ಪ್ರಧಾನ ಮಂತ್ರಿಯವರ ಕಛೇರಿ
’ಮನ್ ಕಿ ಬಾತ್ 2.0” 11 ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ಭಾಷಣ
Posted On:
26 APR 2020 4:49PM by PIB Bengaluru
’ಮನ್ ಕಿ ಬಾತ್ 2.0” 11 ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ಭಾಷಣ
ಕೊರೊನಾ ವಿರುದ್ದ ಭಾರತದ ಹೋರಾಟ ಜನರಿಂದ ಚಾಲಿತ: ಪ್ರಧಾನ ಮಂತ್ರಿ
ಉಗುಳುವ ಅಭ್ಯಾಸವನ್ನು ತೊಡೆದುಹಾಕಲು ಪ್ರಧಾನ ಮಂತ್ರಿ ಕರೆ
“ಮನ್ ಕಿ ಬಾತ್ 2.0”ನ 11 ನೇ ಆವೃತ್ತಿಯಲ್ಲಿ ಮಾತನಾಡಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಕೊರೋನಾ ವಿರುದ್ದ ಭಾರತದ ಹೋರಾಟ ಜನರಿಂದ ಚಾಲಿತವಾದುದು ಮತ್ತು ಜನರೊಂದಿಗೆ ಸರಕಾರ ಮತ್ತು ಆಡಳಿತಗಳು ಸೇರಿ ಈ ಜಾಗತಿಕ ಸಾಂಕ್ರಾಮಿಕದೆದುರು ಸೆಣಸುತ್ತಿವೆ ಎಂದರು. ದೇಶದ ಪ್ರತಿಯೊಬ್ಬ ನಾಗರಿಕರೂ ಈ ಯುದ್ದದಲ್ಲಿ ಸೈನಿಕರಾಗಿದ್ದಾರೆ ಮತ್ತು ಅವರೇ ಯುದ್ದವನ್ನು ಮುನ್ನಡೆಸುತ್ತಿದ್ದಾರೆ ಎಂದವರು ಹೇಳಿದರು. ಪ್ರತಿಯೊಂದು ಕಡೆ ಪರಸ್ಪರ ಸಹಾಯ ಮಾಡಲು ಮುಂದಾಗಿರುವ ಜನತೆಯ ನಿರ್ಧಾರವನ್ನು ಅವರು ಶ್ಲಾಘಿಸಿದರು.
ಅವಶ್ಯಕತೆ ಇದ್ದವರಿಗೆ ಆಹಾರ ವ್ಯವಸ್ಥೆ ಮಾಡುವುದರಿಂದ , ಪಡಿತರ ವಿತರಣೆ, ಲಾಕ್ ಡೌನ್ ಅನುಸರಣೆ, ಆಸ್ಪತ್ರೆಗಳಲ್ಲಿ ವ್ಯವಸ್ಥೆಯಿಂದ ಹಿಡಿದು ದೇಶೀಯವಾಗಿ ವೈದ್ಯಕೀಯ ಸಲಕರಣೆಗಳ ಉತ್ಪಾದನೆಯವರೆಗೆ ಇಡೀ ದೇಶ ಒಗ್ಗೂಡಿ ಮುನ್ನಡೆಯುತ್ತಿದೆ ಎಂದವರು ಹೇಳಿದರು. ಅತಿ ವಿಶ್ವಾಸದ ಬಲೆಗೆ ಸಿಕ್ಕಿ ಬೀಳಬಾರದು ಎಂದು ಜನತೆಗೆ ಮನವಿ ಮಾಡಿದ ಪ್ರಧಾನ ಮಂತ್ರಿ ಅವರು ಕೊರೊನಾ ಇನ್ನೂ ಅವರ ನಗರ, ಗ್ರಾಮ, ಬೀದಿ ಅಥವಾ ಕಚೇರಿಗೆ ಬಂದಿಲ್ಲ, ಅದು ಈಗ ಬರಲಾರದು ಎಂಬ ಭಾವನೆಯನ್ನು ಹೊಂದಬೇಡಿ ಎಚ್ಚರಿಸಿದರಲ್ಲದೆ “ದೋ ಗಜ್ ದೂರ್ ಹೈ ಜರೂರಿ” ಎಂಬುದು ನಮ್ಮ ಮಂತ್ರವಾಗಬೇಕು ಮತ್ತು ಜನರು ಎರಡು ಯಾರ್ಡ್ ಅಂತರ ಕಾಪಾಡಿಕೊಳ್ಳಬೇಕು ಮತ್ತು ಅವರನ್ನು ಅವರು ಆರೋಗ್ಯವಂತರನ್ನಾಗಿ ಇರಿಸಿಕೊಳ್ಳಬೇಕು ಎಂದೂ ಹೇಳಿದರು. ಭಾರೀ ಉತ್ಸಾಹದ ಹುಮ್ಮಸ್ಸಿನಲ್ಲಿ ಸ್ಥಳೀಯ ಮಟ್ಟದಲ್ಲಿ ಅಥವಾ ಇತರೆಡೆ ನಿರ್ಲಕ್ಷ ತೋರಬಾರದು ಮತ್ತು ಜನರು ಜಾಗೃತರಾಗಿರಬೇಕು ಎಂದವರು ಎಚ್ಚರಿಕೆ ಹೇಳಿದರು.
