ಪ್ರಧಾನ ಮಂತ್ರಿಯವರ ಕಛೇರಿ

ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದ ವೇಳೆ ಪ್ರಧಾನಮಂತ್ರಿ ಅವರ ಪ್ರಾಸ್ತಾವಿಕ ನುಡಿ

Posted On: 17 JUN 2020 3:58PM by PIB Bengaluru

ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದ ವೇಳೆ ಪ್ರಧಾನಮಂತ್ರಿ ಅವರ ಪ್ರಾಸ್ತಾವಿಕ ನುಡಿ

 

ಎಲ್ಲರಿಗೂ ಶುಭಾಶಯಗಳು..!

ಅನ್ ಲಾಕ್-1 ಜಾರಿಯಾದ ನಂತರ ಇದು ನಮ್ಮ ಮೊದಲ ಸಭೆಯಾಗಿದೆ. ನಿನ್ನೆ ನಾನು ದೇಶದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅನ್ ಲಾಕ್-1 ಅನುಭವದ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದೇನೆ. ವಾಸ್ತವದಲ್ಲಿ ಕೆಲವೊಂದು ದೊಡ್ಡ ರಾಜ್ಯಗಳು ಮತ್ತು ನಗರಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ಕೆಲವು ನಗರಗಳಲ್ಲಿ ಜನದಟ್ಟಣೆ, ಸಣ್ಣ ಮನೆಗಳು, ಬೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಮತ್ತು ಪ್ರತಿ ದಿನ ಸಾವಿರಾರು ಜನರ ಸಂಚಾರ ಕಾರಣಗಳಿಂದಾಗಿ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದ ಸವಾಲುಗಳು ಇನ್ನೂ ಹೆಚ್ಚಾಗಿವೆ.

ಆದರೂ ದೇಶದ ಪ್ರತಿಯೊಬ್ಬ ನಾಗರಿಕರ ಶಿಸ್ತಿನ ಕಾರಣದಿಂದಾಗಿ, ಆಡಳಿತಗಳ ಸಿದ್ಧತಾ ಕ್ರಮಗಳು ಮತ್ತು ಕೊರೊನಾ ಯೋಧರ ಬದ್ಧತೆಯಿಂದಾಗಿ ನಾವು ಪರಿಸ್ಥಿತಿಯನ್ನು ಕೈಮೀರಲು ಬಿಟ್ಟಿಲ್ಲ. ಸಕಾಲದಲ್ಲಿ ಸೋಂಕು ಪತ್ತೆ, ಚಿಕಿತ್ಸೆ ಮತ್ತು ವರದಿ ಕಾರಣಗಳಿಂದಾಗಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೆಲವೇ ಕೆಲವು ರೋಗಿಗಳಿಗೆ ಮಾತ್ರ ಐಸಿಯು ಮತ್ತು ವೆಂಟಿಲೇಟರ್ ಆರೈಕೆ ಅಗತ್ಯವಿದೆ ಎಂಬುದು ಹೆಚ್ಚಿನ ಸಮಾಧಾನದ ವಿಷಯವಾಗಿದೆ.

ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡ ಪರಿಣಾಮ ನಾವು ಅಪಾಯವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಲಾಕ್ ಡೌನ್ ಸಮಯದಲ್ಲಿ ದೇಶದ ಜನರು ತೋರಿದ ಶಿಸ್ತಿನಿಂದಾಗಿ ಸೋಂಕು ಭಾರೀ ಪ್ರಮಾಣದಲ್ಲಿ ಬೆಳವಣಿಗೆಯಾಗುವುದನ್ನು ನಿಯಂತ್ರಿಸಲಾಗಿದೆ. ಇಂದು ನಾವು ಚಿಕಿತ್ಸೆ, ಆರೋಗ್ಯ ಮೂಲಸೌಕರ್ಯ ಮತ್ತು ತರಬೇತಿ ಹೊಂದಿದ ಮಾನವ ಸಂಪನ್ಮೂಲ ವಿಚಾರದಲ್ಲಿ ಅತ್ಯಂತ ಹೆಚ್ಚು ಸ್ಥಿರವಾದ ಸ್ಥಾನದಲ್ಲಿದ್ದೇವೆ.

