ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ಲಸಿಕೆ ಕಾರ್ಯತಂತ್ರ ಕುರಿತು ಚರ್ಚಿಸಲು ಪ್ರಧಾನಿ ಸರ್ವಪಕ್ಷ ಸಭೆ
ಭಾರತದಲ್ಲಿ ಮೂರು ದೇಶೀಯ ಲಸಿಕೆಯೂ ಸೇರಿದಂತೆ ಎಂಟು ಸಂಭಾವ್ಯ ಲಸಿಕೆಗಳು ವಿವಿಧ ಹಂತದ ಪರೀಕ್ಷೆಯಲ್ಲಿವೆ
ಮುಂದಿನ ಕೆಲವು ವಾರಗಳಲ್ಲಿ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ
ಸುರಕ್ಷಿತ ಮತ್ತು ಕೈಗೆಟಕುವ ದರದ ಲಸಿಕೆಯ ಅಭಿವೃದ್ದಿಗಾಗಿ ವಿಶ್ವ ಭಾರತದತ್ತ ನೋಡುತ್ತಿದೆ: ಪ್ರಧಾನಮಂತ್ರಿ ನರೇಂದ್ರ ಮೋದಿ
Posted On:
04 DEC 2020 4:19PM by PIB Bengaluru
ಭಾರತದಲ್ಲಿ ಕೋವಿಡ್ -19 ಲಸಿಕೆ ಕಾರ್ಯತಂತ್ರ ಕುರಿತಂತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವರು, ರಕ್ಷಣಾ ಸಚಿವರು, ಕೇಂದ್ರ ಹಣಕಾಸು ಸಚಿವರು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರು ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಪಾಲ್ಗೊಂಡಿದ್ದರು.
ಸರ್ಕಾರ ಸಮಗ್ರ ಲಸಿಕೆ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸುರಕ್ಷಿತ ಮತ್ತು ಕೈಗೆಟಕುವ ದರದ ಲಸಿಕೆಗಾಗಿ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಭಾರತವು ಕೋವಿಡ್ ಲಸಿಕೆಗೆ ಸಜ್ಜಾಗಿದೆ
ಅಹ್ಮದಾಬಾದ್, ಪುಣೆ ಮತ್ತು ಹೈದ್ರಾಬಾದ್ ಲಸಿಕಾ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ತಮ್ಮ ಅನುಭವವನ್ನು ಪ್ರಧಾನಮಂತ್ರಿ ಹಂಚಿಕೊಂಡು, ಮೂರು ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆಯೂ ಸೇರಿದಂತೆ ಭಾರತದಲ್ಲಿ ಉತ್ಪಾದಿಸಲಾಗುವ ಎಂಟು ಸಂಭಾವ್ಯ ಲಸಿಕೆಗಳು ವಿವಿಧ ಹಂತದ ಪರೀಕ್ಷೆಯಲ್ಲಿವೆ ಎಂದು ತಿಳಿಸಿದರು.
ಇನ್ನು ಕೆಲವೇ ವಾರಗಳಲ್ಲಿ ಲಸಿಕೆ ದೊರೆಯುವ ನಿರೀಕ್ಷೆ ಇದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ವಿಜ್ಞಾನಿಗಳಿಂದ ಅನುಮೋದನೆ ದೊರತ ಬಳಿಕ ಭಾರತದಲ್ಲಿ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ ಎಂದು ತಿಳಿಸಿದರು. ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು ಅತಿ ಹೆಚ್ಚು ಅಪಾಯ ಇರುವ ವ್ಯಕ್ತಿಗಳು, ವಯೋವೃದ್ಧರು ಮತ್ತು ಇತರ ದೀರ್ಘಕಾಲೀನ ವ್ಯಾಧಿಗಳಿಂದ ಬಳಲುತ್ತಿರುವವರೂ ಸೇರಿದಂತೆ ಆದ್ಯತೆಯ ಗುಂಪುಗಳನ್ನು ಗುರುತಿಸಲು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಆಪ್ತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಲಸಿಕೆಯನ್ನು ಸಮರ್ಥ, ಸುಗಮ ಮತ್ತು ಪಾರದರ್ಶಕ ರೀತಿಯಲ್ಲಿ ನೀಡುವ ಪ್ರಯತ್ನದಲ್ಲಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ದತ್ತಾಂಶ ಸಂಚಯ, ಶೀತಲೀಕರಣ ಘಟಕಗಳ ಸರಪಳಿಗಳ ಹೆಚ್ಚಳ ಮತ್ತು ಸಿರಿಂಜ್ ಮತ್ತು ಸೂಜಿಗಳ ದಾಸ್ತಾನು ಸಿದ್ಧತೆ ಮುಂದುವರಿದ ಹಂತಗಳಲ್ಲಿದೆ ಎಂದರು.
