ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯಾ ಗ್ಲೋಬಲ್ ವೀಕ್-2020 ಉದ್ದೇಶಿಸಿ ಪ್ರಧಾನಿಯವರ ಭಾಷಣ

Posted On: 09 JUL 2020 3:10PM by PIB Bengaluru

ಇಂಡಿಯಾ ಗ್ಲೋಬಲ್ ವೀಕ್-2020 ಉದ್ದೇಶಿಸಿ ಪ್ರಧಾನಿಯವರ ಭಾಷಣ

 

ಗೌರವಾನ್ವಿತ ಗಣ್ಯ ಅತಿಥಿಗಳೇ,

ನಮಸ್ತೆ!

ಭಾರತದ ಶುಭಾಶಯಗಳು.

ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಇಂಡಿಯಾ ಇಂಕ್ ಗ್ರೂಪ್ ಅನ್ನು ನಾನು ಪ್ರಶಂಸಿಸುತ್ತೇನೆ. ಇಂದಿನ ಕಾರ್ಯಕ್ರಮವು ಇಂಡಿಯಾ ಇಂಕ್ ಹಿಂದಿನ ವರ್ಷಗಳಲ್ಲಿ ಮಾಡಿದ ಅತ್ಯುತ್ತಮ ಕೆಲಸಗಳ ಒಂದು ಭಾಗವಾಗಿದೆ. ನಿಮ್ಮ ಕಾರ್ಯಕ್ರಮಗಳು ಭಾರತದಲ್ಲಿನ ಅವಕಾಶಗಳನ್ನು ಜಾಗತಿಕ ವೇದಿಕೆಗೆ ತರಲು ಸಹಾಯ ಮಾಡಿವೆ. ನೀವು ಭಾರತ ಮತ್ತು ಬ್ರಿಟನ್ ನಡುವಿನ ಸಂಪರ್ಕವನ್ನು ಬಲಪಡಿಸಲು ಸಹಾಯ ಮಾಡಿದ್ದೀರಿ. ವರ್ಷದ ಕಾರ್ಯಕ್ರಮವು ಇತರ ಪಾಲುದಾರರಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ನನಗೆ ಸಂತೋಷವಾಗಿದೆ. ಮತ್ತೊಮ್ಮೆ ಅಭಿನಂದನೆಗಳು. ಮುಂದಿನ ವರ್ಷ, ನೀವು ಸೆಂಟರ್ ಕೋರ್ಟ್ನಲ್ಲಿ ವಿಂಬಲ್ಡನ್ ಅನ್ನು ಆನಂದಿಸುವ ಅವಕಾಶವನ್ನು ಪಡೆಯುತ್ತೀರಿ ಎಂದು ಆಶಿಸುತ್ತೇವೆ.

ಸ್ನೇಹಿತರೇ,

ಸಂದರ್ಭದಲ್ಲಿ, ಪುನಶ್ಚೇತನದ ಬಗ್ಗೆ ಮಾತನಾಡುವುದು ಸ್ವಾಭಾವಿಕ. ಹಾಗೆಯೇ ಜಾಗತಿಕ ಪುನಶ್ಚೇತನದೊಂದಿಗೆ ಭಾರತವನ್ನು ಜೋಡಿಸುವುದು ಸಹ ಅಷ್ಟೇ ಸ್ವಾಭಾವಿಕವಾದ್ದು. ಜಾಗತಿಕ ಪುನಶ್ಚೇತನದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ಇದೆ. ಇದು ಎರಡು ಅಂಶಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದನ್ನು ನಾನು ನೋಡುತ್ತೇನೆ. ಮೊದಲನೆಯದು- ಭಾರತದ ಪ್ರತಿಭೆ. ಪ್ರಪಂಚದಾದ್ಯಂತ, ಭಾರತದ ಪ್ರತಿಭಾಶಕ್ತಿಯ ಕೊಡುಗೆಯನ್ನು ನೀವು ನೋಡಿದ್ದೀರಿ. ಇದರಲ್ಲಿ ಭಾರತೀಯ ವೃತ್ತಿಪರರು, ವೈದ್ಯರು, ದಾದಿಯರು, ಬ್ಯಾಂಕರ್ಗಳು, ವಕೀಲರು, ವಿಜ್ಞಾನಿಗಳು, ಪ್ರಾಧ್ಯಾಪಕರು, ಕಷ್ಟಪಟ್ಟು ದುಡಿಯುವ ನಮ್ಮ ಕಾರ್ಮಿಕರು ಇದ್ದಾರೆ. ಭಾರತೀಯ ಟೆಕ್ ಉದ್ಯಮ ಮತ್ತು ಟೆಕ್ಕಿಗಳನ್ನು ಯಾರು ತಾನೇ ಮರೆಯಲು ಸಾಧ್ಯ. ಅವರು ದಶಕಗಳಿಂದ ದಾರಿ ತೋರಿಸುತ್ತಿದ್ದಾರೆ. ಭಾರತವು ಪ್ರತಿಭೆಗಳ ಶಕ್ತಿ ಕೇಂದ್ರ. ಅದು ಕೊಡುಗೆ ನೀಡಲು ಉತ್ಸುಕವಾಗಿದೆ, ಸದಾ ಕಲಿಕೆಗೆ ಸಿದ್ಧವಾಗಿದೆ. ಹೆಚ್ಚು ಪ್ರಯೋಜನಕಾರಿಯಾದ ದ್ವಿಮುಖ ಹೊಂದಾಣಿಕೆ ಇದೆ.