ಕೆಲಸದ ಸಂಸ್ಕೃತಿಯಲ್ಲಿ , ಜೀವನ ವಿಧಾನದಲ್ಲಿ ಮತ್ತು ಜನತೆಯ ದೈನಂದಿನ ಅಭ್ಯಾಸಗಳಲ್ಲಿ ಹಲವು ಧನಾತ್ಮಕ ಬದಲಾವಣೆಗಳು ಸಾವಯವ ರೀತಿಯಲ್ಲಿ ಆಗುತ್ತಿವೆ. ಮುಖಗವಸು ಹಾಕಿಕೊಳ್ಳುವಲ್ಲಿ ಮತ್ತು ಮುಖವನ್ನು ಮುಚ್ಚಿಕೊಳ್ಳುವಲ್ಲಿ ಇದು ಕಂಡುಬರತೊಡಗಿದೆ. ಈ ಮಹತ್ವದ ಮಾದರಿ ಬದಲಾವಣೆ ಕೊರೊನಾದಿಂದಾಗಿದೆ, ಮುಖಗವಸುಗಳು ನಮ್ಮ ಜನತೆಯ ಜೀವನದ ಭಾಗವಾಗುತ್ತಿವೆ ಎಂದ ಪ್ರಧಾನ ಮಂತ್ರಿ ಅವರು ಮುಖಗವಸುಗಳು ಈಗ ಸುಸಂಸ್ಕೃತ ಸಮಾಜದ ಸಂಕೇತವಾಗುತ್ತಿವೆ, ಜನರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಮತ್ತು ಇತರರನ್ನು ರೋಗಗಳಿಂದ ರಕ್ಷಿಸಲು ಅವರು ಮುಖಗವಸುಗಳನ್ನು ಧರಿಸಬೇಕಾಗಿದೆ ಎಂದರು. ಜನರು ಸಣ್ಣ ಟವೆಲ್ ನ್ನು ಮುಖವನ್ನು ಮುಚ್ಚಿಕೊಳ್ಳಲು ಬಳಸಬಹುದು ಎಂದವರು ಸಲಹೆ ಮಾಡಿದರು.
ಸಮಾಜದಲ್ಲಿ ಬಂದಿರುವ ಇನ್ನೊಂದು ಜಾಗೃತಿ ಎಂದರೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಂದ ಆಗುವ ಹಾನಿಯ ಬಗ್ಗೆ ಜನರಿಗೆ ಅರಿವಾಗಿದೆ ಎಂಬುದು. ಎಲ್ಲೆಂದರಲ್ಲಿ ಉಗುಳುವುದು ಒಂದು ಕೆಟ್ಟ ಅಭ್ಯಾಸದ ಅಂಗ, ಇದು ಸ್ವಚ್ಚತೆಗೆ ಮತ್ತು ಆರೋಗ್ಯಕ್ಕೆ ಒಂದು ಗಂಭೀರ ಸವಾಲು ಎಂದವರು ಬಣ್ಣಿಸಿದರು. ಉಗುಳುವ ಅಭ್ಯಾಸವನ್ನು ತೊರೆಯುವಂತೆ ಜನರಿಗೆ ಮನವಿ ಮಾಡಿದ ಪ್ರಧಾನ ಮಂತ್ರಿ ಅವರು ಇದರಿಂದ ಮೂಲ ಸ್ವಚ್ಚತೆಯ ಮಟ್ಟಕ್ಕೆ ಹೆಚ್ಚಿನ ಬಲ ಬರುತ್ತದೆ ಹಾಗು ಕೊರೊನಾ ಸೋಂಕು ಹರಡುವುದನ್ನು ತಡೆಯುವುದಕ್ಕೂ ಸಹಾಯವಾಗುತ್ತದೆ ಎಂದೂ ಹೇಳಿದರು.
