ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಕೋವಿಡ್-19 ವಿರುದ್ಧ ಲಸಿಕೆ ಯೋಜನೆ ಮತ್ತು ಸಿದ್ಧತೆಗಳ ಪರಿಶೀಲನಾ ಸಭೆ

Posted On: 30 JUN 2020 2:52PM by PIB Bengaluru

ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಕೋವಿಡ್-19 ವಿರುದ್ಧ ಲಸಿಕೆ ಯೋಜನೆ ಮತ್ತು ಸಿದ್ಧತೆಗಳ ಪರಿಶೀಲನಾ ಸಭೆ

ರಾಷ್ಟ್ರೀಯ ಪ್ರಯತ್ನದ ಅಡಿಪಾಯ ರೂಪಿಸುವ ನಾಲ್ಕು ಮಾರ್ಗದರ್ಶಿ ಸೂತ್ರಗಳನ್ನು ಪಟ್ಟಿ ಮಾಡಿದ ಪ್ರಧಾನಿ

 

ಕೋವಿಡ್-19 ವಿರುದ್ಧ ಲಸಿಕೆಯ ಯೋಜನೆ ಮತ್ತು ಸಿದ್ಧತೆಗಳು ಹಾಗೂ ಲಸಿಕೆ ಲಭ್ಯತೆಯ ಬಗ್ಗೆ ಪರಿಶೀಲಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.

ಭಾರತದ ಅಪಾರ ಮತ್ತು ವೈವಿಧ್ಯಮಯ ಜನಸಂಖ್ಯೆಗೆ ಲಸಿಕೆ ಹಾಗು ವೈದ್ಯಕೀಯ ಪೂರೈಕೆ ಸರಪಳಿಗಳ ನಿರ್ವಹಣೆ, ಅಪಾಯದಲ್ಲಿರುವ ಜನಸಂಖ್ಯೆಗೆ ಆದ್ಯತೆ, ಪ್ರಕ್ರಿಯೆಯಲ್ಲಿ ತೊಡಗಿರುವ ವಿವಿಧ ಏಜೆನ್ಸಿಗಳ ನಡುವಿನ ಸಮನ್ವಯ ಮತ್ತು ರಾಷ್ಟ್ರೀಯ ಪ್ರಯತ್ನದಲ್ಲಿ ಖಾಸಗಿ ವಲಯ ಮತ್ತು ನಾಗರಿಕ ಸಮಾಜದ ಪಾತ್ರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪ್ರಧಾನಿಯವರು ಗಮನಿಸಿದರು.

ರಾಷ್ಟ್ರೀಯ ಪ್ರಯತ್ನದ ಅಡಿಪಾಯವನ್ನು ರೂಪಿಸುವ ನಾಲ್ಕು ಮಾರ್ಗದರ್ಶಿ ಸೂತ್ರಗಳನ್ನು ಪ್ರಧಾನಿಯವರು ವಿವರಿಸಿದರು: ಮೊದಲನೆಯದಾಗಿ, ಹೆಚ್ಚು ಅಪಾಯ ಇರುವ ಗುಂಪುಗಳನ್ನು ಗುರುತಿಸಿ ಶೀಘ್ರ ಲಸಿಕೆ ಹಾಕಲು ಆದ್ಯತೆ ನೀಡಬೇಕು, ಉದಾಹರಣೆಗೆ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ವೈದ್ಯಕೀಯೇತರ ಮುಂಚೂಣಿ ಕೋರೊನಾ ಯೋಧರು ಮತ್ತು ದುರ್ಬಲ ಸಾಮಾನ್ಯ ಜನರು; ಎರಡನೆಯದಾಗಿ, “ಎಲ್ಲರಿಗೂ, ಎಲ್ಲೆಡೆಯೂಲಸಿಕೆ ಹಾಕಬೇಕು. ಅಂದರೆ ಲಸಿಕೆ ಪಡೆಯಲು ಯಾವುದೇ ನಿವಾಸ ಸಂಬಂಧಿತ ನಿರ್ಬಂಧಗಳನ್ನು ವಿಧಿಸಬಾರದು; ಮೂರನೆಯದಾಗಿ, ಲಸಿಕೆಯು ಕೈಗೆಟುಕುವಂತಿರಬೇಕು ಮತ್ತು ಸಾರ್ವತ್ರಿಕವಾಗಿರಬೇಕು - ಯಾವುದೇ ವ್ಯಕ್ತಿಯನ್ನೂ ಬಿಡಬಾರದು; ನಾಲ್ಕನೆಯದಾಗಿ, ಉತ್ಪಾದನೆಯಿಂದ ಲಸಿಕೆ ಹಾಕುವವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಜ್ಞಾನದ ಬಳಕೆಯೊಂದಿಗೆ ನೈಜ ಸಮಯದ ಮೇಲ್ವಿಚಾರಣೆಯೊಂದಿಗೆ ನಡೆಸಬೇಕು ಮತ್ತು ಬೆಂಬಲಿಸಬೇಕು.

ಎಲ್ಲರಿಗೂ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸಮಯೋಚಿತವಾಗಿ ಲಸಿಕೆ ಹಾಕುವ ರಾಷ್ಟ್ರೀಯ ಪ್ರಯತ್ನದ ಬೆನ್ನೆಲುಬಾಗಿ ಲಭ್ಯವಿರುವ ತಂತ್ರಜ್ಞಾನದ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವಂತೆ ಪ್ರಧಾನಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕುವ ಬಗ್ಗೆ ವಿವರವಾದ ಯೋಜನೆಯನ್ನು ಕೂಡಲೇ ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನಿರ್ದೇಶನ ನೀಡಿದರು.

ಲಸಿಕೆ ಅಭಿವೃದ್ಧಿ ಪ್ರಯತ್ನಗಳ ಪ್ರಸ್ತುತ ಪರಿಸ್ಥಿತಿಯನ್ನು ಸಹ ಸಭೆಯಲ್ಲಿ ಪರಿಶೀಲಿಸಲಾಯಿತು. ಕೋವಿಡ್ -19 ವಿರುದ್ಧದ ಲಸಿಕೆಯ ಪ್ರಯತ್ನಗಳಲ್ಲಿ ಸಕ್ರಿಯ ಪಾತ್ರ ವಹಿಸುವ ಭಾರತದ ಬದ್ಧತೆಯನ್ನು ಪ್ರಧಾನಿವರು ಪ್ರಮುಖವಾಗಿ ಒತ್ತಿ ಹೇಳಿದರು.

***


(Release ID: 1635340) Visitor Counter : 220