ಗೃಹ ವ್ಯವಹಾರಗಳ ಸಚಿವಾಲಯ

ರಾಷ್ಟ್ರ ರಾಜಧಾನಿಯಲ್ಲಿನ ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ

Posted On: 15 JUN 2020 4:08PM by PIB Bengaluru

ರಾಷ್ಟ್ರ ರಾಜಧಾನಿಯಲ್ಲಿನ ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ

ದೆಹಲಿಯ ಎಲ್ಲ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ
 

ಜನರ ಹಿತಕ್ಕಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಪರಿಸ್ಥಿತಿ ಎದುರಿಸಲು ಎಲ್ಲ ರಾಜಕೀಯ ಪಕ್ಷಗಳಿಗೆ ಶ್ರೀ ಅಮಿತ್ ಶಾ ಮನವಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವೆಲ್ಲರೂ ಸಾಂಕ್ರಾಮಿಕದ ವಿರುದ್ಧ ಹೋರಾಡಬೇಕು: ಕೇಂದ್ರ ಗೃಹ ಸಚಿವರು

ರಾಜಕೀಯ ಒಗ್ಗಟ್ಟು ಸಾರ್ವಜನಿಕರಲ್ಲಿ ವಿಶ್ವಾಸ ತುಂಬುತ್ತದೆ ಮತ್ತು ರಾಜಧಾನಿಯಲ್ಲಿ ಸಾಂಕ್ರಾಮಿಕದ ಸ್ಥಿತಿಯ ಸುಧಾರಣೆಗೆ ಇಂಬು ನೀಡುತ್ತದೆ

 

ದೆಹಲಿ ನಿವಾಸಿಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ಶೀಘ್ರ ತಳಮಟ್ಟದಲ್ಲಿ ಅನುಷ್ಠಾನಗೊಳ್ಳುವುದನ್ನು ಖಚಿತಪಡಿಸಲು ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ನಾನು ಮನವಿ ಮಾಡುತ್ತೇನೆ’’: ಕೇಂದ್ರ ಗೃಹ ಸಚಿವರು

ನಾವು ಹೊಸ ತಾಂತ್ರಿಕತೆಯೊಂದಿಗೆ ಕೋವಿಡ್ -19 ಪರೀಕ್ಷಾ ಸಾಮರ್ಥ್ಯ ಸುಧಾರಣೆ ಮಾಡಬೇಕು - ಶ್ರೀ ಅಮಿತ್ ಶಾ

 

ದೆಹಲಿಯಲ್ಲಿ ಕೋವಿಡ್ -19 ಸೋಂಕು ಹರಡದಂತೆ ತಡೆಗೆ ಕೇಂದ್ರ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ಕೋವಿಡ್ -19 ಪರಿಸ್ಥಿತಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಎಲ್ಲ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಅಮಿತ್ ಶಾ ನಾವೆಲ್ಲರೂ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಒಂದಾಗಿ ನಿಲ್ಲಬೇಕು ಎಂದು ಹೇಳಿದರು.

ನಿನ್ನೆ ತಾವು ಕರೆದಿದ್ದ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವರು, ತಳಮಟ್ಟದಲ್ಲಿ ಎಲ್ಲ ನಿರ್ಧಾರಗಳೂ ಆದಷ್ಟು ಬೇಗ ಅನುಷ್ಠಾನವಾಗುವುದನ್ನು ಖಾತ್ರಿಪಡಿಸಲು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ದೆಹಲಿಯ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳ ಅನುಷ್ಠಾನಕ್ಕೆ ನೆರವಾಗಲು ಪಕ್ಷದ ಕಾರ್ಯಕರ್ತರನ್ನೂ ಒಗ್ಗೂಡಿಸುವಂತೆ ಶ್ರೀ ಅಮಿತ್ ಶಾ ಕರೆ ನೀಡಿದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಜನ ಹಿತಕ್ಕಾಗಿ ಸಜ್ಜಾಗುವಂತೆ ಅಮಿತ್ ಶಾ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ರಾಜಕೀಯ ಒಗ್ಗಟ್ಟು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ, ರಾಜಧಾನಿಯಲ್ಲಿ ಸಾಂಕ್ರಾಮಿಕ ಸ್ಥಿತಿಯ ಸುಧಾರಣೆಗೆ ಇಂಬು ನೀಡುತ್ತದೆ ಎಂದು ಹೇಳಿದರು. ನಾವು ಹೊಸ ತಾಂತ್ರಿಕತೆಯೊಂದಿಗೆ ಕೋವಿಡ್ -19 ಪರೀಕ್ಷಾ ಸಾಮರ್ಥ್ಯದಲ್ಲಿ ಸುಧಾರಣೆ ಮಾಡಬೇಕು ಎಂದು ಗೃಹ ಸಚಿವರು ತಿಳಿಸಿದರು. ಒಗ್ಗಟ್ಟಿನಿಂದ ನಾವು ಸಾಂಕ್ರಾಮಿಕದಿಂದ ಹೊರಬರಬಹುದು ಮತ್ತು ಯುದ್ಧ ಗೆಲ್ಲಬಹುದು ಎಂದರು.

ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಶ್ರೀ ಸಂಜಯ್ ಸಿಂಗ್, ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಶ್ರೀ ಆದೇಶ್ ಗುಪ್ತ, ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಶ್ರೀ ಅನಿಲ್ ಚೌಧರಿ ಮತ್ತು ಬಿಎಸ್ಪಿಯ ಪ್ರತಿನಿಧಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ನಾಯಕರು, ಕೋವಿಡ್ 19 ವಿರುದ್ಧದ ಹೋರಾಟಕ್ಕೆ ತಮ್ಮ ಪ್ರಸ್ತಾವನೆಗಳನ್ನು ನೀಡಿದರು ಮತ್ತು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ದೆಹಲಿಯ ಮೂರು ಮುನಿಸಿಪಲ್ ಕಾರ್ಪೊರೇಷನ್ ಗಳಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.

ನಿನ್ನೆ ದೆಹಲಿ ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರೀವಾಲ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೋಂಕಿನ ವಿರುದ್ಧ ದೆಹಲಿಯ ಜನರ ಸುರಕ್ಷತೆಗಾಗಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಇವುಗಳಲ್ಲಿ ತಕ್ಷಣವೇ ದೆಹಲಿ ಸರ್ಕಾರಕ್ಕೆ ಪರಿವರ್ತಿಸಲಾಗಿರುವ ರೈಲು ಬೋಗಿಗಳನ್ನು ದೆಹಲಿ ಸರ್ಕಾರಕ್ಕೆ ನೀಡಿ, ಕೋವಿಡ್ -19 ರೋಗಿಗಳ ಚಿಕಿತ್ಸೆಗೆ 8000 ಹಾಸಿಗೆಗಳ ಸೇರ್ಪಡೆ, ಕಂಟೈನ್ಮೆಂಟ್ ವಲಯದ ಸಂಪರ್ಕ ಪತ್ತೆಗೆ ಮನೆ ಮನೆ ಸಮೀಕ್ಷೆ, ಕೋವಿಡ್ -19 ಪರೀಕ್ಷೆಯನ್ನು ಮುಂದಿನ 2 ದಿನಗಳಲ್ಲಿ ದುಪ್ಪಟ್ಟು ಮಾಡುವುದು ಮತ್ತು ಅದನ್ನು ಆರು ದಿನಗಳಲ್ಲಿ ಮೂರು ಪಟ್ಟು ಮಾಡುವುದೂ ಸೇರಿತ್ತು. ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ಶೇಕಡ 60ರಷ್ಟು ಕೊರೊನಾ ಹಾಸಿಗೆಗಳು ಕಡಿಮೆ ದರದಲ್ಲಿ ಲಭ್ಯವಾಗುವುದನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತು ಕೊರೊನಾ ಪರೀಕ್ಷೆ ಮತ್ತು ಚಿಕಿತ್ಸೆಗೆ ದರ ನಿಗದಿ ಮಾಡಲು, ಖಾಸಗಿ ಆಸ್ಪತ್ರೆಗಳಿಗಾಗಿ ಮಾರ್ಗಸೂಚಿಗಳ ಮೇಲ್ವಿಚಾರಣೆಗೆ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಮತ್ತು ದೂರವಾಣಿಯಲ್ಲಿ ಮಾರ್ಗದರ್ಶನಕ್ಕಾಗಿ ದೆಹಲಿಯ ಏಮ್ಸ್ ಅಡಿಯಲ್ಲಿ ಕೋವಿಡ್-19 ಸಹಾಯವಾಣಿ ಸ್ಥಾಪಿಸಲು. ನಿರ್ಧರಿಸಲಾಗಿತ್ತು.

***



(Release ID: 1631853) Visitor Counter : 252