ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಲೆಹ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನುದ್ದೇಶಿಸಿ ಪ್ರಧಾನಿಯವರು ಮಾಡಿದ ಭಾಷಣ

Posted On: 03 JUL 2020 5:50PM by PIB Bengaluru

ಭಾರತದ ಲೆಹ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನುದ್ದೇಶಿಸಿ ಪ್ರಧಾನಿಯವರು ಮಾಡಿದ ಭಾಷಣ

 

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಸ್ನೇಹಿತರೆ, ನಿಮ್ಮ ಶೌರ್ಯ, ನಿಮ್ಮ ಸಾಹಸ ಮತ್ತು ಭಾರತ ಮಾತೆ ಗೌರವವನ್ನು ರಕ್ಷಿಸಬೇಕೆಂಬ ನಿಮ್ಮ ಸಮರ್ಪಣೆ ಅನುಪಮವಾದ್ದು. ನಿಮ್ಮ ಉತ್ಸಾಹ ವಿಶ್ವದಲ್ಲೇ ಅದ್ವೀತೀಯ. ತಾಯ್ನಾಡನ್ನು ರಕ್ಷಿಸಲು ಮತ್ತು ಸೇವೆ ಮಾಡಲು ನೀವು ಗುರಾಣಿಯಾಗಿ ಕಠಿಣ ಪರಿಸ್ಥಿತಿ ಮತ್ತು ಎತ್ತರ ಪ್ರದೇಶದಲ್ಲಿ ಮಾಡುವ ಕೆಲಸ, ಅದನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ!.

ನೀವು ಕರ್ತವ್ಯಕ್ಕೆ ನಿಯೋಜನೆಯಾಗಿರುವ ಪ್ರದೇಶಕ್ಕಿಂತ ನಿಮ್ಮ ಶೌರ್ಯ ಎತ್ತರವಾಗಿದೆ. ನಿಮ್ಮ ಸಂಕಲ್ಪ ನಿತ್ಯ ನೀವು ಓಡಾಡುವ ಕಣಿವೆಗಿಂತ ದೃಢವಾಗಿದೆ. ನಿಮ್ಮ ತೋಳುಗಳು ನಿಮ್ಮ ಸುತ್ತಲಿನ ಬಂಡೆಗಳಿಗಿಂತಲೂ ಗಟ್ಟಿಯಾಗಿವೆ. ನಿಮ್ಮ ಇಚ್ಛಾಶಕ್ತಿ ನಿಮ್ಮ ಸುತ್ತಲಿನ ಪರ್ವತಗಳಷ್ಟೇ ಬಲಿಷ್ಠವಾಗಿದೆ. ನಾನು ನಿಮ್ಮೊಂದಿಗೆ ಇಂದು ಇದ್ದು, ಅದರ ಅನುಭವ ಪಡೆಯುತ್ತಿದ್ದೇನೆ. ನಾನು ಅದನ್ನು ನನ್ನ ಕಣ್ಣಾರೆ ಕಾಣುತ್ತಿದ್ದೇನೆ.!

ಸ್ನೇಹಿತರೆ,

ದೇಶದ ಸುರಕ್ಷತೆ ಮತ್ತು ಭದ್ರತೆಯ ಜವಾಬ್ದಾರಿ ನಿಮ್ಮ ಕೈಯಲ್ಲಿದೆ ಮತ್ತು ನಿಮ್ಮ ಬಲವಾದ ಸಂಕಲ್ಪದಲ್ಲಿದೆ. ಹೀಗಾಗಿಯೇ ನಮ್ಮಲ್ಲಿ ಅಚಲ ವಿಶ್ವಾಸವಿದೆ. ನನಗೊಬ್ಬನಿಗೇ ಅಲ್ಲ, ಇಡೀ ದೇಶಕ್ಕೇ ಅಚಲವಾದ ವಿಶ್ವಾಸವಿದೆ ಮತ್ತು ದೇಶಕ್ಕೆ ಧೈರ್ಯ ತುಂಬಿದೆ.

ನೀವು ಗಡಿಯಲ್ಲಿರುವುದು ಪ್ರತಿಯೊಬ್ಬ ದೇಶವಾಸಿಗೂ ಹಗಲಿರುಳು ದೇಶಕ್ಕಾಗಿ ದುಡಿಯಲು ಪ್ರೋತ್ಸಾಹಿಸುತ್ತದೆ. ನಿಮ್ಮಿಂದಾಗಿ, ನಿಮ್ಮ ಬಲಿದಾನ ಮತ್ತು ಪ್ರಯತ್ನದ ಫಲವಾಗಿ ಸ್ವಾವಲಂಬಿ ಭಾರತದ ಸಂಕಲ್ಪ ಮತ್ತಷ್ಟು ಬಲವಾಗಿದೆ. ನೀವು ಮತ್ತು ನಿಮ್ಮ ಸ್ನೇಹಿತರು ಈಗ ನಿಮ್ಮ ಶೌರ್ಯದ ಮೂಲಕ ಇಡೀ ವಿಶ್ವಕ್ಕೇ ಭಾರತದ ತಾಕತ್ತು ಏನೆಂಬ ಸಂದೇಶ ನೀಡಿದ್ದೀರಿ.

ಈಗ ನಾನು ನನ್ನ ಮುಂದೆ ಕೆಲವು ಮಹಿಳಾ ಯೋಧರನ್ನೂ ಕಾಣುತ್ತಿದ್ದೇನೆ, ಗಡಿಯಲ್ಲಿನ ನೋಟವೇ ಸ್ಫೂರ್ತಿದಾಯಕ.

ಸ್ನೇಹಿತರೆ, ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರು ಹೀಗೆ ಬರೆಯುತ್ತಾರೆ.

जिनके सिंहनाद से सहमी। धरती रही अभी तक डोल।।

कलम, आज उनकी जय बोल। कलम आज उनकी जय बोल।।

ಹೀಗಾಗಿ ಇಂದು, ನಿಮಗೆ ನಮಿಸುತ್ತೇನೆ ಮತ್ತು ನನ್ನ ಪದಗಳಿಂದ ಶ್ಲಾಘಿಸುತ್ತೇನೆ. ಗ್ಯಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ವೀರಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ದೇಶದ ಎಲ್ಲ ಮೂಲೆಗಳ ಹೀರೋಗಳು ಅಂದರೆ ಪೂರ್ವದಿಂದ, ಪಶ್ಚಿಮದಿಂದ, ಉತ್ತರದಿಂದ ಮತ್ತು ದಕ್ಷಿಣದಿಂದ ಬಂದವರು ತಮ್ಮ ಶೌರ್ಯ ಮೆರೆದಿದ್ದಾರೆ. ಭೂಮಿ ಅವರನ್ನು ಇನ್ನೂ ಶ್ಲಾಘಿಸುತ್ತಿದೆ. ಇಂದು ಪ್ರತಿಯೊಬ್ಬ ಭಾರತೀಯರೂ ನಿಮ್ಮ ಮುಂದೆ ನತಮಸ್ತಕರಾಗಿದ್ದಾರೆ ಮತ್ತು ದೇಶದ ವೀರಯೋಧರಿಗೆ ನಮಿಸುತ್ತಿದ್ದಾರೆ. ಇಂದು ಪ್ರತಿಯೊಬ್ಬ ಭಾರತೀಯರೂ ನಿಮ್ಮ ಶೌರ್ಯ ಮತ್ತು ಸಾಹಸದ ಬಗ್ಗೆ ಹೆಮ್ಮೆ ಪಡುತ್ತಾರೆ.

ಸ್ನೇಹಿತರೆ,

ಭೂಮಿ ಸಿಂಧೂ ನದಿಯ ಆಶೀರ್ವಾದದಿಂದ ಪವಿತ್ರವಾಗಿದೆ. ಭೂಮಿ ವೀರ ಮಕ್ಕಳ ಶೌರ್ಯ ಮತ್ತು ಸಾಹಸದಿಂದ ಸಂಯೋಜಿತವಾಗಿದೆ. ಲೆಹ್ ಲಡಾಖ್ ನಿಂದ ಕಾರ್ಗಿಲ್ ಮತ್ತು ಸಿಯಾಚಿನ್ ವರೆಗೆ, ರೆಜಾಂಗ್ ಲಾ ಹಿಮ ಪರ್ವತಗಳಿಂದ ಹಿಡಿದು ಗ್ಯಾಲ್ವಾನ್ ಕಣಿವೆಯ ಕೊರೆಯುವ ನೀರಿನವರೆಗೆ, ಪ್ರತಿಯೊಂದು ಶಿಖರವೂ, ಪ್ರತಿ ಪರ್ವತವೂ, ಪ್ರತಿಯೊಂದು ಮೂಲೆಯೂ, ಪ್ರತಿ ಬಂಡೆಯೂ ಭಾರತೀಯ ಯೋಧರ ಶೌರ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಈಗ 14 ಯೋಧರ ಶೌರ್ಯದ ಗಾಥೆಯನ್ನು ತಿಳಿದಿದ್ದಾರೆ. ವಿಶ್ವ ನಿಮ್ಮ ಅಸಾಧಾರಣವಾದ ಧೈರ್ಯವನ್ನು ಕಂಡಿದೆ. ನಿಮ್ಮ ಶೌರ್ಯಗಾಧೆ ಮನೆ ಮನೆಯಲ್ಲಿ ಅಣುರಣಿಸುತ್ತಿದೆ ಮತ್ತು ಭಾರತ ಮಾತೆಯ ಶತ್ರುಗಳು ಕೂಡ ನಿಮ್ಮ ಕಿಚ್ಚು ಮತ್ತು ಕೆಚ್ಚು ಕಂಡಿದ್ದಾರೆ.

ಸ್ನೇಹಿತರೆ,

ಇಡೀ ಲಡಾಖ್ ಭಾರತದ ಮುಕುಟವಿದ್ದಂತೆ, ಇದು 130 ಕೋಟಿ ಭಾರತೀಯರಿಗೆ ಗೌರವದ ಸಂಕೇತ. ಭೂಮಿ ಸದಾ ಭಾರತಕ್ಕೆ ತ್ಯಾಗ ಮಾಡಲು ಸಿದ್ಧರಾಗಿರುವ ದೇಶಪ್ರೇಮಿಗಳ ನೆಲವಾಗಿದೆ, ಭೂಮಿ ಶ್ರೇಷ್ಠ ದೇಶಪ್ರೇಮಿ ಕುಶೋಕ್ ಬಕುಲ್ ರಿಂಪೋಂಚೆ ಅವರಂಥವರಿಗೆ ಜನ್ಮ ನೀಡಿದೆ. ರಿಂಪೋಂಚೆ ಅವರು ಸ್ಥಳೀಯ ಜನರನ್ನು ಶತ್ರುಗಳ ಅಸಹ್ಯ ವರ್ತನೆ ವಿರುದ್ಧವಾಗಿ ಅಣಿಗೊಳಿಸಿದ್ದರು. ಇಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸುವ ಪ್ರತಿಯೊಂದು ಪಿತೂರಿಯನ್ನೂ ರಿಂಪೋಂಚೆ ನೇತೃತ್ವದ ಲಡಾಖ್ ದೇಶಭಕ್ತ ಜನರು ವಿಫಲಗೊಳಿಸಿದ್ದಾರೆ. ಸ್ಫೂರ್ತಿದಾಯಕ ಪ್ರಯತ್ನದ ಫಲವಾಗಿ, ದೇಶ ಮತ್ತು ಭಾರತೀಯ ಸೇನೆಗೆ ಲಡಾಖ್ ಸ್ಕೌಟ್ ಹೆಸರಿನ ಕಾಲಾಳು ಪಡೆಯ ತುಕಡಿ ರೂಪಿಸಲು ಪ್ರೇರಣೆ ದೊರೆಯಿತು. ಇಂದು ಲಡಾಖ್ ಜನರು ದೇಶ ಎಲ್ಲ ಹಂತದಲ್ಲಿ, ಅದು ಸೇನೆ ಇರಲಿ ಅಥವಾ ಸಾಮಾನ್ಯ ನಾಗರಿಕರಾಗಿ ಸೇವೆ ಸಲ್ಲಿಸುವುದಿರಲಿ ದೇಶ ಬಲಗೊಳ್ಳಲು ಕೊಡುಗೆ ನೀಡುತ್ತಿದ್ದಾರೆ.

