ಪ್ರಧಾನ ಮಂತ್ರಿಯವರ ಕಛೇರಿ

ಅನ್ ಲಾಕ್ 1.0 ನಂತರದ ಪರಿಸ್ಥಿತಿಯ ಕುರಿತು ಚರ್ಚೆಗೆ ಮುಖ್ಯಮಂತ್ರಿಗಳೊಂದಿಗೆ ಎರಡನೇ ಹಂತದಲ್ಲಿ ಸಂವಾದ ನಡೆಸಿದ ಪ್ರಧಾನಮಂತ್ರಿ


ವಿಸ್ತರಣೆಯ ನಿರಂತರ ಪ್ರಯತ್ನದೊಂದಿಗೆ ಪ್ರಸಕ್ತ ಪರೀಕ್ಷಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು: ಪ್ರಧಾನಮಂತ್ರಿ

ವೈರಾಣುವಿನಿಂದ ಚೇತರಿಸಿಕೊಂಡವರ ದೊಡ್ಡ ಸಂಖ್ಯೆಯ ಬಗ್ಗೆ ಒತ್ತಿ ಹೇಳುವ ಮೂಲಕ ನಾವು ಭಯ ಮತ್ತು ಕಳಂಕದ ವಿರುದ್ಧ ಹೋರಾಡಬೇಕು

ಲಾಕ್ ಡೌನ್ ಅವಧಿಯಲ್ಲಿ ಜನರು ತೋರಿದ ಶಿಸ್ತು ಕೋವಿಡ್ -19ರ ವ್ಯಾಪಕ ವೃದ್ಧಿಯನ್ನು ತಡೆಯಿತು:ಪ್ರಧಾನಮಂತ್ರಿ
ನಾವು ಲಾಕ್ ಡೌನ್ ವದಂತಿಗಳ ವಿರುದ್ಧವೂ ಹೋರಾಡುವುದಗತ್ಯ ಮತ್ತು ಅನ್ ಲಾಕ್ 2.0 ಬಗ್ಗೆ ಯೋಜಿಸಬೇಕು: ಪ್ರಧಾನಮಂತ್ರಿ

ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಕ್ರಮಗಳು ಮತ್ತು ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳ ವಿವರ ಹಂಚಿಕೊಂಡ ಮುಖ್ಯಮಂತ್ರಿಗಳು

Posted On: 17 JUN 2020 5:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮುಖ್ಯಮಂತ್ರಿಗಳೊಂದಿಗಿನ ಎರಡು ದಿನಗಳ ಸಂವಾದದ ಎರಡನೇ ಭಾಗದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಭೆಯಲ್ಲಿ ಅನ್ ಲಾಕ್ 1.0 ಪರಿಸ್ಥಿತಿ ಮತ್ತು ಕೋವಿಡ್ -19 ನಿಗ್ರಹದ ಯೋಜನೆಗಳ ಬಗ್ಗೆ ಚರ್ಚಿಸಿದರು.

ಕೆಲವು ದೊಡ್ಡ ರಾಜ್ಯಗಳು ಮತ್ತು ನಗರಗಳಲ್ಲಿ ವೈರಾಣುವಿನ ಪ್ರಸರಣ ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹೆಚ್ಚಿನ ಜನಸಂಖ್ಯೆ, ವ್ಯಕ್ತಿಗತ ಅಂತರ ಕಾಪಾಡುವಲ್ಲಿನ ತೊಡಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟ ಸವಾಲನ್ನು ಮತ್ತಷ್ಟು ಕಠಿಣಗೊಳಿಸಿದೆ, ಆದಾಗ್ಯೂ, ನಾಗರಿಕರ ಸಂಯಮ, ಆಡಳಿತದ ಸನ್ನದ್ಧತೆ ಮತ್ತು ಕೊರೊನಾ ಯೋಧರ ಸಮರ್ಪಣಾಭಾವದಿಂದಾಗಿ ಕೊರೊನಾ ಸೋಂಕಿನ ಪ್ರಸರಣ ನಿಯಂತ್ರಣದಲ್ಲಿದೆ ಎಂದರು. ಸಕಾಲದಲ್ಲಿ ರೋಗ ಪತ್ತೆ, ಚಿಕಿತ್ಸೆ ಮತ್ತು ವರದಿ ಮೂಲಕ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅವರು ಹೇಳಿದರು. ಲಾಕ್ ಡೌನ್ ಅವಧಿಯಲ್ಲಿ ಜನರು ತೋರಿದ ಸಂಯಮ ವೈರಾಣು ವ್ಯಾಪಕವಾಗಿ ಹರಡುವುದನ್ನು ತಡೆಯಿತು ಎಂದು ತಿಳಿಸಿದರು.

ಆರೋಗ್ಯ ಮೂಲ ಸೌಕರ್ಯದ ಹೆಚ್ಚಳ

ಸವಾಲು ಎದುರಿಸಲು ಉತ್ತಮ ಆರೋಗ್ಯ ಮೂಲಸೌಕರ್ಯ ಮತ್ತು ತರಬೇತಾದ ಮಾನವ ಸಂಪನ್ಮೂಲದ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಪಿಪಿಇಗಳು, ಮಾಸ್ಕ್ ಗಳ ದೇಶೀಯ ಉತ್ಪಾದನಾ ಸಾಮರ್ಥ್ಯದಲ್ಲಿನ ಹೆಚ್ಚಳವನ್ನು ಒತ್ತಿ ಹೇಳಿದ ಅವರು, ಸೋಂಕು ಪತ್ತೆ ಕಿಟ್ ಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ, ಪಿಎಂ ಕೇರ್ಸ್ ನಿಧಿ ಬಳಸಿಕೊಂಡು ಭಾರತದಲ್ಲಿ ವೆಂಟಿಲೇಟರ್ ಗಳನ್ನು ಪೂರೈಸಲಾಗುತ್ತಿದೆ, ಪರೀಕ್ಷಾ ಪ್ರಯೋಗಾಲಯಗಳು, ಲಕ್ಷಾಂತರ ಕೋವಿಡ್ ವಿಶೇಷ ಹಾಸಿಗೆಗಳು, ಸಾವಿರಾರು ಪ್ರತ್ಯೇಕೀಕರಣ ಮತ್ತು ಕ್ವಾರಂಟೈನ್ ಕೇಂದ್ರಗಳು ಲಭ್ಯವಿದ್ದು, ಸಾವಿರಾರು ಸಂಖ್ಯೆಯ ಮಾನವ ಶಕ್ತಿಗೆ ತರಬೇತಿ ನೀಡಲಾಗಿದೆ ಎಂದರು. ಆರೋಗ್ಯ ಮೂಲಸೌಕರ್ಯ, ಮಾಹಿತಿ ವ್ಯವಸ್ಥೆ, ಭಾವನಾತ್ಮಕ ಬೆಂಬಲ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ನಿರಂತರ ಒತ್ತು ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಸೋಂಕು ಪೀಡಿತರ ಪರೀಕ್ಷೆ, ತ್ವರಿತ ಪತ್ತೆ ಮತ್ತು ಪ್ರತ್ಯೇಕಿಸುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ನಿರಂತರವಾದ ವಿಸ್ತರಣಾ ಪ್ರಯತ್ನಗಳೊಂದಿಗೆ ಪ್ರಸಕ್ತ ಪರೀಕ್ಷಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ಟೆಲಿ ಮೆಡಿಸಿನ್ ಪ್ರಯೋಜನಗಳನ್ನು ಪ್ರಸ್ತಾಪಿಸಿದ ಅವರು, ಈ ಮಾಧ್ಯಮದ ಮೂಲಕ ರೋಗಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಹಿರಿಯ ವೈದ್ಯರುಗಳ ದೊಡ್ಡ ತಂಡವನ್ನು ರೂಪಿಸುವ ಅಗತ್ಯ ತಿಳಿಸಿದರು. ಸಹಾಯವಾಣಿಗಳ ಮೂಲಕ ಸರಿಯಾದ ಮತ್ತು ಸಕಾಲದ ಮಾಹಿತಿ ಪ್ರಸರಣದ ಮತ್ತು ಸಮರ್ಥವಾಗಿ ಸಹಾಯವಾಣಿಯನ್ನು ನಿರ್ವಹಿಸುವ ಯುವ ಸ್ವಯಂಸೇವಕರ ತಂಡವನ್ನು ರಚಿಸುವ ಬಗ್ಗೆಯೂ ಅವರು ಮಾತನಾಡಿದರು.