ಸ್ನೇಹಿತರೇ,

ಎರಡನೆಯ ಅಂಶವೆಂದರೆ ಸುಧಾರಣೆ ಮತ್ತು ನವ ಯೌವ್ವನ ಪಡೆಯುವ ಭಾರತದ ಸಾಮರ್ಥ್ಯ. ಭಾರತೀಯರು ಸ್ವಾಭಾವಿಕವಾಗಿಯೇ ಸುಧಾರಕರು. ಭಾರತವು ಪ್ರತಿ ಸವಾಲನ್ನು ಅದು ಸಾಮಾಜಿಕವಾಗಿರಲಿ ಅಥವಾ ಆರ್ಥಿಕವಾಗಿರಲಿ ಎಲ್ಲವನ್ನೂ ಜಯಿಸಿರುವುದನ್ನು ಇತಿಹಾಸವು ತೋರಿಸುತ್ತದೆ. ಸುಧಾರಣೆ ಮತ್ತು ನವ ಯೌವ್ವನ ಪಡೆಯುವ ಮನೋಭಾವದಿಂದ ಭಾರತ ಹಾಗೆ ಮಾಡಿದೆ. ಅದೇ ಉತ್ಸಾಹ ಈಗಲೂ ಮುಂದುವರೆದಿದೆ.

ಸ್ನೇಹಿತರೇ,

ಒಂದೆಡೆ ಭಾರತ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿದೆ. ಜನರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುವುದರೊಂದಿಗೆ, ನಾವು ಆರ್ಥಿಕತೆಯ ಆರೋಗ್ಯದ ಮೇಲೂ ಸಮಾನವಾಗಿ ಗಮನ ಕೇಂದ್ರೀಕರಿಸಿದ್ದೇವೆ. ಭಾರತವು ಪುನಶ್ಚೇತನದ ಬಗ್ಗೆ ಮಾತನಾಡುವಾಗ ಅದು: ಪರಿಸರ ಮತ್ತು ಆರ್ಥಿಕತೆ ಎರಡರಲ್ಲಿಯೂ ಎಚ್ಚರಿಕೆಯ ಪುನಶ್ಚೇತನ, ಸಹಾನುಭೂತಿಯ  ಪುನಶ್ಚೇತನ, ಸುಸ್ಥಿರ ಪುನಶ್ಚೇತನವಾಗಿರುತ್ತದೆ. ಭಾರತದ ನಾವು ಪ್ರಕೃತಿ ಮಾತೆಯನ್ನು ಪೂಜಿಸುವ ಸಂಸ್ಕೃತಿಗೆ ಸೇರಿದವರು. ಭೂಮಿಯು ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು ಎಂದು ಭಾರತದಲ್ಲಿ ನಂಬಿಕೆ ಇದೆ.

ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿ, ಎಲ್ಲರನ್ನೂ ಒಳಗೊಂಡ ಹಣಕಾಸು, ದಾಖಲೆಯ ವಸತಿ ಮತ್ತು ಮೂಲಸೌಕರ್ಯ ನಿರ್ಮಾಣ, ಸರಳ ವ್ಯವಹಾರ, ಜಿಎಸ್ಟಿ ಸೇರಿದಂತೆ ದಿಟ್ಟ ತೆರಿಗೆ ಸುಧಾರಣೆಗಳು, ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಉಪಕ್ರಮ - ಆಯುಷ್ಮಾನ್ ಭಾರತ್ ಮುಂತಾದ ಕ್ಷೇತ್ರಗಳಲ್ಲಿ ಭಾರತವು ಹೆಚ್ಚಿನ ಲಾಭ ಗಳಿಸಿದೆ. ಲಾಭಗಳು ಮುಂದಿನ ಹಂತದ ಅಭಿವೃದ್ಧಿಗೆ ಅಡಿಪಾಯವನ್ನು ಹಾಕಿವೆ.

ಸ್ನೇಹಿತರೇ,

ಅಸಾಧ್ಯವೆಂದು ನಂಬಿದ್ದನ್ನು ಸಾಧಿಸುವ ಮನೋಭಾವ ಭಾರತೀಯರಿಗೆ ಇದೆ. ಆರ್ಥಿಕ ಚೇತರಿಕೆಯ ವಿಷಯಕ್ಕೆ ಬಂದರೆ ಭಾರತದಲ್ಲಿ ನಾವು ಈಗಾಗಲೇ ಹಸಿರು ಚಿಗುರುಗಳನ್ನು ನೋಡುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸಾಂಕ್ರಾಮಿಕ ರೋಗದ ಸಮಯದಲ್ಲಿ, ನಾವು ನಮ್ಮ ನಾಗರಿಕರಿಗೆ ಪರಿಹಾರವನ್ನು ನೀಡಿದ್ದೇವೆ ಮತ್ತು ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ನಾವು ಆರ್ಥಿಕತೆಯನ್ನು ಹೆಚ್ಚು ಉತ್ಪಾದಕ, ಹೂಡಿಕೆ ಸ್ನೇಹಿ ಮತ್ತು ಸ್ಪರ್ಧಾತ್ಮಕವಾಗಿಸುತ್ತಿದ್ದೇವೆ.

ನಮ್ಮ ಪರಿಹಾರ ಪ್ಯಾಕೇಜ್ ಸ್ಮಾರ್ಟ್ ಆಗಿದ್ದು, ಅತ್ಯಂತ ಬಡವರಿಗೆ ಹೆಚ್ಚಿನ ಸಹಾಯವನ್ನು ನೀಡುವ ಗುರಿ ಹೊಂದಿದೆ. ತಂತ್ರಜ್ಞಾನಕ್ಕೆ ಧನ್ಯವಾದಗಳು, ಪ್ರತಿ ಪೈಸೆಯೂ ನೇರವಾಗಿ ಫಲಾನುಭವಿಗಳನ್ನು ತಲುಪಿದೆ. ಪರಿಹಾರವು ಉಚಿತ ಅಡುಗೆ ಅನಿಲ, ಬ್ಯಾಂಕ್ ಖಾತೆಗಳಿಗೆ ನಗದು, ಲಕ್ಷಾಂತರ ಜನರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಇತರ ಅನೇಕ ವಸ್ತುಗಳನ್ನು ಒಳಗೊಂಡಿದೆ. ನಾವು ಅನ್ಲಾಕ್ ಮಾಡಿದ ತಕ್ಷಣ, ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ವಿಶ್ವದ ಅತಿದೊಡ್ಡ ಸಾರ್ವಜನಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಇದು ಗ್ರಾಮೀಣ ಆರ್ಥಿಕತೆಯನ್ನು ಪುನಃ ಚೈತನ್ಯಗೊಳಿಸುವುದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಬಾಳಿಕೆ ಬರುವ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ.

