ಗೃಹ ವ್ಯವಹಾರಗಳ ಸಚಿವಾಲಯ

ಚಂಡಮಾರುತದಿಂದ ಬಾಧಿತವಾದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕೈಗೊಂಡಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಪರಾಮರ್ಶಿಸಿದ ಎನ್ ಸಿಎಂಸಿ

Posted On: 21 MAY 2020 12:24PM by PIB Bengaluru

ಚಂಡಮಾರುತದಿಂದ ಬಾಧಿತವಾದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕೈಗೊಂಡಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು

ಪರಾಮರ್ಶಿಸಿದ ಎನ್ ಸಿಎಂಸಿ

 

ಕೇಂದ್ರ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬ ಅಧ್ಯಕ್ಷತೆಯಲ್ಲಿಂದು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ(ಎನ್ ಸಿಎಂಸಿ) ಸಭೆ ನಡೆಯಿತು. ಅದರಲ್ಲಿ ಚಂಡಮಾರುತ ಪೀಡಿತ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿನ ಸ್ಥಿತಿಗತಿಯನ್ನು ಮತ್ತು ಆಂಫಾನ್ ಚಂಡಮಾರುತದ ನಂತರ ಕೇಂದ್ರ ಸಚಿವಾಲಯಗಳು/ಏಜೆನ್ಸಿಗಳು ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗಳು, ಭಾರತೀಯ ಹವಾಮಾನ ಇಲಾಖೆ ನಿಖರ ಮುನ್ಸೂಚನೆ ಮತ್ತು ಸಕಾಲದಲ್ಲಿ ಮಾಹಿತಿಯನ್ನು ನೀಡಿದ್ದರಿಂದಾಗಿ ಹಾಗೂ ಮುಂಚಿತವಾಗಿಯೇ ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಿದ್ದರಿಂದ ಪಶ್ಚಿಮ ಬಂಗಾಳದಲ್ಲಿ 5 ಲಕ್ಷ, ಒಡಿಶಾದಲ್ಲಿ 2 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನೆರವಾಯಿತು ಎಂದರು. ಇದರಿಂದಾಗಿ ಕನಿಷ್ಠ ಜೀವಹಾನಿ ನಷ್ಟವಾಗಿದೆ ಮತ್ತು ಆಂಫಾನ್ ಚಂಡಮಾರುತದ ತೀವ್ರತೆ 1999ರಲ್ಲಿ ಒಡಿಶಾದಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದ ಸೂಪರ್ ಸೈಕ್ಲೋನ್ ಗಿಂತ ಹೆಚ್ಚಿತ್ತು ಎಂಬುದು ಪರಿಗಣಿಸಲೇಬೇಕಾದ ಅಂಶ ಎಂದರು.

ಎನ್ ಡಿಆರ್ ಎಫ್ ನಿಂದ ಪುನರ್ ಸ್ಥಾಪನಾ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚುವರಿ ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ವಿಶೇಷವಾಗಿ ಕೋಲ್ಕತ್ತಾಗೆ ಕಳುಹಿಸಲಾಗುತ್ತಿದೆ. ಎಫ್ ಸಿಐ ಕೂಡ, ಅಕ್ಕಿ ಸೇರಿದಂತೆ ಎಲ್ಲ ಆಹಾರಧಾನ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಕ್ಷಣವೇ ನೆರವು ಒದಗಿಸಲಾಗುತ್ತಿದೆ.

ಇಂಧನ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆ ಎರಡೂ ರಾಜ್ಯಗಳಲ್ಲಿ ತನ್ನ ಸೇವೆಗಳ ತ್ವರಿತ ಪುನರ್ ಸ್ಥಾಪನೆಗೆ ಎಲ್ಲ ರೀತಿಯ ನೆರವು ನೀಡುತ್ತಿವೆ. ರೈಲ್ವೆ ಮೂಲಸೌಕರ್ಯಕ್ಕೆ ಭಾರೀ ಹಾನಿ ಸಂಭವಿಸಿದ್ದು, ಅದು ಆದಷ್ಟು ಶೀಘ್ರ ತನ್ನ ಕಾರ್ಯಾಚರಣೆ ಪುನರಾರಂಭಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ.

ಚಂಡಮಾರುತ ಬಾಧಿತ ಪ್ರದೇಶಗಳಲ್ಲಿ ಕೃಷಿ, ಇಂಧನ ಮತ್ತು ದೂರಸಂಪರ್ಕ ಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಪಶ್ಚಿಮ ಬಂಗಾಳ ತಿಳಿಸಿತು. ತಮ್ಮ ರಾಜ್ಯದಲ್ಲಿ ಕೃಷಿಗೆ ಮಾತ್ರ ಹಾನಿ ಸಂಭವಿಸಿದೆ ಎಂದು ಒಡಿಶಾ ಸರ್ಕಾರ ಹೇಳಿದೆ.

ಪರಿಹಾರ ಮತ್ತು ಪುನರ್ ಸ್ಥಾಪನಾ ಕಾರ್ಯಗಳನ್ನು ಪರಿಶೀಲಿಸಿದ ಕೇಂದ್ರ ಸಂಪುಟ ಕಾರ್ಯದರ್ಶಿ, ಎಲ್ಲ ಕೇಂದ್ರ ಸಚಿವಾಲಯಗಳು/ಏಜೆನ್ಸಿಗಳು, ಒಡಿಶಾ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿರಬೇಕು ಮತ್ತು ಅವರು ಮನವಿ ಮಾಡಿದ ಎಲ್ಲ ಸಹಾಯವನ್ನು ಶೀಘ್ರವಾಗಿ ಒದಗಿಸಿಕೊಡಬೇಕು ಎಂದು ಸೂಚಿಸಿದರು. ಗೃಹ ವ್ಯವಹಾರಗಳ ಸಚಿವಾಲಯ, ಚಂಡಮಾರುತದಿಂದಾಗಿ ಆಗಿರುವ ಹಾನಿಯ ಪ್ರಾಥಮಿಕ ಅಂದಾಜು ನಡೆಸಿ, ವರದಿಯನ್ನು ಸಲ್ಲಿಸಲು ತಂಡಗಳನ್ನು ಕಳುಹಿಸಲಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಎನ್ ಸಿಎಂಸಿ ಸಭೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಅಲ್ಲದೆ ಗೃಹ ವ್ಯವಹಾರ, ರಕ್ಷಣಾ, ಬಂದರು, ನಾಗರಿಕ ವಿಮಾನಯಾನ, ರೈಲ್ವೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇಂಧನ, ದೂರಸಂಪರ್ಕ, ಉಕ್ಕು, ಕುಡಿಯುವ ನೀರು ಮತ್ತು ನೈರ್ಮಲೀಕರಣ, ಆರೋಗ್ಯ, ಐಎಂಡಿ, ಎನ್ ಡಿಎಂಎ, ಎನ್ ಡಿಆರ್ ಎಫ್ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1625735) Visitor Counter : 201