ನಿಮಗೆ ಅರಿವಿರಬಹುದು, ಕೇವಲ ಮೂರು ತಿಂಗಳ ಹಿಂದೆ ಪಿಪಿಇಗಳಿಗಾಗಿ ಹಾಹಾಕಾರವಿತ್ತು. ಮತ್ತು ಡಯಾಗ್ನಾಸ್ಟಿಕ್ ಕಿಟ್ ಗಳಿಗೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರೀ ಕೊರತೆ ಎದುರಾಗಿತ್ತು. ಭಾರತದಲ್ಲೂ ಸಹ ಕಡಿಮೆ ದಾಸ್ತಾನು ಇತ್ತು, ನಾವು ಸಂಪೂರ್ಣವಾಗಿ ಆಮದು ಮಾಡಿಕೊಳ್ಳುವುದನ್ನೇ ಅವಲಂಬಿಸಿದ್ದೆವು. ಆದರೆ ಇಂದು ಒಂದು ಕೋಟಿಗೂ ಅಧಿಕ ಪಿಪಿಇಗಳು ಮತ್ತು ಅಷ್ಟೇ ಸಂಖ್ಯೆಯ ಎನ್-95 ಮಾಸ್ಕ್ ಗಳನ್ನು ನಾವು ರಾಜ್ಯಗಳಿಗೆ ಒದಗಿಸಿದ್ದೇವೆ. ನಮ್ಮಲ್ಲಿ ಡಯಾಗ್ನಾಸ್ಟಿಕ್ ಕಿಟ್ ಗಳು ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇದೆ ಮತ್ತು ಅವುಗಳ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಗಿದೆ. ಇದೀಗ ಪಿಎಂ-ಕೇರ್ಸ್ ನಿಧಿ ಅಡಿ, ಭಾರತದಲ್ಲೇ ತಯಾರಿಸುತ್ತಿರುವ ವೆಂಟಿಲೇಟರ್ ಗಳ ಪೂರೈಕೆಯೂ ಆರಂಭವಾಗಿದೆ.

ಇಂದು ದೇಶಾದ್ಯಂತ 900ಕ್ಕೂ ಅಧಿಕ ಕೊರೊನಾ ಸೋಂಕಿನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಲಕ್ಷಾಂತರ ಕೋವಿಡ್ ವಿಶೇಷ ಹಾಸಿಗೆಗಳು, ಸಾವಿರಾರು ಕ್ವಾರಂಟೈನ್ ಮತ್ತು ಐಸೋಲೇಷನ್ ಕೇಂದ್ರಗಳು ಹಾಗೂ ರೋಗಿಗಳಿಗೆ ಅಗತ್ಯವಾದ ಆಕ್ಸಿಜನ್ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಲಕ್ಷಾಂತರ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಸೋಂಕಿನ ಬಗ್ಗೆ ಮೊದಲಿಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ಸ್ಥಳೀಯ ಆಡಳಿತ, ರಾಜ್ಯ ಸರ್ಕಾರಗಳ ಜೊತೆಗೂಡಿ, ಹಗಲು ಇರುಳೆನ್ನದೆ ಕೆಲಸ ಮಾಡುತ್ತಿರುವುದೇ ಇದು ಸಾಧ್ಯವಾಗಲು ಕಾರಣವಾಗಿದೆ.

ಗೆಳೆಯರೇ,

ಕೊರೊನಾ ಸೋಂಕಿನ ಸಾಂಕ್ರಾಮಿಕದ ವಿರುದ್ಧ ನಮ್ಮ ಗೆಲುವು ಖಾತ್ರಿಪಡಿಸುವ ಹಲವು ಅಂಶಗಳ ಭರವಸೆಯ ನಡುವೆಯೇ ನಾವು ಆರೋಗ್ಯ ಮೂಲಸೌಕರ್ಯ, ಮಾಹಿತಿ ವ್ಯವಸ್ಥೆ, ಭಾವನಾತ್ಮಕ ಬೆಂಬಲ ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಇದೇ ಬಗೆಯಲ್ಲಿ ಒತ್ತು ನೀಡುತ್ತಾ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ.