ಸ್ನೇಹಿತರೇ,

ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ. ಎಲ್ಲಾ ಜಾಗತಿಕ ಕಂಪೆನಿಗಳು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ರತ್ನಗಂಬಳಿ ಹಾಕುತ್ತಿದ್ದೇವೆ. ಭಾರತವು ಇಂದು ನೀಡುತ್ತಿರುವ ಅವಕಾಶಗಳನ್ನು ಕೆಲವೇ ದೇಶಗಳು ಮಾತ್ರ ನೀಡುತ್ತಿವೆ. ಭಾರತದ ವಿವಿಧ ನೂತನ ಕ್ಷೇತ್ರಗಳಲ್ಲಿ ಅನೇಕ ಸಾಧ್ಯತೆಗಳು ಮತ್ತು ಅವಕಾಶಗಳಿವೆ. ಕೃಷಿಯಲ್ಲಿನ ನಮ್ಮ ಸುಧಾರಣೆಗಳು ಶೇಖರಣೆ ಮತ್ತು ಲಾಜಿಸ್ಟಿಕ್ಸ್ನಲ್ಲಿ ಹೂಡಿಕೆ ಮಾಡಲು ಆಕರ್ಷಕ ಹೂಡಿಕೆಯ ಅವಕಾಶವನ್ನು ಒದಗಿಸುತ್ತವೆ. ನಮ್ಮ ರೈತರ ಕಠಿಣ ಪರಿಶ್ರಮಕ್ಕೆ ಹೂಡಿಕೆದಾರರು ನೇರವಾಗಿ ಹೂಡಿಕೆ ಮಾಡಲು ನಾವು ಬಾಗಿಲು ತೆರೆಯುತ್ತಿದ್ದೇವೆ.

ಸ್ನೇಹಿತರೇ,

ನಾವು ಎಂಎಸ್ಎಂಇ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತಂದಿದ್ದೇವೆ. ಪ್ರವರ್ಧಮಾನಕ್ಕೆ ಬರುತ್ತಿರುವ ಎಂಎಸ್ಎಂಇ ವಲಯವು ದೊಡ್ಡ ಉದ್ಯಮಕ್ಕೂ ಪೂರಕವಾಗಿರುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶಗಳಿವೆ. ಎಫ್ಡಿಐ ಮಾನದಂಡಗಳ ಸಡಿಲಿಕೆಯೊಂದಿಗೆ, ವಿಶ್ವದ ಅತಿದೊಡ್ಡ ಸೇನಾ ಶಕ್ತಿಯೊಂದು ತನಗಾಗಿ ಉತ್ಪನ್ನಗಳನ್ನು ತಯಾರಿಸಲು ನಿಮ್ಮನ್ನು ಆಹ್ವಾನಿಸುತ್ತಿದೆ. ಈಗ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಇದು ಜನರ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ವಾಣಿಜ್ಯ ಬಳಕೆಗೆ ಹೆಚ್ಚಿನ ಪ್ರವೇಶವನ್ನು ನೀಡುತ್ತದೆ. ಭಾರತದ ಟೆಕ್ ಮತ್ತು ಸ್ಟಾರ್ಟ್ ಅಪ್ ವಲಯವು ಹುರುಪಿನಿಂದ ಕೂಡಿದೆ. ಡಿಜಿಟಲ್ ಸಬಲೀಕೃತಗೊಂಡಿರುವ ಲಕ್ಷಾಂತರ ಜನರ ಮಾರುಕಟ್ಟೆ ಇದೆ. ನೀವು ಅವರಿಗೆ ಯಾವ ಯಾವ ರೀತಿಯ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ಊಹಿಸಿಕೊಳ್ಳಿ.

ಸ್ನೇಹಿತರೇ,

ಭಾರತದ ಔಷಧ ಉದ್ಯಮವು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಂದು ಆಸ್ತಿ ಎಂದು ಸಾಂಕ್ರಾಮಿಕ ರೋಗವು ಮತ್ತೊಮ್ಮೆ ಸಾಬೀತು ಮಾಡಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿ ತಯಾರಿಸಿದ ಲಸಿಕೆಗಳು ವಿಶ್ವದಲ್ಲಿರುವ ಮಕ್ಕಳ ಮೂರನೇ ಎರಡು ಭಾಗದಷ್ಟು ಲಸಿಕೆಯ ಅಗತ್ಯಗಳಿಗೆ ಕಾರಣವಾಗಿವೆ. ಇಂದು ಸಹ, ನಮ್ಮ ಕಂಪನಿಗಳು ಕೋವಿಡ್-19 ಲಸಿಕೆಯ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಅಂತರರಾಷ್ಟ್ರೀಯ ಪ್ರಯತ್ನಗಳಲ್ಲಿ ಸಕ್ರಿಯವಾಗಿವೆ. ಲಸಿಕೆ ಪತ್ತೆಯಾದ ನಂತರ ಅದನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

