ಪ್ರಧಾನ ಮಂತ್ರಿಯವರ ಕಛೇರಿ
ವಾರಣಾಸಿಯ ದೇವ್ ದೀಪಾವಳಿ ಮಹೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ
ಕಳವಾಗಿದ್ದ ಅನ್ನಪೂರ್ಣ ಮಾತೆ ಪ್ರತಿಮೆಯನ್ನು ಮರಳಿ ಪಡೆದಿದ್ದಕ್ಕೆ ಕಾಶಿಗೆ ಅಭಿನಂದನೆ
ಗುರುನಾನಕ್ ದೇವ್ ಅವರು ಸುಧಾರಣೆಗಳ ಬೃಹತ್ ಸಂಕೇತವಾಗಿದ್ದಾರೆ: ಪ್ರಧಾನಿ
Posted On:
30 NOV 2020 7:27PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಣಾಸಿಯಲ್ಲಿ ದೇವ್ ದೀಪಾವಳಿ ಮಹೋತ್ಸವದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಇದು ಕಾಶಿಗೆ ಮತ್ತೊಂದು ವಿಶೇಷ ಸಂದರ್ಭವಾಗಿದೆ ಎಂದರು. 100 ವರ್ಷಗಳ ಹಿಂದೆ ಕಳವಾಗಿದ್ದ ಅನ್ನಪೂರ್ಣ ಮಾತೆಯ ವಿಗ್ರಹವು ಈಗ ಮತ್ತೆ ಕಾಶಿಗೆ ಮರಳುತ್ತಿದೆ. ಇದು ಕಾಶಿಗೆ ದೊಡ್ಡ ಭಾಗ್ಯವಾಗಿದೆ. ನಮ್ಮ ದೇವರು ಮತ್ತು ದೇವತೆಗಳ ಈ ಪ್ರಾಚೀನ ವಿಗ್ರಹಗಳು ನಮ್ಮ ನಂಬಿಕೆಯ ಸಂಕೇತ ಮತ್ತು ನಮ್ಮ ಅಮೂಲ್ಯವಾದ ಪರಂಪರೆಯಾಗಿವೆ ಎಂದು ಅವರು ಹೇಳಿದರು.
ಈ ಮೊದಲೇ ಇಂತಹ ಪ್ರಯತ್ನಗಳನ್ನು ಮಾಡಿದ್ದರೆ ದೇಶಕ್ಕೆ ಇಂತಹ ಹಲವು ಪ್ರತಿಮೆಗಳನ್ನು ಮರಳಿ ತರಬಹುದಿತ್ತು ಎಂದು ಪ್ರಧಾನಿ ಹೇಳಿದರು. ನಮಗೆ ಪರಂಪರೆ ಎಂದರೆ ದೇಶದ ಪರಂಪರೆ, ಕೆಲವರಿಗೆ ಅವರ ಕುಟುಂಬ ಮತ್ತು ಅವರ ಕುಟುಂಬದ ಹೆಸರೇ ಪರಂಪರೆಯಾಗಿದೆ. ನಮಗೆ ಪರಂಪರೆ ಎಂದರೆ ನಮ್ಮ ಸಂಸ್ಕೃತಿ, ನಮ್ಮ ನಂಬಿಕೆ, ನಮ್ಮ ಮೌಲ್ಯಗಳು! ಇತರರಿಗೆ ಇದರ ಅರ್ಥ, ಅವರ ವಿಗ್ರಹಗಳು ಮತ್ತು ಕುಟುಂಬದ ಭಾವಚಿತ್ರಗಳಾಗಿವೆ ಎಂದು ಅವರು ಹೇಳಿದರು.
