ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

325000ಕ್ಕೂ ಅಧಿಕ ಮಂದಿ “ಜನೌಷಧಿ ಸುಗಮ” ಮೊಬೈಲ್ ಆಪ್ ಬಳಕೆ

Posted On: 30 APR 2020 11:52AM by PIB Bengaluru

ಜನೌಷಧಿ ಕೇಂದ್ರಗಳನ್ನು ತಲುಪಲು 325000ಕ್ಕೂ ಅಧಿಕ ಮಂದಿ ಜನೌಷಧಿ ಸುಗಮಮೊಬೈಲ್ ಆಪ್ ಬಳಕೆ

 

ಕೋವಿಡ್ -19 ಬಿಕ್ಕಟ್ಟಿನ ಕಾರಣದಿಂದ ಜಾರಿಯಲ್ಲಿರುವ ರಾಷ್ಟ್ರವ್ಯಾಪೀ ಲಾಕ್ ಡೌನ್ ನಡುವೆ ಜನೌಷಧಿ ಸುಗಮ ಆಪ್, ಜನರಿಗೆ ಅವರ ಹತ್ತಿರದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು (ಪಿ.ಎಂ.ಜೆ..ಕೆ.) ಅರಿಯಲು ಮತ್ತು ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಿಯ ಲಭ್ಯತೆಯನ್ನು ತಿಳಿಯಲು ಸಹಾಯ ಮಾಡುತ್ತಿದೆ.

ಸುಮಾರು 325000 ಕ್ಕೂ ಅಧಿಕ ಜನರು ಜನೌಷಧಿ ಸುಗಮ ಮೊಬೈಲ್ ಆಪ್ ನ್ನು ಅದು ಒದಗಿಸುವ ವಿವಿಧ ಸೌಲಭ್ಯಗಳಿಗಾಗಿ ಬಳಸುತ್ತಿದ್ದಾರೆ. ಬಳಕೆದಾರರ ಬದುಕನ್ನು ಸುಲಭಗೊಳಿಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸುವ ಕಾರ್ಯಕ್ರಮದಂಗವಾಗಿ , ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿ.ಎಂ.ಬಿ.ಜೆ.ಪಿ.) ಅಪ್ಲಿಕೇಶನನ್ನು ಅಭಿವೃದ್ದಿಪಡಿಸಲಾಗಿದೆ. ಔಷಧಿಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬ್ಯುರೋ ಆಫ್ ಫಾರ್ಮಾ ಪಿ.ಎಸ್.ಯು. ಇಂಡಿಯಾ (ಬಿ.ಪಿ.ಪಿ..) ಇದನ್ನು ಅಭಿವೃದ್ದಿಪಡಿಸಿದೆ. ಭಾರತ ಸರಕಾರದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ಇದಕ್ಕೆ ಕೈಜೋಡಿಸಿದೆ. ಸಾರ್ವಜನಿಕರಿಗೆ ಅವರ ಬೆರಳ ತುದಿಯಲ್ಲಿ ಡಿಜಿಟಲ್ ವೇದಿಕೆಯನ್ನು ಒದಗಿಸುವ ಮೂಲಕ ಹತ್ತಿರದ ಜನೌಷಧಿ ಕೇಂದ್ರಗಳನ್ನು ಗುರುತಿಸುವುದು, ಗೂಗಲ್ ಮ್ಯಾಪ್ ಮೂಲಕ ಕೇಂದ್ರದ ಸ್ಥಳವನ್ನು ತೋರಿಸುವುದು , ಜನೌಷಧಿ ಜೆನೆರಿಕ್ ಔಷಧಿಗಳನ್ನು ಹುಡುಕುವುದು, ಉತ್ಪನ್ನ ಮತ್ತು ಬ್ರಾಂಡೆಡ್ ಕಂಪೆನಿಗಳ ಔಷಧಿಗಳ ಎಂ.ಆರ್. ಪಿ.ಯನ್ನು ತುಲನೆ ಮಾಡಿ ಉಳಿತಾಯ ಲೆಕ್ಕಾಚಾರ ಮಾಡುವುದು, ಇತ್ಯಾದಿಗಳಿಗೆ ಇದು ಸಹಕಾರಿ.

ಜನೌಷಧಿ ಸುಗಮ್ ಮೊಬೈಲ್ ಆಪ್ ಆಂಡ್ರಾಯಿಡ್ ಮತ್ತು .-ಫೋನ್ ವೇದಿಕೆಗಳಲ್ಲಿ ಲಭ್ಯ. ಇದನ್ನು ಉಚಿತವಾಗಿ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ಗಳಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಕೋವಿಡ್ -19 ವಿರುದ್ದದ ಹೋರಾಟದಲ್ಲಿ ಭಾರತ ಸರಕಾರವು ಗಮನಾರ್ಹ ಯೋಜನೆಗಳಾದ 900 ಕ್ಕೂ ಅಧಿಕ ಜೆನೆರಿಕ್ ಔಷಧಿಗಳನ್ನು ಮತ್ತು 154 ಶಸ್ತ್ರಚಿಕಿತ್ಸಾ ಸಲಕರಣೆಗಳನ್ನು ಮತ್ತು ಸಂಬಂಧಿ ಇತರ ವಸ್ತುಗಳನ್ನು ಕೈಗೆಟಕುವ ದರದಲ್ಲಿ ದೇಶದ ಪ್ರತೀ ನಾಗರಿಕರಿಗೆ ಒದಗಿಸುತ್ತಿರುವ ಪಿ.ಎಂ. ಬಿ.ಜೆ.ಪಿ. ಯಂತಹ ಯೋಜನೆಗಳ ಮೂಲಕ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮುಖವನ್ನು ಕ್ರಾಂತಿಕಾರಕ ರೀತಿಯಲ್ಲಿ ಬದಲಾಯಿಸಲು ಹೊರಟಿದೆ.

ಪ್ರಸ್ತುತ 6,300 ಕ್ಕೂ ಅಧಿಕ ಪಿ.ಎಂ.ಜೆ..ಕೆ. ಗಳು ದೇಶಾದ್ಯಂತ 726 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿವೆ. ಲಾಕ್ ಡೌನ್ ಅವಧಿಯಲ್ಲಿ ಪಿ.ಎಂ.ಬಿ.ಜೆ.ಪಿ.ಯು ಮಾಹಿತಿಪೂರ್ಣ ಪೋಸ್ಟ್ ಗಳ ಮೂಲಕ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನರಿಗೆ ಕೊರೊನಾವೈರಸ್ ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗೆ ತಿಳಿ ಹೇಳುವ ಸಹಾಯ ಮಾಡುತ್ತಿದೆ.

***



(Release ID: 1620533) Visitor Counter : 166