ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ವಿಂಧ್ಯಾಚಲ ವಲಯದಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ನವೆಂಬರ್ 22ರಂದು ಪ್ರಧಾನಮಂತ್ರಿ ಅವರಿಂದ ಶಿಲಾನ್ಯಾಸ

Posted On: 20 NOV 2020 2:12PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಿಂಧ್ಯಾಚಲ ವಲಯದ ಮಿರ್ಜಾಪುರ ಮತ್ತು ಸೋನಭದ್ರಾ ಜಿಲ್ಲೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ  ಯೋಜನೆಗಳಿಗೆ ನವೆಂಬರ್ 22 ರಂದು ಪೂರ್ವಾಹ್ನ 11.30 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸಗೈಯಲಿದ್ದಾರೆ. ಪ್ರಧಾನ ಮಂತ್ರಿ ಅವರು ಕಾರ್ಯಕ್ರಮದಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ/ ಪಾಣಿ ಸಮಿತಿಯ ಸದಸ್ಯರ ಜೊತೆ ಸಂವಾದ ನಡೆಸುವರು. ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.

ಯೋಜನೆಗಳ ಮೂಲಕ 2,995 ಗ್ರಾಮಗಳ  ಮನೆಗಳಿಗೆ ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆಯ ಸಂಪರ್ಕಗಳನ್ನು ಒದಗಿಸಲಾಗುವುದು ಮತ್ತು ಇದರಿಂದ ಮೂರು ಜಿಲ್ಲೆಗಳ ಸುಮಾರು 42 ಲಕ್ಷ ಜನರಿಗೆ ಪ್ರಯೋಜನ ಲಭಿಸಲಿದೆ. ಎಲ್ಲಾ ಜಿಲ್ಲೆಗಳಲ್ಲೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ/ಪಾಣಿ ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳು ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿವೆ. ಯೋಜನೆಗಳ ಒಟ್ಟು ಅಂದಾಜು ವೆಚ್ಚ ರೂ. 5,555.38 ಕೋ.ರೂ. ಗಳು. ಯೋಜನೆಗಳು 24 ತಿಂಗಳುಗಳಲ್ಲಿ ಪೂರ್ಣಗೊಳ್ಳುವಂತೆ ಯೋಜಿಸಲಾಗಿದೆ.

ಜಲ ಜೀವನ ಮಿಷನ್ ಕುರಿತು:

ಪ್ರಧಾನ ಮಂತ್ರಿ ಅವರು 2019 ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಘೋಷಿಸಿದ ಜಲ ಜೀವನ ಯೋಜನೆಯು 2024 ರೊಳಗೆ ದೇಶದ ಎಲ್ಲಾ ಗ್ರಾಮೀಣ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿದೆ. 2019 ರಲ್ಲಿ ಮಿಷನ್  ಘೋಷಿಸುವಾಗ 18.93 ಕೋಟಿ ಗ್ರಾಮೀಣ ಮನೆಗಳ ಪೈಕಿ ಬರೇ 3.23 ಕೋಟಿ ಮನೆಗಳು (17%)  ನಳ್ಳಿ ನೀರು ಸಂಪರ್ಕವನ್ನು ಹೊಂದಿದ್ದವು. ಅಂದರೆ 15.70 ಕೋಟಿ ಮನೆಗಳಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ನಳ್ಳಿ ನೀರು ಸಂಪರ್ಕಗಳನ್ನು ಒದಗಿಸಬೇಕಾಗಿದೆ. ಕಳೆದ 15 ತಿಂಗಳಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹೊರತಾಗಿಯೂ 2.63 ಕೋಟಿ ಮನೆಗಳಿಗೆ ನಳ್ಳಿ ನೀರು ಸಂಪರ್ಕಗಳನ್ನು ಒದಗಿಸಲಾಗಿದೆ ಮತ್ತು ಈಗ ಸುಮಾರು 5.86 ಕೋಟಿ (30.67 % ) ಗ್ರಾಮೀಣ ಮನೆಗಳಿಗೆ ನಳ್ಳಿ ನೀರು ಸಂಪರ್ಕವಿದೆ.

***



(Release ID: 1674540) Visitor Counter : 145