ಗುರುನಾನಕ್ ದೇವ್ ಅವರು ಸಮಾಜ ಮತ್ತು ವ್ಯವಸ್ಥೆಯ ಸುಧಾರಣೆಗಳ ಬೃಹತ್ ಸಂಕೇತ ಎಂದು ಪ್ರಧಾನಿ ಬಣ್ಣಿಸಿದರು. ಸಮಾಜ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಬದಲಾವಣೆಗಳು ನಡೆದಾಗಲೆಲ್ಲಾ ಅದಕ್ಕೆ ವಿರೋಧದ ಧ್ವನಿಗಳು ಹೇಗೋ ಉದ್ಭವಿಸುತ್ತವೆ. ಆದರೆ ಆ ಸುಧಾರಣೆಗಳ ಮಹತ್ವ ಸ್ಪಷ್ಟವಾದಾಗ, ಎಲ್ಲವೂ ಸರಿಯಾಗುತ್ತದೆ. ಇದು ನಾವು ಗುರುನಾನಕ್ ದೇವ್ ಅವರ ಜೀವನದಿಂದ ಕಲಿಯುವ ಪಾಠವಾಗಿದೆ ಎಂದು ಅವರು ಹೇಳಿದರು.
ಕಾಶಿಯಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾದಾಗ ಪ್ರತಿಭಟನೆಗಾಗಿ ಪ್ರತಿಭಟನೆ ನಡೆಸಿದರು ಎಂದು ಪ್ರಧಾನಿ ಹೇಳಿದರು. ಬಾಬಾ ದರ್ಬಾರ್ ತನಕ ವಿಶ್ವನಾಥ ಕಾರಿಡಾರ್ ನಿರ್ಮಿಸಲು ನಿರ್ಧರಿಸಿದಾಗ, ಪ್ರತಿಭಟನಾಕಾರರು ಅದನ್ನೂ ಟೀಕಿಸಿದರು, ಆದರೆ ಇಂದು ಬಾಬಾ ಕೃಪೆಯಿಂದ ಕಾಶಿಯ ವೈಭವವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಬಾಬಾ ದರ್ಬಾರ್ ಮತ್ತು ಗಂಗಾ ಮಾತೆಯ ನಡುವೆ ಶತಮಾನಗಳಷ್ಟು ಹಳೆಯದಾದ ನೇರ ಸಂಪರ್ಕವನ್ನು ಪುನಃ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾಶಿ ವಿಶ್ವನಾಥನ ಕೃಪೆಯಿಂದ ಕಾಶಿಯಲ್ಲಿ ಬೆಳಕಿನ ಹಬ್ಬದಲ್ಲಿ ಭಾಗವಹಿಸುವ ಅವಕಾಶ ದೊರಕಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. ಪ್ರಾಚೀನ ನಗರದ ವೈಭವವನ್ನು ಸ್ಮರಿಸಿದ ಅವರು, ಕಾಶಿ ಯುಗಯುಗಗಳಿಂದಲೂ ಜಗತ್ತಿಗೆ ಮಾರ್ಗದರ್ಶನ ನೀಡಿದೆ ಎಂದರು. ಕೊರೊನಾ ನಿರ್ಬಂಧದಿಂದಾಗಿ ತಮ್ಮ ಕ್ಷೇತ್ರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದರಿಂದ ಉಂಟಾದ ಶೂನ್ಯತೆಯು ತಮ್ಮನ್ನು ಕಾಡಿತು ಎಂದು ಪ್ರಧಾನಿ ಹೇಳಿದರು. ಈ ಸಮಯದಲ್ಲಿ ತಾವು ಎಂದಿಗೂ ತಮ್ಮ ಜನರಿಂದ ದೂರವಿರಲಿಲ್ಲ ಮತ್ತು ಸಾಂಕ್ರಾಮಿಕ ಕಾಲದಲ್ಲಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ ಎಂದು ಅವರು ಹೇಳಿದರು. ಸಾಂಕ್ರಾಮಿಕದ ಸಂದರ್ಭದಲ್ಲಿ ಕಾಶಿ ಜನರು ತೋರಿದ ಸಾರ್ವಜನಿಕ ಸೇವೆಯ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
***
(Release ID: 1677273)
Visitor Counter : 178
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam