ಹಣಕಾಸು ಸಚಿವಾಲಯ

ಕೋವಿಡ್-19: ಆದಾಯ ತೆರಿಗೆ ಇಲಾಖೆಯಿಂದ 20 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಂದ 62,361 ಕೋಟಿ ರೂ. ಮರುಪಾವತಿ

Posted On: 03 JUL 2020 12:42PM by PIB Bengaluru

ಕೋವಿಡ್-19: ಆದಾಯ ತೆರಿಗೆ ಇಲಾಖೆಯಿಂದ 20 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಂದ 62,361 ಕೋಟಿ ರೂ. ಮರುಪಾವತಿ

 

ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗಲು ಬಾಕಿ ಇರುವ ಆದಾಯ ತೆರಿಗೆ ಮರುಪಾವತಿಗೆ 2020 ರ ಏಪ್ರಿಲ್ 8 ರಂದು ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರಕ್ಕೆ ಅನುಗುಣವಾಗಿ, ಆದಾಯ ತೆರಿಗೆ ಇಲಾಖೆಯು 2020ರ ಏಪ್ರಿಲ್ 8 ರಿಂದ ಜೂನ್ 30 ರವರೆಗೆ ನಿಮಿಷಕ್ಕೆ 76 ಪ್ರಕರಣಗಳ ವೇಗದಲ್ಲಿ ತೆರಿಗೆ ಮರುಪಾವತಿಯನ್ನು ಮಾಡಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಕೇವಲ 56 ಕೆಲಸದ ದಿನಗಳ ಈ ಅವಧಿಯಲ್ಲಿ, 20.44 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ 62,361 ಕೋಟಿ ರೂ.ಗಳನ್ನುಮರುಪಾವತಿ ಮಾಡಿದೆ.

ಈ ಮೂಲಕ ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಹೊಸ ಮುಖವನ್ನು ನೋಡುತ್ತಿದ್ದಾರೆ ಎಂದು ಹೇಳಲಾಗಿದೆ, ಇದು ತೆರಿಗೆ ಪಾವತಿದಾರರಿಗೆ ಸ್ನೇಹಪರವಾಗಿರುವುದು ಮಾತ್ರವಲ್ಲ, ಕೋವಿಡ್-19 ಸಾಂಕ್ರಾಮಿಕದ ಈ ಸಂಕಷ್ಟದ ಸಮಯದಲ್ಲಿ ಹಣದ ಹರಿವು ಒದಗಿಸುವ ಸುಗಮಕಾರನ ಕೆಲಸವನ್ನೂ ಇದು ಮಾಡಿದೆ. ಈ ಅವಧಿಯಲ್ಲಿ ತೆರಿಗೆದಾರರಿಗೆ 19,07,853 ಪ್ರಕರಣಗಳಲ್ಲಿ 23,453.57 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು 1,36,744 ಪ್ರಕರಣಗಳಲ್ಲಿ 38,908.37 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ. ಈ ಪ್ರಮಾಣದ ಮರುಪಾವತಿಯನ್ನು ಸಂಪೂರ್ಣವಾಗಿ ವಿದ್ಯುನ್ಮಾನವಾಗಿ ಮಾಡಲಾಗಿದ್ದು, ತೆರಿಗೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ಇದ್ದಂತೆ ತೆರಿಗೆದಾರರು ಮರುಪಾವತಿಯನ್ನು ಬಿಡುಗಡೆಗಾಗಿ ಇಲಾಖೆಯನ್ನು ಸಂಪರ್ಕಿಸಬೇಕಾಗಿಲ್ಲ. ಅವರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಮರುಪಾವತಿ ಪಡೆಯುತ್ತಾರೆ.

ತೆರಿಗೆದಾರರು ಇಲಾಖೆಯ ಇಮೇಲ್‌ಗಳಿಗೆ ಕೂಡಲೇ ಪ್ರತಿಕ್ರಿಯೆಯನ್ನು ನೀಡಿದರೆ ಅವರ ಪ್ರಕರಣಗಳಲ್ಲಿನ ಮರುಪಾವತಿಯನ್ನು ಸಹ ಪ್ರಕ್ರಿಯೆಗೊಳಿಸಬಹುದು ಮತ್ತು ತಕ್ಷಣವೇ ಮರುಪಾವತಿ ನೀಡಬಹುದು ಎಂದು ಸಿಬಿಡಿಟಿ ಪುನರುಚ್ಚರಿಸಿದೆ, ತೆರಿಗೆದಾರರಿಗೆ ಮರುಪಾವತಿಗೆ ಮೊದಲು ಅವರ ಬಾಕಿ ಇರುವ ಬೇಡಿಕೆ, ಅವರ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ದೋಷ/ ಹೊಂದಾಣಿಕೆಯನ್ನು ದೃಢೀಕರಿಸಲು ಐ-ಟಿ ಇಲಾಖೆಯು ಇಮೇಲ್‌ಗಳನ್ನು ಕಳುಹಿಸುತ್ತದೆ. ಇಂತಹ ಸಂದರ್ಭಗಳಲ್ಲಿ, ತೆರಿಗೆದಾರರಿಂದ ತ್ವರಿತ ಪ್ರತಿಕ್ರಿಯೆಗಳು ಬಂದರೆ  ಐ-ಟಿ ಇಲಾಖೆಯು ಅವರ ಮರುಪಾವತಿಯನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಅನುವು ಮಾಡಿಕೊಡುತ್ತದೆ.

***


(Release ID: 1636144) Visitor Counter : 226