ಪ್ರಧಾನ ಮಂತ್ರಿಯವರ ಕಛೇರಿ
ಡಾ. ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ ‘ದೇಹ್ ವೆಚ್ವಾ ಕಾರಣಿ’ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಯನ್ನು ‘ಲೋಕನೇತೆ ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿ’ಎಂದು ಮರುನಾಮಕರಣ
ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಪ್ರಯತ್ನಗಳು ಮತ್ತು ಕೊಡುಗೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿವೆ: ಪ್ರಧಾನಿ
Posted On:
13 OCT 2020 2:44PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ ‘ದೇಹ್ ವೆಚ್ವಾ ಕಾರಣಿ’ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಯನ್ನು ‘ಲೋಕನೇತೆ ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿ’ಎಂದು ಪ್ರಧಾನಿಯವರು ಮರುನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಮಹಾರಾಷ್ಟ್ರದ ಪ್ರತಿಯೊಂದು ಪ್ರದೇಶದಲ್ಲೂ ವಿಖೆ ಪಾಟೀಲ್ ಅವರ ಜೀವನದ ಕಥೆಗಳನ್ನು ಕಾಣಬಹುದು. ಬಾಳಾಸಾಹೇಬ್ ವಿಖೆ ಪಾಟೀಲ್ ಅವರು ಡಾ.ವಿಠಲ್ ರಾವ್ ವಿಖೆ ಪಾಟೀಲ್ ಅವರನ್ನು ಅನುಸರಿಸಿದವರು ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡವರು ಎಂದು ಅವರು ಹೇಳಿದರು. ಹಳ್ಳಿಯ ಜನರು, ಬಡವರು, ರೈತರ ಜೀವನವನ್ನು ಸುಧಾರಿಸುವುದು ಮತ್ತು ಅವರ ಸಂಕಷ್ಟಗಳನ್ನು ಕಡಿಮೆ ಮಾಡುವುದು ವಿಖೆ ಪಾಟೀಲ್ ಅವರ ಜೀವನದ ಧ್ಯೇಯವಾಗಿತ್ತು ಎಂದು ಅವರು ಹೇಳಿದರು.
ವಿಖೆ ಪಾಟೀಲ್ ಅವರು ಯಾವಾಗಲೂ ಸಮಾಜದ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ತರಲು ಮತ್ತು ಬಡವರು ಮತ್ತು ಹಳ್ಳಿಗಳ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯವನ್ನು ಮಾಧ್ಯಮವನ್ನಾಗಿ ಮಾಡಲು ಅವರು ಒತ್ತು ನೀಡುತ್ತಿದ್ದರು ಎಂದು ಪ್ರಧಾನಿ ಹೇಳಿದರು. ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಈ ವಿಧಾನವು ಅವರನ್ನು ಇತರರಿಗಿಂತ ಭಿನ್ನವಾಗಿಸಿದೆ ಎಂದು ಅವರು ಹೇಳಿದರು. ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ ನಮ್ಮೆಲ್ಲರಿಗೂ ಬಹಳ ಮುಖ್ಯವಾಗಿದೆ, ಏಕೆಂದರೆ ಹಳ್ಳಿಗಳ ಅಭಿವೃದ್ಧಿಗೆ, ಬಡವರಿಗೆ, ಅವರ ಶಿಕ್ಷಣಕ್ಕೆ, ಮಹಾರಾಷ್ಟ್ರದ ಸಹಕಾರಿ ಸಂಸ್ಥೆಗಳ ಯಶಸ್ಸಿಗೆ ಅವರ ಪ್ರಯತ್ನಗಳು ಮತ್ತು ಕೊಡುಗೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿವೆ ಎಂದು ಪ್ರಧಾನಿ ಹೇಳಿದರು.
ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಅವರು ಬಡವರ, ರೈತರ ನೋವು ಮತ್ತು ಸಂಕಟಗಳನ್ನು ಅರ್ಥಮಾಡಿಕೊಂಡಿದ್ದರು ಎಂದು ಪ್ರಧಾನಿ ಹೇಳಿದರು. ಆದ್ದರಿಂದ ಅವರು ರೈತರನ್ನು ಒಟ್ಟುಗೂಡಿಸಿದರು, ಅವರಿಗೆ ಸಹಕಾರಿ ಸಂಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸಿದರು. ಅಟಲ್ ಜಿ ಸರ್ಕಾರದಲ್ಲಿ ಸಚಿವರಾಗಿ ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಸಹಕಾರಿ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ಗ್ರಾಮೀಣ ಶಿಕ್ಷಣದ ಬಗ್ಗೆ ಹೆಚ್ಚು ಚರ್ಚೆಗಳೇ ನಡೆಯದಿದ್ದ ಸಂದರ್ಭದಲ್ಲಿ, ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿ ಮೂಲಕ ಹಳ್ಳಿಗಳ ಯುವಜನರನ್ನು ಸಬಲೀಕರಣಗೊಳಿಸಲು ಡಾ.ಬಾಲಾಸಾಹೇಬ್ ವಿಖೆ ಪಾಟೀಲ್ ಶ್ರಮಿಸಿದರು ಎಂದು ಪ್ರಧಾನಿ ಹೇಳಿದರು. ಈ ಶಿಕ್ಷಣ ಸಂಸ್ಥೆಯ ಮೂಲಕ ಅವರು ಗ್ರಾಮೀಣ ಯುವಕರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಶ್ರಮಿಸಿದರು ಎಂದು ಅವರು ಹೇಳಿದರು.
ಕೃಷಿಯಲ್ಲಿ ಶಿಕ್ಷಣದ ಮಹತ್ವವನ್ನು ವಿಖೆ ಪಾಟೀಲ್ ಅವರು ಅರ್ಥಮಾಡಿಕೊಂಡಿದ್ದರು ಎಂದು ಪ್ರಧಾನಿ ಹೇಳಿದರು. ರೈತರನ್ನು ಉದ್ಯಮಶೀಲತೆಯತ್ತ ಕೊಂಡೊಯ್ಯಲು ಮತ್ತು ಅವರನ್ನು ಉದ್ಯಮಿಗಳನ್ನಾಗಿ ಮಾಡಲು ಇಂದು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯದ ನಂತರ ದೇಶದಲ್ಲಿ ಆಹಾರದ ಅಭಾವವಿದ್ದಾಗ, ಬೆಳೆಯ ಉತ್ಪಾದಕತೆಯನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿತ್ತು ಎಂದು ಪ್ರಧಾನಿ ಹೇಳಿದರು. ಆದರೆ ಉತ್ಪಾದಕತೆಯ ಬಗೆಗಿನ ಈ ಕಾಳಜಿಯಲ್ಲಿ, ರೈತನ ಲಾಭದತ್ತ ಗಮನ ಹರಿಸಲಿಲ್ಲ. ರೈತರ ಆದಾಯವನ್ನು ಹೆಚ್ಚಿಸಲು ದೇಶದಲ್ಲಿ ಈಗ ಒತ್ತು ನೀಡಲಾಗುತ್ತಿದೆ ಮತ್ತು ಈ ದಿಕ್ಕಿನಲ್ಲಿ ಎಂಎಸ್ಪಿ ಹೆಚ್ಚಿಸುವ ನಿರ್ಧಾರ, ಯೂರಿಯಾದ ಬೇವಿನ ಲೇಪನ ಮತ್ತು ಉತ್ತಮ ಬೆಳೆ ವಿಮೆಯಂತಹ ನಿರಂತರ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಹೇಳಿದರು. ಪಿಎಂ-ಕಿಸಾನ್ ಸಮ್ಮಾನನ್ ನಿಧಿ ಯೋಜನೆಯಂತಹ ಉಪಕ್ರಮಗಳಿಂದಾಗಿ, ರೈತರು ಈಗ ಸಣ್ಣ ಖರ್ಚುಗಳಿಗಾಗಿ ಇತರರನ್ನು ಅವಲಂಬಿಸಬೇಕಾಗಿಲ್ಲ ಎಂದು ಅವರು ಹೇಳಿದರು. ಕೋಲ್ಡ್ ಚೈನ್ಗಳು, ಮೆಗಾ ಫುಡ್ ಪಾರ್ಕ್ಗಳು ಮತ್ತು ಕೃಷಿ ಸಂಸ್ಕರಣಾ ಮೂಲಸೌಕರ್ಯಗಳಂತಹ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬಗ್ಗೆ ಮಹತ್ವದ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ನೈಸರ್ಗಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೃಷಿ ಮಾಡುತ್ತಿದ್ದ ಬೇಸಾಯದ ಸಾಂಪ್ರದಾಯಿಕ ಜ್ಞಾನವನ್ನು ಕಾಪಾಡುವ ಅಗತ್ಯತೆಯ ಬಗ್ಗೆ ಬಾಳಾಸಾಹೇಬ್ ವಿಖೆ ಪಾಟೀಲ್ ಒತ್ತಿಹೇಳಿದ್ದನ್ನು ಉಲ್ಲೇಖಿಸಿದ ಪ್ರಧಾನಿಯವರು. ನಾವು ಆ ಜ್ಞಾನವನ್ನು ಕಾಪಾಡಿಕೊಳ್ಳಬೇಕು ಮತ್ತು ಕೃಷಿಯಲ್ಲಿ ಹೊಸ ಮತ್ತು ಹಳೆಯ ವಿಧಾನಗಳನ್ನು ಸಂಯೋಜಿಸಬೇಕು ಎಂದು ಪ್ರಧಾನಿ ಹೇಳಿದರು. ಈ ಸನ್ನಿವೇಶದಲ್ಲಿ ಅವರು ಕಬ್ಬಿನ ಬೆಳೆಯ ಉದಾಹರಣೆಯನ್ನು ನೀಡಿದರು. ಕಬ್ಬು ಬೆಳೆಯಲ್ಲಿ ಹೊಸ ಮತ್ತು ಹಳೆಯ ಕೃಷಿ ವಿಧಾನಗಳನ್ನು ಬಳಸಲಾಗುತ್ತದೆ. ಕಬ್ಬಿನಿಂದ ಸಕ್ಕರೆ ಮತ್ತು ಎಥೆನಾಲ್ ಅನ್ನು ಉತ್ಪಾದಿಸಲು ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಯಾವಾಗಲೂ ಮಹಾರಾಷ್ಟ್ರದ ಹಳ್ಳಿಗಳ ಕುಡಿಯುವ ನೀರು ಮತ್ತು ನೀರಾವರಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು ಎಂದು ಪ್ರಧಾನಿ ಹೇಳಿದರು. ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆಯಡಿ ಮಹಾರಾಷ್ಟ್ರದಲ್ಲಿ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿರುವ 26 ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಈ ಪೈಕಿ 9 ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. ಈ ಯೋಜನೆಗಳು ಪೂರ್ಣಗೊಂಡಾಗ ಸುಮಾರು 5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಇದೇ ರೀತಿ ಜುಲೈ 2018 ರಲ್ಲಿ ಮಹಾರಾಷ್ಟ್ರದಲ್ಲಿ ಇನ್ನೂ 90 ಪ್ರಮುಖ ಮತ್ತು ಸಣ್ಣ ನೀರಾವರಿ ಯೋಜನೆಗಳ ಕಾಮಗಾರಿ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಮುಂದಿನ 2-3 ವರ್ಷಗಳಲ್ಲಿ ಈ ಯೋಜನೆಗಳು ಪೂರ್ಣಗೊಂಡಾಗ ಸುಮಾರು 4 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಅಂತರ್ಜಲ ಮಟ್ಟ ತೀರಾ ಕಡಿಮೆ ಇರುವ ಮಹಾರಾಷ್ಟ್ರದ 13 ಜಿಲ್ಲೆಗಳಲ್ಲಿ ಅಟಲ್ ಅಂತರ್ಜಲ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಜಲ ಜೀವನ್ ಮಿಷನ್ ಅಡಿಯಲ್ಲಿ ಮಹಾರಾಷ್ಟ್ರದ ಹಳ್ಳಿಗಳ ಪ್ರತಿ ಕುಟುಂಬಕ್ಕೆ ಕೊಳವೆ ಮೂಲಕ ಕುಡಿಯುವ ನೀರು ಒದಗಿಸುವ ಕಾರ್ಯವೂ ಶೀಘ್ರಗತಿಯಲ್ಲಿ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ ವರ್ಷದ ಮಹಾರಾಷ್ಟ್ರದ 19 ಲಕ್ಷ ಕುಟುಂಬಗಳಿಗೆ ಕೊಳವೆ ಮೂಲಕ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಇದರಲ್ಲಿ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿಯೇ 13 ಲಕ್ಷ ಬಡ ಕುಟುಂಬಗಳಿಗೆ ಈ ಸೌಲಭ್ಯ ಸಿಕ್ಕಿದೆ ಎಂದರು.
ಮುದ್ರಾ ಯೋಜನೆಯು ಹಳ್ಳಿಗಳಲ್ಲಿ ಸ್ವಯಂ ಉದ್ಯೋಗವನ್ನು ಹೆಚ್ಚಿಸಿದೆ ಎಂದರು. ದೇಶದಲ್ಲಿ ಸ್ವಸಹಾಯ ಗುಂಪುಗಳ 7 ಕೋಟಿ ಮಹಿಳೆಯರಿಗೆ 3 ಲಕ್ಷ ಕೋಟಿ ರೂಪಾಯಿಗಳ ಸಾಲ ನೀಡಲಾಗಿದೆ. ಬ್ಯಾಂಕುಗಳಿಂದ ಸುಲಭವಾಗಿ ಸಾಲ ಪಡೆಯಲು ಅವಕಾಶ ಕಲ್ಪಿಸುವ ಕಿಸಾನ್ ಕ್ರೆಡಿಟ್ ಕಾರ್ಡ್ಗಳ ಸೌಲಭ್ಯವನ್ನು ರೈತರು, ಮೀನುಗಾರರಿಗೆ ಒದಗಿಸಲಾಗಿದೆ. ಈ ಹಿಂದೆ ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ವಂಚಿತರಾಗಿದ್ದ ಸುಮಾರು ಎರಡೂವರೆ ಕೋಟಿ ಸಣ್ಣ ರೈತ ಕುಟುಂಬಗಳಿಗೆ ಈಗ ಈ ಸೌಲಭ್ಯ ದೊರಕಿದೆ ಎಂದು ಅವರು ಹೇಳಿದರು.
ಬಡವರು ಹಾಗೂ ಗ್ರಾಮೀಣ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಸ್ವಾವಲಂಬನೆಯ ಸಂಕಲ್ಪವನ್ನು ಬಲಪಡಿಸುತ್ತದೆ. ಬಾಳಾಸಾಹೇಬ್ ವಿಖೆ ಪಾಟೀಲ್ ಅವರೂ ಸಹ ಗ್ರಾಮಗಳಲ್ಲಿ ಸ್ವಾವಲಂಬನೆಯ ಈ ನಂಬಿಕೆಯನ್ನು ಹುಟ್ಟುಹಾಕಲು ಬಯಸಿದ್ದರು ಎಂದು ಪ್ರಧಾನಿ ತಿಳಿಸಿದರು.
***
(Release ID: 1664024)
Visitor Counter : 254
Read this release in:
Tamil
,
Telugu
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Malayalam