ಪ್ರಧಾನ ಮಂತ್ರಿಯವರ ಕಛೇರಿ

ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಸಮಾರೋಪ ಭಾಷಣ

Posted On: 04 DEC 2020 2:30PM by PIB Bengaluru

ನನ್ನ ಎಲ್ಲಾ ಹಿರಿಯ ಸಹೋದ್ಯೋಗಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ! ನೀವು ವ್ಯಕ್ತಪಡಿಸಿದ ಅಭಿಪ್ರಾಯಗಳು, ಚರ್ಚೆಯಲ್ಲಿ ನೀವು ಮಾಡಿರುವ ಸಲಹೆಗಳು, ಬಹಳ ಪ್ರಮುಖವಾದವು ಎಂದು ನಾನು ಭಾವಿಸುತ್ತೇನೆ. ಚರ್ಚೆಯಲ್ಲಿ ಲಸಿಕೆಗೆ ಸಂಬಂಧಿಸಿ ನೀವು ಮರುವ್ಯಕ್ತಪಡಿಸಿರುವ ವಿಶ್ವಾಸ ಕೊರೊನಾ ವಿರುದ್ಧ ದೇಶದ ಹೋರಾಟವನ್ನು ಇನ್ನಷ್ಟು ಶಕ್ತಿಯುತಗೊಳಿಸಿದೆ. ಇಲ್ಲಿ ತೋರಿಸಲಾದ ಪ್ರದರ್ಶಿಕೆಗಳು ಎಷ್ಟು ಕಾಲದಿಂದ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಏನು ನಡೆಯುತ್ತಿದೆ, ಈಗ ನಾವು ಎಲ್ಲಿಗೆ ತಲುಪಿದ್ದೇವೆ, ಮತ್ತು ಯಾವ ದೃಢ ನಂಬಿಕೆಯ ಮೇಲೆ ನಾವು ಮುಂದಡಿ ಇಡುತ್ತಿದ್ದೇವೆ ಎಂಬುದನ್ನು ವಿವರವಾಗಿ ತಿಳಿಸಿವೆ.

ಸ್ನೇಹಿತರೇ,

ಇತ್ತೀಚೆಗೆ ನಾನು ವಿಷಯದ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೆ. ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿ ರಾಜ್ಯ ಸರಕಾರಗಳಿಂದ ಹಲವಾರು ಸಲಹೆಗಳು ಬಂದಿವೆ. ಕೆಲವು ದಿನಗಳ ಹಿಂದೆ, ನಾನು ಬಹಳ ಕಾಲದಿಂದ ಭಾರತದಲ್ಲಿ ಲಸಿಕೆಯನ್ನು ತಯಾರಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿರುವ ವೈಜ್ಞಾನಿಕ ತಂಡಗಳ ಜೊತೆ ಅರ್ಥಪೂರ್ಣ ಮತ್ತು ವಿವರವಾದ ಚರ್ಚೆಯನ್ನು ನಡೆಸಿದ್ದೇನೆ. ವಿಜ್ಞಾನಿಗಳನ್ನು ಭೇಟಿಯಾಗುವ ಅವಕಾಶವೂ ನನಗೆ ಲಭಿಸಿತ್ತು. ಮತ್ತು ಭಾರತೀಯ ವಿಜ್ಞಾನಿಗಳು ತಮ್ಮ ಪ್ರಯತ್ನದಲ್ಲಿ ಯಶಸ್ಸು ಗಳಿಸುವ ಬಗ್ಗೆ ಭಾರೀ ಭರವಸೆ ಹೊಂದಿದ್ದಾರೆ. ಅವರ ವಿಶ್ವಾಸದ ಮಟ್ಟ ಬಹಳ ಎತ್ತರದಲ್ಲಿದೆ ಮತ್ತು ದೃಢವಾಗಿದೆ. ಈಗ ವಿವಿಧ ದೇಶಗಳ ಹಲವಾರು ಲಸಿಕೆಗಳ ಹೆಸರುಗಳು ಕೇಳಿ ಬರುತ್ತಿವೆ. ಆದಾಗ್ಯೂ ಜಗತ್ತು ಸುರಕ್ಷಿತ ಮತ್ತು ದುಬಾರಿಯಲ್ಲದ ಲಸಿಕೆಯತ್ತ ನೋಡುತ್ತಿದೆ ಮತ್ತು ಇಡೀ ಜಗತ್ತು ಭಾರತದತ್ತ ನೋಡುತ್ತಿರುವುದು ಕೂಡಾ ಒಂದು ಸಹಜ ಸಂಗತಿಯಾಗಿದೆ. ಅಹ್ಮದಾಬಾದ್, ಪುಣೆ ಮತ್ತು ಹೈದರಾಬಾದಿಗೆ ಭೇಟಿ ನೀಡುವ ಮೂಲಕ, ನಾನು ಕೂಡಾ ಲಸಿಕೆ ಉತ್ಪಾದನೆಗೆ ದೇಶದ ಸಿದ್ಧತೆಗಳನ್ನು ನೋಡಿದೆ.

