ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಜಾ ಗಣರಾಜ್ಯ ಬಾಂಗ್ಲಾದೇಶದ ಪ್ರಧಾನಮಂತ್ರಿ ಘನತೆವೆತ್ತ ಶೇಖ್ ಹಸೀನಾ ನಡುವೆ ದೂರವಾಣಿ ಮಾತುಕತೆ

Posted On: 29 APR 2020 8:19PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಜಾ ಗಣರಾಜ್ಯ ಬಾಂಗ್ಲಾದೇಶದ ಪ್ರಧಾನಮಂತ್ರಿ ಘನತೆವೆತ್ತ ಶೇಖ್ ಹಸೀನಾ ನಡುವೆ ದೂರವಾಣಿ ಮಾತುಕತೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಜಾ ಗಣರಾಜ್ಯ ಬಾಂಗ್ಲಾದೇಶದ ಪ್ರಧಾನಮಂತ್ರಿ ಘನತೆವೆತ್ತ ಶೇಖ್ ಹಸೀನಾ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

ಪ್ರಧಾನಮಂತ್ರಿ ಮೋದಿ ಅವರು, ಭಾರತದ ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಬಾಂಗ್ಲಾದೇಶದ ಪ್ರಜೆಗಳಿಗೆ ಪವಿತ್ರ ಮಾಸ ರಂಜಾನ್ ನ ಶುಭಾಶಯಗಳನ್ನು ಸಲ್ಲಿಸಿದರು.

ಇಬ್ಬರೂ ನಾಯಕರು ಕೋವಿಡ್ -19 ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು, ತಮ್ಮ ತಮ್ಮ ರಾಷ್ಟ್ರಗಳಲ್ಲಿ ಇದರ ಪರಿಣಾಮ ತಗ್ಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಸ್ಪರ ವಿವರ ನೀಡಿದರು.

ಸಾರ್ಕ್ ರಾಷ್ಟ್ರಗಳ ನಾಯಕರುಗಳ ನಡುವೆ ಮಾರ್ಚ್ 15ರಂದು ಒಪ್ಪಿಗೆಯಾದ ವಿಶೇಷ ವ್ಯವಸ್ಥೆಯ ಅನುಷ್ಠಾನದಲ್ಲಿನ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ಸಂತಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಮೋದಿ ಅವರು ಸಾರ್ಕ್ ಕೋವಿಡ್ 19 ತುರ್ತು ನಿಧಿಗೆ 1.5 ದಶಲಕ್ಷ ಅಮೆರಿಕನ್ ಡಾಲರ್ ಕೊಡುಗೆ ನೀಡಿರುವುದಕ್ಕಾಗಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರಿಗೆ ಧನ್ಯವಾದ ಅರ್ಪಿಸಿದರು.

ಪ್ರಧಾನಮಂತ್ರಿ ಶೇಖ್ ಹಸೀನಾ ಅವರು, ವಲಯದಲ್ಲಿ ಕೋವಿಡ್ 19 ನಿಗ್ರಹದ ಸಂಯೋಜಿತ ಪ್ರಯತ್ನಗಳ ನಾಯಕತ್ವ ವಹಿಸಿರುವುದಕ್ಕಾಗಿ ಮತ್ತು ಬಾಂಗ್ಲಾದೇಶಕ್ಕೆ ಸಾಮರ್ಥ್ಯ ವರ್ಧನೆ ಮತ್ತು ವೈದ್ಯಕೀಯ ಪೂರೈಕೆಗಳೆರಡರ ನೆರವು ನೀಡಿರುವುದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

ಇಬ್ಬರೂ ನಾಯಕರು ರಸ್ತೆ, ರೈಲು ಮತ್ತು ಒಳನಾಡ ಜಲ ಸಾರಿಗೆ ಹಾಗೂ ವಾಯು ಮಾರ್ಗದಲ್ಲಿ ಅತ್ಯಾವಶ್ಯಕ ವಸ್ತುಗಳ ನಿರಂತರ ಪೂರೈಕೆಗೆ ಸಂತೃಪ್ತಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಮೋದಿ ಅವರು, ಇತಿಹಾಸ, ಸಂಸ್ಕೃತಿ, ಭಾಷೆ ಮತ್ತು ಭ್ರಾತೃತ್ವದ ಹಂಚಿಕೆಯ ಬಾಂಧವ್ಯಗಳನ್ನು ಸ್ಮರಿಸಿ, ದ್ವಿಪಕ್ಷೀಯ ಸಂಬಂಧಗಳ ಅತ್ಯುತ್ತಮ ಸ್ಥಿತಿಯ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದರು, ಮತ್ತು ಕೋವಿಡ್-19 ಪ್ರಸರಣವನ್ನು ತಗ್ಗಿಸಲು ಮತ್ತು ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ತಗ್ಗಿಸುವಲ್ಲಿ ಬಾಂಗ್ಲಾದೇಶಕ್ಕೆ ನೆರವಾಗಲು ಭಾರತದ ಸಿದ್ಧತೆಯನ್ನು ಖಚಿತಪಡಿಸಿದರು.

ಪ್ರಧಾನಮಂತ್ರಿಯವರು ಐತಿಹಾಸಿಕ ಮುಜಿಬ್ ಬರ್ಶೋದಲ್ಲಿ ಬಾಂಗ್ಲಾದೇಶದ ಸ್ನೇಹಪರ ಜನರ ಮತ್ತು ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶುಭ ಹಾರೈಸಿದರು.

***



(Release ID: 1619493) Visitor Counter : 219