ಪ್ರಧಾನ ಮಂತ್ರಿಯವರ ಕಛೇರಿ

ಪ್ರಸಕ್ತ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ರೋಗ ನಿಯಂತ್ರಣದ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ

ನಾವು ಹೊಸ ಮಂತ್ರ ಪಾಲಿಸಬೇಕು - ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ 72 ಗಂಟೆಗಳ ಒಳಗೆ ಪತ್ತೆಹಚ್ಚಬೇಕು ಮತ್ತು ಪರೀಕ್ಷಿಸಬೇಕು: ಪ್ರಧಾನಮಂತ್ರಿ
ಶೇ.80 ಸಕ್ರಿಯ ಪ್ರಕರಣಗಳು 10 ರಾಜ್ಯಗಳಿಂದ ಬಂದಿವೆ, ಇಲ್ಲಿ ವೈರಾಣು ಮಣಿದರೆ, ಇಡೀ ದೇಶವು ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ: ಪ್ರಧಾನಮಂತ್ರಿ
ಸಾವಿನ ಪ್ರಮಾಣವನ್ನು ಶೇ.1 ಕ್ಕಿಂತ ಕಡಿಮೆಗೆ ಇಳಿಸುವ ಗುರಿಯನ್ನು ಶೀಘ್ರದಲ್ಲೇ ಸಾಧಿಸಲಾಗುವುದು: ಪ್ರಧಾನಮಂತ್ರಿ
ಈ ಸಮರದಲ್ಲಿ ಕಂಟೈನ್ಮೆಂಟ್, ಸಂಪರ್ಕ ಪತ್ತೆ ಮತ್ತು ಕಣ್ಗಾವಲು ಅತ್ಯಂತ ಪರಿಣಾಮಕಾರಿ ಅಸ್ತ್ರಗಳಾಗಿವೆ: ಪ್ರಧಾನಮಂತ್ರಿ
ದೆಹಲಿ ಮತ್ತು ನೆರೆ ರಾಜ್ಯಗಳೊಂದಿಗೆ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿಭಾಯಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ಗೃಹ ಸಚಿವರ ಅನುಭವ ವಿವರಿಸಿದ ಪ್ರಧಾನಮಂತ್ರಿ
ಮುಖ್ಯಮಂತ್ರಿಗಳು ವಾಸ್ತವ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿ, ಆರೋಗ್ಯ ಮೂಲಸೌಕರ್ಯ ಮತ್ತು ಪರೀಕ್ಷೆಯನ್ನು ಹೆಚ್ಚಿಸಲು ಮಾಡಿರುವ ಪ್ರಯತ್ನಗಳನ್ನು ವಿವರಿಸಿದರು

Posted On: 11 AUG 2020 2:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್, ಬಿಹಾರ, ಗುಜರಾತ್, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ 10 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಕೋವಿಡ್ -19 ಸಾಂಕ್ರಾಮಿಕದ ಪ್ರಸಕ್ತ ಪರಿಸ್ಥಿತಿ ಮತ್ತು ರೋಗ ನಿಭಾಯಿಸಲು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು. ಕರ್ನಾಟಕವನ್ನು ಉಪ ಮುಖ್ಯಮಂತ್ರಿ ಪ್ರತಿನಿಧಿಸಿದ್ದರು.

ಟೀಮ್ ಇಂಡಿಯಾದಿಂದ ಸಂಘಟಿತ ಕಾರ್ಯ

ಪ್ರತಿಯೊಬ್ಬರೂ ಹೆಚ್ಚಿನ ಮಟ್ಟದ ಸಹಕಾರವನ್ನು ತೋರಿಸಿದ್ದಾರೆ ಮತ್ತು ಟೀಮ್ ಇಂಡಿಯಾ ಪ್ರದರ್ಶಿಸಿದ ತಂಡ ಪ್ರದರ್ಶನ ಗಮನಾರ್ಹವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಸವಾಲುಗಳು ಮತ್ತು ಒತ್ತಡಗಳ ಕುರಿತೂ ಅವರು ಮಾತನಾಡಿದರು. ಸುಮಾರು ಶೇ.80ರಷ್ಟು ಸಕ್ರಿಯ ಪ್ರಕರಣಗಳು ಇಂದು ಭಾಗಿಯಾಗಿರುವ 10 ರಾಜ್ಯಗಳಿಂದಲೇ ಬಂದಿವೆ, ಮತ್ತು ಹತ್ತು ರಾಜ್ಯಗಳಲ್ಲಿ ವೈರಾಣು ಮಣಿಸಿದರೆ, ಕೋವಿಡ್-19 ವಿರುದ್ಧದ ಸಮರದಲ್ಲಿ ಇಡೀ ದೇಶವು ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ ಎಂದು ಅವರು ಉಲ್ಲೇಖಿಸಿದರು.