ಸ್ನೇಹಿತರೆ ಒಂದು ಮಾತಿದೆ...

खड्गेन आक्रम्य वंदिता आक्रमण: पुणिया, वीर भोग्य वसुंधरा

ಧೈರ್ಯಶಾಲಿಗಳು ತಾಯ್ನಾಡನ್ನು ತಮ್ಮ ಆತ್ಮಶಕ್ತಿಯ ಶಸ್ತ್ರದಿಂದ ಕಾಪಾಡುತ್ತಾರೆ. ನೆಲೆ ಶೌರ್ಯವಂತರ ನೆಲ. ರಕ್ಷಣೆ, ಭದ್ರತೆಯ ನಮ್ಮ ಬೆಂಬಲ, ಶಕ್ತಿ ಮತ್ತು ಸಂಕಲ್ಪ ಹಿಮಾಲಯದಷ್ಟೇ ಎತ್ತರ. ನಾನು ದಕ್ಷತೆಯನ್ನು ನಿಮ್ಮ ಕಣ್ಣುಗಳಲ್ಲಿ ಈಗ ಕಾಣುತ್ತಿದ್ದೇನೆ. ನಿಮ್ಮ ಮುಖದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾವಿರಾರು ವರ್ಷಗಳಿಂದ ಅನೇಕ ಆಕ್ರಮಣಕಾರರ ದಾಳಿ ಮತ್ತು ದೌರ್ಜನ್ಯವನ್ನು ಹಿಮ್ಮೆಟ್ಟಿಸಿದ ಅದೇ ಭೂಮಿಯ ವೀರರು ನೀವು. ಇದು ನಮ್ಮ ಗುರುತು. ನಾವು ಕೊಳಲು ನುಡಿಸುವ ಶ್ರೀಕೃಷ್ಣನ ಪೂಜೆ ಮಾಡುತ್ತೇವೆ. ನಾವು ಸುದರ್ಶನ ಚಕ್ರ ಹಿಡಿದ ಕೃಷ್ಣನನ್ನೂ ಆದರ್ಶವಾಗಿ ಪರಿಗಣಿಸುತ್ತೇವೆ. ಸ್ಫೂರ್ತಿಯೊಂದಿಗೆ ಭಾರತ ಪ್ರತಿ ದಾಳಿಯ ಬಳಿಕ ಬಲಿಷ್ಠವಾಗಿ ಹೊರಹೊಮ್ಮಿದೆ.

