ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಯುವ ಕೌಶಲ್ಯ ದಿನಾಚರಣೆಯ ಅಂಗವಾಗಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡಾನುವಾದ
Posted On:
15 JUL 2020 12:04PM by PIB Bengaluru
ವಿಶ್ವ ಯುವ ಕೌಶಲ್ಯ ದಿನಾಚರಣೆಯ ಅಂಗವಾಗಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡಾನುವಾದ
ನಮಸ್ಕಾರ!
ನನ್ನ ಯುವ ಸ್ನೇಹಿತರಿಗೆ ಶುಭಾಶಯಗಳು!
ವಿಶ್ವ ಯುವ ಕೌಶಲ್ಯ ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಯುವಕರಿಗೆ ನನ್ನ ಶುಭಾಶಯಗಳು!
ನಿಮ್ಮ ಕೌಶಲ್ಯಗಳಿಗೆ ಈ ದಿನವನ್ನು ಅರ್ಪಿಸಲಾಗಿದೆ. 21 ನೇ ಶತಮಾನದ ಯುವಕರ ಅಥವಾ ಸಹಸ್ರಮಾನದ ಪೀಳಿಗೆಯ ದೊಡ್ಡ ಬಲ ಎಂದರೆ ಅವರ ಕೌಶಲ್ಯ ಮತ್ತು ಕೌಶಲ್ಯಗಳನ್ನು ಗಳಿಸುವ ಸಾಮರ್ಥ್ಯ.
ಸ್ನೇಹಿತರೇ,
ಕೊರೊನಾ ಬಿಕ್ಕಟ್ಟು ಕೆಲಸದ ಸ್ವರೂಪ ಮತ್ತು ಜಾಗತಿಕ ಸಂಸ್ಕೃತಿಯನ್ನೇ ಬದಲಾಯಿಸಿದೆ. ನಿರಂತರವಾಗಿ ಬದಲಾಗುತ್ತಿರುವ ಹೊಸ ತಂತ್ರಜ್ಞಾನವೂ ಕೂಡ ಅದರ ಮೇಲೆ ಪ್ರಭಾವ ಬೀರಿದೆ. ಹೊಸ ಕೆಲಸದ ಸಂಸ್ಕೃತಿ ಮತ್ತು ಉದ್ಯೋಗದ ಹೊಸ ಸ್ವರೂಪವನ್ನು ನೋಡಿದರೆ, ನಮ್ಮ ಯುವಕರು ಹೊಸ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಸ್ನೇಹಿತರೇ, ಅನೇಕರು ನನ್ನನ್ನು ಕೇಳುತ್ತಾರೆ, ಇಂದು, ವ್ಯವಹಾರ ಮತ್ತು ಮಾರುಕಟ್ಟೆಗಳು ಎಷ್ಟು ವೇಗವಾಗಿ ಬದಲಾಗುತ್ತವೆ ಎಂದರೆ, ಅವುಗಳ ಪ್ರಸ್ತುತತೆಯನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದೇ ನಮಗೆ ಅರ್ಥವಾಗುವುದಿಲ್ಲ ಎಂದು. ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ, ಈ ಪ್ರಶ್ನೆ ಇನ್ನಷ್ಟು ಮಹತ್ವದ್ದಾಗಿದೆ.
