ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರಿಂದ ನಾಳೆ ಕೃಷಿ ಮೂಲಸೌಕರ್ಯ ನಿಧಿ ಅಡಿ ಹಣಕಾಸು ಸೌಲಭ್ಯಕ್ಕೆ ಚಾಲನೆ ಮತ್ತು

ಪಿಎಂ-ಕಿಸಾನ್ ಅಡಿಯಲ್ಲಿ ಆರ್ಥಿಕ ನೆರವು ಬಿಡುಗಡೆ ಬೆಳೆ ಕಟಾವು ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯದ ಕೃಷಿ ಸ್ವತ್ತು ಅಭಿವೃದ್ಧಿಗೆ ಕೃಷಿ ಮೂಲಸೌಕರ್ಯ ನಿಧಿ ಅಡಿ ಒಂದು ಲಕ್ಷ ಕೋಟಿ ವರೆಗೆ ನೆರವು; ಪಿಎಂ-ಕಿಸಾನ್ ಅಡಿಯಲ್ಲಿ 6ನೇ ಕಂತಿಗಾಗಿ 8.5 ಕೋಟಿ ರೈತರಿಗೆ 17 ಸಾವಿರ ಕೋಟಿ ರೂ. ಬಿಡುಗಡೆ

Posted On: 08 AUG 2020 1:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆಗಸ್ಟ್ 9ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿಯಡಿ ಆರ್ಥಿಕ ಸೌಲಭ್ಯ ವಿತರಣೆಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ ಪ್ರಧಾನಿ ಅವರು ಇದೇ ವೇಳೆ ಪಿಎಂ-ಕಿಸಾನ್ ಯೋಜನೆ ಅಡಿ 8.5 ಕೋಟಿ ರೈತರಿಗೆ 6ನೇ ಕಂತಿನ ಹಣ 17 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶಾದ್ಯಂತ ಲಕ್ಷಾಂತರ ರೈತರು, ಸಹಕಾರಿಗಳು ಮತ್ತು ನಾಗರಿಕರು ಸಾಕ್ಷಿಯಾಗಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಸಂಪುಟ, ಒಂದು ಲಕ್ಷ ಕೋಟಿ ರೂ.ಗಳ “ಕೃಷಿ ಮೂಲಸೌಕರ್ಯ ನಿಧಿ” ಅಡಿ ಆರ್ಥಿಕ ನೆರವು ನೀಡುವ ಕೇಂದ್ರದ ಯೋಜನೆಗೆ ಅನುಮೋದನೆ ನೀಡಿತ್ತು. ಇದರಡಿ ಬೆಳೆ ಕಟಾವು ನಂತರದ ನಿರ್ವಹಣೆ, ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಆಸ್ತಿಗಳ ಸೃಷ್ಟಿ ಅಂದರೆ ಶೈತ್ಯಾಗಾರ, ಸಂಗ್ರಹಣಾ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕ ಇತ್ಯಾದಿಗಳನ್ನು ತೆರೆಯಲು ಆರ್ಥಿಕ ನೆರವು ನೀಡಲಾಗುವುದು. ಈ ಆಸ್ತಿಗಳು ರೈತರು ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗುವುದಲ್ಲದೆ, ಅವರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಕೊಳ್ಳಲು ಮತ್ತು ಅವುಗಳನ್ನು ಅಧಿಕ ಬೆಲೆಗೆ ಮಾರಲು ಹಾಗೂ ಉತ್ಪನ್ನ ಹಾಳಾಗುವುದನ್ನು ತಪ್ಪಿಸಲು ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಹೆಚ್ಚಿಸಲು ನೆರವಾಗಲಿದೆ. ಹಲವು ಸಾಲ ನೀಡಿಕೆ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದು ಲಕ್ಷ ಕೋಟಿ ರೂ.