ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ದೆಹಲಿಯ ಲೆಫ್ಟಿನೆಂಟ್ ಗರ್ವನರ್ , ಆರೋಗ್ಯ ಸಚಿವರು, ದೆಹಲಿಯ ನಾನಾ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಡಾ. ಹರ್ಷ ವರ್ಧನ್

Posted On: 17 APR 2020 8:54PM by PIB Bengaluru

ದೆಹಲಿಯ ಲೆಫ್ಟಿನೆಂಟ್ ಗರ್ವನರ್ , ಆರೋಗ್ಯ ಸಚಿವರು, ದೆಹಲಿಯ ನಾನಾ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಡಾ. ಹರ್ಷ ವರ್ಧನ್

ಕೋವಿಡ್ ಸೋಂಕು ಹೊರತುಪಡಿಸಿದ ಇತರೆ ಗಂಭೀರ ಕಾಯಿಲೆಗಳ ರೋಗಿಗಳನ್ನೂ ಸಹ ಸಮಾನ ಅನುಕಂಪದಿಂದ ನೋಡಿಕೊಳ್ಳಲು ಆಸ್ಪತ್ರೆಗಳಿಗೆ ದೆಹಲಿ ಸರ್ಕಾರ ಆಗ್ರಹ

ಯುವ ಸ್ವಯಂ ದಾನಿಗಳನ್ನು ಉತ್ತೇಜಿಸುವ ಮೂಲಕ ರಕ್ತದ ವರ್ಗಾವಣೆಗೆ ಸಾಕಷ್ಟು ಸಂಗ್ರಹ ಮಾಡಿಕೊಳ್ಳಲು ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಾಯದಿಂದ ಸಂಚಾರಿ ರಕ್ತ ಸಂಗ್ರಹ ವ್ಯಾನ್ ಸೇರಿ ಹಲವು ಸೇವೆಗಳನ್ನು ಬಳಸಿಕೊಳ್ಳಲು ಕರೆ

ಯಾವುದೇ ರೋಗಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡದೆ, ತುರ್ತು ಗಮನ ಹರಿಸದೇ ಇದ್ದ ಆರೋಗ್ಯ ರಕ್ಷಣಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು: ಡಾ. ಹರ್ಷ ವರ್ಧನ್

 

“ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ನಾವು ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಹಾಗೂ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಆದರೆ ನಾವು ಈ ಸಂಕಷ್ಟದ ಸಮಯದಲ್ಲಿ ಇತರೆ ಮತ್ತು ತುರ್ತು ಅಗತ್ಯವಿರುವ ರೋಗಿಗಳನ್ನು ನಿರ್ಲಕ್ಷಿಸುವಂತಿಲ್ಲ’’ ಎಂದು ಡಾ. ಹರ್ಷ ವರ್ಧನ್ ಹೇಳಿದರು. ಅವರು ದೆಹಲಿಯ ಲೆಫ್ಟಿನೆಂಟ್ ಗೌವರ್ನರ್ , ದೆಹಲಿ ಆರೋಗ್ಯ ಸಚಿವರು, ದೆಹಲಿಯಲ್ಲಿ ಎಲ್ಲ ರಾಜ್ಯ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರು(ಎಂಎಸ್ ಗಳು) ಮತ್ತು ಮಹಾನಗರ ಪಾಲಿಕೆ ಆಯುಕ್ತರ ಜೊತೆ ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಹರ್ಷವರ್ಧನ್ ಅವರು, “ಕೋವಿಡ್ -19 ಹೊರತುಪಡಿಸಿ ಇತರೆ ಗಂಭೀರ ಕಾಯಿಲೆಗಳಿಂದ ನರಳುತ್ತಿರುವವರಿಗೆ, ಉದಾಹರಣೆಗೆ ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ, ಉಸಿರಾಟ ಅಥವಾ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವವರಿಗೆ , ರಕ್ತದ ವರ್ಗಾವಣೆ (ಟ್ರಾನ್ಸ್ ಫ್ಯೂಸನ್) ಮತ್ತು ಗರ್ಭಿಣಿ ತಾಯಂದಿರಿಗೆ ಚಿಕಿತ್ಸೆ ನೀಡದಿರುವ ಬಗ್ಗೆ ನಾನು ದೂರವಾಣಿ ಕರೆ, ಸಾಮಾಜಿಕ ಮಾಧ್ಯಮ, ಟ್ವೀಟರ್ ಇತರೆ ಕಡೆಯಿಂದ ಸಾಕಷ್ಟು ದೂರುಗಳನ್ನು ಸ್ವೀಕರಿಸುತ್ತಿದ್ದೇನೆ’’ಎಂದರು. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ಭೇಟಿ ನೀಡುವ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ, ಆ ಮೂಲಕ ರೋಗಿಗಳು ಒಂದಾದ ನಂತರ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಬಲವಂತ ಮಾಡಲಾಗುವುದು. ಇದರಿಂದಾಗಿ ಜೀವ ಹಾನಿಯಾಗುವ ಸಾಧ್ಯತೆಗಳೂ ಸಹ ಇರುತ್ತವೆ’’ ಎಂದು ಹೇಳಿದರು. ಅವರು ಕೋವಿಡ್-19 ರೋಗಿಗಳಂತೆ ಇತರೆ ರೋಗಿಗಳನ್ನೂ ಸಹ ಸಮಾನವಾಗಿ ಆರೈಕೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರಿಗೆ ನಿರ್ದೇಶನ ನೀಡಿದರು. ಲಾಕ್ ಡೌನ್ ನ ಈ ಸಂದರ್ಭ ಪ್ರತಿಯೊಬ್ಬರಿಗೂ ಪರೀಕ್ಷೆಯ ಸಮಯವಾಗಿದೆ, ನಿಜವಾಗಿಯೂ ರೋಗದಿಂದ ಬಳಲುತ್ತಿರುವವರು ಮತ್ತು ತುರ್ತು ವೈದ್ಯಕೀಯ ಗಮನ ಹರಿಸಬೇಕಾಗಿರುವಂತಹವರು ಭಾರಿ ಕಷ್ಟದಿಂದ ಹೊರಗೆ ಬಂದು ಚಿಕಿತ್ಸೆಗಳಿಗಾಗಿ ಆಸ್ಪತ್ರೆಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಇದೆ. ಡಯಾಲಿಸಿಸ್ , ರಕ್ತ ವರ್ಗಾವಣೆ (ಬ್ಲಡ್ ಟ್ರಾನ್ಸ್ ಪ್ಯೂಷನ್) ಮತ್ತಿತರವುಗಳು ಅಗತ್ಯವಿರುವವರಿಗೆ ಕೆಲವು ನಾಟಕೀಯ ಸಂದರ್ಭಗಳನ್ನು ಎದುರಿಸುವಂತಹ ಸನ್ನಿವೇಶ ಸೃಷ್ಟಿಸುವುದು ಅವರನ್ನು ಅಲೆದಾಡಿಸುವುದು ಸರಿಯಲ್ಲ ಎಂದರು.

“ನಾವು ಏಮ್ಸ್ ಮತ್ತು ಸಫ್ತಾರ್ ಜಂಗ್ ಎರಡು ಆಸ್ಪತ್ರೆಗಳನ್ನು ಮತ್ತು ನಗರದ ಕೋವಿಡ್ ಡೆಲ್ಲಿ ಸರ್ಕಾರಿ ಆಸ್ಪತ್ರೆ- ಎಲ್ ಎನ್ ಜೆಪಿ ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕೋವಿಡ್ -19 ಸೌಕರ್ಯಕ್ಕಾಗಿ ಮೀಸಲಿಡಲು ನಿರ್ಧರಿಸಿದ್ದೇವೆ. ಉಳಿದ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ಹೊರತುಪಡಿಸಿ ಇತರೆ ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆಗಳನ್ನು ನೀಡಲು ಕ್ರಮಗಳನ್ನು ಕೈಗೊಳ್ಳಬೇಕು’’ಎಂದು ಅವರು ಹೇಳಿದರು.

