ಹಣಕಾಸು ಸಚಿವಾಲಯ

74ನೇ ಸ್ವಾತಂತ್ರ್ಯ ದಿನ - ಆತ್ಮ ನಿರ್ಭರ ಭಾರತದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಕೋವಿಡ್ -19 ಪರಿಣಾಮದಿಂದ ಭಾರತವನ್ನು ಮುಕ್ತಗೊಳಿಸಲು ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆ ಮಹತ್ವದ ಪಾತ್ರ ನಿರ್ವಹಿಸುತ್ತದೆ: ಪ್ರಧಾನಮಂತ್ರಿ

 “ಮೇಕ್ ಇನ್ ಇಂಡಿಯಾ” ಜೊತೆಗೆ “ಮೇಕ್ ಫಾರ್ ವರ್ಲ್ಡ್” ಮಂತ್ರವಾಗಿರಬೇಕು: ಪ್ರಧಾನಮಂತ್ರಿ

Posted On: 15 AUG 2020 3:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 74ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದರು. ಕೆಂಪುಕೋಟೆಯ ವೇದಿಕೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, ಕೋವಿಡ್ -19 ಮಹಾಮಾರಿಯ ನಿರ್ವಹಣೆ, ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಕೈಗೊಂಡ ಕ್ರಮಗಳು, ಮಧ್ಯಮ ವರ್ಗದ ಜನರ ಬಗ್ಗೆ ಗಮನ ಹರಿಸಿ ಆರ್ಥಿಕತೆಯ ಪುನಶ್ಚೇತನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.

ಆತ್ಮ ನಿರ್ಭರ ಭಾರತದ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಸಂಕಷ್ಟದ ಸಮಯದಲ್ಲಿ ದೇಶವಾಸಿಗಳಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. 130 ಕೋಟಿಗೂ ಹೆಚ್ಚು ಜನರು ಕೋವಿಡ್ ಸಾಂಕ್ರಾಮಿಕದ ನಡುವೆಯೂ ಸ್ವಾವಲಂಬಿಗಳಾಗಲು ನಿರ್ಧರಿಸಿದ್ದಾರೆ. ಆತ್ಮನಿರ್ಭರ್ (ಸ್ವಾವಲಂಬಿ) ಆಗುವುದು ಕಡ್ಡಾಯ. ಭಾರತ ಕನಸನ್ನು ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ನನ್ನ ದೇಶವಾಸಿಗಳ ಸಾಮರ್ಥ್ಯ, ವಿಶ್ವಾಸ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆಯಿದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಗುರಿಯನ್ನು ಸಾಧಿಸುವವರೆಗೆ ನಾವು ವಿರಮಿಸುವುದಿಲ್ಲ, ”ಎಂದು ಅವರು ಹೇಳಿದರು.

74ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ಮಾತನಾಡಿದ ಪ್ರಧಾನಮಂತ್ರಿಯವರು, ಮೂಲಸೌಕರ್ಯ ವಲಯಕ್ಕೆ ಪ್ರಮುಖ ಒತ್ತು ನೀಡಿದರು. ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ (ಎನ್..ಪಿ.) ನೆರವಿನೊಂದಿಗೆ ತ್ವರಿತ ಅಭಿವೃದ್ಧಿಗಾಗಿ ಸಮಗ್ರ ಮೂಲಸೌಕರ್ಯ ಸುಧಾರಣೆಗೆ ಸರ್ಕಾರ ಆದ್ಯತೆ ನೀಡಿದೆ ಎಂದ ಅವರು, 110 ಲಕ್ಷ ಕೋಟಿ ರೂಪಾಯಿಗಳನ್ನು ಎನ್..ಪಿಯಲ್ಲಿ ಹೂಡಿಕೆ ಮಾಡಲಾಗುವುದು ಎಂದರು. ವಿವಿಧ ವಲಯಗಳಲ್ಲಿ 7000ಕ್ಕೂ ಹೆಚ್ಚು ಯೋಜನೆಗಳನ್ನು ದೇಶದಾದ್ಯಂತ ಗುರುತಿಸಲಾಗಿದೆ ಎಂದರು. ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆ ದೇಶವನ್ನು ಕೋವಿಡ್ ಪರಿಣಾಮದಿಂದ ಹೊರಗೆಳೆಯಲು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು. ಎನ್..ಪಿ. ಭಾರತದ ಮೂಲಸೌಕರ್ಯ ನಿರ್ಮಾಣ ಪ್ರಯತ್ನಗಳಲ್ಲಿ ಕ್ರಾಂತಿಕಾರಿ ಎನಿಸಲಿದೆ, ಹಲವು ಹೊಸ ಉದ್ಯೋಗ ಸೃಷ್ಟಿಯಾಗಲಿದೆ, ನಮ್ಮ ರೈತರು, ಯುವಜನರು, ಉದ್ಯಮಿಗಳಿಗೆ ಪ್ರಯೋಜನವಾಗಲಿದೆ ಎಂದರು.

ಮೇಕ್ ಇನ್ ಇಂಡಿಯಾ ಜೊತೆಗೆ ನಾವು ಮೇಕ್ ಫಾರ್ ದಿ ವರ್ಲ್ಡ್ ಮಂತ್ರದೊಂದಿಗೆ ಮುನ್ನಡೆಯಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

 ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಭಾರತದಲ್ಲಿ ಮಾಡಲಾಗುತ್ತಿರುವ ಸುಧಾರಣೆಗಳನ್ನು ಇಡೀ ಜಗತ್ತು ಗಮನಿಸುತ್ತಿದೆ ಎಂದು ತಿಳಿಸಿದರು. ಇದರ ಫಲವಾಗಿ ಎಫ್.ಡಿ.. ಹರಿವು ಎಲ್ಲ ದಾಖಲೆ ಮುರಿದಿದೆ ಎಂದರು. ಭಾರತ ಕೋವಿಡ್ ಮಹಾಮಾರಿಯ ನಡುವೆಯೂ ಎಫ್.ಡಿ..ನಲ್ಲಿ ಶೇ.18 ಜಿಗಿತ ಕಂಡಿದೆ ಎಂದರು.

ದೇಶದ ಬಡವರ ಜನ ಧನ್ ಖಾತೆಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾಯಿಸಲಾಗುವುದು ಎಂದು ಯಾರೂ ಊಹಿಸಿದ್ದರು? ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆಯಲ್ಲಿ ಇಷ್ಟು ದೊಡ್ಡ ಬದಲಾವಣೆ ಸಂಭವಿಸುತ್ತದೆ ಎಂದು ಯಾರು ಭಾವಿಸಿದ್ದರು? ಒಂದು ರಾಷ್ಟ್ರ-ಒಂದು ಪಡಿತರ ಚೀಟಿ, ಒಂದು ರಾಷ್ಟ್ರ - ಒಂದು ತೆರಿಗೆ, ದಿವಾಳಿ ಮತ್ತು ದಿವಾಳಿತನ ಸಂಹಿತೆ ಹಾಗೂ ಬ್ಯಾಂಕುಗಳ ವಿಲೀನ ಇಂದು ದೇಶದ ಸಾಕಾರಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿಗಳು ತಿಳಿಸಿದರು.

7 ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ವಿತರಿಸಲಾಗಿದೆ, ಪಡಿತರ ಚೀಟಿ ಹೊಂದಿರುವ ಮತ್ತು ಹೊಂದದೇ ಇರುವ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ ಪೂರೈಸಲಾಗಿದೆ, ಸುಮಾರು 90 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಗರೀಬ್ ಕಲ್ಯಾಣ್ ರೋಜರ್ ಅಭಿಯಾನದಡಿ ಅವರ ಗ್ರಾಮಗಳಲ್ಲಿಯೇ ಬಡವರಿಗೆ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು

ಗೃಹ ಸಾಲದ ಇಎಂಐ ಪಾವತಿ ಅವಧಿಯಲ್ಲಿ 6 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಪಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಕಳೆದ ವರ್ಷವಷ್ಟೇ, ಸಾವಿರಾರು ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು 25 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ ತಿಳಿಸಿದರು

40 ಕೋಟಿ ಜನ್ ಧನ್ ಖಾತೆಗಳನ್ನು ದೇಶದಲ್ಲಿ ತೆರೆಯಲಾಗಿದೆ, ಇದರಲ್ಲಿ 22 ಕೋಟಿ ಖಾತೆಗಳು ಮಹಿಳೆಯರದಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಕೊರೊನಾ ಸಮಯದಲ್ಲಿ ಏಪ್ರಿಲ್ ಮೇ-ಜೂನ್ ನಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ  ಮೂರು ತಿಂಗಳುಗಳ ಕಾಲ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಡಿಜಿಟಲ್ ಇಂಡಿಯಾ ಅಭಿಯಾನದ ಪಾತ್ರವನ್ನು ನಾವು ಕೊರೊನಾ ಸಮಯದಲ್ಲಿ ನೋಡಿದ್ದೇವೆ. ಕಳೆದ ತಿಂಗಳು ಬಹುತೇಕ 3 ಲಕ್ಷ ಕೋಟಿ ರೂಪಾಯಿಗಳನ್ನು ಭೀಮ್, ಯುಪಿಐ ಮೂಲಕೇವೇ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

***



(Release ID: 1646130) Visitor Counter : 250