130 ಕೋಟಿ ಭಾರತೀಯರು ಆತ್ಮನಿರ್ಭರ ಭಾರತ್ಗೆ ಕರೆ ನೀಡಿದ್ದಾರೆ. ಸ್ವಾವಲಂಬಿ ಭಾರತ. ಆತ್ಮ ನಿರ್ಭರ್ ಭಾರತವು ದೇಶೀಯ ಉತ್ಪಾದನೆ ಮತ್ತು ಬಳಕೆಯನ್ನು ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ವಿಲೀನಗೊಳಿಸುತ್ತದೆ. ಆತ್ಮ ನಿರ್ಭರ ಭಾರತ ಎಂದರೆ ಸ್ವಯಂ ನಿರ್ಬಂಧಿತ ಅಥವಾ ಜಗತ್ತಿಗೆ ಬಾಗಿಲು ಮುಚ್ಚುವುದಲ್ಲ, ಬದಲಿಗೆ ಸ್ವಾವಲಂಬಿ ಮತ್ತು ಸ್ವಯಂ-ಉತ್ಪಾದಕನಾಗುವುದು. ದಕ್ಷತೆ, ಇಕ್ವಿಟಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ನೀತಿಗಳನ್ನು ನಾವು ಅನುಸರಿಸುತ್ತೇವೆ.

ಸ್ನೇಹಿತರು

ವೇದಿಕೆಯು ಪಂಡಿತ್ ರವಿಶಂಕರ್ ಅವರ 100 ನೇ ಜನ್ಮ ದಿನಾಚರಣೆಯನ್ನು ಸಹ ಆಚರಿಸುತ್ತಿದೆ ಎಂದು ನಾನು ಸಂತೋಷಪಡುತ್ತೇನೆ. ಅವರು ಭಾರತೀಯ ಶಾಸ್ತ್ರೀಯ ಸಂಗೀತದ ಸೊಬಗನ್ನು ಜಗತ್ತಿಗೆ ಕೊಂಡೊಯ್ದವರು. ನಮಸ್ತೆ ಹೇಗೆ ಶುಭಾಶಯದ ರೂಪವಾಗಿ ಜಾಗತಿಕ ಮಟ್ಟಕ್ಕೆ ಹೋಗಿದೆ ಎಂಬುದನ್ನು ನೀವು ನೋಡಿದ್ದೀರಿ. ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಯೋಗ, ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಿಗಳ ಆಕರ್ಷಣೆಯನ್ನು ಹೆಚ್ಚಿಸಿದೆ. ಭಾರತದ ಪ್ರಾಚೀನ ಸಂಸ್ಕೃತಿ, ಭಾರತದ ಸಾರ್ವತ್ರಿಕ, ಶಾಂತಿಯುತ ನೀತಿಗಳು ನಮ್ಮ ಬಲ.

ಸ್ನೇಹಿತರೇ,

ಜಾಗತಿಕ ಒಳಿತು ಮತ್ತು ಸಮೃದ್ಧಿಗಾಗಿ ಭಾರತವು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಇದು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಭಾರತ. ಇದು ಹೊಸ ಆರ್ಥಿಕ ಅವಕಾಶಗಳನ್ನು ನೀಡುವ ಭಾರತ. ಅಭಿವೃದ್ಧಿಗೆ ಮಾನವ ಕೇಂದ್ರಿತ ಮತ್ತು ಅಂತರ್ಗತ ವಿಧಾನವನ್ನು ಅನುಸರಿಸುತ್ತಿರುವ ಭಾರತ.

ಭಾರತ ನಿಮ್ಮೆಲ್ಲರಿಗೂ ಕಾಯುತ್ತಿದೆ.

ನಮಸ್ತೆ,

ತುಂಬು ಧನ್ಯವಾದಗಳು.

***(Release ID: 1637643) Visitor Counter : 246