ಪ್ರಧಾನ ಮಂತ್ರಿಯವರ ಕಛೇರಿ

17ನೇ ಆಸಿಯಾನ್ ಭಾರತ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 12 NOV 2020 10:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಯಟ್ನಾಂನ ಪ್ರಧಾನಮಂತ್ರಿ ಮತ್ತು ಆಸಿಯಾನ್ ಪ್ರಸಕ್ತ ಅಧ್ಯಕ್ಷ ಘನತೆವೆತ್ತ ಎಂಗುಯಿನ್ ಕ್ಸುವಾನ್ ಪುಕ್ಸು ಅವರ ಆಹ್ವಾನದ ಮೇರೆಗೆ 17ನೇ ಆಸಿಯಾನ್ ಭಾರತ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ವರ್ಚುವಲ್ ಮಾಧ್ಯಮದ ಮೂಲಕ ನಡೆದ ಶೃಂಗಸಭೆಯಲ್ಲಿ ಎಲ್ಲ ಹತ್ತು ಸದಸ್ಯ ರಾಷ್ಟ್ರಗಳು ಭಾಗವಹಿಸಿದ್ದವು.

ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ಭಾರತದ ಪೂರ್ವದತ್ತ ಕ್ರಮದ ನೀತಿಯಲ್ಲಿ ಆಸಿಯಾನ್ ಕೇಂದ್ರಬಿಂದುವಾಗಿರುವುದನ್ನು ಒತ್ತಿ ಹೇಳಿದರು. ಭಾರತದ ಇಂಡೋ-ಪೆಸಿಫಿಕ್ ದೃಷ್ಟಿಗೆ ಒಗ್ಗೂಡಿಸುವ, ಸ್ಪಂದಿಸುವ ಮತ್ತು ಸಮೃದ್ಧವಾದ ಆಸಿಯಾನ್ ಕೇಂದ್ರವಾಗಿದೆ ಮತ್ತು ವಲಯದ ಎಲ್ಲರ ಭದ್ರತೆ ಮತ್ತು ಪ್ರಗತಿ (ಸಾಗರ್) ಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಮುಕ್ತ, ಅಂತರ್ಗತ ಮತ್ತು ನಿಯಮ ಆಧಾರಿತ ಭಾರತ-ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ಭಾರತದ ಭಾರತ-ಪೆಸಿಫಿಕ್ ಸಾಗರಗಳ ಉಪಕ್ರಮ ಮತ್ತು ಭಾರತ-ಪೆಸಿಫಿಕ್ ಮೇಲಿನ ಆಸಿಯಾನ್ ದೃಷ್ಟಿಕೋನದ ನಡುವೆ ಸಮಾನ ಲಕ್ಷಣ ಬಲವರ್ಧನೆಯ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತದ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ವಿವಿಧ ಸ್ತಂಭಗಳಿಗೆ ಸಹಕರ ನೀಡುವಂತೆ ಅವರು ಆಸಿಯಾನ್ ದೇಶಗಳನ್ನು ಆಹ್ವಾನಿಸಿದರು.

ಕೋವಿಡ್ -19 ಕುರಿತು ಮಾತನಾಡಿದ ಪ್ರಧಾನಮಂತ್ರಿ, ಭಾರತದ ಪ್ರತಿಕ್ರಿಯೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ವ್ಯಾಪಕವಾದ ಬೆಂಬಲವನ್ನು ಒತ್ತಿ ಹೇಳಿದರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆಸಿಯಾನ್ ಉಪಕ್ರಮಗಳನ್ನು ಸ್ವಾಗತಿಸಿದರು. ಕೋವಿಡ್-19 ಆಸಿಯಾನ್ ಸ್ಪಂದನಾ ನಿಧಿಗೆ 1 ದಶಲಕ್ಷ ಅಮೆರಿಕನ್ ಡಾಲರ್ ಕೊಡುಗೆಯನ್ನು ಪ್ರಧಾನಮಂತ್ರಿ ಘೋಷಿಸಿದರು.

ಆಸಿಯಾನ್ ಮತ್ತು ಭಾರತದ ನಡುವಿನ ಹೆಚ್ಚಿನ ಭೌತಿಕ ಮತ್ತು ಡಿಜಿಟಲ್ ಸಂಪರ್ಕದ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು ಮತ್ತು ಆಸಿಯಾನ್ ಸಂಪರ್ಕ ಬೆಂಬಲಿಸಲು 1 ಶತಕೋಟಿ ಅಮೆರಿಕನ್ ಡಾಲರ್ ಸಾಲ ನೀಡುವ ಭಾರತದ ಬದ್ಧತೆ ಪುನರುಚ್ಚರಿಸಿದರು. ವ್ಯಾಪಾರ ಮತ್ತು ಹೂಡಿಕೆಯ ಮೇಲೆ, ಕೋವಿಡೋತ್ತರ ಆರ್ಥಿಕ ಚೇತರಿಕೆಗಾಗಿ ಪೂರೈಕೆ ಸರಪಳಿಗಳ ವೈವಿಧ್ಯೀಕರಣ ಮತ್ತು ಚೇತರಿಕೆಯ ಮಹತ್ವವನ್ನು ಅವರು ಒತ್ತಿಹೇಳಿದರು.

ಆಸಿಯಾನ್ ನಾಯಕರು, ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಕೊಡುಗೆಯನ್ನು ಗುರುತಿಸಿದರು ಮತ್ತು ಆಸಿಯಾನ್ ಕೇಂದ್ರೀಕರಣಕ್ಕೆ ಭಾರತದ ಬೆಂಬಲವನ್ನು ಸ್ವಾಗತಿಸಿದರು. 2021-2025 ಹೊಸ ಆಸಿಯಾನ್-ಭಾರತ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಳ್ಳುವುದನ್ನು ನಾಯಕರು ಸ್ವಾಗತಿಸಿದರು.

ದಕ್ಷಿಣ ಚೀನಾ ಸಮುದ್ರ ಮತ್ತು ಭಯೋತ್ಪಾದನೆ ಸೇರಿದಂತೆ ಸಮಾನ ಆಸಕ್ತಿ ಮತ್ತು ಕಾಳಜಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಚರ್ಚೆಗಳೂ ಇದರಲ್ಲಿ ಒಳಗೊಂಡಿವೆ. ಅಂತಾರಾಷ್ಟ್ರೀಯ ಕಾನೂನು, ಅದರಲ್ಲೂ ವಿಶೇಷವಾಗಿ ಯು.ಎನ್‌.ಸಿ.ಎಲ್‌..ಎಸ್ ಅನ್ನು ಅನುಸರಿಸುವುದನ್ನು ಎತ್ತಿ ಹಿಡಿಯುವುದು ಸೇರಿದಂತೆ ಪ್ರದೇಶದಲ್ಲಿ ನಿಯಮ-ಆಧಾರಿತ ಕ್ರಮವನ್ನು ಉತ್ತೇಜಿಸುವ ಮಹತ್ವವನ್ನು ಎರಡೂ ಕಡೆಯವರು ಗುರುತಿಸಿದರು. ದಕ್ಷಿಣ ಚೀನಾ ಸಮುದ್ರದಲ್ಲಿ ಶಾಂತಿ, ಸ್ಥಿರತೆ, ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಉತ್ತೇಜಿಸುವುದು ಮತ್ತು ಸಂಚಲನೆ ಮತ್ತು ಹಾರಾಟದ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಮಹತ್ವವನ್ನು ನಾಯಕರು ದೃಢಪಡಿಸಿದರು.

***(Release ID: 1672514) Visitor Counter : 249