ಸ್ನೇಹಿತರೇ,
ಈ ಪ್ರಶ್ನೆಗೆ ನಾನು ಯಾವಾಗಲೂ ಒಂದು ಉತ್ತರವನ್ನು ಕೊಡುತ್ತೇನೆ. ನಾವು ಪ್ರಸ್ತುತವಾಗಿರಲು ಇರುವ ಮಂತ್ರವೆಂದರೆ- ಕೌಶಲ್ಯ, ಮರು ಕೌಶಲ್ಯ ಮತ್ತು ಉನ್ನತ ಕೌಶಲ್ಯ. ಕೌಶಲ್ಯ ಎಂದರೆ ನೀವು ಹೊಸ ಕೌಶಲ್ಯವನ್ನು ಕಲಿಯುವುದು. ಉದಾಹರಣೆಗೆ, ನೀವು ಮರದ ತುಂಡುಗಳಿಂದ ಕುರ್ಚಿಯನ್ನು ಮಾಡಲು ಕಲಿತಿದ್ದೀರಿ. ಅದು ನಿಮ್ಮ ಕೌಶಲ್ಯವಾಗಿತ್ತು. ಆ ಮರದ ತುಂಡಿನ ಮೌಲ್ಯವನ್ನೂ ಸಹ ನೀವು ಹೆಚ್ಚಿಸಿದ್ದೀರಿ; ಆದ್ದರಿಂದ ಮೌಲ್ಯವರ್ಧನೆ ಮಾಡಿದಂತಾಯಿತು. ಆದರೆ ಈ ಮೌಲ್ಯವನ್ನು ಕಾಪಾಡಿಕೊಳ್ಳಲು, ಪ್ರತಿದಿನ ಹೊಸದನ್ನು ಸೇರಿಸಬೇಕಾಗುತ್ತದೆ. ಅಂದರೆ ಹೊಸ ಶೈಲಿ ಅಥವಾ ಹೊಸ ವಿನ್ಯಾಸಗಳು ಇತ್ಯಾದಿ. ತಯಾರಿಸುವವನು ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು. ಹೊಸದನ್ನು ಕಲಿಯುವುದೆಂದರೆ ಮರು ಕೌಶಲ್ಯ. ಆ ಕೌಶಲ್ಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವುದು ಉನ್ನತ ಕೌಶಲ್ಯ. ಸಣ್ಣ ಪೀಠೋಪಕರಣಗಳನ್ನು ತಯಾರಿಸುವುದರಿಂದ, ನೀವು ಇಡೀ ಕಚೇರಿಯನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದರೆ, ಅದು ಕೌಶಲ್ಯವಾಗಿರುತ್ತದೆ. ಕೌಶಲ್ಯ, ಮರು ಕೌಶಲ್ಯ ಮತ್ತು ಉನ್ನತ ಕೌಶಲ್ಯದ ಈ ಮಂತ್ರವನ್ನು ತಿಳಿದುಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಮತ್ತು ಅನುಸರಿಸುವುದು ನಮ್ಮೆಲ್ಲರ ಜೀವನದಲ್ಲಿ ಬಹಳ ಮುಖ್ಯವಾಗಿದೆ.
ಅಂದಹಾಗೆ, ನಾನು ಈ ಕೌಶಲ್ಯದ ಬಗ್ಗೆ ಮಾತನಾಡುವಾಗ, ನನ್ನ ಹಳೆಯ ಪರಿಚಯಸ್ಥರೊಬ್ಬರು ಹೇಳುತ್ತಿದ್ದ ಒಬ್ಬ ವ್ಯಕ್ತಿಯನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಅವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಅವರು ಹೆಚ್ಚು ವಿದ್ಯಾವಂತರೂ ಅಲ್ಲ. ಆದರೆ ಅವರ ಕೈಬರಹ ತುಂಬಾ ಮುದ್ದಾಗಿತ್ತು. ಕಾಲಾನಂತರದಲ್ಲಿ, ಅವರು ತಮ್ಮ ಕೈಬರಹಕ್ಕೆ ಹೆಚ್ಚು ಹೊಸ ಶೈಲಿಗಳನ್ನು ಸೇರಿಸಿದರು, ಅಂದರೆ ಅವರು ಸ್ವತಃ ಮರು ಕೌಶಲ್ಯ ಪಡೆದರು. ಅವರ ಕೌಶಲ್ಯದಿಂದಾಗಿ ಜನರು ಅವರ ಬಳಿ ಬಂದರು. ವಿಶೇಷ ಸಂದರ್ಭಗಳಿಗೆ ಆಮಂತ್ರಣ ಪತ್ರಗಳನ್ನು ಬರೆಯುವಂತೆ ಕೇಳುತ್ತಿದ್ದರು. ನಂತರ ಅವರು ಮರು ಕೌಶಲ್ಯ ಮತ್ತು ಸ್ವತಃ ಕೌಶಲ್ಯ ಹೊಂದಿದವರಾದರು! ಇನ್ನೂ ಕೆಲವು ಭಾಷೆಗಳನ್ನು ಕಲಿತು ಅನೇಕ ಭಾಷೆಗಳಲ್ಲಿ ಬರೆಯಲು ಪ್ರಾರಂಭಿಸಿದರು. ಈ ರೀತಿ, ಅವರ ವ್ಯವಹಾರವು ಕಾಲಾನಂತರದಲ್ಲಿ ಬೆಳೆಯಿತು. ಜನರು ತಮ್ಮ ಕೆಲಸಕ್ಕಾಗಿ ಆಗಾಗ್ಗೆ ಅವರ ಬಳಿಗೆ ಬರಲು ಪ್ರಾರಂಭಿಸಿದರು. ಹವ್ಯಾಸದಿಂದ ಬೆಳೆದ ಕೌಶಲ್ಯವು ಬದುಕು ಮತ್ತು ಗೌರವದ ಮಾಧ್ಯಮವಾಯಿತು.