ನಮ್ಮ ಭಾರತೀಯ ತಯಾರಕರು .ಸಿ.ಎಂ.ಆರ್. , ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಜಾಗತಿಕ ಉದ್ಯಮದ ಇತರ ದೈತ್ಯ ಕಂಪೆನಿಗಳ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ರೀತಿಯಲ್ಲಿ ಪ್ರತಿಯೊಬ್ಬರೂ  ಸಿದ್ದಗೊಳ್ಳುತ್ತಿದ್ದಾರೆ  ಮತ್ತು ಮುಂದುವರಿಯಲು ತಯಾರಾಗಿದ್ದಾರೆ. ಪರೀಕ್ಷೆಯ ವಿವಿಧ ಹಂತಗಳಲ್ಲಿ ಇಂತಹ 8 ಲಸಿಕೆಗಳಿವೆ, ಮತ್ತು ಅವುಗಳು ಭಾರತದಲ್ಲಿ ತಯಾರಾಗಲಿವೆ. ಕೊರೊನಾ ಲಸಿಕೆಗಾಗಿ ಕಾಯುವಿಕೆ ಇನ್ನು ಧೀರ್ಘವಾಗಿರಲಾರದು ಎಂದು ತಜ್ಞರು ಹೇಳುತ್ತಿದ್ದಾರೆ. ಕೊರೊನಾ ಲಸಿಕೆ ಮುಂದಿನ ಕೆಲವು ವಾರಗಳಲ್ಲಿ ಸಿದ್ಧಗೊಳ್ಳಲಿದೆ ಎಂದು ಭಾವಿಸಲಾಗುತ್ತಿದೆ. ವಿಜ್ಞಾನಿಗಳಿಂದ ಹಸಿರು ನಿಶಾನೆ ಲಭಿಸಿದ ತಕ್ಷಣ, ಭಾರತದಲ್ಲಿ ಲಸಿಕಾ ಆಂದೋಲನ ಆರಂಭಗೊಳ್ಳುತ್ತದೆ. ಲಸಿಕಾ ಕಾರ್ಯಕ್ರಮದ ಮೊದಲ ಹಂತದಲ್ಲಿ ಯಾರಿಗೆ ಲಸಿಕೆ ಲಭಿಸಬೇಕು ಎಂಬುದಕ್ಕೆ ಸಂಬಂಧಿಸಿ ರಾಜ್ಯ ಸರಕಾರಗಳಿಂದ ಬಂದಿರುವ ಸಲಹೆಗಳನ್ವಯ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ವಲಯದ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಗಂಬೀರ ಖಾಯಿಲೆಗಳಿಂದ ಬಳಲುತ್ತಿರುವ ಹಿರಿಯರಿಗೆ  ಆದ್ಯತೆಯನ್ನು ನೀಡಲಾಗುತ್ತದೆ.