ಈ ಬಿಕ್ಕಟ್ಟಿನ ಸಮಯದಲ್ಲಿ ದೇಶವಾಸಿಗಳು ತೋರಿದ ಬದ್ದತೆ ಭಾರತದಲ್ಲಿ ಹೊಸ ಪರಿವರ್ತನೆಗೆ ನಾಂದಿ ಹಾಡಿದೆ ಎಂದ ಪ್ರಧಾನ ಮಂತ್ರಿಗಳು ದೇಶದಲ್ಲಿ ವ್ಯಾಪಾರೋದ್ಯಮ , ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯಕೀಯ ರಂಗವು ಹೊಸ ಕಾರ್ಯಾಚರಣಾ ಬದಲಾವಣೆಗಳಿಗೆ ತೆರೆದುಕೊಳ್ಳುವಲ್ಲಿ ಮುಂದುವರಿಯುತ್ತಿದೆ ಎಂದರು. ತಂತ್ರಜ್ಞಾನ ರಂಗದಲ್ಲಿ, ದೇಶದಲ್ಲಿ ಪ್ರತಿಯೊಬ್ಬ ಅನ್ವೇಷಕರೂ ಈಗಿರುವ ಪರಿಸ್ಥಿತಿಯಲ್ಲಿ ಒಂದೊಂದು ಪರಿಹಾರಗಳೊಂದಿಗೆ ಮುಂದೆ ಬರುತ್ತಿದ್ದಾರೆ ಎಂದರು.
ಕೇಂದ್ರ , ರಾಜ್ಯ ಸರಕಾರಗಳು, ಪ್ರತಿಯೊಂದು ಇಲಾಖೆ ಮತ್ತು ಸಂಸ್ಥೆಗಳು ಪೂರ್ಣ ವೇಗದಲ್ಲಿ ಪರಿಹಾರ ಒದಗಿಸಲು ಪರಸ್ಪರ ಕೈಜೋಡಿಸಿ ಕಾರ್ಯನಿರತವಾಗಿವೆ. ವಾಯುಯಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಜನರು , ರೈಲ್ವೇ ಸಿಬ್ಬಂದಿಗಳು ದೇಶದ ಜನತೆ ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು. ಲೈಫ್ ಲೈನ್ ಉಡಾನ್ ವಿಶೇಷ ಕ್ರಮಗಳು ಹೇಗೆ ದೇಶದ ಪ್ರತೀ ಮೂಲೆ ಮೂಲೆಗಳಿಗೂ ಅತ್ಯಲ್ಪ ಅವಧಿಯಲ್ಲಿ ಔಷಧಿ ಪೂರೈಕೆ ಖಾತ್ರಿಗೊಳಿಸಿದವು ಎಂಬುದನ್ನು ಉಲ್ಲೇಖಿಸಿದ ಅವರು ಈ ಲೈಫ್ ಲೈನ್ ವಿಮಾನಗಳು ಮೂರು ಲಕ್ಷ ಕಿಲೋ ಮೀಟರ್ ದೂರವನ್ನು ಕ್ರಮಿಸಿ ಐನೂರು ಟನ್ ಗಳಷ್ಟು ವೈದ್ಯಕೀಯ ಪೂರೈಕೆಗಳನ್ನು ದೇಶದ ದುರ್ಗಮ ಪ್ರದೇಶದಲ್ಲಿಯ ಜನತೆಗೆ ತಲುಪಿಸಿದವು ಎಂಬುದನ್ನೂ ವಿವರಿಸಿದರು.