ಮಿತ್ರರೇ,

ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಪ್ರತಿಯೊಂದು ಜೀವವನ್ನು ಉಳಿಸಲು ಹಾಗೂ ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸಲು ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಇದು ಸಾಧ್ಯವಾಗುವುದು ಪ್ರತಿಯೊಬ್ಬ ಕೊರೊನಾ ಸೋಂಕಿನ ರೋಗಿ ಸೂಕ್ತ ಚಿಕಿತ್ಸೆಯನ್ನು ಪಡೆಯುವಂತೆ ಮಾಡಿದಾಗ ಮಾತ್ರ. ಇದಕ್ಕಾಗಿ ನಾವು ಸೋಂಕು ಪತ್ತೆ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡುವ ಜೊತೆಗೆ ನಾವು ಸೋಂಕನ್ನು ಪತ್ತೆಹಚ್ಚುವುದು, ಸೋಂಕಿತರ ನಿಗಾ ವಹಿಸುವುದು ಮತ್ತು ಸೋಂಕಿತ ವ್ಯಕ್ತಿಗಳನ್ನು ಆದಷ್ಟು ಶೀಘ್ರ ಐಸೋಲೇಟ್ ಮಾಡಬೇಕಾಗಿದೆ. ನಮ್ಮ ಹಾಲಿ ಪರೀಕ್ಷಾ ಸಾಮರ್ಥ್ಯವನ್ನು ನಾವು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಮತ್ತು ನಿರಂತರವಾಗಿ ಅದನ್ನು ಉನ್ನತೀಕರಿಸಬೇಕು ಹಾಗೂ ವಿಸ್ತರಿಸುವತ್ತ ನಾವು ಗಮನಹರಿಸಬೇಕಿದೆ.

ಗೆಳೆಯರೇ,

ಕಳೆದ ಎರಡು-ಮೂರು ತಿಂಗಳಲ್ಲಿ ನಾವು, ಅತಿ ಹೆಚ್ಚಿನ ಸಂಖ್ಯೆ ಕ್ವಾರಂಟೈನ್ ಮತ್ತು ಐಸೋಲೇಷನ್ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ನಾವು ಅದರ ವೇಗವನ್ನು ಹೆಚ್ಚಿಸಬೇಕು ಆಗ ರೋಗಿಗಳು ಯಾವುದೇ ಜಾಗದಲ್ಲೂ ಹಾಸಿಗೆಗಳ ಕೊರತೆಯ ಸಮಸ್ಯೆ ಎದುರಿಸುವುದಿಲ್ಲ. ಕೊರೊನಾ ಸಾಂಕ್ರಾಮಿಕದ ಮಧ್ಯೆಯೇ ಟೆಲಿಮೆಡಿಸನ್ ಪ್ರಾಮುಖ್ಯತೆ ಹೆಚ್ಚಾಗಿದೆ. ನಾವು ಪ್ರತಿಯೊಬ್ಬರೂ, ಅವರು ಹೋಮ್ ಕ್ವಾರಂಟೈನ್ ಅಥವಾ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳಾಗಲಿ ಅಥವಾ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಾಗಲಿ ಅವರಿಗೆ ಟೆಲಿಮೆಡಿಸನ್ ನಿಂದ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ಖಾತ್ರಿಪಡಿಸಬೇಕಿದೆ.

ಗೆಳೆಯರೇ,

ಯಾವುದೇ ಸಾಂಕ್ರಾಮಿಕಗಳನ್ನು ಎದುರಿಸುವ ಸಂದರ್ಭದಲ್ಲಿ ಖಚಿತ ಮಾಹಿತಿ ಸಕಾಲದಲ್ಲಿ ದೊರಕುವಂತೆ ಮಾಡುವುದು ಅತ್ಯಂತ ಮಹತ್ವದ ಸಂಗತಿ ಎಂಬುದು ನಮಗೆಲ್ಲಾ ಅರಿವಿದೆ. ಹಾಗಾಗಿ ನಾವು ನಮ್ಮ ಸಹಾಯವಾಣಿಗಳನ್ನು ಅತ್ಯಂತ ಉಪಯುಕ್ತಗೊಳಿಸಬೇಕು ಮತ್ತು ಅವುಗಳನ್ನು ಅಸಹಾಯಕಗೊಳಿಸಬಾರದು. ನಮ್ಮ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವಂತೆಯೇ ನಾವು ಟೆಲಿಮೆಡಿಸನ್ ಮೂಲಕ ಕಾಯಿಲೆಗೊಳಗಾದವರಿಗೆ ಮಾರ್ಗದರ್ಶನ ನೀಡಲು ನಾವು ಹಿರಿಯ ವೈದ್ಯರ ದೊಡ್ಡ ತಂಡಗಳನ್ನು ಸೃಷ್ಟಿಸುವ ಅಗತ್ಯವಿದೆ. ವೈದ್ಯ ತಂಡಗಳಿಗೆ ಸೂಕ್ತ ಮಾಹಿತಿಯನ್ನು ಒದಗಿಸಬೇಕಿದೆ. ಅಲ್ಲದೆ ಸಾರ್ವಜನಿಕರಿಗಾಗಿ ಪರಿಣಾಮಕಾರಿಯಾಗಿ ಸಹಾಯವಾಣಿಗಳನ್ನು ನಡೆಸುವಂತಹ ಯುವ ಸ್ವಯಂ ಸೇವಕರ ತಂಡಗಳನ್ನು ನಾವು ಸಜ್ಜುಗೊಳಿಸಬೇಕಿದೆ.

ಆರೋಗ್ಯ ಸೇತು ಆಪ್ ಹೆಚ್ಚಿನ ಪ್ರಮಾಣದಲ್ಲಿ ಡೌನ್ ಲೋಡ್ ಮಾಡಿಕೊಂಡಿರುವ ರಾಜ್ಯಗಳಲ್ಲಿ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಲಭ್ಯವಾಗಿದೆ. ನಾವು ನಿರಂತರವಾಗಿ ಆರೋಗ್ಯ ಸೇತು ಆಪ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅದನ್ನು ಹೆಚ್ಚು ಹೆಚ್ಚು ಜನರು ಡೌನ್ ಲೋಡ್ ಮಾಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ದೇಶದಲ್ಲಿ ಇದೀಗ ಮುಂಗಾರು ಮಳೆ ಕ್ರಮೇಣ ಆರಂಭವಾಗುತ್ತಿರುವುದನ್ನು ನಾವು ಗಮನದಲ್ಲಿರಿಸಿ ಕೊಳ್ಳಬೇಕಾಗಿದೆ. ಋತುವಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ನಾವು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲವಾದರೆ ಇದು ಕೂಡ ಬೃಹತ್ ಸವಾಲಾಗಿ ಪರಿಣಮಿಸಲಿದೆ.

ಗೆಳೆಯರೇ,

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾವನಾತ್ಮಕ ಅಂಶವೂ ಅಡಗಿದೆ. ಸೋಂಕಿನ ಭಯದಿಂದಾಗಿ ಹುಟ್ಟಿಕೊಂಡಿರುವ ತಪ್ಪು ಕಲ್ಪನೆ ಅಥವಾ ಮಿಥ್ಯಗಳಿಂದ ನಮ್ಮ ಜನರನ್ನು ಹೊರತರಲು ನಾವು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ನಾವು ಜನರಿಗೆ ಕೊರೊನಾ ಸೋಂಕನ್ನು ಸೋಲಿಸಿರುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ ಮತ್ತು ಕ್ರಮೇಣ ಪ್ರಮಾಣ ಹೆಚ್ಚಾಗುತ್ತಿದೆ ಎಂದು ನಮ್ಮ ಜನರಿಗೆ ಭರವಸೆ ನೀಡಬೇಕಾಗಿದೆ. ಆದ್ದರಿಂದ ಒಂದು ವೇಳೆ ಯಾರಿಗಾದರು ಕೊರೊನಾ ಸೋಂಕು ತಗುಲಿದರೆ ಆತ/ಆಕೆ ಭಯಪಡಬೇಕಾದ ಅಗತ್ಯವಿಲ್ಲ.

ಅಗತ್ಯ ಸೇವೆಗಳನ್ನು ಒದಗಿಸುವುದು ನಮ್ಮ ಆದ್ಯತೆಯ ಕೆಲಸವಾಗಿದೆ ಮತ್ತು ಕೊರೊನಾ ಯೋಧರಾದ ನಮ್ಮ ವೈದ್ಯರು ಮತ್ತು ಇತರ ಆರೋಗ್ಯ ರಕ್ಷಣಾ ಸಿಬ್ಬಂದಿಗೆ ಅಗತ್ಯ ಸೌಕರ್ಯಗಳನ್ನು ಸಹ ಖಾತ್ರಿಪಡಿಸಬೇಕಾಗಿದೆ. ಪ್ರತಿಯೊಂದು ಹಂತದಲ್ಲೂ ಅವರನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಹಾಗೂ ಇಡೀ ದೇಶದ ಹೊಣೆಗಾರಿಕೆಯಾಗಿದೆ.

ಮಿತ್ರರೇ,

ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟದ ನಡುವೆಯೇ ನಾವು ನಮ್ಮ ನಾಗರಿಕ ಸಮಾಜದ ಮತ್ತು ಸಮಾಜದ ಪ್ರತಿಯೊಂದು ವರ್ಗದ ಜನರನ್ನು ನಿರಂತರವಾಗಿ ಉತ್ತೇಜಿಸಬೇಕಿದೆ. ಇಡೀ ಹೋರಾಟದಲ್ಲಿ ಅವರು ಅತ್ಯಂತ ಶ್ಲಾಘನೀಯ ಪಾತ್ರ ವಹಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಕಚೇರಿಗಳಲ್ಲಿ ಮಾಸ್ಕ್ ಅಥವಾ ಮುಖರಕ್ಷಾ ಕವಚ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸೇಷನ್ ಪ್ರಕ್ರಿಯೆ ಕುರಿತು ನಾವು ಜನರಿಗೆ ಪದೇ ಪದೇ ನೆನಪು ಮಾಡಿಕೊಡಬೇಕಿದೆ. ವಿಚಾರದಲ್ಲಿ ಯಾರೊಬ್ಬರೂ ನಿರ್ಲಕ್ಷ್ಯ ವಹಿಸದಂತೆ ನಾವು ನೋಡಿಕೊಳ್ಳಬೇಕಿದೆ.

ಗೆಳೆಯರೇ,

ಕೊರೊನಾ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಹಲವು ರಾಜ್ಯಗಳು ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿವೆ. ರಾಜ್ಯಗಳ ಉತ್ತಮ ಪದ್ಧತಿಗಳ ಅನುಭವವನ್ನು ಹಂಚಿಕೊಳ್ಳುವುದು ಅತಿಮುಖ್ಯವಾಗಿದೆ. ಪ್ರತಿಯೊಂದು ರಾಜ್ಯವೂ ತನ್ನ ಅನುಭವ ಮತ್ತು ಸಲಹೆಗಳನ್ನು ಮುಕ್ತ ರೀತಿಯಲ್ಲಿ ಹಂಚಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ಇದರಿಂದ ಮುಂದಿನ ದಿನಗಳಲ್ಲಿ ನಾವು ಉತ್ತಮ ಕಾರ್ಯತಂತ್ರ ರೂಪಿಸಲು ಸಹಕಾರಿಯಾಗಲಿದೆ. ನಾನು ಇದೀಗ ಸಮಾಲೋಚನೆಗಳನ್ನು ಮುಂದುವರಿಸಲು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ.

***



(Release ID: 1632299) Visitor Counter : 186