ಪ್ರಧಾನ ಮಂತ್ರಿಯವರ ಕಛೇರಿ

ಭಾರತದಲ್ಲಿ ಹೂಡಿಕೆ ಉತ್ತೇಜನಕ್ಕೆ ಕಾರ್ಯತಂತ್ರ ಕುರಿತು ಚರ್ಚಿಸಲು ಸಮಗ್ರ ಸಭೆ ನಡೆಸಿದ ಪ್ರಧಾನಮಂತ್ರಿ

Posted On: 30 APR 2020 4:59PM by PIB Bengaluru

ಭಾರತದಲ್ಲಿ ಹೂಡಿಕೆ ಉತ್ತೇಜನಕ್ಕೆ ಕಾರ್ಯತಂತ್ರ ಕುರಿತು ಚರ್ಚಿಸಲು ಸಮಗ್ರ ಸಭೆ ನಡೆಸಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ, ಭಾರತಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಮತ್ತು ಸ್ಥಳೀಯ ಹೂಡಿಕೆಗಳನ್ನು ಉತ್ತೇಜಿಸಲು ಸಮಗ್ರ ಸಭೆ ನಡೆಸಿದರು.

ದೇಶದಲ್ಲಿ ಹಾಲಿ ಕೈಗಾರಿಕಾ ಜಮೀನುಗಳು/ ಜಾಗಗಳು/ ಎಸ್ಟೇಟ್ ಗಳಲ್ಲಿ ಹೆಚ್ಚಿನ ಮೂಲಸೌಕರ್ಯಗಳನ್ನು ಉತ್ತೇಜಿಸಲು ಮತ್ತು ಅಗತ್ಯವಾದ ಹಣಕಾಸಿನ ನೆರವು ನೀಡಲು ಯೋಜನೆಯೊಂದನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಯಿತು. ಸಭೆಯ ವೇಳೆ ಪ್ರಧಾನಮಂತ್ರಿಯವರು, ಹೂಡಿಕೆದಾರರ ಕೈಹಿಡಿಯಲು, ಅವರ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿರುವ ಎಲ್ಲ ಕೇಂದ್ರ ಮತ್ತು ರಾಜ್ಯ ಅನುಮತಿಗಳನ್ನು ಸಕಾಲದಲ್ಲಿ ಪಡೆಯಲು ನೆರವಾಗಲು ಹೆಚ್ಚು ಸಕ್ರಿಯ ದೃಷ್ಟಿಕೋನದ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಭಾರತಕ್ಕೆ ಹೂಡಿಕೆಗಳನ್ನು ತ್ವರಿತಗತಿಯಲ್ಲಿ ತರಲು ಮತ್ತು ಭಾರತೀಯ ದೇಶೀಯ ಕ್ಷೇತ್ರಗಳನ್ನು ಉತ್ತೇಜಿಸಲು ವಿವಿಧ ತಂತ್ರಗಳ ಕುರಿತು ಚರ್ಚಿಸಲಾಯಿತು. ರಾಜ್ಯಗಳಿಗೆ ತಮ್ಮ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಹೆಚ್ಚು ಕಾರ್ಯಪ್ರವೃತ್ತರಾಗಲು ಮಾರ್ಗದರ್ಶನ ನೀಡುವ ಬಗ್ಗೆಯೂ ಸವಿಸ್ತಾರವಾಗಿ ಚರ್ಚಿಸಲಾಯಿತು.

ವಿವಿಧ ಸಚಿವಾಲಯಗಳು ಕೈಗೊಂಡ ಸುಧಾರಣಾ ಉಪಕ್ರಮಗಳು ಅಡೆತಡೆಯಿಲ್ಲದೆ ಮುಂದುವರಿಯಬೇಕು ಮತ್ತು ಹೂಡಿಕೆ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಯಾವುದೇ ಅಡೆತಡೆಗಳಿದ್ದರೂ ನಿವಾರಿಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.
ಈ ಸಭೆಯಲ್ಲಿ ಹಣಕಾಸು ಸಚಿವರು, ಗೃಹ ಸಚಿವರು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ಹಣಕಾಸು ಖಾತೆ ರಾಜ್ಯ ಸಚಿವರು ಹಾಗೂ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

***



(Release ID: 1619661) Visitor Counter : 216