ಲಾಕ್ ಡೌನ್ ಅವಧಿಯಲ್ಲಿ ರೈಲ್ವೇಯು ಹೇಗೆ ಅವಿಶ್ರಾಂತವಾಗಿ ದುಡಿಯುತ್ತಿದೆ ಎಂಬುದನ್ನು ವಿಶೇಷವಾಗಿ ಪ್ರಸ್ತಾಪಿಸಿದ ಅವರು ಅದರಿಂದಾಗಿ ದೇಶದ ಜನಸಾಮಾನ್ಯರಿಗೆ ದೇಶದಲ್ಲೆಲ್ಲೂ ಅವಶ್ಯಕ ಸಾಮಗ್ರಿಗಳ ಕೊರತೆ ಆಗಲಿಲ್ಲ ಎಂದರು. ಭಾರತೀಯ ರೈಲ್ವೇಯು 100 ಕ್ಕೂ ಅಧಿಕ ಪಾರ್ಸೆಲ್ ರೈಲುಗಳನ್ನು ಓಡಿಸುತ್ತಿದೆ , ಸುಮಾರು 60 ಮಾರ್ಗಗಳಲ್ಲಿ ಇದು ಸಾಗುತ್ತಿದೆ ಎಂದರು. ವೈದ್ಯಕೀಯ ಪೂರೈಕೆಗಳನ್ನು ಖಾತ್ರಿಪಡಿಸುವಲ್ಲಿ ಅಂಚೆ ಇಲಾಖೆಯು ಸಿಬ್ಬಂದಿಗಳು ಸಂಕೀರ್ಣ ಪಾತ್ರವನ್ನು ವಹಿಸುತ್ತಿದ್ದಾರೆ, ಅವರೆಲ್ಲರೂ ನೈಜ ಅರ್ಥದಲ್ಲಿ ಕೊರೊನಾ ವಾರಿಯರ್ ಗಳು ಎಂದೂ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಬಣ್ಣಿಸಿದರು. ಆವಶ್ಯಕತೆ ಇರುವವರಿಗೆ ಮತ್ತು ಬಡವರಿಗೆ ಸಹಾಯ ಮಾಡುವ ಸರಕಾರದ ಬದ್ದತೆಯನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು ಹಣವನ್ನು ಬಡವರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ , ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜಿನಡಿ ಈ ಸವಲತ್ತು ಒದಗಿಸಲಾಗಿದೆ ಎಂದರು. ಬಡವರಿಗೆ ಉಚಿತ ಪಡಿತರ ಮತ್ತು ಉಚಿತ ಅಡುಗೆ ಅನಿಲ ಸಿಲಿಂಡರುಗಳನ್ನು ಮೂರು ತಿಂಗಳ ಕಾಲ ಒದಗಿಸಲಾಗುತ್ತಿದೆ ಎಂದ ಅವರು ವಿವಿಧ ಸರಕಾರಿ ಇಲಾಖೆಗಳು ಮತ್ತು ಬ್ಯಾಂಕಿಂಗ್ ವಲಯದ ಸಿಬ್ಬಂದಿಗಳು ಒಂದೇ ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ಕೊಂಡಾಡಿದರು.
ಜಾಗತಿಕ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರಗಳು ಸಾಕಷ್ಟು ಪೂರ್ವತಯಾರಿಯೊಂದಿಗೆ ಕಾರ್ಯಾಚರಿಸುತ್ತಿರುವುದನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ಅವರು ಸ್ಥಳೀಯಾಡಳಿತ ಮತ್ತು ರಾಜ್ಯ ಸರಕಾರಗಳು ಕೊರೊನಾ ವಿರುದ್ದ ಹೋರಾಟದಲ್ಲಿ ವಹಿಸಿಕೊಂಡ ಜವಾಬ್ದಾರಿಗಳು ಬಹಳ ಸಂಕೀರ್ಣ ತೆರನಾದವು ಎಂದೂ ಹೇಳಿದರು. ಈ ಕಠಿಣ ದುಡಿಮೆ ಶ್ಲಾಘನೀಯ ಎಂದ ಪ್ರಧಾನ ಮಂತ್ರಿ ಅವರು ದೇಶಾದ್ಯಂತ ಇರುವ ವೈದ್ಯಕೀಯ ಸೇವಾ ಸಿಬ್ಬಂದಿ, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿಗಳು , ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ಮುಕ್ತ ಭಾರತಕ್ಕಾಗಿ ಹಗಲು ರಾತ್ರಿ ದುಡಿಯುತ್ತಿರುವ ಅಂತಹ ಎಲ್ಲಾ ಸಿಬ್ಬಂದಿಗಳಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು. ಅವರ ಸುರಕ್ಷೆಯನ್ನೂ ಖಾತ್ರಿಪಡಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನ ಮಂತ್ರಿ ಇತ್ತೀಚೆಗೆ ಹೊರಡಿಸಲಾದ ಸುಗ್ರೀವಾಜ್ಞೆ ಈ ನಿಟ್ಟಿನಲ್ಲಿ ಒಂದು ಕ್ರಮ ಎಂದರು. ಕೊರೊನಾ ವಾರಿಯರ್ಸ್ ಗಳಿಗೆ ಯಾವುದೇ ಹಿಂಸೆ ಅಥವಾ ಗಾಯ ಮಾಡುವವರಿಗೆ ಅಥವಾ ಕಿರುಕುಳ ನೀಡುವವರಿಗೆ ಈ ಸುಗ್ರೀವಾಜ್ಞೆಯು ಕಠಿಣ ಶಿಕ್ಷೆಯನ್ನು ನೀಡುತ್ತದೆ.
