ಪ್ರಧಾನ ಮಂತ್ರಿಯವರ ಕಛೇರಿ

ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದ ಬಿಹಾರದ ಮೂರು ಪ್ರಮುಖ ಯೋಜನೆಗಳನ್ನು ಸೆಪ್ಟೆಂಬರ್ 13 ರಂದು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ

Posted On: 11 SEP 2020 6:31PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 13 ರಂದು ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದ ಬಿಹಾರದ ಮೂರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳಲ್ಲಿ ಪ್ಯಾರಾದೀಪ್-ಹಲ್ಡಿಯಾ-ದುರ್ಗಾಪುರ ಪೈಪ್‌ಲೈನ್ ಯೋಜನೆಯ ದುರ್ಗಾಪುರ-ಬಂಕಾ ವಿಭಾಗ ಮತ್ತು ಎರಡು ಎಲ್‌ಪಿಜಿ ಬಾಟ್ಲಿಂಗ್ ಘಟಕಗಳು ಸೇರಿವೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳಾದ ಇಂಡಿಯನ್ ಆಯಿಲ್ ಮತ್ತು ಎಚ್‌ಪಿಸಿಎಲ್ ಈ ಯೋಜನೆಗಳನ್ನು ರೂಪಿಸಿವೆ.  
ಈ ಸಂದರ್ಭದಲ್ಲಿ ಬಿಹಾರದ ಮುಖ್ಯಮಂತ್ರಿಯವರೂ ಉಪಸ್ಥಿತರಿರುತ್ತಾರೆ.
ಪೈಪ್‌ಲೈನ್ ಯೋಜನೆಯ ದುರ್ಗಾಪುರ-ಬಂಕಾ ವಿಭಾಗ
ಇಂಡಿಯನ್ ಆಯಿಲ್ ನಿರ್ಮಿಸಿರುವ 193 ಕಿ.ಮೀ ಉದ್ದದ ದುರ್ಗಾಪುರ-ಬಂಕಾ ಪೈಪ್‌ಲೈನ್ ವಿಭಾಗವು ಪ್ಯಾರಾದೀಪ್-ಹಲ್ಡಿಯಾ-ದುರ್ಗಾಪುರ ಪೈಪ್‌ಲೈನ್ ಯೋಜನೆಯ ಒಂದು ಭಾಗವಾಗಿದೆ. ಈ ಯೋಉಜನೆಗೆ ಪ್ರಧಾನಮಂತ್ರಿಯವರು ಫೆಬ್ರವರಿ 17, 2019 ರಂದು ಶಿಲಾನ್ಯಾಸ ನೆರವೇರಿಸಿದ್ದರು. ಅಸ್ತಿತ್ವದಲ್ಲಿರುವ 679 ಕಿ.ಮೀ ಉದ್ದದ ಪ್ಯಾರಾದೀಪ್-ಹಲ್ಡಿಯಾ-ದುರ್ಗಾಪುರ ಎಲ್‌ಪಿಜಿ ಪೈಪ್‌ಲೈನ್ ಅನ್ನು ಬಿಹಾರದ ಬಂಕಾದಲ್ಲಿರುವ ಹೊಸ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ವಿಸ್ತರಿಸಲಾಗಿದೆ. 14 ”ವ್ಯಾಸದ ಪೈಪ್‌ಲೈನ್ ಪಶ್ಚಿಮ ಬಂಗಾಳ (60 ಕಿ.ಮೀ), ಜಾರ್ಖಂಡ್ (98 ಕಿ.ಮೀ), ಮತ್ತು ಬಿಹಾರ (35 ಕಿ.ಮೀ). ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಪ್ರಸ್ತುತ, ಪ್ಯಾರಾದೀಪ್ ಸಂಸ್ಕರಣಾಗಾರ, ಹಲ್ಡಿಯಾ ಸಂಸ್ಕರಣಾಗಾರ ಮತ್ತು ಐಪಿಪಿಎಲ್ ಹಲ್ಡಿಯಾದಿಂದ ಪೈಪ್‌ಲೈನ್ ವ್ಯವಸ್ಥೆಯಲ್ಲಿ ಎಲ್‌ಪಿಜಿ ತುಂಬಬಹುದು. ಇಡೀ ಯೋಜನೆ ಪೂರ್ಣಗೊಂಡ ನಂತರ, ಪ್ಯಾರಾದೀಪ್ ಆಮದು ಟರ್ಮಿನಲ್ ಮತ್ತು ಬಾರೌನಿ ಸಂಸ್ಕರಣಾಗಾರದಿಂದ ಎಲ್‌ಪಿಜಿ ತುಂಬುವ  ಸೌಲಭ್ಯವೂ ಲಭ್ಯವಾಗುತ್ತದೆ.