ಭಾರತದ ಲಸಿಕೆ ವಿತರಣಾ ಪರಿಣತಿ, ಸಾಮರ್ಥ್ಯ ಮತ್ತು ಅನುಭವ ಹಾಗೂ ವಿಸ್ತೃತ ಜಾಲದ ಬಗ್ಗೆ ಒತ್ತಿ ಹೇಳಿದ ಅವರು, ಕೋವಿಡ್ ಲಸಿಕೆಯನ್ನು ಸುವ್ಯವಸ್ಥಿತಗೊಳಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಹೆಚ್ಚುವರಿ ಶೀತಲೀಕರಣ ಘಟಕ ಸರಪಳಿ, ಸಾಧನಗಳು ಮತ್ತು ಇತರ ಸಾರಿಗೆ ಅವಶ್ಯಕತೆಗಳಿಗಾಗಿ ರಾಜ್ಯ ಸರ್ಕಾರಗಳೊಂದಿಗೆ ಸಹಯೋಗವನ್ನು ಸ್ಥಾಪಿಸಲಾಗುವುದು ಎಂದರು.
ಲಸಿಕೆ ನಿರ್ವಹಣೆ ಮತ್ತು ವಿತರಣೆಗಾಗಿ ಡಿಜಿಟಲ್ ವೇದಿಕೆ (ಕೋವಿಡ್ -19 ಲಸಿಕೆ ಮಾಹಿತಿ ಜಾಲ ಕೋ-ವಿನ್) ನಿರ್ಮಿಸಲಾಗಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರ ಬಾಧ್ಯಸ್ಥರ ಸಹಯೋಗದೊಂದಿಗೆ ಪರೀಕ್ಷಿಸಲಾಗುತ್ತಿದೆ ಎಂದರು.
ಲಸಿಕೆ ಅಭಿಯಾನಕ್ಕೆ ರಾಷ್ಟ್ರೀಯ ತಜ್ಞರ ಗುಂಪು ಸ್ಥಾಪನೆ
ಲಸಿಕೆ ಸಂಬಂಧಿತ ಆಂತೋಲನದ ಜವಾಬ್ದಾರಿಯನ್ನು ಹೊರಲು ತಾಂತ್ರಿಕ ತಜ್ಞರು ಮತ್ತು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ರಾಷ್ಟ್ರೀಯ ತಜ್ಞರ ಗುಂಪನ್ನು ರಚಿಸಲಾಗಿದೆ. ರಾಷ್ಟ್ರೀಯ ತಜ್ಞರ ಗುಂಪು ರಾಷ್ಟ್ರೀಯ ಮತ್ತು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಂಘಟಿತ ನಿರ್ಧಾರ ಕೈಗೊಳ್ಳಲಿದೆ.
ಭಾರತ ಸಾಂಕ್ರಾಮಿಕದ ವಿರುದ್ಧ ಅದಮ್ಯ ಇಚ್ಛಾಶಕ್ತಿಯಿಂದ ಹೋರಾಡಿದೆ
ಭಾರತೀಯರು ಈ ಸಾಂಕ್ರಾಮಿಕದ ವಿರುದ್ಧ ಅದಮ್ಯ ಇಚ್ಛಾಶಕ್ತಿಯಿಂದ ಹೋರಾಟ ನಡೆಸಿದರು ಎಂದು ಪ್ರಧಾನಮಂತ್ರಿ ಈ ಇಡೀ ಹೋರಾಟದಲ್ಲಿ ಭಾರತೀಯರ ಸಂಯಮ, ಧೈರ್ಯ ಮತ್ತು ಶಕ್ತಿ ಹೋಲಿಸಲಾಗದ ಮತ್ತು ಅಭೂತಪೂರ್ವವಾಗಿದೆ ಎಂದು ಉಲ್ಲೇಖಿಸಿದರು. ನಾವು ನಮ್ಮ ಸಹ ಭಾರತೀಯರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೆ ಇತರ ದೇಶಗಳ ನಾಗರಿಕರನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದೆ ಎಂದು ಅವರು ಹೇಳಿದರು. ಅಲ್ಲದೆ, ಭಾರತವು ಅಳವಡಿಸಿಕೊಂಡ ವೈಜ್ಞಾನಿಕ ವಿಧಾನವು ಭಾರತದಲ್ಲಿ ಪರೀಕ್ಷೆಯನ್ನು ಹೆಚ್ಚಿಸಲು ಕಾರಣವಾಯಿತು, ಇದು ಸಕ್ರಿಯ ಪ್ರಕರಣಗಳ ಪ್ರಮಾಣವನ್ನು ತಗ್ಗಿಸಿದ್ದಲ್ಲದೆ, ಕೊವಿಡ್ ಮರಣ ಪ್ರಮಾಣವನ್ನು ಕಡಿಮೆ ಮಾಡಿತು ಎಂದರು.