ಮನೆಗಳಲ್ಲಿ ಸಹಾಯದ ಉದಾಹರಣೆ ನೀಡಿದ ಅವರು ನಮ್ಮ ವಿವಿಧ ಅಗತ್ಯಗಳನ್ನು ಈಡೇರಿಸುವ ಸಾಮಾನ್ಯ ಕೆಲಸಗಾರರು ಅಥವಾ ಸಮೀಪದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವವರು, ಅವಶ್ಯಕ ಸೇವೆಗಳನ್ನು ಒದಗಿಸುತ್ತಿರುವವರು, ಮಾರುಕಟ್ಟೆಯಲ್ಲಿ ದುಡಿಯುವ ಕಾರ್ಮಿಕರು , ನೆರೆಯ ಅಟೋರಿಕ್ಷಾ ಚಾಲಕರು ಮತ್ತಿತರರು ಇಲ್ಲದೆ ತಮ್ಮ ಬದುಕು ಕಷ್ಟದ್ದು ಎಂಬುದನ್ನು ಜನತೆ ಸಾಕ್ಷೀಕರಿಸಿಕೊಂಡಿದ್ದಾರೆ ಎಂದ ಪ್ರಧಾನ ಮಂತ್ರಿ ಶ್ರೀ ಮೋದಿ ಜನರು ತಮ್ಮ ಈ ಸಹೋದ್ಯೋಗಿಗಳನ್ನು ನೆನಪಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ ಅವರಿಗೆ ಸಹಾಯವನ್ನೂ ಮಾಡುತ್ತಿದ್ದಾರೆ. ಮತ್ತು ಅವರ ಬಗ್ಗೆ ಗೌರವದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುತ್ತಿದ್ದಾರೆ ಎಂದರು. ವೈದ್ಯರು, ಸ್ವಚ್ಚತಾ ಕಾರ್ಮಿಕರು ಮತ್ತು ಇಂತಹ ಇತರ ಸೇವಾ ಸಿಬ್ಬಂದಿಗಳು ಮತ್ತು ಪೊಲಿಸ್ ಸಂಘಟನೆಗಳನ್ನು ಜನರು ಹೊಸ ಬೆಳಕಿನಲ್ಲಿ ನೋಡುತ್ತಿದ್ದಾರೆ . ಇಂದು ಪೊಲೀಸ್ ಸಿಬ್ಬಂದಿಗಳು ಆಹಾರ ಮತ್ತು ಔಷಧಿಗಳು ಬಡವರು ಮತ್ತು ಅವಶ್ಯಕತೆ ಇದ್ದವರಿಗೆ ತಲುಪುವಂತೆ ಮಾಡುತ್ತಿದ್ದಾರೆ ಎಂದೂ ಪ್ರಧಾನ ಮಂತ್ರಿ ಹೇಳಿದರು. ಸಾಮಾನ್ಯ ಜನತೆ ಪೊಲೀಸರೊಂದಿಗೆ ಭಾವನಾತ್ಮಕವಾಗಿ ಸಂಪರ್ಕಿಸಲ್ಪಟ್ಟಿರುವಂತಹ ಕಾಲ ಇದು ಎಂದರು.
ಸರಕಾರವು covidwarriors.gov.in. ಡಿಜಿಟಲ್ ವೇದಿಕೆಯನ್ನು ರೂಪಿಸಿದೆ. ಸಾಮಾಜಿಕ ಸಂಘಟನೆಗಳ ಸ್ವಯಂಸೇವಕರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಸ್ಥಳೀಯಾಡಳಿತಗಳನ್ನು ಈ ವೇದಿಕೆ ಮೂಲಕ ಪರಸ್ಪರ ಜೋಡಿಸಲಾಗಿದೆ ಎಂದೂ ಅವರು ತಿಳಿಸಿದರು. ಅತೀ ಕಡಿಮೆ ಅವಧಿಯಲ್ಲಿ ವೈದ್ಯರು, ದಾದಿಯರು, ಆಶಾ-ಎ.ಎನ್.ಎಂ. ಕಾರ್ಯಕರ್ತರು ,ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಕೆಡೆಟ್ ಗಳು, ವಿವಿಧ ಕ್ಷೇತ್ರಗಳ ವೃತ್ತಿಪರರು ಸಹಿತ 1.25 ಕೋಟಿ ಜನರು ಈ ಪೋರ್ಟಲಿನ ಅಂಗವಾಗಿದ್ದಾರೆ . ಈ ಕೋವಿಡ್ ವಾರಿಯರ್ ಗಳು ಸ್ಥಳೀಯ ಮಟ್ಟದಲ್ಲಿ ಬಿಕ್ಕಟ್ಟು ನಿರ್ವಹಣಾ ಯೋಜನೆ ತಯಾರಿಸುವಲ್ಲಿ ಮತ್ತು ಅನುಷ್ಟಾನಿಸುವಲ್ಲಿ ಬಹಳ ಸಹಾಯಕ್ಕೆ ಬರುತ್ತಾರೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಕೋವಿಡ್ ವಾರಿಯರ್ ಆಗಿ ದೇಶ ಸೇವೆ ಮಾಡಲು covidwarriors.gov.ಗೆ ಸೇರುವಂತೆ ಜನರಲ್ಲಿ ಮನವಿ ಮಾಡಿದರು.
ಬಿಕ್ಕಟ್ಟಿನ ಅವಧಿಯಲ್ಲಿಯೂ ಭಾರತವು ತನ್ನ ಮಾನವೀಯ ಜವಾಬ್ದಾರಿಯ ಭಾಗವಾಗಿ ಜಗತ್ತಿನಾದ್ಯಂತ ಆವಶ್ಯಕತೆ ಇರುವವರಿಗೆ ವೈದ್ಯಕೀಯ ಪೂರೈಕೆಗಳನ್ನು ಒದಗಿಸಿದೆ ಎಂದ ಪ್ರಧಾನ ಮಂತ್ರಿಗಳು ಜಗತ್ತಿನಾದ್ಯಂತದಿಂದ ಜನರು ಭಾರತದ ಆಯುರ್ವೇದ ಮತ್ತು ಯೋಗಕ್ಕೆ ವಿಶೇಷ ಗಮನ ಕೊಡುತ್ತಿದ್ದಾರೆ. ಅದರ ರೋಗ ತಡೆ ಶಕ್ತಿಯ ಬಗ್ಗೆ ಆಸಕ್ತರಾಗಿದ್ದಾರೆ ಎಂದರು. ಆಯುಷ್ ಸಚಿವಾಲಯವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಿಡುಗಡೆ ಮಾಡಿರುವ ಶಿಷ್ಟಾಚಾರವನ್ನು ಅನುಸರಿಸುವಂತೆ ಜನರನ್ನು ಕೋರಿದ ಪ್ರಧಾನ ಮಂತ್ರಿ ಅವರು ಆಯುಷ್ ಸಚಿವಾಲಯವು ನೀಡಿರುವ ಬಿಸಿ ನೀರು, ಡಿಕಾಕ್ಷನ್ ಮತ್ತು ಇತರ ಮಾರ್ಗದರ್ಶಿಗಳು ಜನತೆಗೆ ಬಹಳ ಉಪಯುಕ್ತ ಎಂದರು. ನಾವು ನಮ್ಮದೇ ಶಕ್ತಿಗಳನ್ನು ಮತ್ತು ವೈಭವದ ಪರಂಪರೆಗಳನ್ನು ಸದಾ ತಿರಸ್ಕರಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಯುವ ತಲೆಮಾರು ನಮ್ಮ ಸಾಂಪ್ರದಾಯಿಕ ತತ್ವಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಪ್ರಚುರಪಡಿಸಲು ಸಾಕ್ಷಿ ಆಧಾರಿತ ಸಂಶೋಧನೆ ಕೈಗೆತ್ತಿಕೊಳ್ಳಬೇಕು ಎಂದೂ ಸಲಹೆ ಮಾಡಿದರು. ವಿಶ್ವವು ಯೋಗವನ್ನು ಸಂತೋಷದಿಂದ ಅಂಗೀಕರಿಸಿರುವಂತೆ, ವಿಶ್ವವು ಹಳೆಯ ಆಯುರ್ವೇದದ ತತ್ವಗಳನ್ನು ಖಂಡಿತವಾಗಿ ಅಂಗೀಕರಿಸುತ್ತದೆ ಎಂದವರು ಹೇಳಿದರು.
