ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸ್ಥಿರ ಕುಸಿತ ಪ್ರವೃತ್ತಿ ಮುಂದುವರಿಕೆ
ಸತತ 2ನೇ ದಿನವೂ ಸಕ್ರಿಯ ಪ್ರಕರಣಗಳ ಪ್ರಮಾಣ 7.5 ಲಕ್ಷ ಮಟ್ಟದಿಂದ ಕೆಳಕ್ಕೆ ಇಳಿಮುಖ
14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡ 1ರ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದ ಮರಣ ದರ
Posted On:
21 OCT 2020 11:28AM by PIB Bengaluru
ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ 2ನೇ ದಿನದಲ್ಲೂ 7.5 ಲಕ್ಷ ಮಟ್ಟದಿಂದ ಕೆಳಕ್ಕೆ ತಗ್ಗಿದ್ದು, ಇಳಿಮುಖ ಪ್ರವೃತ್ತಿ ಮುಂದುವರೆಯುತ್ತಾ ಬಂದಿದೆ.
ಪ್ರತಿದಿನ ಅಧಿಕ ಸಂಖ್ಯೆಯ ಕೋವಿಡ್ ರೋಗಿಗಳು ಗುಣಮುಖರಾಗುತ್ತಿದ್ದು, ಇದರೊಂದಿಗೆ ಚೇತರಿಕೆ ಪ್ರಮಾಣ ದೈನಂದಿನ ಆಧಾರದಲ್ಲಿ ಏರಿಕೆ ಕಾಣುವ ಸ್ಥಿರ ಪ್ರವೃತ್ತಿ ದಾಖಲಾಗುತ್ತಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ ಒಟ್ಟು 61,775 ಸೋಂಕಿತರು ಗುಣಮುಖರಾಗಿ, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಆದರೆ, ಹೊಸದಾಗಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಸಂಖ್ಯೆ 54,044. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 10,83,608 ಮಂದಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ದಿನದಿಂದ ದಿನಕ್ಕೆ ಪರೀಕ್ಷೆಗಳನ್ನು ಹೆಚ್ಚಿಸುತ್ತಿರುವುದೇ ಸೋಂಕು ನಿಯಂತ್ರಣಕ್ಕೆ ಬರಲು ಕಾರಣವಾಗಿದೆ.
ಗಂಟಲು ದ್ರವ ಪರೀಕ್ಷೆ, ರೋಗ ಪತ್ತೆ ಮತ್ತು ಚಿಕಿತ್ಸೆ ಕಾರ್ಯತಂತ್ರದ ಯಶಸ್ವೀ ಅನುಷ್ಠಾನದ ಜತೆಗೆ, ಸಕಾಲಿಕ ಮತ್ತು ಸೂಕ್ತ ಚಿಕಿತ್ಸಾ ವಿಧಾನದಿಂದಾಗಿ ಮರಣ ಪ್ರಮಾಣ ಸ್ಥಿರವಾಗಿ ಇಳಿಮುಖ ಕಾಣುತ್ತಿದೆ. ಕಳೆದ 24 ತಾಸುಗಳಲ್ಲಿ ರಾಷ್ಟ್ರೀಯ ಮರಣ ಪ್ರಕರಣಗಳ ದರ (ಸಿಎಫ್ ಆರ್) 1.51%ಗೆ ಇಳಿಕೆಯಾಗಿದೆ.
ಮರಣ ದರವನ್ನು ಶೇಕಡ 1ರ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿಸುವಂತೆ ಕೇಂದ್ರ ಸರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಸ್ತುತ, 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡ 1ಕ್ಕಿಂತ ಕಡಿಮೆ ಪ್ರಮಾಣದ ಮರಣ ದರ ದಾಖಲಾಗಿದೆ.
ಭಾರತದಲ್ಲಿ ಒಟ್ಟು ಚೇತರಿಕೆ ಪ್ರಮಾಣ ಇಂದಿಗೆ 67,95,103ಕ್ಕೆ ಹೆಚ್ಚಳ ಕಂಡಿದೆ. ದಿನನಿತ್ಯ ಗುಣಮುಖರಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಪರಿಣಾಮ, ರಾಷ್ಟ್ರೀಯ ಚೇತರಿಕೆ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಅದೀಗ 88.81%ಗೆ ಸುಧಾರಣೆ ಕಂಡಿದೆ.
ದೇಶದ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 77% ಹೊಸ ಚೇತರಿಕೆ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಅಧಿಕ ಸಂಖ್ಯೆಯ ರೋಗಿಗಳು ಗುಣಮುಖರಾಗುತ್ತಿದ್ದು, ಚೇತರಿಕೆ ಪ್ರಕರಣಗಳಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೆ ಬಂದಿದ್ದು, ಅದೀಗ ಮಹಾರಾಷ್ಟ್ರವನ್ನು ಹಿಂದಿಕ್ಕಿದೆ. ಕರ್ನಾಟಕದಲ್ಲಿ ಒಂದೇ ದಿನ 8,500ಕ್ಕಿಂತ ಹೆಚ್ಚಿನ ಜನರು ಹೊಸದಾಗಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ 7,000ಕ್ಕಿಂತ ಹೆಚ್ಚಿನ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 54,044 ಹೊಸ ಪ್ರಕರಣಗಳು ದೃಢಪಟ್ಟಿವೆ.
ಇವುಗಳಲ್ಲಿ 78% ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 8,000ಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕ ಮತ್ತು ಕೇರಳದಲ್ಲಿ ತಲಾ 6,000ಕ್ಕಿಂತ ಅಧಿಕ ಜನರಿಗೆ ಸೋಂಕು ಹರಡಿದೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ ಒಟ್ಟು 717 ಸಾವುಗಳು ಸಂಭವಿಸಿವೆ.
ಅದರಲ್ಲಿ 82% ಸಾವುಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿದೆ.
ಶೇಕಡ 29ರಷ್ಟು ಸಾವುಗಳು ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ ಸಂಭವಿಸಿವೆ. ಅಲ್ಲಿ 213 ಸೋಂಕಿತರು ಮರಣ ಹೊಂದಿದರೆ, ಕರ್ನಾಟಕದಲ್ಲಿ 66 ಸಾವುಗಳು ವರದಿಯಾಗಿವೆ.
***
(Release ID: 1666439)
Visitor Counter : 238
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam