ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಪಾದರಕ್ಷೆ ಉದ್ಯಮದ ಪ್ರತಿನಿಧಿಗಳಿಗೆ ಸಾಧ್ಯವಾದ ಎಲ್ಲ ರೀತಿಯ ಬೆಂಬಲದ ಭರವಸೆ ನೀಡಿದ ಶ್ರೀ ನಿತಿನ್ ಗಡ್ಕರಿ

Posted On: 18 APR 2020 6:09PM by PIB Bengaluru

ಪಾದರಕ್ಷೆ ಉದ್ಯಮದ ಪ್ರತಿನಿಧಿಗಳಿಗೆ ಸಾಧ್ಯವಾದ ಎಲ್ಲ ರೀತಿಯ ಬೆಂಬಲದ ಭರವಸೆ ನೀಡಿದ ಶ್ರೀ ನಿತಿನ್ ಗಡ್ಕರಿ

 

ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು, ಕೋವಿಡ್-19 ಹರಡದಂತೆ ತಡೆಯಲು ಲಾಕ್ ಡೌನ್ ವಿಧಿಸಿರುವುದರಿಂದ ಎದುರಾಗಿರುವ ಸವಾಲುಗಳಿಂದ ಹೊರಬರಲು ಸರ್ಕಾರ ಪಾದರಕ್ಷೆ ಉದ್ಯಮಕ್ಕೆ ಸಾಧ್ಯವಾದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರು ನಾಗ್ಪುರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಪಾದರಕ್ಷೆ ಉದ್ಯಮದ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಶ್ರೀ ಗಡ್ಕರಿ ಅವರು, ಸರ್ಕಾರ ನಿನ್ನೆಯಷ್ಟೇ ಎಂಎಸ್ಎಂಇ ವಲಯಕ್ಕೆ ಆದಾಯ ತೆರಿಗೆ ಇಲಾಖೆಯ ಮರುಪಾವತಿಗೆ 5204 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇನ್ನು ಹತ್ತು ದಿನಗಳಲ್ಲಿ ಇದು ಉದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಹೇಳಿದರು.

ಉದ್ಯಮ ಆಮದಿಗೆ ಪರ್ಯಾಯ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದ ಅವರು, ರಫ್ತು ಅವಕಾಶಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದರು.

ಸಭೆಯ ನಂತರ ಪಾದರಕ್ಷೆ ಉದ್ಯಮದ ಪ್ರತಿನಿಧಿಗಳು ಹೆಚ್ಚಿನ ದುಡಿಯುವ ಬಂಡವಾಳ ಇಲ್ಲದೇ ಇರುವುದು, ಸಾರಿಗೆ ಕೊರತೆ, ಕಚ್ಚಾ ಸಾಮಗ್ರಿ ಕೊರತೆ, ದುಡಿಯುವ ಸ್ಥಳಗಳ ಕೊರತೆ, ವಾಣಿಜ್ಯ ವ್ಯವಹಾರ ಮುಂದುವರಿಸುವುದು, ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಪಾದರಕ್ಷೆಯ ಬೇಡಿಕೆ ಮೇಲಿನ ಪರಿಣಾಮಗಳ ಬಗ್ಗೆ ತಮ್ಮ ಆತಂಕಗಳನ್ನು ವಿವರಿಸಿದರು ಮತ್ತು ಉದ್ಯಮದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಲಾಕ್ ಡೌನ್ ತೆರವಾದ ನಂತರವೂ ಉತ್ಪಾದನೆ ಆರಂಭಕ್ಕೆ ಕ್ರಮೇಣ ಕಾಲಾವಕಾಶ ಬೇಕಾಗುತ್ತದೆ ಮತ್ತು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆಗೆ ಹಲವು ತಿಂಗಳು ಹಿಡಿಯುತ್ತದೆ. ಕಚ್ಚಾ ಸಾಮಗ್ರಿಗಳ ಕೊರತೆ ಮತ್ತಿತರ ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದ್ದಾರೆ. ಬಹುತೇಕ ಪಾದರಕ್ಷೆ ಉದ್ಯಮಕ್ಕೆ ಕಚ್ಚಾ ಸಾಮಗ್ರಿಯನ್ನು ಚೀನಾದಿಂದ ತರಿಸಿಕೊಳ್ಳುವುದು ನಿಲ್ಲಿಸಬೇಕು ಮತ್ತು ಆ ಮೂಲಕ ಕಚ್ಚಾ ಸಾಮಗ್ರಿ ಭಾರೀ ಪ್ರಮಾಣದಲ್ಲಿ ದಾಸ್ತಾನಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಲಾಯಿತು.

ಶ್ರೀ ಗಡ್ಕರಿ ಅವರು, ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕೆಲವು ಉದ್ಯಮಗಳ ಕಾರ್ಯಾರಂಭಕ್ಕೆ ಅನುಮತಿ ನೀಡಿದೆ, ಆದರೆ ಉದ್ಯಮಗಳೂ ಸಹ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಮೊದಲ ಮತ್ತು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಪಿಪಿಇ(ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಇತ್ಯಾದಿ)ಗಳನ್ನು ಹೆಚ್ಚಾಗಿ ಬಳಸಲು ಆದ್ಯತೆ ನೀಡಬೇಕು ಮತ್ತು ವಹಿವಾಟು ಪುನರಾರಂಭವಾದ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಬೇಕು ಎಂದು ಸಲಹೆ ನೀಡಿದರು.

ಈ ವಲಯಕ್ಕೆ ತಕ್ಷಣದ ಪರಿಹಾರ ನೀಡುವ ಕುರಿತು ಹಣಕಾಸು ಸಚಿವಾಲಯ ಮತ್ತು ವಾಣಿಜ್ಯ ಸಚಿವಾಲಯದೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಡ್ಕರಿ ಭರವಸೆ ನೀಡಿದರು. ಲಾಕ್ ಡೌನ್ ತೆರವಾದ ನಂತರ ವಹಿವಾಟು ಆರಂಭಿಸುವಾಗ ಪಾದರಕ್ಷೆ ಉದ್ಯಮ ಸಕಾರಾತ್ಮಕ ರೀತಿಯಲ್ಲಿ ಕೆಲಸ ಆರಂಭಿಸಬೇಕು ಎಂದು ಹೇಳಿದ ಶ್ರೀ ಗಡ್ಕರಿ ಅವರು, ಕೋವಿಡ್-19 ಬಿಕ್ಕಟ್ಟು ಮುಗಿದ ನಂತರ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

***



(Release ID: 1615932) Visitor Counter : 177