ಭಯ ಮತ್ತು ಕಳಂಕದ ವಿರುದ್ಧ ಹೋರಾಟ

ಆರೋಗ್ಯ ಸೇತು ಆಪ್ ಹೆಚ್ಚಿನ ಸಂಖ್ಯೆಯಲ್ಲಿ ಡೌನ್ ಲೋಡ್ ಮಾಡಿಕೊಳ್ಳಲಾಗಿರುವ ರಾಜ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳು ದೊರೆತಿವೆ ಎಂಬ ಬಗ್ಗೆ ಪ್ರಧಾನಮಂತ್ರಿ ಗಮನ ಸೆಳೆದರು. ಈ ಆಪ್ ತಲುಪಿಸುವ ಪ್ರಯತ್ನ ಹೆಚ್ಚಿಸುವಂತೆ ತಿಳಿಸಿದರು. ಮುಂಗಾರಿನೊಂದಿಗೆ ಬರುವ ಆರೋಗ್ಯ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗೃತರಾಗಿರುವ ಕುರಿತೂ ಅವರು ಮಾತನಾಡಿದರು. ವೈರಾಣುವಿನ ವಿರುದ್ಧ ಭಾವನಾತ್ಮಕವಾದ ಹೋರಾಟದ ಅಂಶಗಳನ್ನು ಒತ್ತಿ ಹೇಳಿದ ಅವರು, ಸೋಂಕು ತಗುಲಬಹುದೆಂಬ ಭಯ ಮತ್ತು ಕಳಂಕದ ವಿರುದ್ಧ ಹೋರಾಡಲು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿರುವವರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ನಮ್ಮ ಕೊರೊನಾ ಯೋಧರು, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೆಂಬಲ ಮತ್ತು ನೆರವು ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು. ಈ ಹೋರಾಟದಲ್ಲಿ ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದ ಅವರು, ಜನರಿಗೆ ನಿರಂತರವಾಗಿ ಮಾಸ್ಕ್, ಮುಖ ಕವಚ ಧರಿಸುವುದನ್ನು ಮತ್ತು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದನ್ನು ನೆನಪಿಸಬೇಕು ಎಂದರು.