ಪರೀಕ್ಷೆ ಹೆಚ್ಚಿಸಿ, ಮರಣ ಪ್ರಮಾಣ ತಗ್ಗಿಸಿ

ದಿನನಿತ್ಯದ ಪರೀಕ್ಷೆಗಳ ಸಂಖ್ಯೆ ಸುಮಾರು 7 ಲಕ್ಷ ತಲುಪಿದೆ ಮತ್ತು ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು, ಇದು ರೋಗವನ್ನು ಆರಂಭದಲ್ಲೇ ಗುರುತಿಸಲು ಮತ್ತು ನಿಯಂತ್ರಿಸಲು ನೆರವಾಗಿದೆ. ವಿಶ್ವದಲ್ಲೇ ದೇಶದ ಸರಾಸರಿ ಮರಣ ಪ್ರಮಾಣ ಅತ್ಯಂತ ಕಡಿಮೆ ಇದೆ ಮತ್ತು ನಿರಂತರವಾಗಿ ಇಳಿಕೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ ಶೇಕಡಾವಾರು ದರ ಇಳಿಕೆಯಾಗುತ್ತಿದೆ, ಆದರೆ ಚೇತರಿಕೆ ಪ್ರಮಾಣ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಕ್ರಮಗಳು ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂದು ಅವರು ಉಲ್ಲೇಖಿಸಿದರು ಮತ್ತು ಮರಣ ಪ್ರಮಾಣವನ್ನು ಶೇ.1 ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಶೀಘ್ರದಲ್ಲೇ ಸಾಧಿಸಬಹುದು ಎಂದು ಹೇಳಿದರು.

ಬಿಹಾರ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸುವ ತುರ್ತು ಅಗತ್ಯವಾಗಿದೆ ಎಂಬುದು ಚರ್ಚೆಯಿಂದ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸಮರದಲ್ಲಿ ಕಂಟೈನ್ಮೆಂಟ್, ಸಂಪರ್ಕ ಪತ್ತೆ ಮತ್ತು ಕಣ್ಗಾವಲು ಅತ್ಯಂತ ಪರಿಣಾಮಕಾರಿ ಅಸ್ತ್ರಳಾಗಿವೆ ಎಂದು ಅವರು ಹೇಳಿದರು. ಜನರು ಜಾಗೃತರಾಗಿದ್ದಾರೆ ಮತ್ತು ಪ್ರಯತ್ನಗಳಿಗೆ ಸರಿಯಾಗಿ ಸಹಾಯ ಮಾಡುತ್ತಿದ್ದಾರೆ, ಇದರ ಪರಿಣಾಮವಾಗಿ, ಹೊಂ ಕ್ವಾರಂಟೈನ್ ಅನ್ನು ಅಷ್ಟು ಪರಿಣಾಮಕಾರಿಯಾಗಿ ಬಳಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು. ಆರೋಗ್ಯ ಸೇತು ಅಪ್ಲಿಕೇಶನ್ ಉಪಯುಕ್ತತೆಯನ್ನು ಅವರು ಉಲ್ಲೇಖಿಸಿದರು ಮತ್ತು ತಜ್ಞರ ಪ್ರಕಾರ, ಆರಂಭಿಕ 72 ಗಂಟೆಗಳಲ್ಲಿ ನಾವು ಪ್ರಕರಣಗಳನ್ನು ಗುರುತಿಸಲು ಸಾಧ್ಯವಾದರೆ, ವೈರಾಣು ಹರಡುವಿಕೆಯನ್ನು ನಿಧಾನಗೊಳಿಸಬಹುದು ಎಂದು ಹೇಳಿದರು. 72 ಗಂಟೆಗಳ ಒಳಗೆ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪತ್ತೆಹಚ್ಚುವ ಮತ್ತು ಪರೀಕ್ಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇದನ್ನು ಮಂತ್ರದಂತೆ ಪಾಲಿಸಬೇಕು, ಕೈ ತೊಳೆಯುವುದು, ಎರಡು ಗಜ ಅಂತರ ಕಾಪಾಡಿಕೊಳ್ಳುವುದು, ಮುಖವಾಡಗಳನ್ನು ಧಾರಣೆಯನ್ನು ಶ್ರದ್ಧೆಯಿಂದ ಮಾಡಬೇಕೆಂದರು.