ಅಕ್ಷಯ ತೃತೀಯದ ಪವಿತ್ರ ದಿನದಂದು ಪರಿಸರ ರಕ್ಷಣೆಯ ಬಗ್ಗೆ ಚಿಂತಿಸುವಂತೆ ನಾಗರಿಕರಿಗೆ ಕರೆ ನೀಡಿದ ಪ್ರಧಾನ ಮಂತ್ರಿ ಅವರು ಅರಣ್ಯ ,ನದಿಗಳು, ಮತ್ತು ಇಡೀಯ ಪರಿಸರ ವ್ಯವಸ್ಥೆಯನ್ನು ರಕ್ಷಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಮರುನವೀಕರಣಗೊಳ್ಳುವಂತಹ ಸಂಪನ್ಮೂಲಗಳೊಂದಿಗೆ ಇರಬೇಕು ಎಂದಾದರೆ ಜನರು ಭೂಮಿಯು ಸದಾ ಸಮೃದ್ದವಾಗಿರುವುದನ್ನು ಖಾತ್ರಿಪಡಿಸಬೇಕು ಎಂದರು. ಅಕ್ಷಯ ತೃತೀಯ ಹಬ್ಬವು ದಾನದ ಶಕ್ತಿ, ಬಿಕ್ಕಟ್ಟಿನ ಸಮಯದಲ್ಲಿ ಕೊಡುವ ಶಕ್ತಿಯನ್ನು ವಾಸ್ತವಕ್ಕೆ ತರಲು ಅವಕಾಶವನ್ನು ಒದಗಿಸುತ್ತದೆ ಎಂದರು. ಈ ದಿನವು ಪ್ರಥಮ ತೀರ್ಥಂಕರ ಋಷಭದೇವ ಅವರ ಜೀವನದಲ್ಲಿಯೂ ಮಹತ್ವದ ದಿನವಾಗಿದೆ ಮತ್ತು ಇದು ಬಸವೇಶ್ವರ ದೇವರ ಜನ್ಮದಿನವೂ ಆಗಿದೆ ಎಂಬುದನ್ನು ಪ್ರಧಾನ ಮಂತ್ರಿಯವರು ಜ್ಞಾಪಿಸಿಕೊಂಡರು. ರಮ್ಜಾನಿನ ಪವಿತ್ರ ಮಾಸವು ಆರಂಭಗೊಂಡಿದೆ ಮತ್ತು ಜನರು ಹಿಂದೆಂದಿಗಿಂತಲೂ ಹೆಚ್ಚು ಪ್ರಾರ್ಥನೆಗಳನ್ನು ಸಲ್ಲಿಸಬೇಕು , ಇದರಿಂದಾಗಿ ಜಗತ್ತು ಈದ್ ನೊಳಗೆ ಕೊರೊನಾ ಮುಕ್ತವಾಗಬೇಕು ಮತ್ತು ಜನರು ಉತ್ಸಾಹದಿಂದ ಈದ್ ಆಚರಿಸುವಂತಾಗಬೇಕು ಎಂದರು.
***
(Release ID: 1618570)
Visitor Counter : 277
Read this release in:
Marathi
,
Assamese
,
Punjabi
,
English
,
Urdu
,
Hindi
,
Manipuri
,
Gujarati
,
Odia
,
Tamil
,
Telugu
,
Malayalam