ಮುಖ್ಯಮಂತ್ರಿಗಳ ಮಾತು

ಎರಡು ದಿನಗಳ ಸಂವಾದದ ಎರಡನೇ ದಿನವಾದ ಇಂದಿನ ಸಂವಾದದಲ್ಲಿ ಮಹಾರಾಷ್ಟ್ರ, ತಮಿಳು ನಾಡು, ದೆಹಲಿ, ಗುಜರಾತ್, ರಾಜಾಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಬಿಹಾರ, ಆಂಧ್ರಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು. ಮುಖ್ಯಮಂತ್ರಿಗಳು ಪ್ರಧಾನಮಂತ್ರಿಯವರಿಗೆ ಅವರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿ, ತಮ್ಮ ರಾಜ್ಯಗಳಲ್ಲಿನ ವಾಸ್ತವ ಪರಿಸ್ಥಿತಿ ಮತ್ತು ವೈರಾಣುವಿನ ಪರಿಣಾಮ ತಡೆಗೆ ತಮ್ಮ ಸನ್ನದ್ಧತೆಗಳ ಬಗ್ಗೆ ವಿವರಿಸಿದರು. ಸವಾಲನ್ನು ಎದುರಿಸಲು ಲಭ್ಯವಿರುವ ಆರೋಗ್ಯ ಮೂಲಸೌಕರ್ಯ ಮತ್ತು ಅದನ್ನು ಮತ್ತಷ್ಟು ಬಲಪಡಿಸಲು ತೆಗೆದುಕೊಂಡಿರುವ ಕ್ರಮಗಳು, ಮುಂಚೂಣಿ ಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಬೆಂಬಲ, ಕಂಟೈನ್ಮೆಂಟ್ ವಲಯಗಳಲ್ಲಿನ ನಿಗಾ, ಮಾಸ್ಕ್ ಗಳ ಬಳಕೆಯನ್ನು ಉತ್ತೇಜಿಸುವ ಅಭಿಯಾನಗಳು ಮತ್ತು ಇತರ ಸುರಕ್ಷತಾ ಮುನ್ನೆಚ್ಚರಿಕೆಗಳು, ಪರೀಕ್ಷೆಯಲ್ಲಿನ ಹೆಚ್ಚಳ ಮತ್ತು ರಾಜ್ಯಕ್ಕೆ ಮರಳಿದ ವಲಸಿಗರಿಗೆ ಲಾಭದಾಯಕ ಉದ್ಯೋಗಾವಕಾಶಗಳನ್ನು ಒದಗಿಸುವ ಕುರಿತು ಅವರು ಮಾತನಾಡಿದರು.

ಅನ್ ಲಾಕ್ 2.0

ಪ್ರಧಾನಮಂತ್ರಿಯವರು ಮುಖ್ಯಮಂತ್ರಿಗಳ ಅಭಿಪ್ರಾಯಗಳಿಗೆ ಧನ್ಯವಾದ ಅರ್ಪಿಸಿದರು. ವೈರಾಣು ವಿರುದ್ಧದ ಹೋರಾಟದಲ್ಲಿನ ಸಂಘಟಿತ ಬದ್ಧತೆ ಜಯದತ್ತ ಕೊಂಡೊಯ್ಯುತ್ತದೆ ಎಂದ ಅವರು, ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಆರ್ಥಿಕ ಚಟುವಟಿಕೆ ಪಸರಿಸುವ ಅಗತ್ಯದ ಬಗ್ಗೆಯೂ ಮಾತನಾಡಿದರು. ಲಾಕ್ ಡೌನ್ ವದಂತಿಗಳ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವೂ ಇದೆ ಎಂದ ಪ್ರಧಾನಿ, ದೇಶ ಈಗ ಅನ್ ಲಾಕ್ ಹಂತದಲ್ಲಿದೆ ಎಂದು ತಿಳಿಸಿದರು. ನಾವು ಈಗ ಅನ್ ಲಾಕ್ 2.0 ಬಗ್ಗೆ ಮತ್ತು ಜನರಿಗೆ ಆಗುವ ಹಾನಿಯನ್ನು ತಗ್ಗಿಸುವ ಬಗ್ಗೆ ಚಿಂತಿಸಬೇಕು ಎಂದರು.