ಸ್ನೇಹಿತರೇ,

ಲಸಿಕೆ ವಿರತಣೆಗೆ ಕೂಡಾ ಕೇಂದ್ರ ಮತ್ತು ರಾಜ್ಯ ಸರಕಾರಗಳ ತಂಡಗಳು ಒಗ್ಗೂಡಿ ಕೆಲಸ ಮಾಡುತ್ತಿವೆ. ಲಸಿಕೆ ವಿತರಣೆಗೆ ಭಾರತ ಸೂಕ್ತ ಅನುಭವ ಮತ್ತು ಸಾಮರ್ಥ್ಯವನ್ನು ಹೊಂದಿದೆ. ನಿಟ್ಟಿನಲ್ಲಿ ನಾವು ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದ್ದೇವೆ. ನಾವು ವಿಶ್ವದಲ್ಲಿಯೇ ಲಸಿಕಾ ಕಾರ್ಯಕ್ರಮಕ್ಕೆ  ಸಂಬಂಧಿಸಿದ ಬೃಹತ್ ಮತ್ತು ಅನುಭವೀ ಜಾಲವನ್ನು ಹೊಂದಿದ್ದೇವೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು. ಇದಕ್ಕೆ ಬೇಕಾಗಬಹುದಾದ ಹೆಚ್ಚುವರಿ ಶೀತಲಗೃಹಗಳ ವ್ಯವಸ್ಥೆ  ಮತ್ತು ಇತರ ಸಾಗಾಣಿಕಾ ವ್ಯವಸ್ಥೆಗಳನ್ನು ರಾಜ್ಯ ಸರಕಾರಗಳ ಜೊತೆಗೂಢಿ ಮೌಲ್ಯಮಾಪನ ಮಾಡಲಾಗುತ್ತಿದೆ. ಶೀತಲಗೃಹಗಳನ್ನು ಬಲಪಡಿಸುವ ಹಲವು ಹೊಸ ಯೋಜನೆಗಳು ಪ್ರಗತಿಯಲ್ಲಿವೆ. ಕೆಲವು ಹೊಸ ಪ್ರಯತ್ನಗಳೂ ಸಾಗಿವೆ. ಭಾರತವು ವಿಶೇಷ ಸಾಫ್ಟ್ ವೇರ್ ಕೋ-ವಿನ್ ನ್ನು ಅಭಿವೃದ್ಧಿಪಡಿಸಿದೆ. ಇದು ಲಸಿಕೆ ದಾಸ್ತಾನು, ಲಭ್ಯತೆ ಮತ್ತು ಕೊರೊನಾ ಲಸಿಕೆಯ ಫಲಾನುಭವಿಗಳಿಗೆ ಸಂಬಂಧಿಸಿದ ಸಕಾಲಿಕ ಮತ್ತು  ಕ್ಷಣದ  ಮಾಹಿತಿಯನ್ನು ಒದಗಿಸುತ್ತದೆ. ಲಸಿಕೆಗೆ ಸಂಬಂಧಿಸಿದ ಪ್ರಚಾರಾಂದೋಲನದ ಜವಾಬ್ದಾರಿಯನ್ನು ರಾಷ್ಟ್ರೀಯ ತಜ್ಞರ ಗುಂಪಿಗೆ ನೀಡಲಾಗಿದೆ. ಅದರಲ್ಲಿ ತಾಂತ್ರಿಕ ತಜ್ಞರಿದ್ದಾರೆ, ಆಯಾ ಸಚಿವಾಲಯಗಳ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳ  ಅಧಿಕಾರಿಗಳಿದ್ದಾರೆ, ಪ್ರತೀ ವಲಯಗಳಿಗೆ ಸಂಬಂಧಿಸಿ ರಾಜ್ಯ ಸರಕಾರಗಳ ಪ್ರತಿನಿಧಿಗಳಿದ್ದಾರೆ. ರಾಷ್ಟ್ರೀಯ ತಜ್ಞರ ಗುಂಪು ರಾಜ್ಯ ಸರಕಾರಗಳ ಜೊತೆ ನಿಕಟವಾಗಿ ಕೆಲಸ ಮಾಡುತ್ತದೆ. ಪ್ರತೀ ಅವಶ್ಯಕತೆಗಳನ್ನು ಪರಿಗಣಿಸಿ, ಅದು ರಾಷ್ಟ್ರೀಯ ಮಟ್ಟದ್ದಾಗಿರಲಿ, ಅಥವಾ ಸ್ಥಳೀಯವಾದುದಾಗಿರಲಿ ಅದಕ್ಕನುಗುಣವಾಗಿ ನಿರ್ಧಾರಗಳನ್ನು ರಾಷ್ಟ್ರೀಯ ತಜ್ಞರ ಗುಂಪು ಕೈಗೊಳ್ಳುತ್ತದೆ.

ಸ್ನೇಹಿತರೇ,

ಲಸಿಕೆಗೆ ಸಂಬಂಧಿಸಿದ ದರಕ್ಕೆ ಸಂಬಂಧಿಸಿದ ಪ್ರಶ್ನೆ  ಕೂಡಾ ಸಹಜವಾದುದು. ಬಗ್ಗೆ ಕೇಂದ್ರ ಸರಕಾರ ರಾಜ್ಯ ಸರಕಾರಗಳ ಜೊತೆ ಸಮಾಲೋಚಿಸುತ್ತಿದೆ. ಸಾರ್ವಜನಿಕ ಆರೋಗ್ಯಕ್ಕೆ ಗರಿಷ್ಟ ಪ್ರಾಧಾನ್ಯತೆ ನೀಡಿ ಲಸಿಕೆಯ ದರ ನಿಗದಿಯ ನಿರ್ಧಾರವನ್ನು ಸರಕಾರ ಕೈಗೊಳುತ್ತದೆ. ಮತ್ತು ಇದರಲ್ಲಿ ರಾಜ್ಯ ಸರಕಾರಗಳ ಸಂಪೂರ್ಣ ಸಹಭಾಗಿತ್ವವೂ ಇರುತ್ತದೆ.