ದೆಹಲಿ ಮತ್ತು ಸಮೀಪದ ರಾಜ್ಯಗಳಲ್ಲಿನ ಕಾರ್ಯತಂತ್ರ

ದೆಹಲಿ ಮತ್ತು ಸಮೀಪದ ರಾಜ್ಯಗಳೊಂದಿಗೆ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ಗೃಹ ಸಚಿವರ ಅನುಭವವನ್ನು ಪ್ರಧಾನಮಂತ್ರಿ ವಿವರಿಸಿದರು. ಕಂಟೈನ್ಮೆಂಟ್ ವಲಯಗಳನ್ನು ಬೇರ್ಪಡಿಸುವುದು ಮತ್ತು ಸ್ಕ್ರೀನಿಂಗ್ಗೆ, ಅದರಲ್ಲೂ ಹೆಚ್ಚಿನ ಅಪಾಯದ ವರ್ಗದಲ್ಲಿರುವವರ ವಿಚಾರದಲ್ಲಿ ಒತ್ತು ನೀಡುವುದು ಕಾರ್ಯತಂತ್ರದ ಮುಖ್ಯ ಸ್ತಂಭಗಳೆಂದರು. ಹಂತಗಳ ಫಲಿತಾಂಶಗಳು ಎಲ್ಲರಿಗೂ ಕಾಣುವಂತೆ ಇವೆ, ಆಸ್ಪತ್ರೆಗಳಲ್ಲಿ ಉತ್ತಮ ನಿರ್ವಹಣೆ ಮತ್ತು ಐಸಿಯು ಹಾಸಿಗೆಗಳನ್ನು ಹೆಚ್ಚಿಸುವಂತಹ ಕ್ರಮಗಳು ಸಹ ಬಹಳ ಸಹಾಯಕವಾಗಿವೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ಮಾತು

ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಅವರು ಪ್ರಧಾನಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಅವರ ನಿರಂತರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಅವರುಗಳು ಪರೀಕ್ಷೆ ನಡೆಸುವಿಕೆ, ಪರೀಕ್ಷೆಯ ಸಂಖ್ಯೆಯ ಹೆಚ್ಚಳಕ್ಕೆ ಕೈಗೊಂಡಿರುವ ಕ್ರಮಗಳು, ಟೆಲಿ-ಮೆಡಿಸಿನ್ ಬಳಕೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳ ಕುರಿತು ಮಾತನಾಡಿದರು. ಸೆರೊ-ಕಣ್ಗಾವಲಿಗೆ ಅವರು ಕೇಂದ್ರ ಆರೋಗ್ಯ ಸಚಿವಾಲಯದಿಂದ ಹೆಚ್ಚಿನ ಮಾರ್ಗದರ್ಶನ ಕೋರಿದರು, ಆದರೆ ದೇಶದಲ್ಲಿ ಸಮಗ್ರ ವೈದ್ಯಕೀಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸಲಹೆ ನೀಡಿದರು.

ವಿಶ್ವ ಆರೋಗ್ಯ ಸಂಸ್ಥಯಿಂದ ಶ್ಲಾಘನೆ

ವೈರಾಣು ವಿರುದ್ಧದ ಸಮರದಲ್ಲಿ ಸರ್ಕಾರ ಎಲ್ಲ ಸಾಧಅಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದರು, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಪ್ರಶಂಸಿಸಿದೆ ಎಂದರು.

ದೇಶದಲ್ಲಿನ ಕೋವಿಡ್ ಪ್ರಕರಣಗಳ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಸ್ಥೂಲವಾಗಿ ವಿವರಿಸಿ, ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ವೃದ್ಧಿ ದರ ಸರಾಸರಿ ದರಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿ, ಪರೀಕ್ಷಾ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ರಾಜ್ಯಗಳಿಗೆ ಮನವಿ ಮಾಡಿದರು. ನಿಖರವಾದ ಮರಣ ಅಂಕಿ ಅಂಶಗಳನ್ನು ವರದಿ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಸ್ಥಳೀಯ ಸಮುದಾಯಗಳ ಸಹಾಯದಿಂದ ಕಂಟೈನ್ಮೆಂಟ್ ವಲಯಗಳ ಮೇಲ್ವಿಚಾರಣೆಯ ಬಗ್ಗೆಯೂ ಅವರು ಮಾತನಾಡಿದರು.

ಕೇಂದ್ರ ಹಣಕಾಸು ಸಚಿವರು, ಆರೋಗ್ಯ ಸಚಿವರು ಮತ್ತು ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು ಸಂವಾದದ ವೇಳೆ ಉಪಸ್ಥಿತರಿದ್ದರು.

 

***



(Release ID: 1645078) Visitor Counter : 196