ನಿರ್ಬಂಧಗಳಲ್ಲಿನ ಸಡಿಲಿಕೆಯ ಬಗ್ಗೆ ಉಲ್ಲೇಖಿಸಿದ ಅವರು, ಆರ್ಥಿಕ ಪ್ರದರ್ಶನದ ಸೂಚ್ಯಂಕಗಳು ಪುನಶ್ಚೇತನವನ್ನು ಬಿಂಬಿಸುತ್ತಿವೆ ಎಂದರು. ಹಣದುಬ್ಬರವನ್ನು ಸಹ ನಿಯಂತ್ರಣದಲ್ಲಿಡಲಾಗಿದೆ ಎಂದರು. ನಿರ್ಮಾಣ ಸಂಬಂಧಿ ಕಾಮಗಾರಿಗಳು ಮತ್ತು ಮೂಲಸೌಕರ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ತಿಳಿಸಿದರು. ಎಂ.ಎಸ್.ಎಂ.ಇ.ಗಳು, ಕೃಷಿ, ಕೃಷಿ ಮಾರುಕಟ್ಟೆಗಳಿಗೆ ಚೈತನ್ಯ ತುಂಬಲು ಆತ್ಮ ನಿರ್ಭರ ಭಾರತ ಅಡಿಯಲ್ಲಿ ಕೈಗೊಳ್ಳಲಾದ ಕ್ರಮಗಳನ್ನು ಅವರು ಪಟ್ಟಿ ಮಾಡಿದರು. ಮುಂಬರುವ ತಿಂಗಳುಗಳಲ್ಲಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜಾಗರೂಕರಾಗಿರುವಂತೆ ಅವರು ಒತ್ತಿಹೇಳಿದ್ದಾರೆ.

ಕೇಂದ್ರ ಗೃಹ ಸಚಿವರು ಮಾತನಾಡಿ, ನಾವು ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ವೈರಾಣು ವಿರುದ್ಧದ ಹೋರಾಟದಲ್ಲಿ ಈವರೆಗೆ ಸಾಕಷ್ಟು ಯಶಸ್ಸು ಸಾಧಿಸಿದ್ದೇವೆ, ಆದರೆ ಇನ್ನೂ ಹೋರಾಟ ಮುಗಿದಿಲ್ಲ ಎಂದು ಹೇಳಿದರು. ನಾವು ಅನ್ ಲಾಕ್ ಆರಂಭಿಸಿದ್ದು, ನಾವು ಎಚ್ಚರಿಕೆಯಿಂದ ಇರಬೇಕು ಎಂದು ಒತ್ತಿ ಹೇಳಿದರು. ಸ್ವಯಂ ಸುರಕ್ಷತೆಯ ಸಾಧನವಾಗಿ ಆರೋಗ್ಯ ಸೇತು ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಉತ್ತೇಜಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಆರೋಗ್ಯ ಸಚಿವಾಲಯದ ಓಎಸ್.ಡಿ. ಲಾಕ್ ಡೌನ್ ಹಂತಗಳಲ್ಲಿ ಮತ್ತು ಅನ್ ಲಾಕ್ 1.0ನಲ್ಲಿ ಪ್ರಕರಣಗಳ ಬೆಳವಣಿಗೆಯ ದರದಲ್ಲಿ ನಿರಂತರ ಕುಸಿತದ ಬಗ್ಗೆ ಉಲ್ಲೇಖಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ತಪ್ಪಿಸಿದ್ದು ಮತ್ತು ಜೀವಗಳನ್ನು ಉಳಿಸಿದ್ದು, ಜಾಗೃತಿ ಪಸರಿಸಿದ್ದು ಮತ್ತು ಆರೋಗ್ಯ ಮೂಲ ಸೌಕರ್ಯ ಹೆಚ್ಚಳವೂ ಸೇರಿದಂತೆ ಲಾಕ್‌ ಡೌನ್‌ನ ಸಕಾರಾತ್ಮಕ ಫಲಶ್ರುತಿಯ ಬಗ್ಗೆ ಅವರು ವಿವರಿಸಿದರು. ಒಂದು ಲಕ್ಷ ಜನಸಂಖ್ಯೆಯ ಆಧಾರದಲ್ಲಿ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಭಾರತದಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಅವರು ಮಾಹಿತಿ ನೀಡಿದರು.

***


(Release ID: 1654982) Visitor Counter : 225