ಸ್ನೇಹಿತರೇ,

ಒಂದು ರಾಷ್ಟ್ರವಾಗಿ ಭಾರತ ತೆಗೆದುಕೊಂಡ ನಿರ್ಧಾರಗಳು, ವೈಜ್ಞಾನಿಕ ವಿಧಾನಗಳನ್ನು ಭಾರತ ತ್ವರಿತವಾಗಿ ಅಳವಡಿಸಿಕೊಂಡ ರೀತಿಯಿಂದಾಗಿ ಇಂದು ಫಲಿತಾಂಶಗಳು ಬರುತ್ತಿವೆ. ದಿನ ನಿತ್ಯ ಪರೀಕ್ಷೆಗಳನ್ನು ಬೃಹತ್ ಪ್ರಮಾಣದಲ್ಲಿ ನಡೆಸುತ್ತಿರುವ ದೇಶಗಳಲ್ಲಿ ಭಾರತವೂ ಸೇರಿದೆ. ಗುಣಮುಖ ದರ ಹೆಚ್ಚು ಇರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಇದೆ. ಕೊರೊನಾದಿಂದಾಗಿ ಸಾವಿನ ಸಂಖ್ಯೆ ಅತಿ ಕಡಿಮೆ ಇರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಕೊರೊನಾ ವಿರುದ್ದ ಭಾರತ ಹೋರಾಡಿದ ರೀತಿ ಪ್ರತಿಯೊಬ್ಬ ದೇಶವಾಸಿಯ ಇಚ್ಛಾಶಕ್ತಿಯ ದ್ಯೋತಕವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ , ಉತ್ತಮ ವೈದ್ಯಕೀಯ ಮೂಲಸೌಕರ್ಯ ಇರುವ ದೇಶಗಳಿಗೆ ಹೋಲಿಸಿದರೆ, ಭಾರತವು ಯುದ್ದವನ್ನು ಕೊಂಚ ಉತ್ತಮವಾಗಿ ನಡೆಸಿದೆ ಮತ್ತು ಹೆಚ್ಚು ಹೆಚ್ಚು ನಾಗರಿಕರನ್ನು ರಕ್ಷಿಸಿದೆ. ನಾವು ಭಾರತೀಯರು ಹಾಕಿಕೊಂಡ ನಿರ್ಬಂಧಗಳು, ನಾವು ಭಾರತೀಯರು ತೋರಿದ ಧೈರ್ಯ ಮತ್ತು ಭಾರತೀಯರ ಶಕ್ತಿ ಹೋಲಿಕೆಗೆ ನಿಲುಕದ್ದು ಮತ್ತು ಇಡೀ ಯುದ್ಧದಲ್ಲಿ ಅಭೂತಪೂರ್ವವಾದುದು. ನಾವು ನಮ್ಮ ನಾಗರಿಕರನ್ನು ಮಾತ್ರ ರಕ್ಷಣೆ ಮಾಡಿದ್ದಲ್ಲ, ಇತರ ದೇಶಗಳ ನಾಗರಿಕರನ್ನೂ ರಕ್ಷಿಸಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆವು.