ಗಳ ವರೆಗೆ ಆರ್ಥಿಕ ಸೌಕರ್ಯಕ್ಕೆ ಅನುಮೋದನೆ ನೀಡಲಾಗುವುದು. ಸಾರ್ವಜನಿಕ ವಲಯದ 12 ಬ್ಯಾಂಕ್ ಗಳ ಪೈಕಿ 11 ಬ್ಯಾಂಕ್ ಗಳು ಈಗಾಗಲೇ ಡಿಎಸಿ ಮತ್ತು ಎಫ್ ಡಬ್ಲ್ಯೂ ಜೊತೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಯೋಜನೆ ಅಡಿ ಶೇ.3ರಷ್ಟು ಬಡ್ಡಿ ಸಬ್ಸಿಡಿ ಅಲ್ಲದೆ, 2 ಕೋಟಿ ರೂ.ಗಳ ವರೆಗೆ ಸಾಲ ಖಾತ್ರಿಯನ್ನು ಫಲಾನುಭವಿಗಳಿಗೆ ನೀಡಲಾಗುವುದು. ಇದರಿಂದ ಈ ಯೋಜನೆ ವ್ಯಾಪ್ತಿ ವಿಸ್ತಾರಗೊಳ್ಳಲಿದೆ. ರೈತರು, ಪಿಎಸಿಎಸ್, ಮಾರುಕಟ್ಟೆ ಸಹಕಾರ ಸಂಘಗಳು, ಎಫ್ ಪಿಒಗಳು, ಸ್ವಸಹಾಯ ಗುಂಪುಗಳು, ಜಂಟಿ ಹೊಣೆಗಾರಿಕೆ ಗುಂಪುಗಳು, ಬಹು ಉದ್ದೇಶದ ಸಹಕಾರ ಸಂಘಗಳು, ಕೃಷಿ ಉದ್ಯಮಿಗಳು, ನವೋದ್ಯಮಗಳು ಮತ್ತು ಕೇಂದ್ರ/ರಾಜ್ಯ ಸರ್ಕಾರದ ಏಜೆನ್ಸಿಗಳು ಅಥವಾ ಸ್ಥಳೀಯ ಸಂಸ್ಥೆಗಳು ಪ್ರಾಯೋಜಿತ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳು ಫಲಾನುಭವಿಗಳ ಪಟ್ಟಿಯಲ್ಲಿವೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(ಪಿಎಂ-ಕಿಸಾನ್) 2018ರ ಡಿಸೆಂಬರ್ 01 ರಂದು ಆರಂಭವಾಗಿದ್ದು, ಅದರಡಿ 9.9 ಕೋಟಿ ರೈತರಿಗೆ ಸುಮಾರು 75,000 ಕೋಟಿ ರೂ.ಗಳ ನೇರ ನಗದು ವರ್ಗಾವಣೆ ಮಾಡಲಾಗಿದೆ. ಇದು ರೈತರು ತಮ್ಮ ಕೃಷಿ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಮತ್ತು ಕುಟುಂಬಗಳಿಗೆ ನೆರವಾಗಲು ಸಹಕಾರಿಯಾಗಲಿದೆ. ಪಿಎಂ-ಕಿಸಾನ್ ಯೋಜನೆ ಅನುಷ್ಠಾನ ಮತ್ತು ಜಾರಿ ಅತ್ಯಂತ ಕ್ಷಿಪ್ರವಾಗಿ ನಡೆಯುತ್ತಿದ್ದು, ಆರ್ಥಿಕ ನೆರವನ್ನು ಆಧಾರ್ ಜೊತೆ ಸಂಯೋಜಿಸಿ ಕೊಂಡಿರುವ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ರೈತರಿಗೆ ನೆರವು ನೀಡುವಲ್ಲಿ ಈ ಯೋಜನೆ ಮಹತ್ವದ ಪಾತ್ರವಹಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಈ ಯೋಜನೆ ಅಡಿ ಸುಮಾರು 22,000 ಕೋಟಿ ರೂ. ನೆರವನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ.(Release ID: 1644808) Visitor Counter : 190