ಪ್ರಧಾನ ಮಂತ್ರಿಯವರ ಕಛೇರಿ

ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳ ಉತ್ತೇಜನ ಕುರಿತು ಪ್ರಧಾನಿ ಮೋದಿಯವರಿಂದ ಸಭೆ

Posted On: 30 APR 2020 8:52PM by PIB Bengaluru

ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳ ಉತ್ತೇಜನ ಕುರಿತು ಪ್ರಧಾನಿ ಮೋದಿಯವರಿಂದ ಸಭೆ

 

ಕೋವಿಡ್-19 ಹಿನ್ನೆಲೆಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಗಣಿ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿನ ಸಂಭಾವ್ಯ ಆರ್ಥಿಕ ಸುಧಾರಣೆಗಳನ್ನು ಕುರಿತು ಪ್ರಧಾನಿ ನರೇಂದ್ರ ಮೋದಿಯವರು ವಿಸ್ತೃತ ಸಭೆ ನಡೆಸಿದರು. ದೇಶೀಯ ಮೂಲಗಳಿಂದ ಖನಿಜ ಸಂಪನ್ಮೂಲಗಳ ಸುಲಭ ಮತ್ತು ಸಮೃದ್ಧ ಲಭ್ಯತೆಯನ್ನು ಖಾತರಿಪಡಿಸುವುದು, ಪರಿಶೋಧನೆಯನ್ನು ಹೆಚ್ಚಿಸುವುದು, ಹೂಡಿಕೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಆಕರ್ಷಿಸುವುದು, ಪಾರದರ್ಶಕ ಮತ್ತು ಪರಿಣಾಮಕಾರಿ ಪ್ರಕ್ರಿಯೆಗಳ ಮೂಲಕ ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಯ ಬಗ್ಗೆ ಚರ್ಚೆ ನಡೆಸಲಾಯಿತು.

ಹೆಚ್ಚುವರಿ ಘಟಕಗಳನ್ನು ಹರಾಜು ಮಾಡುವುದು, ಹರಾಜಿನಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಖನಿಜ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಗಣಿಗಾರಿಕೆ ವೆಚ್ಚ ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವುದು, ಸುಗಮ ವ್ಯಾಪಾರವನ್ನು ಹೆಚ್ಚಿಸುವುದು ಮತ್ತು ಪರಿಸರ ಸುಸ್ಥಿರ ಅಭಿವೃದ್ಧಿಯೊಂದಿಗೆ ಇಂಗಾಲವನ್ನು ಕಡಿಮೆ ಮಾಡುವುದು ಸಹ ಚರ್ಚೆಯ ಪ್ರಮುಖ ಭಾಗವಾಗಿದ್ದವು.

ಹರಾಜು ಪ್ರಕ್ರಿಯೆಯಲ್ಲಿ ಸುಧಾರಣೆಗಳು, ದಕ್ಷ ಸಾಂಸ್ಥಿಕ ವ್ಯವಸ್ಥೆಗಳು, ಪರಿಶೋಧನೆ ಮತ್ತು ಗಣಿಗಾರಿಕೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ, ಸಾರ್ವಜನಿಕ ವಲಯವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವುದರ ಜೊತೆಗೆ ಖನಿಜ ಅಭಿವೃದ್ಧಿ ನಿಧಿಯ ಮೂಲಕ ಸಮುದಾಯ ಅಭಿವೃದ್ಧಿ ಚಟುವಟಿಕೆಗಳನ್ನೂ ಸಹ ಚರ್ಚಿಸಲಾಯಿತು. ದೇಶೀಯ ಸರಬರಾಜಿಗಾಗಿ ಸಮುದ್ರ-ಮಾರ್ಗಗಳ ಬಳಕೆ ಸೇರಿದಂತೆ ಖನಿಜಗಳ ಸ್ಥಳಾಂತರಿಸುವ ಮೂಲಸೌಕರ್ಯಗಳನ್ನು ವಿಸ್ತರಣೆ ಮತ್ತು ಸುಧಾರಣೆ ಸಹ ಚರ್ಚೆಯಲ್ಲಿ ಬಂದವು.

ಗಣಿಗಳಿಂದ ರೈಲ್ವೆ ಸ್ಲೈಡಿಂಗ್ಗೆ ಕಲ್ಲಿದ್ದಲು ಸಾಗಣೆಗೆ ದಕ್ಷ ಮತ್ತು ಪರಿಸರ ಸ್ನೇಹಿ ಸಂಪರ್ಕವನ್ನು ಹೆಚ್ಚಿಸುವುದು, ರೈಲ್ವೆ ವ್ಯಾಗನ್ಗಳಿಗೆ ಸ್ವಯಂಚಾಲಿತ ಲೋಡಿಂಗ್, ಕಲ್ಲಿದ್ದಲು ಅನಿಲೀಕರಣ ಮತ್ತು ದ್ರವೀಕರಣ, ಕಲ್ಲಿದ್ದಲು ಬೆಡ್ ಮೀಥೇನ್ ಪರಿಶೋಧನೆಗಳ ಸಂಭಾವ್ಯ ಸುಧಾರಣೆಗಳನ್ನೂ ಚರ್ಚಿಸಲಾಯಿತು.

ಉದ್ಯೋಗಾವಕಾಶಗಳ ಹೆಚ್ಚಳ ಮತ್ತು ಪ್ರಗತಿಯ ವೃದ್ಧಿಯಲ್ಲಿ ಗಣಿ ಕ್ಷೇತ್ರದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪರಿಶೀಲಿಸಿದರು.

ಖನಿಜಗಳ ಉತ್ಪಾದನೆಯಲ್ಲಿ ದೇಶದ ಸ್ವಾವಲಂಬನೆ ಮತ್ತು ಅವುಗಳ ದೇಶೀಯ ಸಂಸ್ಕರಣೆಯ ಬಗ್ಗೆ ಪ್ರಧಾನಿಯವರು ವಿಶೇಷ ಗಮನ ಹರಿಸಿದರು. ಖನಿಜ ವಲಯದ ಕಾರ್ಯಾಚರಣೆಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಇರಬೇಕು ಎಂದು ಸಲಹೆ ನೀಡಿದ ಅವರು, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಸಮರ್ಥ ಗಣಿಗಾರಿಕೆಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವಂತೆ ಅವರು ಸಲಹೆ ನೀಡಿದರು. ಆರ್ಥಿಕತೆಯ ವೃದ್ಧಿಗಾಗಿ ಖಾಸಗಿ ಹೂಡಿಕೆಯ ಅನುಮತಿಗಳ ವಿಳಂಬವನ್ನು ಕಡಿಮೆ ಮಾಡುವುದು ಮತ್ತು ರಾಜ್ಯಗಳೊಂದಿಗೆ ಸಹಭಾಗಿತ್ವವನ್ನು ಸಾಧಿಸುವ ಗುರಿಯನ್ನು ಅವರು ನಿರ್ದೇಶಿಸಿದರು. ವರ್ಷ ದೇಶದಲ್ಲಿ ಬೃಹತ್ ಕಲ್ಲಿದ್ದಲು ದಾಸ್ತಾನು ಲಭ್ಯವಿರುವುದರಿಂದ, ಉಷ್ಣ ಕಲ್ಲಿದ್ದಲು ಆಮದು ಪರ್ಯಾಯವನ್ನು ಗುರಿಯಾಗಿಸಿಕೊಳ್ಳುವಂತೆ ಅವರು ನಿರ್ದೇಶನ ನೀಡಿದರು.

***



(Release ID: 1619954) Visitor Counter : 202