ಸ್ನೇಹಿತರೇ,

ಭಾರತವು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಇದ್ದಂತಹ ಭಯಮಿಶ್ರಿತ ವಾತಾವರಣದಿಂದ ಇಂದು ಡಿಸೆಂಬರ್ ವರೆಗಿನ ಆಶಾವಾದದ ವಾತಾವರಣದವರೆಗೆ ಬಹಳ ಧೀರ್ಘ ದಾರಿಯನ್ನು ಸಾಗಿ ಬಂದಿದೆ. ನಾವೀಗ ಲಸಿಕೆ ಲಭಿಸುವ ಹಾದಿಯಲ್ಲಿದ್ದೇವೆ, ಅದೇ ರೀತಿಯ ಸಾರ್ವಜನಿಕ ಸಹಭಾಗಿತ್ವ, ಅದೇ ರೀತಿಯ ವೈಜ್ಞಾನಿಕ ಧೋರಣೆ, ಅದೇ ರೀತಿಯ ಸಹಕಾರ ಭವಿಷ್ಯದಲ್ಲಿ ಕೂಡಾ ಬಹಳ ಅವಶ್ಯ. ನಿಟ್ಟಿನಲ್ಲಿ ನಿಮ್ಮಂತಹ ಪರಿಣಿತ ಸಹೋದ್ಯೋಗಿಗಳು ಕಾಲ ಕಾಲಕ್ಕೆ ನೀಡುವ ಸಲಹೆಗಳು ಪರಿಣಾಮಕಾರಿ ಪಾತ್ರವನ್ನು ವಹಿಸಬಲ್ಲವು. ಇಂತಹ ಸಮಗ್ರ ಲಸಿಕಾ ಕಾರ್ಯಕ್ರಮ ಆರಂಭಗೊಂಡಾಗ, ನಿಮಗೆಲ್ಲಾ ತಿಳಿದಿದೆ, ಸಮಾಜದಲ್ಲಿ ಹಲವಾರು ಗಾಳಿ ಸುದ್ದಿಗಳು ಹರಡುತ್ತವೆ ಎಂಬ ಸಂಗತಿ. ವದಂತಿಗಳು, ಗಾಳಿ ಸುದ್ದಿಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿರುತ್ತವೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೂ ವಿರುದ್ಧವಾಗಿರುತ್ತವೆ. ಆದುದರಿಂದ ದೇಶದ ನಾಗರಿಕರು ಹೆಚ್ಚು ಹೆಚ್ಚು ತಿಳಿದುಕೊಂಡು, ವದಂತಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವಂತೆ ಮಾಡುವುದು ಎಲ್ಲಾ ಪಕ್ಷಗಳ ಜವಾಬ್ದಾರಿ. ಇದಲ್ಲದೆ, ಜಗತ್ತಿನಲ್ಲಿ  ಇದರ ವಕ್ರರೇಖೆ ಹೇಗೆ ಬದಲಾಗುತ್ತಿದೆ ಎಂಬುದೂ ನಮಗೆ ಗೊತ್ತಿದೆ ಮತ್ತು ಯಾರೊಬ್ಬರಿಗೂ ಗ್ರಾಫ್ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ನಾವು ಈಗಾಗಲೇ ಅನುಸರಿಸಿರುವ ಹಾದಿಗಳನ್ನು, ಬಳಸಿರುವ ಅಸ್ತ್ರಗಳನ್ನು ಕೈಬಿಡುವಂತಿಲ್ಲ. ಆದುದರಿಂದ ಜನರು ಎರಡು ಯಾರ್ಡ್ ದೂರವನ್ನು ಕಾಪಾಡಿಕೊಳ್ಳುವ ಬಗ್ಗೆ  ಮತ್ತು ಮುಖಗವಸು ಧರಿಸುವ ಬಗ್ಗೆ ಸದಾ ಜಾಗೃತರಾಗಿರಬೇಕು. ಇದರ ಬಗ್ಗೆ ನಿರ್ಲಕ್ಷ್ಯವು, ದೇಶ ಇದುವರೆಗೆ ಏನನ್ನು ಸಾಧಿಸಿದೆಯೋ ಅದಕ್ಕೆ ಹಾನಿ ಮಾಡಬಲ್ಲದು. ಇಂದು ಮಾತನಾಡಲು ಎಲ್ಲರಿಗೂ ಅವಕಾಶ ಸಿಕ್ಕಿಲ್ಲದಿರಬಹುದಾದರೂ, ನಾನು ಸರ್ವಪಕ್ಷಗಳ ಎಲ್ಲಾ ಗಣ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಬರಹ ಮೂಲಕ ಕಳುಹಿಸಿಕೊಡಬೇಕು ಎಂದು ಕೋರುತ್ತೇನೆ. ನಿಮ್ಮ ಸಲಹೆಗಳು ಬಹಳ ಉಪಯುಕ್ತ. ನಿಮ್ಮ ಸಲಹೆಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಅವುಗಳು ಯೋಜನೆಗೆ ಬಹಳ ಪೂರಕವಾಗಿರಲಿವೆ.

ಕೋರಿಕೆಗಳೊಂದಿಗೆ, ಇಂದು ಸಮಯವನ್ನು ವಿನಿಯೋಗಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬಹಳ ಧನ್ಯವಾದಗಳು!

ಘೋಷಣೆ: ಇದು ಭಾಷಾಂತರ ಮಾತ್ರ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

***


(Release ID: 1678987) Visitor Counter : 224