ದುರ್ಗಾಪುರ-ಬಂಕಾ ವಿಭಾಗದ ಅಡಿಯಲ್ಲಿ ಪೈಪ್‌ಲೈನ್ ಹಾಕಲು ಹಲವಾರು ನೈಸರ್ಗಿಕ ಮತ್ತು ಮಾನವ ನಿರ್ಮಿತ ಅಡೆತಡೆಗಳನ್ನು ಎದುರಿಸಬೇಕಾಯಿತು. 13 ನದಿಗಳು (ಅವುಗಳಲ್ಲಿ ಒಂದು 1077 ಮೀ. ಉದ್ದದ ಅಜಯ್ ನದಿ), 5 ರಾಷ್ಟ್ರೀಯ ಹೆದ್ದಾರಿಗಳು ಮತ್ತು 3 ರೈಲ್ವೆ ಕ್ರಾಸಿಂಗ್‌ಗಳು ಸೇರಿದಂತೆ ಒಟ್ಟು 154 ಕ್ರಾಸಿಂಗ್‌ಗಳಲ್ಲಿ ಕಾಮಗಾರಿ ನಡೆಸಲಾಗಿದೆ.  ನೀರಿನ ಹರಿವಿಗೆ ತೊಂದರೆಯಾಗದಂತೆ ಅತ್ಯಾಧುನಿಕ ಅಡ್ಡ ದಿಕ್ಕಿನಲ್ಲಿ ಕೊರೆಯುವ ತಂತ್ರದ ಮೂಲಕ ನದಿಯ ತಳದಲ್ಲಿ ಪೈಪ್‌ಲೈನ್ ಹಾಕಲಾಗಿದೆ.
ಬಿಹಾರದ ಬಂಕಾದಲ್ಲಿ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್
ಬಂಕಾದಲ್ಲಿರುವ ಇಂಡಿಯನ್‌ ಆಯಿಲ್‌ನ ಎಲ್‌ಪಿಜಿ ಬಾಟ್ಲಿಂಗ್ ಘಟಕ ರಾಜ್ಯದಲ್ಲಿ ಎಲ್‌ಪಿಜಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸುವ ಮೂಲಕ ಬಿಹಾರವು ‘ಆತ್ಮ ನಿರ್ಭರತೆ’ವಾಗುತ್ತದೆ. ಈ ಬಾಟ್ಲಿಂಗ್ ಘಟಕವನ್ನು ಸುಮಾರು 131.75 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಾಗಿದೆ. ಬಿಹಾರದ ಭಾಗಲ್ಪುರ್, ಬಂಕಾ, ಜಮುಯಿ, ಅರೇರಿಯಾ, ಕಿಶನ್ ಗಂಜ್ ಮತ್ತು ಕತಿಹಾರ್ ಜಿಲ್ಲೆಗಳ ಜೊತೆಗೆ ಜಾರ್ಖಂಡ್‌ನ ಗೊಡ್ಡಾ, ದಿಯೋಘರ್, ಡುಮ್ಕಾ, ಸಾಹಿಬ್‌ಗಂಜ್ ಮತ್ತು ಪಾಕೂರ್ ಜಿಲ್ಲೆಗಳಿಗೆ ಇದು ಸೇವೆ ಒದಗಿಸುತ್ತದೆ. 1800 ಮೆ.ಟನ್.ಗಳ ಎಲ್‌ಪಿಜಿ ಶೇಖರಣಾ ಸಾಮರ್ಥ್ಯ ಮತ್ತು ದಿನಕ್ಕೆ 40,000 ಸಿಲಿಂಡರ್ ಬಾಟ್ಲಿಂಗ್ ಸಾಮರ್ಥ್ಯ ಹೊಂದಿರುವ ಈ ಸ್ಥಾವರವು ಬಿಹಾರ ರಾಜ್ಯದಲ್ಲಿ ಪ್ರತ್ಯಕ್ಷ  ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಬಿಹಾರದ ಚಂಪಾರಣ್ (ಹರ್ಸಿಧಿ) ನಲ್ಲಿ ಎಲ್‌ಪಿಜಿ ಘಟಕ
ಎಚ್‌ಪಿಸಿಎಲ್‌ನ 120 ಟಿಎಂಟಿಪಿಎ ಎಲ್‌ಪಿಜಿ ಬಾಟ್ಲಿಂಗ್ ಘಟಕವನ್ನು ಪೂರ್ವ ಚಂಪಾರಣ್ ಜಿಲ್ಲೆಯ ಹರ್ಸಿಧಿಯಲ್ಲಿ 136.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸ್ಥಾವರವನ್ನು 29 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಇದರ ಶಿಲಾನ್ಯಾಸವನ್ನು 2018 ರ ಏಪ್ರಿಲ್ 10 ರಂದು ಪ್ರಧಾನ ಮಂತ್ರಿಯವರು ನೆರವೇರಿಸಿದ್ದರು. ಬಿಹಾರದ ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಮುಜಾಫರ್ಪುರ್, ಸಿವಾನ್, ಗೋಪಾಲಗಂಜ್ ಮತ್ತು ಸೀತಮಾರಿ ಜಿಲ್ಲೆಗಳ ಎಲ್‌ಪಿಜಿ ಅಗತ್ಯವನ್ನು ಈ ಬಾಟಲಿಂಗ್ ಘಟಕ ಪೂರೈಸುತ್ತದೆ.
ಈ ಕಾರ್ಯಕ್ರಮವು ಡಿಡಿ ನ್ಯೂಸ್ ಚಾನಲ್ ನಲ್ಲಿ ನೇರ ಪ್ರಸಾರವಾಗಲಿದೆ
.

***

 



(Release ID: 1653442) Visitor Counter : 184