ಸ್ನೇಹಿತರೇ,
ಕೌಶಲ್ಯ ನಮಗೆ ನಾವೇ ನೀಡಿಕೊಳ್ಳುವ ಉಡುಗೊರೆಯಾಗಿದೆ. ಅದು ಅನುಭವದೊಂದಿಗೆ ಬೆಳೆಯುತ್ತದೆ. ಕೌಶಲ್ಯವು ಕಾಲರಹಿತವಾಗಿರುತ್ತದೆ; ಅದು ಕಾಲದೊಂದಿಗೆ ಉತ್ತಮಗೊಳ್ಳುತ್ತದೆ. ಕೌಶಲ್ಯ ಅನನ್ಯವಾದುದು; ಅದು ನಿಮ್ಮನ್ನು ಇತರರಿಂದ ಭಿನ್ನರನ್ನಾಗಿಸುತ್ತದೆ. ಕೌಶಲ್ಯವು ಯಾರೂ ಕಿತ್ತುಕೊಳ್ಳಲಾಗದ ನಿಧಿ. ಕೌಶಲ್ಯವು ಸ್ವಾವಲಂಬನೆ; ಇದು ಒಬ್ಬರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವುದು ಮಾತ್ರವಲ್ಲದೆ ಸ್ವಯಂ ಉದ್ಯೋಗಿಗಳನ್ನಾಗಿ ಮಾಡುತ್ತದೆ. ಕೌಶಲ್ಯದ ಈ ಶಕ್ತಿ, ವ್ಯಕ್ತಿಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಸ್ನೇಹಿತರೇ,
ಯಾವುದೇ ಯಶಸ್ವಿ ವ್ಯಕ್ತಿಯು ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಯಾವ ಅವಕಾಶವನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ. ಇದಲ್ಲದೆ, ಅವನು ಹೊಸ ಅವಕಾಶಗಳನ್ನು ಹುಡುಕುತ್ತಲೇ ಇರುತ್ತಾನೆ. ನಿಮಗೆ ಕೌಶಲ್ಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲದಿದ್ದರೆ, ಹೊಸದನ್ನು ಕಲಿಯುವ ಬಯಕೆ ಇಲ್ಲದಿದ್ದರೆ, ಅದು ಜೀವನವನ್ನು ನಿಷ್ಕ್ರಿಯಗೊಳಿಸುತ್ತದೆ. ಒಂದು ರೀತಿಯಲ್ಲಿ, ಆ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನೇ ಹೊರೆಯನ್ನಾಗಿ ಮಾಡಿಕೊಳ್ಳುತ್ತಾನೆ. ಇದು ನಮಗೆ ಮಾತ್ರವಲ್ಲ, ನಮ್ಮ ಸಂಬಂಧಿಕರಿಗೂ ಹೊರೆಯಾಗಿ ಪರಿಣಮಿಸುತ್ತದೆ. ಮತ್ತೊಂದೆಡೆ, ಕೌಶಲ್ಯದ ಬಗೆಗಿನ ಆಸಕ್ತಿಯು ಹೊಸ ಶಕ್ತಿ ಮತ್ತು ಜೀವನೋತ್ಸಾಹವನ್ನು ತುಂಬುತ್ತದೆ. ಕೌಶಲ್ಯವು ಕೇವಲ ಉಣ್ಣಲು ಬೇಕಾದ್ದನ್ನು ಗಳಿಸುವ ಸಾಧನವಲ್ಲ. ನಮಗೆ ಬದುಕಲು ಭರವಸೆ ಮತ್ತು ಉತ್ಸಾಹ ಬೇಕು. ಕೌಶಲ್ಯ ನಮ್ಮ ಪ್ರೇರಕ ಶಕ್ತಿಯಾಗುತ್ತದೆ. ಇದು ನಮಗೆ ಹೊಸ ಸ್ಫೂರ್ತಿ ತುಂಬುತ್ತದೆ. ಇದು ಹೊಸ ಉತ್ಸಾಹವನ್ನು ತರುತ್ತದೆ! ಮತ್ತು ಇಲ್ಲಿ ವಯಸ್ಸು ಅಪ್ರಸ್ತುತವಾಗುತ್ತದೆ. ನೀವು ಚಿಕ್ಕವರಿರಲಿ ಅಥವಾ ದೊಡ್ಡವರಿರಲಿ, ನೀವು ಹೊಸ ಕೌಶಲ್ಯಗಳನ್ನು ಕಲಿಯುತ್ತಿದ್ದರೆ, ಜೀವನೋತ್ಸಾಹವು ಎಂದಿಗೂ ಕುಂದುವುದಿಲ್ಲ.
ಸ್ನೇಹಿತರೇ,
ಪ್ರತಿಯೊಬ್ಬರೂ ಕೌಶಲ್ಯದ ಶಕ್ತಿಯ ಬಗ್ಗೆ ಸ್ವಲ್ಪ ಅನುಭವವನ್ನು ಹೊಂದಿರಲೇಬೇಕು. ಇಂದು, ನಿಮ್ಮೊಂದಿಗೆ ಮಾತನಾಡುವಾಗ, ನನಗೆ ಒಂದು ಘಟನೆ ನೆನಪಾಗುತ್ತಿದೆ. ನನ್ನ ಪ್ರಾಯದ ದಿನಗಳಲ್ಲಿ ಬುಡಕಟ್ಟು ಪ್ರದೇಶದಲ್ಲಿ ಕೆಲವು ಸಂಸ್ಥೆಗಳೊಂದಿಗೆ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ. ಒಮ್ಮೆ, ನಾವು ಒಂದು ಸಂಸ್ಥೆಯ ಜನರೊಂದಿಗೆ ಅವರ ಜೀಪ್ ಮೂಲಕ ಹೊರಗೆ ಹೋಗಬೇಕಾಗಿತ್ತು. ಆದರೆ ಜೀಪು ಬೆಳಿಗ್ಗೆ ಸ್ಟಾರ್ಟ್ ಆಗಲಿಲ್ಲ. ಆಗ ಎಲ್ಲರೂ ಜೀಪ್ ಸ್ಟಾರ್ಟ್ ಮಾಡಲು ಸಾಕಷ್ಟು ಪ್ರಯತ್ನಿಸಿದರು; ಅವರು ಅದನ್ನು ತಳ್ಳಿದರು ಮತ್ತು ಎಲ್ಲವನ್ನೂ ಮಾಡಿದರು, ಆದರೆ ಜೀಪ್ ಮಾತ್ರ ಸ್ಟಾರ್ಟ್ ಆಗಲಿಲ್ಲ. ಸುಮಾರು 7 ಅಥವಾ 8 ಗಂಟೆಗೆ, ಮೆಕ್ಯಾನಿಕ್ ಅನ್ನು ಕರೆಸಲಾಯಿತು. ಅವನು ಬಂದು ಅದೇನೋ ಮಾಡಿ 2 ನಿಮಿಷದಲ್ಲಿ ಸರಿಪಡಿಸಿದ. ನಂತರ ನಾವು ಅವನಿಗೆ ಶುಲ್ಕ ಎಷ್ಟೆಂದು ಕೇಳಿದೆವು. ಅವನು 20 ರೂ. ಅಂದ. ಆ ಸಮಯದಲ್ಲಿ, 20 ರೂಪಾಯಿಗೆ ತುಂಬಾ ಬೆಲೆಯಿತ್ತು. ಆದರೆ ನಮ್ಮ ಸಹಚರರೊಬ್ಬರು, "ನೋಡಯ್ಯಾ, ಇದು ಕೇವಲ 2 ನಿಮಿಷದ ಕೆಲಸ. ಅದಕ್ಕೆ ನೀನು 20 ರೂ. ಕೇಳುತ್ತಿದ್ದೀಯಲ್ಲಾ?" ಎಂದರು. ಅದಕ್ಕೆ ಮೆಕ್ಯಾನಿಕ್ ನೀಡಿದ ಉತ್ತರ ಇಂದಿಗೂ ನನಗೆ ಸ್ಫೂರ್ತಿಯಾಗಿದೆ ಮತ್ತು ನನ್ನ ಮನಸ್ಸಿನಲ್ಲಿ ಪ್ರಭಾವ ಬೀರಿದೆ. ಅನಕ್ಷರಸ್ಥ ಮೆಕ್ಯಾನಿಕ್ ಹೇಳಿದ, "ಸರ್, ನಾನು 2 ನಿಮಿಷಕ್ಕೆ 20 ರೂ. ತೆಗೆದುಕೊಳ್ಳುತ್ತಿಲ್ಲ. ಬದಲಿಗೆ 20 ವರ್ಷಗಳ ಕಾಲ ಕೆಲಸ ಮಾಡಿ ಗಳಿಸಿದ ಕೌಶಲ್ಯಕ್ಕಾಗಿ ಕೇಳಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ಸಂಪಾದಿಸಿದ ಅನುಭವಕ್ಕೆ 20 ರೂ.” ಎಂದ. ಕೌಶಲ್ಯದ ಶಕ್ತಿ ಎಂದರೆ ಇದು. ಕೌಶಲ್ಯವು ನಿಮ್ಮ ಕೆಲಸದ ಮೇಲೆ ಮಾತ್ರವಲ್ಲದೆ ನಿಮ್ಮ ಪ್ರತಿಭೆ ಮತ್ತು ಪ್ರಭಾವದ ಮೇಲೂ ಪರಿಣಾಮ ಬೀರುತ್ತದೆ.
ಸ್ನೇಹಿತರೇ,
ಇಲ್ಲಿ ಇನ್ನೊಂದು ವಿಷಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಕೆಲವರು ಯಾವಾಗಲೂ ಜ್ಞಾನ ಮತ್ತು ಕೌಶಲ್ಯದ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ ಅಥವಾ ಅದರ ಬಗ್ಗೆ ಗೊಂದಲ ಸೃಷ್ಟಿಸುತ್ತಾರೆ. ಅಂತಹವರಿಗೆ ನಾನು ಯಾವಾಗಲೂ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಬೈಸಿಕಲ್ ಓಡಿಸುವುದು ಹೇಗೆ ಎಂಬ ಬಗ್ಗೆ ನೀವು ಪುಸ್ತಕಗಳನ್ನು ಓದಬಹುದು, ಯೂಟ್ಯೂಬ್ನಲ್ಲಿ ವೀಡಿಯೊಗಳನ್ನು ನೋಡಬಹುದು; ಬೈಸಿಕಲ್ ಮೇಲೆ ಕುಳಿತುಕೊಳ್ಳುವುದು ಹೇಗೆ; ಬೈಸಿಕಲ್ ಹೇಗೆ ಕಾರ್ಯನಿರ್ವಹಿಸುತ್ತದೆ; ಅದರ ಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಹ್ಯಾಂಡಲ್ ಅನ್ನು ಹೇಗೆ ಹಿಡಿದುಕೊಳ್ಳಬೇಕು; ಬ್ರೇಕ್ ಹಾಕುವುದು ಹೇಗೆ. ಇದೆಲ್ಲ ಜ್ಞಾನ. ಆದರೆ ಈ ಜ್ಞಾನವನ್ನು ಹೊಂದಿದ ಮಾತ್ರಕ್ಕೆ ನೀವು ಸೈಕಲ್ ಓಡಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ವಾಸ್ತವದಲ್ಲಿ, ಸೈಕ್ಲಿಂಗ್ನಲ್ಲಿ ನಿಮಗೆ ಕೌಶಲ್ಯದ ಅಗತ್ಯವಿದೆ. ನೀವು ಕ್ರಮೇಣ ಸೈಕಲ್ ಕಲಿಯುತ್ತೀರಿ. ತದನಂತರ ನೀವು ಬೈಸಿಕಲ್ ಸವಾರಿ ಆನಂದಿಸುತ್ತೀರಿ. ನೀವು ಹಾಗೇ ಕಲಿಯುತ್ತಿರಿ ಯಾವುದೇ ಸಮಸ್ಯೆ ಇರುವುದಿಲ್ಲ. ನೀವು ಈ ಕಲೆಯನ್ನು ಕಲಿತ ತಕ್ಷಣ, ನೀವು ಕೌಶಲ್ಯ ಅಥವಾ ಪ್ರತಿಭೆಯನ್ನು ಪಡೆಯುತ್ತೀರಿ. ಮುಂದಿನ ಬಾರಿ ನಿಮ್ಮ ಮನಸ್ಸನ್ನು ಅನ್ವಯಿಸಬೇಕಾಗಿ ಬರುವುದಿಲ್ಲ.
ಸಮಾಜದಿಂದ ಆಡಳಿತದವರೆಗಿನ ಪ್ರತಿಯೊಂದು ಹಂತದಲ್ಲೂ ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂದು, ಜ್ಞಾನ ಮತ್ತು ಕೌಶಲ್ಯಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಮೂಲಕ ಭಾರತ ಪ್ರಗತಿಯಲ್ಲಿದೆ. ಐದು ವರ್ಷಗಳ ಹಿಂದೆ, ಈ ದಿನದಂದು, ಸ್ಕಿಲ್ ಇಂಡಿಯಾ ಮಿಷನ್ ಅನ್ನು ಈ ಚಿಂತನೆಯೊಂದಿಗೆ ಪ್ರಾರಂಭಿಸಲಾಯಿತು. ಜ್ಞಾನದ ಜೊತೆಗೆ ಯುವಕರು ಕೌಶಲ್ಯಗಳನ್ನು ಗಳಿಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಇದಕ್ಕಾಗಿ ದೇಶಾದ್ಯಂತ ನೂರಾರು ಪ್ರಧಾನ ಮಂತ್ರಿ ಕೌಶಲ ವಿಕಾಸ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಐಟಿಐಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು ಮತ್ತು ಹೊಸದಾಗಿ ಲಕ್ಷಾಂತರ ಸೀಟುಗಳನ್ನು ಸೇರಿಸಲಾಯಿತು. ಈ ಅವಧಿಯಲ್ಲಿ 5 ಕೋಟಿಗೂ ಹೆಚ್ಚು ಜನರ ಕೌಶಲ್ಯ ಅಭಿವೃದ್ಧಿ ಮಾಡಲಾಗಿದೆ. ಮತ್ತು ಈ ಅಭಿಯಾನವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ.
ಸ್ನೇಹಿತರೇ,
ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ, ಅನೇಕ ಕ್ಷೇತ್ರಗಳಲ್ಲಿ ಲಕ್ಷಾಂತರ ನುರಿತವರ ಅಗತ್ಯವಿದೆ. ವಿಶೇಷವಾಗಿ ಆರೋಗ್ಯ ಸೇವೆಗಳಲ್ಲಿ ಭಾರಿ ಸಾಮರ್ಥ್ಯವಿದೆ. ಇದನ್ನು ಮನಗಂಡ ಕೌಶಲ್ಯ ಅಭಿವೃದ್ಧಿ ಸಚಿವಾಲಯವು ಈಗ ವಿಶ್ವದಾದ್ಯಂತ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನು ಗುರುತಿಸಲು ಪ್ರಾರಂಭಿಸಿದೆ. ಭಾರತದ ಯುವಜನರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿರುವ ದೇಶಗಳ ಬಗ್ಗೆ ಅಥವಾ ನಿರ್ದಿಷ್ಟ ಸೇವಾ ವಲಯದಲ್ಲಿ ಯಾವ ರೀತಿಯ ಬೇಡಿಕೆಯನ್ನು ಸೃಷ್ಟಿಸಲಾಗುತ್ತಿದೆ ಎಂಬುದರ ಬಗ್ಗೆ, ಇತರ ದೇಶಗಳ ಅಗತ್ಯತೆಗಳ ಬಗ್ಗೆ ಸೂಕ್ತವಾದ ಮತ್ತು ನಿಖರವಾದ ಮಾಹಿತಿಯನ್ನು ಪಡೆಯವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯು ಈಗ ಭಾರತದ ಯುವಜನರಿಗೆ ಶೀಘ್ರವಾಗಿ ಲಭ್ಯವಾಗಲಿದೆ.
ಈಗ ವ್ಯಾಪಾರಿ ನೌಕೆಯ ಉದಾಹರಣೆಯನ್ನು ತೆಗೆದುಕೊಳ್ಳಿ. ಭಾರತ ಸೇರಿದಂತೆ ಇಡೀ ಜಗತ್ತಿಗೆ ನಾವಿಕರು ಬೇಕಾಗಿದ್ದಾರೆ. ನಮ್ಮಲ್ಲಿ 7500 ಕಿಲೋಮೀಟರ್ ಕರಾವಳಿ ತೀರವಿದೆ. ಹೆಚ್ಚಿನ ಸಂಖ್ಯೆಯ ನಮ್ಮ ಯುವಕರು ಸಮುದ್ರ ಮತ್ತು ಕರಾವಳಿಯ ಪರಿಸ್ಥಿತಿಗಳ ಬಗ್ಗೆ ತಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದರೆ, ನಾವು ಜಗತ್ತಿಗೆ ಲಕ್ಷಾಂತರ ಪರಿಣಿತ ನಾವಿಕರನ್ನು ತಯಾರಿಸಬಹುದು ಮತ್ತು ಒದಗಿಸಬಹುದು ಹಾಗೂ ನಮ್ಮ ದೇಶದ ಕರಾವಳಿ ಆರ್ಥಿಕತೆಯನ್ನು ಸಹ ಬಲಪಡಿಸಬಹುದು.
ಕೌಶಲ್ಯದ ಗುರುತಿಸುವಿಕೆಯಿಂದ, ಅಂತಹ ಮಾಹಿತಿಯನ್ನು ನೀಡುವ ಕೆಲಸ ಸುಲಭವಾಗುತ್ತದೆ. ಇದಲ್ಲದೆ, ಕಾರ್ಮಿಕರ ಕೌಶಲ್ಯವನ್ನು ಗುರುತಿಸುವ ಪೋರ್ಟಲ್ ಅನ್ನು ದೇಶದಲ್ಲಿ ನಾಲ್ಕೈದು ದಿನಗಳ ಹಿಂದೆ ಪ್ರಾರಂಭಿಸಲಾಗಿದೆ. ಕುಶಲ ಜನರು ಮತ್ತು ಕುಶಲ ಕೆಲಸಗಾರರನ್ನು ಗುರುತಿಸುವಲ್ಲಿ ಈ ಪೋರ್ಟಲ್ ಪ್ರಮುಖ ಪಾತ್ರ ವಹಿಸುತ್ತದೆ. ಇದರೊಂದಿಗೆ, ಉದ್ಯೋಗದಾತರು ಒಂದೇ ಕ್ಲಿಕ್ನಲ್ಲಿ ಗುರುತಿಸಿದ ಕೌಶಲ್ಯ ಕಾರ್ಮಿಕರನ್ನು ತಲುಪಲು ಸಾಧ್ಯವಾಗುತ್ತದೆ. ಇತ್ತೀಚೆಗೆ ನಗರಗಳಿಂದ ತಮ್ಮ ಹಳ್ಳಿಗಳಿಗೆ ತೆರಳಿದ ಕಾರ್ಮಿಕರಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ. ವಿಶೇಷ ಕೌಶಲ್ಯ ಸಮೂಹದೊಂದಿಗೆ ಹಳ್ಳಿಗಳನ್ನು ತಲುಪಿದ ಜನರು ಹಳ್ಳಿಗಳನ್ನು ಹೇಗೆ ಪುನಶ್ಚೇತನಗೊಳಿಸಲು ಪ್ರಾರಂಭಿಸಿದ್ದಾರೆ ಎಂಬುದನ್ನು ನೀವು ನೋಡಿರಬೇಕು. ಕೆಲವರು ಶಾಲೆಗೆ ಬಣ್ಣ ಹಚ್ಚುತ್ತಿದ್ದಾರೆ; ಕೆಲವರು ಹೊಸ ವಿನ್ಯಾಸಗಳೊಂದಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಸಣ್ಣದಿರಲಿ ಅಥವಾ ದೊಡ್ಡದಿರಲಿ ಪ್ರತಿಯೊಂದು ರೀತಿಯ ಕೌಶಲ್ಯವು ಸ್ವಾವಲಂಬಿ ಭಾರತದ ದೊಡ್ಡ ಶಕ್ತಿಯಾಗಲಿದೆ.
ವಿಶ್ವ ಯುವ ಕೌಶಲ್ಯ ದಿನದಂದು ದೇಶದ ಯುವಕರನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ಜಗತ್ತು ಸಾಂಕ್ರಾಮಿಕ ರೋಗದ ಹಿಡಿತದಲ್ಲಿ ಸಿಲುಕಿದೆ. ಆದ್ದರಿಂದ ಅದೇ ವಿಷಯವನ್ನು ಮತ್ತೆ ಮತ್ತೆ ಪುನರಾವರ್ತಿಸುವುದು ನನ್ನ ಕರ್ತವ್ಯ. ನಾನು ಮಾತ್ರವಲ್ಲ, ನೀವೂ ಅದನ್ನು ಪುನರಾವರ್ತಿಸುತ್ತಲೇ ಇರಬೇಕು. ಅದೇನು? ಮೊದಲಿಗೆ ನೀವು ಆರೋಗ್ಯವಾಗಿರುವುದನ್ನು ನಾನು ಬಯಸುತ್ತೇನೆ. ಎರಡನೆಯದಾಗಿ, ನೀವೆಲ್ಲರೂ 'ದೋ ಗಜ್ ದೂರಿ' ಅಥವಾ ಸಾಮಾಜಿಕ ಅಂತರವನ್ನು ಅನುಸರಿಸಬೇಕೆಂದು ನಾನು ಬಯಸುತ್ತೇನೆ. ಮುಖಗವಸು ಧರಿಸುವುದನ್ನು ಮರೆಯಬೇಡಿ. ಉಗುಳುವ ಅಭ್ಯಾಸವನ್ನು ಬಿಡುವಂತೆ ಜನರಿಗೆ ತಿಳಿ ಹೇಳಿ. ಇಂದು ನಾವು ಇಲ್ಲಿ ಕಲಿತಿರುವ ಮಂತ್ರವನ್ನು ಯಾವಾಗಲೂ ನೆನಪಿಡಿ. ನೀವು ಎಷ್ಟೇ ವಿದ್ಯಾವಂತರಾಗಿದ್ದರೂ, ನೀವು ಎಷ್ಟು ಪದವಿಗಳನ್ನು ಹೊಂದಿದ್ದರೂ, ಕೌಶಲ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಬೇಕು ಮತ್ತು ನವೀಕರಿಸುತ್ತಿರಬೇಕು. ಹೊಸ ಕೌಶಲ್ಯಗಳಿಗಾಗಿ ನಿರಂತರವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ಆಗ ನಿಮ್ಮ ಜೀವನವನ್ನು ನೀವು ಆನಂದಿಸಲು ಪ್ರಾರಂಭಿಸುತ್ತೀರಿ. ನೀವು ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುವುದನ್ನು ಆನಂದಿಸುವಿರಿ. ನಿಮ್ಮ ಕೈಗಳು, ಬೆರಳು, ನಿಮ್ಮ ಹೃದಯ ಮತ್ತು ಮನಸ್ಸಿನ ಶಕ್ತಿಯನ್ನು ನೀವು ಒಂದು ಕೌಶಲ್ಯದಿಂದ ಹೆಚ್ಚಿಸಿಕೊಳ್ಳುತ್ತೀರಿ ಮತ್ತು ಮುನ್ನಡೆಯುತ್ತೀರಿ. ಇದು ದೇಶದ ಪ್ರಗತಿಗೆ ಸಹಾಯ ಮಾಡುತ್ತದೆ ಎಂದು ನನಗೆ ಭರವಸೆಯಿದೆ.
ತುಂಬಾ ಧನ್ಯವಾದಗಳು!
ನಿಮ್ಮೆಲ್ಲರಿಗೂ ಶುಭಾಶಯಗಳು!
***
(Release ID: 1639024)
Visitor Counter : 345
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam