ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

9 ಲಕ್ಷ ಕೌಶಲ ಮತ್ತು ಅರೆ-ಕೌಶಲ ಉದ್ಯೋಗ, 35,000 ಕೋಟಿ ರೂ. ಬಂಡವಾಳ ಸೃಷ್ಟಿಗೆ ಪ್ರಧಾನ ಮಂತ್ರಿ ಎಫ್‌ಎಂಇ ಯೋಜನೆ: ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಮಾಹಿತಿ, ತರಬೇತಿ, ಅವಕಾಶ ಮತ್ತು ಔಪಚಾರಿಕೀಕರಣದ ಮೂಲಕ 8 ಲಕ್ಷ ಘಟಕಗಳಿಗೆ ಯೋಜನೆಯ ನೆರವು “ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರಿಕೀಕರಣ” ಯೋಜನೆಗೆ ಚಾಲನೆ; ಮಾರ್ಗಸೂಚಿ ಬಿಡುಗಡೆ

Posted On: 29 JUN 2020 1:33PM by PIB Bengaluru

ಆತ್ಮನಿರ್ಭರ ಭಾರತ್ ಅಭಿಯಾನ ಭಾಗವಾಗಿ ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರಿಕೀಕರಣ (ಪಿಎಂ ಎಫ್ಎಂಇ) ಯೋಜನೆಗೆ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವೆ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ 2020 ಜೂನ್ 29 ರಂದು ಚಾಲನೆ ನೀಡಿದರು. ಯೋಜನೆಯು ಒಟ್ಟು 35,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು 9 ಲಕ್ಷ ಕೌಶಲ ಮತ್ತು ಅರೆ-ಕೌಶಲ ಉದ್ಯೋಗವನ್ನು ಸೃಷ್ಟಿಸುತ್ತದೆ. ಮಾಹಿತಿ, ತರಬೇತಿ, ಉತ್ತಮ ಅನಾವರಣ ಮತ್ತು ಔಪಚಾರಿಕೀಕರಣದ ಮೂಲಕ 8 ಲಕ್ಷ ಘಟಕಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಸಂದರ್ಭದಲ್ಲಿ ಯೋಜನೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು.

ಸ್ಥಳೀಯ ಆಹಾರ ಸಂಸ್ಕರಣಾ ಘಟಕಗಳ ಪಾತ್ರದ ಮಹತ್ವದ ಬಗ್ಗೆ ತಿಳಿಸಿದ ಕೇಂದ್ರ ಸಚಿವರು, ಹಳ್ಳಿಗಳ ಗ್ರಾಮೀಣ ಉದ್ಯಮಿಗಳು ತಯಾರಿಸುವ ಆಹಾರ ಉತ್ಪನ್ನಗಳು ಸ್ಥಳೀಯ ಜನರಿಗೆ ಭಾರತೀಯ ಆಹಾರ ಉತ್ಪನ್ನಗಳನ್ನು ಪೂರೈಸುವ ಸುದೀರ್ಘ ಸಂಪ್ರದಾಯವನ್ನು ಹೊಂದಿವೆ ಎಂದು ಹೇಳಿದರು.

ಸ್ಥಳೀಯ ಘಟಕಗಳ ಪ್ರಾಮುಖ್ಯತೆ ಮತ್ತು ಅವುಗಳ ಪಾತ್ರದ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಯವರು 12.5.2020 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸಾಕಷ್ಟು ಒತ್ತಿಹೇಳಿದ್ದಾರೆ.

