ಪ್ರಧಾನ ಮಂತ್ರಿಯವರ ಕಛೇರಿ

ಭಾರತದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸು ವಲಯ, ರಚನಾತ್ಮಕ ಮತ್ತು ಕಲ್ಯಾಣ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿಯವರಿಂದ ಸಭೆ

Posted On: 02 MAY 2020 10:57PM by PIB Bengaluru

ಭಾರತದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸು ವಲಯ, ರಚನಾತ್ಮಕ ಮತ್ತು ಕಲ್ಯಾಣ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿಯವರಿಂದ ಸಭೆ

 

ಪ್ರಸ್ತುತ ಸನ್ನಿವೇಶದಲ್ಲಿ ಬೆಳವಣಿಗೆ ಮತ್ತು ಜನರ ಕಲ್ಯಾಣವನ್ನು ಉತ್ತೇಜಿಸಲು ಹಣಕಾಸು ಕ್ಷೇತ್ರದಲ್ಲಿ ಕ್ರಮಗಳು ಮತ್ತು ರಚನಾತ್ಮಕ ಸುಧಾರಣೆಗಳ ಕಾರ್ಯತಂತ್ರಗಳನ್ನು ಚರ್ಚಿಸಲು ಪ್ರಧಾನಿಯವರು ಸಭೆ ನಡೆಸಿದರು.

ಹಣಕಾಸು ಸಚಿವರು ಮತ್ತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿಯವರು ಎಂಎಸ್ಎಂಇ ಮತ್ತು ರೈತರನ್ನು ಬೆಂಬಲಿಸುವ, ಹಣದ ಹರಿವನ್ನು ಹೆಚ್ಚಿಸುವ ಮತ್ತು ಸಾಲದ ಹರಿವನ್ನು ಬಲಪಡಿಸುವ ಕಾರ್ಯತಂತ್ರಗಳು ಮತ್ತು ಕ್ರಮಗಳನ್ನು ಕುರಿತು ಚರ್ಚಿಸಿದರು. ಕೋವಿಡ್-19 ಹಿನ್ನೆಲೆಯಲ್ಲಿ ಹಣಕಾಸಿನ ಸ್ಥಿರತೆಯನ್ನು ಖಾತ್ರಿಪಡಿಸುವ ಮಾರ್ಗಗಳು ಮತ್ತು ವಿಧಾನಗಳು ಮತ್ತು ಪರಿಣಾಮಗಳಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ವ್ಯವಹಾರಗಳಿಗೆ ಅನುವು ಮಾಡಿಕೊಡುವ ಕ್ರಮಗಳ ಬಗ್ಗೆಯೂ ಪ್ರಧಾನಿಯವರು ಚರ್ಚಿಸಿದರು.

ಕಾರ್ಮಿಕರ ಮತ್ತು ಜನಸಾಮಾನ್ಯರ ಕಲ್ಯಾಣದ ವಿಷಯದ ಬಗ್ಗೆ ಒತ್ತು ನೀಡಿದ ಪ್ರಧಾನಿಯವರು, ಕೋವಿಡ್-19ರಿಂದ ಉಂಟಾಗಿರುವ ಅಡೆತಡೆಗಳಿಂದಾಗಿ ತೊಂದರೆಗಳನ್ನು ನಿವಾರಿಸಲು ವ್ಯವಹಾರಗಳಿಗೆ ಸಹಾಯ ಮಾಡುವ ಮೂಲಕ ಲಾಭದಾಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವನ್ನು ತಿಳಿಸಿದರು.

ಹಿಂದೆ ಕೈಗೊಂಡ ಪ್ರಮುಖ ರಚನಾತ್ಮಕ ಸುಧಾರಣೆಗಳನ್ನು ಬಲಪಡಿಸುವ ಅಗತ್ಯತೆ ಮತ್ತು ಸಾಂಸ್ಥಿಕ ಆಡಳಿತ, ಸಾಲ ಮಾರುಕಟ್ಟೆಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೊಸ ರಚನಾತ್ಮಕ ಸುಧಾರಣೆಗಳ ಬಗ್ಗೆಯೂ ಪ್ರಧಾನಿಯವರು ಒತ್ತಿ ಹೇಳಿದರು.

ಕೋವಿಡ್-19 ಸಮರದಲ್ಲಿ ಕಳೆದುಹೋದ ಸಮಯವನ್ನು ಸರಿದೂಗಿಸಲು ಹೊಸ ಮೂಲಸೌಕರ್ಯ ಯೋಜನೆಗಳ ಕಾಮಗಾರಿಗಳನ್ನು ಪ್ರಾರಂಭಿಸಲು ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಕೆಲಸಗಳನ್ನು ತ್ವರಿತಗೊಳಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಪ್ರಧಾನಿ ಹೇಳಿದರು. ವಿಳಂಬವನ್ನು ತಪ್ಪಿಸಲು ಮತ್ತು ಉದ್ಯೋಗ ಸೃಷ್ಟಿಗೆ ಅನುವು ಮಾಡಿಕೊಡಲು ರಾಷ್ಟ್ರೀಯ ಮೂಲಸೌಕರ್ಯ ಅಡಿಯಲ್ಲಿ ಕೈಗೆತ್ತಿಕೊಂಡ ಯೋಜನೆಗಳನ್ನು ಆಗಾಗ್ಗೆ ಉನ್ನತ ಮಟ್ಟದಲ್ಲಿ ಪರಿಶೀಲಿಸಬೇಕು ಎಂದು ಅವರು ತಿಳಿಸಿರು.

ವಿವಿಧ ಸಚಿವಾಲಯಗಳು ಕೈಗೊಂಡ ಸುಧಾರಣಾ ಉಪಕ್ರಮಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಬೇಕು ಮತ್ತು ಹೂಡಿಕೆಯ ಹರಿವು ಮತ್ತು ಬಂಡವಾಳ ಸೃಷ್ಟಿಗೆ ಇರುವ ಯಾವುದೇ ಅಡಚಣೆಗಳನ್ನು ನಿವಾರಿಸಲು ಸಮಯೋಚಿತ  ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲಾಯಿತು.

ಸಭೆಯಲ್ಲಿ ಗೃಹ ಸಚಿವರು, ಹಣಕಾಸು ಸಚಿವರು, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

***


(Release ID: 1620719) Visitor Counter : 269