ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಳೆದ 35 ದಿನಗಳಿಂದೀಚೆಗೆ ಹೊಸ ಕೊರೊನಾ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವ ಪ್ರಕರಣಗಳೇ ಅಧಿಕ



ಕಳೆದ ಐದು ವಾರಗಳಿಂದ ಸುಸ್ಥಿರವಾಗಿ ಸಕ್ರಿಯ ಪ್ರಕರಣಗಳ ಇಳಿಕೆ ಮುಂದುವರಿಕೆ

Posted On: 07 NOV 2020 11:42AM by PIB Bengaluru

ಭಾರತದಲ್ಲಿ ಕಳೆದ ಒಂದು ತಿಂಗಳಿಂದ ಕೊರೊನಾ ಸೋಂಕು ಪ್ರಕರಣಗಳಿಗಿಂತ ಗುಣಮಖರ ಸಂಖ್ಯೆ  ಅಧಿಕವಾಗಿದೆ.

ಕಳೆದ 24 ಗಂಟೆಗಳಲ್ಲಿ 50,356 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದರೆ ಅದಕ್ಕೆ ವ್ಯತಿರಿಕ್ತವಾಗಿ  53,920 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ ಐದು ವಾರಗಳಿಂದೀಚೆಗೆ ಇದೇ ಪ್ರವೃತ್ತಿ ಮುಂದುವರಿದಿದೆ ಎಂದು ವಿಶ್ಲೇಷಿಸಲಾಗಿದೆ. ಈ ಅಂಶ ಅತ್ಯಂತ ಮಹತ್ವದ ಪಾತ್ರ ವಹಿಸಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಸದ್ಯ 5.16 ಲಕ್ಷಕ್ಕೆ ಇಳಿಕೆಯಾಗಿದೆ.

ಕಳೆದ ಐದು ವಾರಗಳಿಂದೀಚೆಗೆ ಪ್ರತಿ ದಿನ ಸರಾಸರಿ ಸೋಂಕು ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಪ್ರತಿ ದಿನ ಸರಾಸರಿ ಹೊಸ ಸೋಂಕು ಪ್ರಕರಣಗಳು ಅಕ್ಟೋಬರ್ ಮೊದಲ ವಾರದಲ್ಲಿ 73,000ಕ್ಕೂ ಅಧಿಕವಿತ್ತು. ಇದೀಗ ಆ ಪ್ರಮಾಣ ಪ್ರತಿ ದಿನ ಸರಾಸರಿ 46,000ಕ್ಕೆ ಇಳಿಕೆಯಾಗಿದೆ.

          ಅಂತೆಯೇ ಸುಸ್ಥಿರ ರೀತಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಸಹ ಇಳಿಕೆಯಾಗುತ್ತಿದ್ದು, ಇಂದು ಆ ಪ್ರಮಾಣ 5,16,632ಕ್ಕೆ ಇಳಿದಿದೆ. ಈ ಅಂಕಿ-ಅಂಶವನ್ನು ಗಮನಿಸಿದರೆ ಭಾರತದಲ್ಲಿ ಸದ್ಯ ಒಟ್ಟಾರೆ ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.6.11ರಷ್ಟು ಮಾತ್ರ ಇದೆ.

          ದೇಶದಲ್ಲಿ ಒಟ್ಟಾರೆ ಗುಣಮುಖರಾಗುತ್ತಿರುವವರ ಸಂಖ್ಯೆ 78,19,886ಕ್ಕೆ ಏರಿಕೆಯಾಗಿದ್ದು, ಇದರಿಂದಾಗಿ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 92.41 ತಲುಪಿದೆ. ಇದರಿಂದಾಗಿ ಸದ್ಯ ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾಗಿರುವ ಪ್ರಕರಣಗಳ ನಡುವಿನ ಅಂತರ 73,03,254 ಇದೆ.

ಹೊಸದಾಗಿ ಗುಣಮುಖರಾಗಿರುವ ಪ್ರಕರಣಗಳಲ್ಲಿ 79ರಷ್ಟು ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಮಹಾರಾಷ್ಟ್ರದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯ ಸೋಂಕಿತರು ಗುಣಮುಖರಾಗಿದ್ದಾರೆ. ಆ ರಾಜ್ಯದಲ್ಲಿ ಒಂದೇ 11,060 ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 15,62,342ಕ್ಕೆ ಏರಿಕೆಯಾಗಿದೆ.

ರಾಷ್ಟ್ರೀಯ ಸರಾಸರಿಯನ್ನು ಗಮನಿಸಿದರೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಪ್ರಮಾಣದ ಸೋಂಕಿತರು ಗುಣಮುಖರಾಗುತ್ತಿರುವುದು ಕಂಡುಬಂದಿದೆ.

ಶೇ.77ರಷ್ಟು ಹೊಸ ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದವು.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಹೊಸದಾಗಿ 7,178 ಪ್ರಕರಣಗಳು ಪತ್ತೆಯಾಗಿದ್ದು, ಹೊಸ ಪ್ರಕರಣಗಳಲ್ಲಿ ಅದು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳನ್ನು ಹಿಂದಿಕ್ಕಿದೆ. ಕೇರಳದಲ್ಲಿ ಹೊಸದಾಗಿ 7,002 ಮತ್ತು ಮಹಾರಾಷ್ಟ್ರದಲ್ಲಿ 6,870 ಹೊಸ ಪ್ರಕರಣಗಳು ನಿನ್ನೆ ವರದಿಯಾಗಿವೆ.

ಕಳೆದ 24 ಗಂಟೆಗಳಿಂದೀಚೆಗೆ ಸೋಂಕಿನಿಂದಾಗಿ 577 ಮಂದಿ ಮೃತಪಟ್ಟಿದ್ದಾರೆ.

ಆ ಪೈಕಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.83ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಶೇ.27.9ಕ್ಕೂ ಅಧಿಕ ಸಾವುಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ.(161 ಸಾವು). ದೆಹಲಿ ಮತ್ತು ಪಶ್ಚಿಮ ಬಂಗಾಳ ಆ ನಂತರದ ಸ್ಥಾನದಲ್ಲಿದ್ದು, ಅಲ್ಲಿ ಕ್ರಮವಾಗಿ 64 ಮತ್ತು 55 ಸೋಂಕಿತರು ಹೊಸದಾಗಿ ಸಾವನ್ನಪ್ಪಿದ್ದಾರೆ.

 

****



(Release ID: 1671021) Visitor Counter : 190