"ಬಿಕ್ಕಟ್ಟಿನ ಸಮಯದಲ್ಲಿ, ಸ್ಥಳೀಯರೇ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ, ಸ್ಥಳೀಯರೇ ನಮ್ಮನ್ನು ಉಳಿಸಿದ್ದಾರೆ. ಸ್ಥಳೀಯತೆ ಕೇವಲ ಅಗತ್ಯವಲ್ಲ, ಅದು ನಮ್ಮ ಜವಾಬ್ದಾರಿಯೂ ಹೌದು. ಸ್ಥಳೀಯತೆಯನ್ನು ನಮ್ಮ ಜೀವನದ ಮಂತ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ಕಾಲ ನಮಗೆ ಪಾಠ ಕಲಿಸಿದೆ. ಇಂದು ನೀವು ಭಾವಿಸುವ ಜಾಗತಿಕ ಬ್ರಾಂಡ್ಗಳು ಕೆಲವೊಮ್ಮೆ ಇದೇ ರೀತಿ ಸ್ಥಳೀಯವಾಗಿದ್ದವು. ಆದರೆ ಜನರು ಅವುಗಳನ್ನು ಬಳಸಲು ಪ್ರಾರಂಭಿಸಿದಾಗ, ಅವುಗಳನ್ನು ಪ್ರಚಾರ ಮಾಡಲು ಪ್ರಾರಂಭಿಸಿದಾಗ, ಅವುಗಳನ್ನು ಬ್ರಾಂಡ್ ಮಾಡಲು, ಅವುಗಳ ಬಗ್ಗೆ ಹೆಮ್ಮೆಪಡಲು ಆರಂಭಿಸಿದಾಗ ಅವುಗಳು ಸ್ಥಳೀಯ ಉತ್ಪನ್ನಗಳಿಂದ ಜಾಗತಿಕವಾದವು. ಆದ್ದರಿಂದ, ಇಂದಿನಿಂದ ಪ್ರತಿಯೊಬ್ಬ ಭಾರತೀಯನೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು ಮಾತ್ರವಲ್ಲ, ಹೆಮ್ಮೆಯಿಂದ ಉತ್ತೇಜಿಸಲು ಸಹ ಧ್ವನಿ ಎತ್ತಬೇಕಾಗಿದೆ. ನಮ್ಮ ದೇಶ ಇದನ್ನು ಸಾಧಿಸಬಹುದು ಎಂದು ನನಗೆ ವಿಶ್ವಾಸವಿದೆ. ”

ಆಹಾರ ಸಂಸ್ಕರಣಾ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದ ಶ್ರೀಮತಿ ಬಾದಲ್, ಅಸಂಘಟಿತ ಆಹಾರ ಸಂಸ್ಕರಣಾ ಕ್ಷೇತ್ರವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ, ಸವಾಲುಗಳು ಅವುಗಳ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯನ್ನು ಸೀಮಿತಗೊಳಿಸುತ್ತಿವೆ ಎಂದು ಹೇಳಿದರು. ಸವಾಲುಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳ ಲಭ್ಯತೆಯ ಕೊರತೆ, ತರಬೇತಿ, ಸಾಂಸ್ಥಿಕ ಸಾಲದ ಲಭ್ಯತೆ, ಉತ್ಪನ್ನಗಳ ಗುಣಮಟ್ಟದ ನಿಯಂತ್ರಣದ ಬಗ್ಗೆ ಮೂಲಭೂತ ಅರಿವಿನ ಕೊರತೆ ಮತ್ತು ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಕೌಶಲ್ಯಗಳ ಕೊರತೆ ಇತ್ಯಾದಿ ಸವಾಲುಗಳಿವೆ. ಸವಾಲುಗಳ ಕಾರಣದಿಂದಾಗಿ, ಅಸಂಘಟಿತ ಆಹಾರ ಸಂಸ್ಕರಣಾ ಕ್ಷೇತ್ರವು ಅದರ ಅಪಾರ ಸಾಮರ್ಥ್ಯದ ಹೊರತಾಗಿಯೂ ಮೌಲ್ಯವರ್ಧನೆ ಮತ್ತು ಉತ್ಪಾದನೆಯ ವಿಷಯದಲ್ಲಿ ಕಡಿಮೆ ಕೊಡುಗೆ ನೀಡುತ್ತಿದೆ ಎಂದು ಅವರು ತಿಳಿಸಿದರು.

ಸುಮಾರು 25 ಲಕ್ಷ ಘಟಕಗಳನ್ನು ಒಳಗೊಂಡಿರುವ ಅಸಂಘಟಿತ ಆಹಾರ ಸಂಸ್ಕರಣಾ ಕ್ಷೇತ್ರವು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಶೇ.74 ರಷ್ಟು ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಘಟಕಗಳಲ್ಲಿ ಸುಮಾರು ಶೇ.66 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ ಮತ್ತು ಅವುಗಳಲ್ಲಿ ಶೇ.80 ರಷ್ಟು ಕುಟುಂಬ ಆಧಾರಿತ ಉದ್ಯಮಗಳು ಗ್ರಾಮೀಣ ಕುಟುಂಬಗಳ ಜೀವನೋಪಾಯಕ್ಕೆ ಬೆಂಬಲವಾಗಿವೆ ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡುತ್ತಿವೆ. ಘಟಕಗಳು ಹೆಚ್ಚಾಗಿ ಸಣ್ಣ ಉದ್ಯಮಗಳ ವರ್ಗಕ್ಕೆ ಸೇರುತ್ತವೆ ಎಂದು ಅವರು ಹೇಳಿದರು.

ಪಿಎಂ ಎಫ್ಎಂಇ ಯೋಜನೆಯ ವಿವರಗಳು

ಅಸ್ತಿತ್ವದಲ್ಲಿರುವ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಉನ್ನತೀಕರಣಕ್ಕಾಗಿ ಆರ್ಥಿಕ, ತಾಂತ್ರಿಕ ಮತ್ತು ವ್ಯವಹಾರ ಬೆಂಬಲವನ್ನು ನೀಡುವ ಉದ್ದೇಶದಿಂದ, ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯವು ಕೇಂದ್ರ ಸರ್ಕಾರ ಪ್ರಾಯೋಜಿತ ಅಖಿಲ ಭಾರತ ಮಟ್ಟದಪಿಎಂ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ಫಾರ್ಮಲೈಸೇಶನ್”(PM FME) ಯೋಜನೆಯನ್ನು ಪ್ರಾರಂಭಿಸಿದೆ. 2020-21 ರಿಂದ 2024-25ರವರೆಗಿನ ಐದು ವರ್ಷಗಳ ಅವಧಿಯಲ್ಲಿ 10,000 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಯೋಜನೆಯಡಿಯಲ್ಲಿನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಅನುಪಾತದಲ್ಲಿ, ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳೊಂದಿಗೆ 90:10 ಅನುಪಾತದಲ್ಲಿ, ಶಾಸಕಾಂಗವಿರುವ ಕೇಂದ್ರಾಡಳಿತ ಪ್ರದೇಶಗಳೊಂದಿಗೆ 60:40 ಅನುಪಾತದಲ್ಲಿ ಹಾಗೂ ಇತರ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಶೇ. 100 ರಷ್ಟನ್ನು ಕೇಂದ್ರವು ಹಂಚಿಕೊಳ್ಳಲಿದೆ.

ಯೋಜನೆಯು ಸಾಮಗ್ರಿಗಳ ಖರೀದಿ, ಸಾಮಾನ್ಯ ಸೇವೆಗಳನ್ನು ಪಡೆಯುವುದು ಮತ್ತು ಉತ್ಪನ್ನಗಳ ಮಾರಾಟದ ವಿಷಯದಲ್ಲಿ ಲಾಭದ ಪ್ರಮಾಣವನ್ನು ಹೆಚ್ಚಿಸಲು ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಡಿಪಿ) ವಿಧಾನವನ್ನು ಅಳವಡಿಸಿಕೊಂಡಿದೆ. ಅಸ್ತಿತ್ವದಲ್ಲಿರುವ ಕ್ಲಸ್ಟರ್ ಗಳು ಮತ್ತು ಕಚ್ಚಾ ವಸ್ತುಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ಆಯಾ ಜಿಲ್ಲೆಗೆ ಆಹಾರ ಉತ್ಪನ್ನವನ್ನು ಗುರುತಿಸುತ್ತವೆ. ಒಡಿಒಪಿ ಉತ್ಪನ್ನವು ಹಾಳಾಗುವ ಉತ್ಪನ್ನಗಳನ್ನು ಆಧರಿಸಿದ ಉತ್ಪನ್ನ ಅಥವಾ ಧಾನ್ಯ ಆಧಾರಿತ ಉತ್ಪನ್ನಗಳಾಗಿರಬಹುದು ಅಥವಾ ಜಿಲ್ಲೆಯಲ್ಲಿ ಮತ್ತು ಅವುಗಳ ಸಂಬಂಧಿತ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಉತ್ಪಾದನೆಯಾಗುವ ಆಹಾರ ಉತ್ಪನ್ನವಾಗಿರಬಹುದು. ಅಂತಹ ಉತ್ಪನ್ನಗಳ ವಿವರಣಾತ್ಮಕ ಪಟ್ಟಿಯಲ್ಲಿ ಮಾವು, ಆಲೂಗಡ್ಡೆ, ಲಿಚ್ಚಿ, ಟೊಮೆಟೊ, ಮರಗೆಣಸು, ಕಿನ್ನು, ಭುಜಿಯಾ, ಪೆಥಾ, ಹಪ್ಪಳ, ಉಪ್ಪಿನಕಾಯಿ, ರಾಗಿ ಆಧಾರಿತ ಉತ್ಪನ್ನಗಳು, ಮೀನುಗಾರಿಕೆ, ಕೋಳಿ, ಮಾಂಸ ಮತ್ತು ಪಶು ಆಹಾರ ಸೇರಿವೆ. ಒಡಿಒಪಿ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಆದ್ಯತೆ ನೀಡಲಾಗುವುದು. ಇತರ ಉತ್ಪನ್ನಗಳನ್ನು ಉತ್ಪಾದಿಸುವ ಘಟಕಗಳನ್ನು ಸಹ ಬೆಂಬಲಿಸಲಾಗುತ್ತದೆ. ಸಾಮಾನ್ಯ ಮೂಲಸೌಕರ್ಯ ಮತ್ತು ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ಗೆ ಬೆಂಬಲವು ಒಡಿಒಪಿ ಉತ್ಪನ್ನಗಳಿಗೆ ಇರುತ್ತದೆ. ತ್ಯಾಜ್ಯದಿಂದ ಸಂಪತ್ತು ಉತ್ಪನ್ನಗಳು, ಕಿರು ಅರಣ್ಯ ಉತ್ಪನ್ನಗಳು ಮತ್ತು ಮಹತ್ವಾಕಾಂಕ್ಷಿ ಜಿಲ್ಲೆಗಳ ಬಗ್ಗೆ ಯೋಜನೆ ಹೆಚ್ಚು ಗಮನ ಹರಿಸುತ್ತದೆ.

ಅಸ್ತಿತ್ವದಲ್ಲಿರುವ ವೈಯಕ್ತಿಕ ಸಣ್ಣ ಆಹಾರ ಸಂಸ್ಕರಣಾ ಘಟಕವನ್ನು ಮೇಲ್ದರ್ಜೆಗೇರಿಸಲು ಬಯಸುವವರು ಪ್ರತಿ ಯೂನಿಟ್ಗೆ 10 ಲಕ್ಷ ರೂ. ಗರಿಷ್ಠ ಸೀಲಿಂಗ್ನೊಂದಿಗೆ ಯೋಜನಾ ವೆಚ್ಚದ ಶೇ. 35 ರಷ್ಟು ಸಾಲಾಧಾರಿತ ಬಂಡವಾಳ ಸಹಾಯಧನವನ್ನು ಪಡೆಯಬಹುದು. ಸ್ವಸಹಾಯ ಸಂಘದ ಪ್ರತಿ ಸದಸ್ಯರಿಗೆ 40,000/ - ರೂ. ಬೀಜ ಬಂಡವಾಳವನ್ನು ಕಾರ್ಯನಿರತ ಬಂಡವಾಳವಾಗಿ ಮತ್ತು ಸಣ್ಣ ಪರಿಕರಗಳ ಖರೀದಿಗೆ ನೀಡಲಾಗುವುದು. ಮೌಲ್ಯ ಸರಪಳಿಯೊಂದಿಗೆ ಬಂಡವಾಳ ಹೂಡಿಕೆಗಾಗಿ ಎಫ್ಪಿಒಗಳು/ ಸ್ವಸಹಾಯ ಸಂಘಗಳು/ ಉತ್ಪಾದಕ ಸಹಕಾರಿಗಳಿಗೆ ಶೇ.35 ಸಾಲಾಧಾರಿತ ಅನುದಾನವನ್ನು ನೀಡಲಾಗುವುದು. ಸಾಮಾನ್ಯ ಸಂಸ್ಕರಣಾ ಸೌಲಭ್ಯ, ಪ್ರಯೋಗಾಲಯ, ಗೋದಾಮು, ಶೀಥಲ ಕೇಂದ್ರ, ಪ್ಯಾಕೇಜಿಂಗ್ ಸೇರಿದಂತೆ ಎಫ್ಪಿಒಗಳು/ ಸ್ವಸಹಾಯ ಸಂಘಗಳು/ ಸಹಕಾರಿಗಳು ಅಥವಾ ಸರ್ಕಾರಿ ಸ್ವಾಮ್ಯದ ಏಜೆನ್ಸಿಗಳು ಅಥವಾ ಖಾಸಗಿ ಘಟಕಗಳು ಸಣ್ಣ ಘಟಕಗಳಿಂದ ಬಳಸಲು ಸಾಮಾನ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಶೇ. 35 ಸಾಲಾಧರಿತ ಅನುದಾನದ ಮೂಲಕ ಬೆಂಬಲವನ್ನು ಒದಗಿಸಲಾಗುತ್ತದೆ. ಮೈಕ್ರೊ ಯೂನಿಟ್ಗಳು ಮತ್ತು ಗುಂಪುಗಳಿಗೆ ಬ್ರಾಂಡ್ಗಳನ್ನು ಅಭಿವೃದ್ಧಿಪಡಿಸಲು ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್ಗೆ ಬೆಂಬಲವನ್ನು ಒದಗಿಸಲಾಗುವುದು, ಇದು ರಾಜ್ಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಶೇ.50 ರಷ್ಟು ಅನುದಾನದೊಂದಿಗೆ ಕ್ಲಸ್ಟರ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಮೈಕ್ರೋ ಯೂನಿಟ್ಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಯೋಜನೆಯು ಸಾಮರ್ಥ್ಯ ವೃದ್ಧಿ ಮತ್ತು ಸಂಶೋಧನೆಗೆ ವಿಶೇಷ ಗಮನ ಹರಿಸುತ್ತದೆ. ರಾಜ್ಯಗಳು ಆಯ್ಕೆ ಮಾಡಿದ ರಾಜ್ಯ ಮಟ್ಟದ ತಾಂತ್ರಿಕ ಸಂಸ್ಥೆಗಳೊಂದಿಗೆ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯದ ಅಡಿಯಲ್ಲಿರುವ ಎರಡು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾದ NIFTEM ಮತ್ತು IIFPT ಮೂಲಕ ಯುನಿಟ್ಗಳ ತರಬೇತಿ, ಉತ್ಪನ್ನ ಅಭಿವೃದ್ಧಿ, ಸೂಕ್ತ ಪ್ಯಾಕೇಜಿಂಗ್ ಮತ್ತು ಸಣ್ಣ ಘಟಕಗಳಿಗೆ ಯಂತ್ರೋಪಕರಣಗಳಿಗೆ ಬೆಂಬಲವನ್ನು ನೀಡಲಾಗುವುದು.

ಉದ್ಯಮದ ಅರ್ಜಿಗಳು, ಅವುಗಳ ಸಂಸ್ಕರಣೆ, ರಾಜ್ಯಗಳು ಮತ್ತು ಸಂಸ್ಕರಣಾ ಉದ್ದಿಮೆಗಳ ಸಚಿವಾಲಯದ ವಿವಿಧ ಯೋಜನೆಗಳ ಅನುಮೋದನೆ, ಅನುದಾನ ಮತ್ತು ಇತರ ನಿಧಿಗಳ ಬಿಡುಗಡೆ ಮತ್ತು ಯೋಜನೆಯ ಮೇಲ್ವಿಚಾರಣೆ ಸೇರಿದಂತೆ ಯೋಜನೆಯ ಎಲ್ಲಾ ಪ್ರಕ್ರಿಯೆಗಳು ಎಂಐಎಸ್ನಲ್ಲಿ ನಡೆಯುತ್ತವೆ. ಯೋಜನೆಯಡಿಯಲ್ಲಿ ನೆರವು ಪಡೆಯಲು ಬಯಸುವ ವೈಯಕ್ತಿಕ ಉದ್ಯಮಿಗಳು ಮತ್ತು ಇತರ ಪಾಲುದಾರರು ಜಿಲ್ಲಾ ಮಟ್ಟದಲ್ಲಿ ಆಯಾ ರಾಜ್ಯಗಳ ನೋಡಲ್ ಏಜೆನ್ಸಿಗಳನ್ನು ಸಂಪರ್ಕಿಸಬಹುದು.

ಆಪರೇಷನ್ ಗ್ರೀನ್ಸ್ ಯೋಜನೆ TOP (ಟೊಮೆಟೊ-ಈರುಳ್ಳಿ-ಆಲೂಗಡ್ಡೆ) ಬೆಳೆಗಳಿಂದ ಎಲ್ಲಾ ಬೇಗ ಹಾಳಾಗುವ ಹಣ್ಣುಗಳು ಮತ್ತು ತರಕಾರಿಗಳಿಗೆ ವಿಸ್ತರಣೆ (TOP to total)

ಆಪರೇಷನ್ ಗ್ರೀನ್ಸ್ ಯೋಜನೆಯನ್ನು ಟೊಮೆಟೊ, ಈರುಳ್ಳಿ ಮತ್ತು ಆಲೂಗೆಡ್ಡೆ (TOP) ಬೆಳೆಗಳಿಂದ ಇತರ ಅಧಿಸೂಚಿತ ತೋಟಗಾರಿಕೆ ಬೆಳೆಗಳಿಗೆ ವಿಸ್ತರಿಸಲಾಗಿದ್ದು, ಹೆಚ್ಚುವರಿ ಉತ್ಪಾದನಾ ಪ್ರದೇಶದಿಂದ ಪ್ರಮುಖ ಬಳಕೆ ಕೇಂದ್ರಗಳಿಗೆ ಅವುಗಳ ಸಾರಿಗೆ ಮತ್ತು ಶೇಖರಣೆಗೆ ಸಹಾಯಧನ ನೀಡಲಾಗುತ್ತದೆ. ಹಣ್ಣು ಮತ್ತು ತರಕಾರಿ ಬೆಳೆಗಾರರನ್ನು ಲಾಕ್ಡೌನ್ ನಿಂದಾಗಿ ತೊಂದರೆಯಿಂದ ರಕ್ಷಿಸುವುದು ಮತ್ತು ಕಟಾವು ನಂತರದ ನಷ್ಟವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಅರ್ಹ ಬೆಳೆಗಳು

ಹಣ್ಣುಗಳು- ಮಾವು, ಬಾಳೆಹಣ್ಣು, ಪೇರಲ, ಕಿವಿ, ಲಿಚಿ, ಪಪ್ಪಾಯ, ಸಿಟ್ರಸ್, ಅನಾನಸ್, ದಾಳಿಂಬೆ, ಹಲಸಿನ ಹಣ್ಣು; ತರಕಾರಿಗಳು- ಫ್ರೆಂಚ್ ಬೀನ್ಸ್, ಹಾಗಲಕಾಯಿ, ಬದನೆಕಾಯಿ, ಕ್ಯಾಪ್ಸಿಕಂ, ಕ್ಯಾರೆಟ್, ಹೂಕೋಸು, ಹಸಿರು ಮೆಣಸಿನಕಾಯಿ, ಬೆಂಡೆಕಾಯಿ, ಈರುಳ್ಳಿ, ಆಲೂಗಡ್ಡೆ ಮತ್ತು ಟೊಮೆಟೊ. ಕೃಷಿ ಸಚಿವಾಲಯ ಅಥವಾ ರಾಜ್ಯ ಸರ್ಕಾರದ ಶಿಫಾರಸಿನ ಆಧಾರದ ಮೇಲೆ ಭವಿಷ್ಯದಲ್ಲಿ ಯಾವುದೇ ಹಣ್ಣು / ತರಕಾರಿಗಳನ್ನು ಇದರಲ್ಲಿ ಸೇರಿಸಬಹುದು.

ಯೋಜನೆಯ ಅವಧಿ: ಅಧಿಸೂಚನೆಯ ದಿನಾಂಕದಿಂದ ಆರು ತಿಂಗಳ ಅವಧಿಗೆ, ಅಂದರೆ, 11/06/2020 ರವರೆಗೆ.

ಅರ್ಹ ಘಟಕಗಳು: ಆಹಾರ ಸಂಸ್ಕರಣಗಳು, ಎಫ್ಪಿಒ / ಎಫ್ಪಿಸಿ, ಸಹಕಾರಿ ಸಂಘಗಳು, ವೈಯಕ್ತಿಕ ರೈತರು, ಪರವಾನಗಿ ಪಡೆದ ಆಯೋಗದ ಏಜೆಂಟ್, ರಫ್ತುದಾರರು, ರಾಜ್ಯ ಮಾರುಕಟ್ಟೆ / ಸಹಕಾರಿ ಒಕ್ಕೂಟ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ / ಮಾರಾಟದಲ್ಲಿ ತೊಡಗಿರುವ ಚಿಲ್ಲರೆ ವ್ಯಾಪಾರಿಗಳು ಇತ್ಯಾದಿ.

ನೆರವಿನ ಮಾದರಿ: ಸಚಿವಾಲಯವು ಕೆಳಗಿನ ಎರಡು ಘಟಕಗಳ ವೆಚ್ಚದ ಶೇ. 50 ಸಹಾಯಧನ ವನ್ನು ವೆಚ್ಚದ ಮಾನದಂಡಗಳಿಗೆ ಒಳಪಟ್ಟು ನೀಡುತ್ತದೆ.

· ಅರ್ಹ ಬೆಳೆಗಳನ್ನು ಹೆಚ್ಚುವರಿ ಉತ್ಪಾದನಾ ಕ್ಲಸ್ಟರ್ನಿಂದ ಬಳಕೆ ಕೇಂದ್ರಕ್ಕೆ ಸಾಗಿಸುವುದು; ಮತ್ತು / ಅಥವಾ

· ಅರ್ಹ ಬೆಳೆಗಳಿಗೆ ಸೂಕ್ತವಾದ ಶೇಖರಣಾ ಸೌಲಭ್ಯಗಳನ್ನು ಪಡೆಯುವುದು (ಗರಿಷ್ಠ 3 ತಿಂಗಳವರೆಗೆ)

ಸಹಾಯಧನಕ್ಕಾಗಿ ಕ್ಲೈಮ್ ಸಲ್ಲಿಕೆ - ಮೇಲ್ಕಂಡ ಅಗತ್ಯ ಮಾನದಂಡಗಳನ್ನು ಅನುಸರಿಸುವ ಅರ್ಹ ಘಟಕಗಳು, ಅಧಿಸೂಚಿತ ಬೆಳೆಗಳ ಸಾಗಣೆ ಮತ್ತು/ ಅಥವಾ ಅಧಿಸೂಚಿತ ಹೆಚ್ಚುವರಿ ಉತ್ಪಾದನಾ ಕ್ಲಸ್ಟರ್ನಿಂದ ಶೇಖರಣೆಯನ್ನು ಕೈಗೊಳ್ಳಬಹುದು, MoFPI ಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಮತ್ತು ನಂತರ ಆನ್ಲೈನ್ ಪೋರ್ಟಲ್https://www.sampada-mofpi.gov.in/Login.aspx ನಲ್ಲಿ ತಮ್ಮ ಕ್ಲೈಮ್ ಸಲ್ಲಿಸಬಹುದು. ಹಣ್ಣು ಮತ್ತು ತರಕಾರಿಗಳ ಸಾಗಣೆ / ಸಂಗ್ರಹಣೆ ನಡೆಸುವ ಮೊದಲು ಅರ್ಜಿದಾರರು ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು.

ಎಸ್ಸಿ/ ಎಸ್ಟಿ ಆಹಾರ ಸಂಸ್ಕರಣಗಳಿಗೆ ಉಚಿತ ಆನ್ಲೈನ್ ಕೌಶಲ್ಯ ಕಾರ್ಯಕ್ರಮ

ಎಸ್ಸಿ ಮತ್ತು ಎಸ್ಟಿ ಉದ್ಯಮಿಗಳಿಗೆ NIFTEM ಮತ್ತು FICSI ಸಹಯೋಗದೊಂದಿಗೆ -ಕಲಿಕೆ ಒದಗಿಸಲು ಉಚಿತ ಆನ್ಲೈನ್ ಕೌಶಲ್ಯ ತರಗತಿಗಳನ್ನು ಪ್ರಾರಂಭಿಸಲು ಆಹಾರ ಸಂಸ್ಕರಣಾ ಸಚಿವಾಲವು ಯೋಜಿಸುತ್ತಿದೆ ಎಂದು ಸಚಿವೆ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದರು. ಸಚಿವಾಲಯವು 41 ಕೋರ್ಸ್ಗಳನ್ನು ಗುರುತಿಸಿದೆ ಮತ್ತು ಬೇಕಿಂಗ್, ಜಾಮ್, ಉಪ್ಪಿನಕಾಯಿ ತಯಾರಿಕೆ ಮುಂತಾದ ಉದ್ಯೋಗಗಳನ್ನು ಗುರುತಿಸಿದೆ, ಇದರಿಂದ ಡಿಜಿಟಲ್ ವಿಷಯಕ್ಕೆ ಪ್ರವೇಶ ಲಭ್ಯವಾಗುತ್ತದೆ. ಪ್ರಮಾಣೀಕರಿಸಿದ ನಂತರ, ಇವರು ಉತ್ತಮ ಉದ್ಯೋಗ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅಥವಾ ಅವರು ತಮ್ಮದೇ ಉದ್ಯಮವನ್ನು ಪ್ರಾರಂಭಿಸಬಹುದು. ಸಚಿವಾಲಯವು NIFTEM ಮೂಲಕ ರಚಿಸಿದ ಪಾಲ್ಗೊಳ್ಳುವವರ ಕೈಪಿಡಿಗಳು ಮತ್ತು ಫೆಸಿಲಿಟೇಟರ್ ಮಾರ್ಗದರ್ಶಿ, ಸೂಕ್ತವಾದ ಡಿಜಿಟಲ್ ವಿಷಯ ಮತ್ತು ಆನ್ಲೈನ್ ಮೌಲ್ಯಮಾಪನ ಸೇವೆಯೊಂದಿಗೆ -ಲರ್ನಿಂಗ್ ಮಾದರಿಗೆ ಪರಿವರ್ತಿಸಲಾಗುವುದು. ಇವು ಇಂಗ್ಲಿಷ್, ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಎಫ್ಐಸಿಎಸ್ ವೆಬ್ನಲ್ಲಿ ಮತ್ತು ಆಂಡ್ರಾಯ್ಡ್ ಆಧಾರಿತ ಮೊಬೈಲ್ಅಪ್ಲಿಕೇಶನ್ನಲ್ಲಿ ಲಭ್ಯವಾಗಲಿವೆ ಎಂದು ಅವರು ಮಾಹಿತಿ ನೀಡಿದರು.

***

 (Release ID: 1635124) Visitor Counter : 169