ಸ್ನೇಹಿತರೆ,

ರಾಷ್ಟ್ರ, ವಿಶ್ವ ಮತ್ತು ಮಾನವ ಕುಲದ ಪ್ರಗತಿಗೆ ಸ್ನೇಹ ಮತ್ತು ಶಾಂತಿ ಮಹತ್ವದ್ದು ಎಂಬುದರಲ್ಲಿ ಎಲ್ಲರೂ ವಿಶ್ವಾಸವಿಟ್ಟಿದ್ದಾರೆ. ದುರ್ಬಲರು ಎಂದಿಗೂ ಶಾಂತಿ ತರಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ದುರ್ಬಲರು ಶಾಂತಿ ಮೂಡಿಸಲು ಸಾಧ್ಯವಿಲ್ಲ. ಶೌರ್ಯವೇ ಶಾಂತಿಯ ಮೂಲವಾಗಿದೆ. ಭಾರತ ತನ್ನ ಶಕ್ತಿಯನ್ನು ಎಲ್ಲ ಮಟ್ಟದಲ್ಲಿ ಅಂದರೆ ಜಲ, ನೆಲ, ಆಕಾಶ, ಮತ್ತು ಬಾಹ್ಯಾಕಾಶದಲ್ಲಿ ವರ್ಧಿಸಿಕೊಳ್ಳುತ್ತಿದ್ದರೆ, ಇದರ ಹಿಂದಿನ ಉದ್ದೇಶ ಮಾನವ ಕಲ್ಯಾಣವಾಗಿದೆ. ಇಂದು ಭಾರತ ಅತ್ಯಾಧುನಿಕ ಶಸ್ತ್ರಗಳನ್ನು ಉತ್ಪಾದಿಸುತ್ತಿದೆ ಮತ್ತು ಭಾರತೀಯ ಸೇನೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನೂ ತರುತ್ತಿದೆ; ಇದರ ಹಿಂದಿರುವ ಸ್ಫೂರ್ತಿ ಇದೇ ಆಗಿದೆ. ಭಾರತ ತ್ವರಿತ ಗತಿಯಲ್ಲಿ ಆಧುನಿಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದರೆ, ಅದರ ಹಿಂದಿರುವ ಉದ್ದೇಶವೂ ಅದೇ ಆಗಿದೆ.

ಅದು ವಿಶ್ವ ಯುದ್ಧವೇ ಆಗಿರಲಿ ಅಥವಾ ಶಾಂತಿ ಪಾಲನೆಯ ಪ್ರಯತ್ನವೇ ಆಗಿರಲಿ ವಿಶ್ವ ಶಾಂತಿಗೆ ಅಗತ್ಯವಿದ್ದಾಗ ನಮ್ಮ ಹೀರೋಗಳು ಮಾಡಿದ ಶೌರ್ಯವನ್ನು ಪ್ರಯತ್ನವನ್ನು ವಿಶ್ವ ಕಂಡಿದೆ. ನಾವು ಸದಾ ಮಾನವ ಕುಲದ ಸಂರಕ್ಷಣೆಗೆ ಶ್ರಮಿಸಿದ್ದೇವೆ. ಗುರಿ, ಸಂಪ್ರದಾಯ ಮತ್ತು ಭಾರತದ ಭವ್ಯ ಸಂಸ್ಕೃತಿಯನ್ನು ಸ್ಥಾಪಿಸಿದ ನಾಯಕರು ನೀವೆಲ್ಲರೂ ಆಗಿದ್ದೀರಿ.

ಸ್ನೇಹಿತರೆ, ಶ್ರೇಷ್ಠ ಸಂತ ತಿರುವಳ್ಳವರ್ ನೂರಾರು ವರ್ಷಗಳ ಹಿಂದೆಯೇ ಹೀಗೆ ಹೇಳಿದ್ದಾರೆ. -

मरमानम मांड वडिच्चेलव् तेट्रम
येना नान्गे येमम पडईक्कु

ಶೌರ್ಯ, ಸಮ್ಮಾನ್, ಮರ್ಯಾದಾಪೂರ್ಣ ವ್ಯವಹಾರದ ಪರಂಪರೆ ಮತ್ತು ವಿಶ್ವಸನೀಯತೆ ಯಾವುದೇ ದೇಶದ ಸೇನೆಯ ಪ್ರತೀಕವಾಗಿರುತ್ತದೆ. ಭಾರತದ ಸೇನೆ ಸದಾ ಮಾರ್ಗದಲ್ಲೇ ನಡೆದಿದೆ.

ಸ್ನೇಹಿತರೆ, ವಿಸ್ತಾರವಾದದ ಯುಗ ಈಗ ಮುಗಿದ್ದು, ವಿಕಾಸವಾದ ಯುಗ ಇದಾಗಿದೆ. ಇದು ಅಭಿವೃದ್ಧಿಗೆ ಅವಕಾಶವಾಗಿದೆ. ವೇಗವಾಗಿ ಬದಲಾಗುತ್ತಿರುವ ಸಮಯದಲ್ಲಿ ವಿಕಾಸವಾದ ಪ್ರಸ್ತುತ ಮತ್ತು ಭವಿಷ್ಯಕ್ಕೆ ಆಧಾರವೇ ಹೊರತು, ವಿಸ್ತಾರವಾದವಲ್ಲ. ಹಿಂದಿನ ಶತಮಾನಗಳಲ್ಲಿ ವಿಸ್ತರಣಾವಾದ ಮಾನವ ಕುಲಕ್ಕೆ ದೊಡ್ಡ ಹಾನಿ ಉಂಟು ಮಾಡಿದೆ ಮತ್ತು ಮಾನವ ಕುಲವನ್ನು ನಾಶ ಮಾಡುವ ಪ್ರಯತ್ನ ಮಾಡಿದೆ. ವಿಸ್ತರಣಾವಾದದ ಗೀಳು ವಿಶ್ವ ಶಾಂತಿಗೆ ಸದಾ ಭೀತಿ ತಂದೊಡ್ಡಿದೆ.

ಸ್ನೇಹಿತರೆ, ಅಂಥ ಶಕ್ತಿಗಳು ನಾಶವಾಗಿಹೋಗಿವೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂಬುದನ್ನು ನಾವು ಮರೆಯಬಾರದು. ವಿಶ್ವಕ್ಕೆ ಅನುಭವ ಸದಾ ಆಗಿದೆ ಅನುಭವದ ಆಧಾರದಲ್ಲಿಯೇ ಜಗತ್ತು ವಿಸ್ತರಣಾವಾದದ ವಿರುದ್ಧ ತನ್ನ ಮನಸ್ಸು ನೀತಿ ರೂಪಿಸಿಕೊಂಡಿದ್ದು. ಇಂದು ಜಗತ್ತು ಅಭಿವೃದ್ಧಿಗೆ ಸಮರ್ಪಿತವಾಗಿದೆ ಮತ್ತು ಅದು ಅಭಿವೃದ್ಧಿಯ ಸ್ಪರ್ಧೆಯನ್ನು ಮುಕ್ತವಾಗಿ ಸ್ವಾಗತಿಸುತ್ತಿದೆ.

ಸ್ನೇಹಿತರೇ,

ನಾನು ಯಾವಾಗ ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದ ನಿರ್ಣಯದ ಬಗ್ಗೆ ಚಿಂತಿಸುತ್ತೇನೋ ಮೊದಲಿಗೆ ಇಬ್ಬರು ಮಾತೆಯರನ್ನು ಸ್ಮರಿಸುತ್ತೇನೆ. ಮೊದಲನೆಯದು ಭಾರತಮಾತೆ, ಮತ್ತು ಎರಡನೆಯದು ನಿಮ್ಮಂಥ ವೀರ ಯೋಧರಿಗೆ ಜನ್ಮ ನೀಡಿದ ವೀರ ಮಾತೆಯರು. ಇದು ನನ್ನ ನಿರ್ಧಾರದ ಮಾನದಂಡವಾಗಿದೆ. ಮಾನದಂಡ ಅನುಸರಿಸುತ್ತಲೇ ದೇಶ ನಿಮ್ಮ ಗೌರವಕ್ಕೆ ನಿಮ್ಮ ಕುಟುಂಬಕ್ಕೆ ಮತ್ತು ಭಾರತ ಮಾತೆಯ ಸುರಕ್ಷತೆಗೆ ಉನ್ನತ ಆದ್ಯತೆ ನೀಡಿದೆ.

ನಾವು ಸೇನೆಗೆ ಅಥವಾ ನೀವು ಅಗತ್ಯ ಎನ್ನು ಸಾಧನಗಳ ಅಥವಾ ಎಲ್ಲ ಆಧುನಿಕ ಶಸ್ತ್ರಾಸ್ತ್ರಗಳ ಸಂಗ್ರಹಣೆಗೆ ಗಮನ ಹರಿಸಿದ್ದೇವೆ. ಈಗ ದೇಶದ ಗಡಿ ಮೂಲಸೌಕರ್ಯದ ಮೇಲಿನ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಇದು ಗಡಿ ಪ್ರದೇಶಗಳ ಅಭಿವೃದ್ಧಿಗೆ ಮತ್ತು ಗಡಿಯಲ್ಲಿ ತ್ವರಿತ ಗತಿಯಲ್ಲಿ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಕಾರಣವಾಗಿದೆ. ಇದರ ಅತಿ ದೊಡ್ಡ ಪ್ರಯೋಜನ ಎಂದರೆ ಸರಕುಗಳು ನಿಮ್ಮನ್ನು ಬೇಗ ತಲುಪುತ್ತಿವೆ.

ಸ್ನೇಹಿತರೆ,

ಸೇನಾ ಪಡೆಗಳಲ್ಲಿ ಉತ್ತಮ ಸಹಯೋಗಕ್ಕಾಗಿ, ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆಯ ಸೃಷ್ಟಿಯೇ ಆಗಿರಲಿ ಅಥವಾ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣವೇ ಆಗಿರಲಿ ಅಥವಾ ಒಂದು ಶ್ರೇಣಿ ಮತ್ತು ಪಿಂಚಣಿಯ ನಿರ್ಧಾರವೇ ಆಗಿರಲಿ ಅಥವಾ ನಿಮ್ಮ ಕುಟುಂಬದ ಆರೈಕೆಯಿಂದ ಹಿಡಿದು ಶಿಕ್ಷಣದವರೆಗಿನ ಸರಿಯಾದ ವ್ಯವಸ್ಥೆಗಳಿಗಾಗಿ ನಿರಂತರ ಕಾರ್ಯವೇ ಆಗಿರಲಿ, ದೇಶವು ಇಂದು ಪ್ರತಿ ಹಂತದಲ್ಲೂ ಪಡೆಗಳನ್ನು ಮತ್ತು ಸೈನಿಕರನ್ನು ಬಲಪಡಿಸುತ್ತಿದೆ

ಸ್ನೇಹಿತರೆ, ಭಗವಾನ್ ಬುದ್ಧ ಹೇಳುತ್ತಾರೆ-

ಧೈರ್ಯ ಎನ್ನುವುದು ಸಂಕಲ್ಪ ಮತ್ತು ಬದ್ಧತೆಗೆ ಸಂಬಂಧಿಸಿದ್ದು. ಧೈರ್ಯ ಎಂದರೆ ಸಹಾನುಭೂತಿ. ಧೈರ್ಯವೆಂಬುದು ಸತ್ಯಕ್ಕಾಗಿ ಧೈರ್ಯದಿಂದ ಮತ್ತು ಸ್ಥಿರವಾಗಿ ನಿಲ್ಲುವಂತೆ ನಮಗೆ ಕಲಿಸುತ್ತದೆ. ಧೈರ್ಯವು ಸರಿಯಾದದ್ದನ್ನು ಹೇಳಲು ಮತ್ತು ಮಾಡಲು ನಮಗೆ ಶಕ್ತಿಯನ್ನು ನೀಡುತ್ತದೆ.

ಸ್ನೇಹಿತರೆ,
ಗ್ಯಾಲ್ವಾನ್ ಕಣಿವೆಯಲ್ಲಿ ವೀರಪುತ್ರರು ತೋರಿದ ಅದಮ್ಯ ಶೌರ್ಯ, ಅಧಿಕ ಶಕ್ತಿಯ ಭಾಷ್ಯವಾಗಿದೆ. ದೇಶ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ನಿಮ್ಮೊಂದಿಗೆ, ನಮ್ಮ ಐಟಿಬಿಪಿ ಯೋಧರು, ಬಿಎಸ್.ಎಫ್. ಯೋಧರು, ಬಿ.ಆರ್. ಮತ್ತು ಇತರ ಪಡೆಗಳು, ಎಂಜಿನಿಯರುಗಳು ಮತ್ತು ಇತರ ಕಷ್ಟದ ಸನ್ನಿವೇಶದಲ್ಲೂ ಶ್ರಮಿಸುತ್ತಿರುವ ಇತರ ಕಾರ್ಮಿಕರು ಎಲ್ಲರೂ ಅದ್ಭುತ ಕಾರ್ಯ ಮಾಡುತ್ತಿದ್ದೀರಿ. ಪ್ರತಿಯೊಬ್ಬರೂ ಒಟ್ಟಾಗಿ ಭಾರತ ಮಾತೆಯ ಸಾರ್ವಭೌಮತೆಯನ್ನು ರಕ್ಷಿಸಲು ಶ್ರಮಿಸುತ್ತಿದ್ದೀರಿ.

ಇಂದು, ದೇಶ ನಿಮ್ಮ ಪರಿಶ್ರಮದ ಫಲವಾಗಿ ಹಲವು ವಿಕೋಪಗಳ ವಿರುದ್ಧ ಏಕ ಕಾಲದಲ್ಲಿ ಛಲದೊಂದಿಗೆ ಹೋರಾಡುತ್ತಿದೆ. ನಿಮ್ಮೆಲ್ಲರಿಂದ ಸ್ಫೂರ್ತಿ ಪಡೆಯುತ್ತಿದೆ, ನಾವೆಲ್ಲರೂ ಒಗ್ಗೂಡಿ ಎಲ್ಲ ಸವಾಲುಗಳನ್ನು, ಕ್ಲಿಷ್ಟಕರ ಸವಾಲುಗಳನ್ನು ಮೆಟ್ಟಿ ನಿಲ್ಲೋಣ. ನೀವೆಲ್ಲರೂ ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿದ್ದೀರಿ. ನಾವೆಲ್ಲರೂ ಒಗ್ಗೂಡಿ ನಮ್ಮ ಕನಸಿನ ಭಾರತ ಕಟ್ಟೋಣ. ನಿಮ್ಮ ಕನಸಿನ ಭಾರತ ಕಟ್ಟೋಣ. 130 ಕೋಟಿ ದೇಶವಾಸಿಗಳು ಹಿಂದೆ ಬಿದ್ದಿಲ್ಲ ಎಂಬ ಭರವಸೆ ನಿಮಗೆ ನೀಡಲು ನಾನಿಂದು ಇಲ್ಲಿಗೆ ಬಂದಿದ್ದೇನೆ. ನಾವು ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ಕಟ್ಟುತ್ತೇವೆ ಮತ್ತು ನಿಮ್ಮಿಂದ ಸ್ಫೂರ್ತಿ ಪಡೆದು ನಾವು ಹಾಗೆ ಮಾಡುತ್ತೇವೆ!, ಸ್ವಾವಲಂಬಿ ಭಾರತದ ಸಂಕಲ್ಪವು ಇನ್ನಷ್ಟು ಶಕ್ತಿಯುತವಾಗುತ್ತದೆ.
ನಾನು ಮತ್ತೊಮ್ಮೆ ನನ್ನ ಹೃದಯಾಂತರಾಳದಿಂದ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ, ಧನ್ಯವಾದಗಳು, ಜೋರಾಗಿ ನನ್ನೊಂದಿಗೆ ಹೇಳಿ..

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ವಂದೇ ಮಾತರಂ ವಂದೇ ಮಾತರಂ ವಂದೇ ಮಾತರಂ!!

ಧನ್ಯವಾದಗಳು!

***


(Release ID: 1636705)