ಲಸಿಕೆಯ ಬಗ್ಗೆ ಹಬ್ಬುತ್ತಿರುವ ವದಂತಿಗಳ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಮಂತ್ರಿಯವರು, ಇದು ಸಾರ್ವಜನಿಕ ಹಿತ ಮತ್ತು ರಾಷ್ಟ್ರೀಯ ಹಿತಕ್ಕೆ ವಿರುದ್ಧವಾಗಿದೆ ಎಂದರು. ಎಲ್ಲ ನಾಯಕರೂ ದೇಶದ ಜನರು ಹೆಚ್ಚು ಜಾಗರೂಕರಾಗಿರುವಂತೆ ಮಾಡಬೇಕು ಮತ್ತು ಇಂಥ ವದಂತಿಗಳು ಹರಡದಂತೆ ತಡೆಯಬೇಕು ಎಂದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಮೂಲ್ಯ ಕೊಡುಗೆ ನೀಡಿದ ಎಲ್ಲ ಪಕ್ಷಗಳ ನಾಯಕರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಭಾರತದ ಲಸಿಕೆ ಪ್ರಯತ್ನದ ಯಶಸ್ಸು ಎಲ್ಲ ರಾಜಕೀಯ ಪಕ್ಷಗಳ ಬೆಂಬಲ, ಜನಾಂದೋಲನ ಮತ್ತು ಜನರ ಪಾಲ್ಗೊಳ್ಳುವಿಕೆಯಲ್ಲಿದೆ ಎಂದರು. ಇದರೊಂದಿಗೆ, ನಾಗರಿಕರು ನಿರಂತರವಾಗಿ ಜಾಗರೂಕರಾಗಿರಬೇಕು ಮತ್ತು ವೈರಾಣು ಪ್ರಸರಣ ತಡೆಗಟ್ಟುವ ಕ್ರಮಗಳನ್ನು ಅನುಸರಿಸುವಲ್ಲಿ ನಿರಾಸೆಗೊಳಿಸಬಾರದು ಎಂದು ಅವರು ಮತ್ತೊಮ್ಮೆ ಮನವಿ ಮಾಡಿದರು.
ರಾಜಕೀಯ ಪಕ್ಷಗಳ ನಾಯಕರ ಮಾತು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ, ಜೆಡಿಯು, ಬಿಜೆಡಿ, ಶಿವಸೇನಾ, ಟಿಆರ್.ಎಸ್., ಬಿಎಸ್ಪಿ, ಎಸ್ಪಿ, ಎ.ಐ.ಎ.ಡಿಎಂಕೆ ಮತ್ತು ಬಿಜೆಪಿ ಸೇರಿದಂತೆ ಮತ್ತಿತರ ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು. ತ್ವರಿತ ಮತ್ತು ಸಮರ್ಥ ಲಸಿಕೀಕರಣಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ಪ್ರಧಾನಮಂತ್ರಿಯವರಿಗೆ ಈ ಪಕ್ಷಗಳ ನಾಯಕರು ನೀಡಿದರು. ಸಾಂಕ್ರಾಮಿಕ ತಡೆಗಟ್ಟುವಲ್ಲಿ ಪ್ರಧಾನಮಂತ್ರಿಯವರ ನಾಯಕತ್ವವನ್ನು ಪ್ರಶಂಸಿಸಿದ ಅವರು, ಲಸಿಕೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಜ್ಞಾನಿಕ ಸಮುದಾಯ ಮತ್ತು ಅದನ್ನು ತಯಾರಿಸುತ್ತಿರುವವರಿಗೂ ಮೆಚ್ಚುಗೆ ಸೂಚಿಸಿದರು.
ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ದೇಶದ ಕೋವಿಡ್ -19 ಪರಿಸ್ಥಿತಿ ಕುರಿತ ಪ್ರಾತ್ಯಕ್ಷಿಕೆ ನೀಡಿದರು. ಜಾಗತಿಕ ಲಸಿಕೆ ಭೂರಮೆಯ ಅವಲೋಕನ ಮತ್ತು ಲಸಿಕೆ ವಿತರಣೆ ಮತ್ತು ಫಲಾನುಭವಿಗಳ ನಿರ್ವಹಣೆಯ ಸಂಪೂರ್ಣ ಹಾದಿಯಲ್ಲಿ ಭಾರತದ ಪ್ರಗತಿಯನ್ನು ಹಂಚಿಕೊಳ್ಳಲಾಯಿತು.
***
(Release ID: 1678496)
Visitor Counter : 266
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam