸಾಮಾಜಿಕ ವಲಯಗಳು ಪರಸ್ಪರ ಪೂರಕವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗಿದೆ. ಎಫ್ಐಸಿಸಿಐನಂತಹ ಸಂಸ್ಥೆಗಳು ನಿಟ್ಟಿನಲ್ಲಿ ಸೇತುವೆ ಮತ್ತು ಸ್ಫೂರ್ತಿಯಾಗಿ ಕೆಲಸ ಮಾಡಬೇಕಿವೆ. ಎಂಎಸ್ಎಂಇಗಳ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಅವುಗಳ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಬೇಕಿದೆ. ಸ್ಥಳೀಯ ಮೌಲ್ಯ ಮತ್ತು ಪೂರೈಕೆ ಸರಣಿ ಬಲವರ್ಧನೆಗೆ ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಮತ್ತು ಜಾಗತಿಕ ಪೂರೈಕೆ ಸರಣಿಯಲ್ಲಿ ಭಾರತದ ಪಾತ್ರವನ್ನು ವಿಸ್ತರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಭಾರತ ಉತ್ತಮ ಮಾರುಕಟ್ಟೆ, ಮಾನವ ಸಂಪನ್ಮೂಲ ಮತ್ತು ದುಡಿಯುವ ಸಾಮರ್ಥ್ಯವನ್ನು ಹೊಂದಿದ್ದು, ಅದನ್ನು ಸಮರೋಪಾದಿಯಲ್ಲಿ ಬಳಸಿಕೊಳ್ಳಬೇಕಿದೆ. ಸಾಂಕ್ರಾಮಿಕ ಸಮಯದಲ್ಲೂ ಸಹ ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರತಿಯೊಂದು ಹೆಜ್ಜೆಗಳನ್ನು ಹೇಗೆ ಇಟ್ಟಿದೆ ಎಂಬುದನ್ನು ನಾವು ಕಾಣಬಹುದಾಗಿದೆ. ಸಂಕಷ್ಟದ ಸಮಯದಲ್ಲೂ ಸಹ ಜಾಗತಿಕ ಪೂರೈಕೆ ಸರಣಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಲ್ಲಿ ನಮ್ಮ ಫಾರ್ಮಾ ವಲಯ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಇದೀಗ ಭಾರತ ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಅದು ಭಾರತದಲ್ಲಿ ವಾಸಿಸುತ್ತಿರುವ ಕೋಟ್ಯಾಂತರ ಜನರಿಗೆ ರಕ್ಷಣೆ ನೀಡಲು ಕ್ರಮ ಕೈಗೊಂಡಿದೆ ಮತ್ತು ಜಗತ್ತಿನ ಹಲವು ರಾಷ್ಟ್ರಗಳಿಗೆ ಹೊಸ ಭರವಸೆಯನ್ನು ನೀಡುತ್ತಿದೆ.

ಮಿತ್ರರೇ,

ನಾವೆಲ್ಲರೂ ಒಂದು ಜನಪ್ರಿಯ ಮಂತ್ರವನ್ನು ಕೇಳಿದ್ದೇವೆ ಮತ್ತು ಅದು ನಮ್ಮ ಜೀವನಕ್ಕೂ ಕೂಡ ಅತ್ಯಂತ ಅವಶ್ಯಕವಾಗಿದೆ. तन्मे मन: शिवसंकल्प मस्तु, ಅಂದರೆ ನಮ್ಮ ಮನಸ್ಸಿನಲ್ಲಿ ಸೊಗಸಾದ ಸಂಕಲ್ಪಗಳನ್ನು ಹೊಂದಿರಬೇಕು ಎಂಬುದು. ನಾವು ಅದೇ ಸ್ಫೂರ್ತಿಯೊಂದಿಗೆ ಮುನ್ನಡೆಯಬೇಕಿದೆ. ದೇಶದ ಗುರಿ, ಸಂಕಲ್ಪ ಮತ್ತು ನೀತಿಗಳು ಅತ್ಯಂತ ಸ್ಪಷ್ಟವಾಗಿವೆ. ಮೂಲಸೌಕರ್ಯ ಅಥವಾ ನೀತಿ ಸೇರಿದಂತೆ ಹಲವು ವಲಯಗಳಲ್ಲಿ ಭಾರತದ ಸುಧಾರಣೆ ಉದ್ದೇಶಗಳು ಸಹ ದೃಢವಾಗಿವೆ. ಸಾಂಕ್ರಾಮಿಕದಂತಹ ವಿಪತ್ತುಗಳಿಂದಾಗಿ ಯಾವುದೇ ರೀತಿಯ ಅಡೆತಡೆಗಳು ಎದುರಾದರೂ ನಾವು ಅವೆಲ್ಲವನ್ನೂ ಮೀರಿ ಮುನ್ನಡೆಯುತ್ತಿದ್ದೇವೆ. ಹೊಸ ನಂಬಿಕೆಗಳೊಂದಿಗೆ ನಾವು ಇನ್ನೂ ಹೆಚ್ಚು ಕಠಿಣ ರೀತಿಯಲ್ಲಿ ಶ್ರಮ ಪಡಬೇಕಾಗಿದೆ. ಸತ್ಯ ಮತ್ತು ಆತ್ಮವಿಶ್ವಾಸದೊಂದಿಗೆ ನಾವು ಹೊಸ ದಶಕದಲ್ಲಿ ಮುನ್ನಡೆಯಬೇಕಿದೆ. ದೇಶ 2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಸ್ವಾತಂತ್ರ್ಯಾ ನಂತರ ದೇಶದ ಪ್ರಗತಿಗಾಥೆಯಲ್ಲಿ ಎಫ್ಐಸಿಸಿಐ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಎಫ್ಐಸಿಸಿ 100 ವರ್ಷಗಳನ್ನು ಕ್ರಮಿಸುವುದು ಕೂಡ ದೂರವಿಲ್ಲ. ಪ್ರಮುಖ ಘಟ್ಟದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಪಾತ್ರವನ್ನು ಮತ್ತಷ್ಟು ವಿಸ್ತಾರ ಮತ್ತು ವಿಸ್ತೃತಗೊಳಿಸುವ ಅಗತ್ಯವಿದೆ. ನಿಮ್ಮ ಪ್ರಯತ್ನಗಳು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಹೊಸ ಆಯಾಮ ನೀಡಲಿವೆ. ನಿಮ್ಮ ಪ್ರಯತ್ನಗಳಿಂದಾಗಿ ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗುವ ಮಂತ್ರ ಇಡೀ ಜಗತ್ತಿನಲ್ಲಿ ಅನುರಣಿಸಲಿದೆ. ಅಂತಿಮವಾಗಿ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸಂಗೀತ ರೆಡ್ಡಿ ಜಿ ಅವರನ್ನು ನಾನು ಅಭಿನಂದಿಸುತ್ತೇನೆ. ಇದೇ ವೇಳೆ ಉದಯ ಶಂಕರ್ ಜಿ ಅವರಿಗೂ ಸಹ ನನ್ನ ಶುಭಾಶಯಗಳು. ನಿಮ್ಮೊಡೆನೆ ಇರುವ ಅವಕಾಶ ದೊರಕಿಸಿಕೊಟ್ಟಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಬಯಸುತ್ತೇನೆ.

ಧನ್ಯವಾದಗಳು..!

***



(Release ID: 1680527) Visitor Counter : 211