“ಈ ಸಂಕಷ್ಟದ ಸಮಯದಲ್ಲಿ ಪ್ರಸಕ್ತ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಎದುರಾಗಿರುವ ಅನಿರೀಕ್ಷಿತ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಆರೋಗ್ಯ ರಕ್ಷಣಾ ಸೇವೆಗಳನ್ನು ಒದಗಿಸುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವಿಸ್ತೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಅಂತಹ ರೋಗಿಗಳಿಗೆ ಟೆಲಿ-ಸಮಾಲೋಚನೆ, ಡಿಜಿಟಲ್ ಪ್ರಿಸ್ ಕ್ರಿಪ್ಷನ್ ಮತ್ತು ಮನೆಗಳಿಗೆ ಅಗತ್ಯ ಔಷಧಿಗಳನ್ನು ಕಳುಹಿಸಿಕೊಡುವ ಸೇವೆಗಳನ್ನು ಒದಗಿಸಬೇಕು’’ ಎಂದು ಡಾ.ಹರ್ಷ ವರ್ಧನ್ ಹೇಳಿದರು.

ಲಾಕ್ ಡೌನ್ ವೇಳೆ ಮೊದಲೇ ಸಾಕಷ್ಟು ಕಷ್ಟ ಅನುಭವಿಸಿರುವಂತಹ ರೋಗಿಗಳನ್ನು ಅನುಕಂಪ ಮತ್ತು ಆರೈಕೆ ಮಾಡಿ ಉತ್ತಮ ರೀತಿಯಲ್ಲಿ ನೋಡಿಕೊಳ್ಳುವ ಅಗತ್ಯವಿದೆ. “ದುರ್ಬಲ ವರ್ಗದವರೂ ಸೇರಿದಂತೆ ಚಿಕಿತ್ಸೆ ಅಗತ್ಯವಿರುವ ಎಲ್ಲ ವರ್ಗದ ರೋಗಿಗಳಿಗೆ ಕ್ರಿಯಾಶೀಲವಾಗಿ ಮತ್ತು ಪರಿಣಾಮಕಾರಿ ಕ್ರಮಗಳ ಮೂಲಕ ಚಿಕಿತ್ಸೆ ನೀಡಬೇಕಿದೆ’’ಎಂದು ಅವರು ಹೇಳಿದರು.

ಸ್ವಯಂಪ್ರೇರಿತ ರಕ್ತದಾನಿಗಳನ್ನು ಉತ್ತೇಜಿಸುವ ಮೂಲಕ ರಕ್ತ ವರ್ಗಾವಣೆ (ಮರುಪೂರಣಕ್ಕೆ) ಅಗತ್ಯ ರಕ್ತವನ್ನು ಸಂಗ್ರಹ ಮಾಡಿಕೊಟ್ಟುಕೊಂಡಿರುವ ಅಗತ್ಯತೆ ಇದೆ ಎಂದ ಅವರು, ಅದಕ್ಕಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಾಯದಿಂದ ಸಂಚಾರಿ ರಕ್ತ ಸಂಗ್ರಹ ವ್ಯಾನ್ ಗಳ ಮೂಲಕ ನಾನಾ ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ, ಕೇಂದ್ರ ಸಚಿವರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ ತನ್ನ ಸಂಚಾರಿ ರಕ್ತ ಸಂಗ್ರಹ ವ್ಯಾನ್ ಗಳು ನಿಗದಿಯಾಗಿ ರಕ್ತದಾನ ಮಾಡುವಂತಹವರ ಬಳಿಗೆ ಕಳುಹಿಸಿ ಅವರು ಇಂಹತ ಪರಿಸ್ಥಿತಿಯಲ್ಲಿ ಉದಾತ್ತ ಉದ್ದೇಶಕ್ಕಾಗಿ ರಕ್ತ ದಾನ ಮಾಡಲು ಮುಂದಾಗುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ವಿಡಿಯೋ ಕಾನ್ಫರೆನ್ಸ್ ನಲ್ಲಿ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್, ಹೆಚ್ಚುವರಿ ಕಾರ್ಯದರ್ಶಿ ವಂದನಾ ಗುರ್ನಾನಿ, ಜಂಟಿ ಕಾರ್ಯದರ್ಶಿ ಗಾಯತ್ರಿ ಮಿಶ್ರಾ, ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ ಡಾ.ರಾಜೀವ್ ಗರ್ಗ್ , ಆರ್ ಎಲ್ ಎಂ ಆಸ್ಪತ್ರೆ ಮತ್ತು ಇತರೆ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರು ಭಾಗವಹಿಸಿದ್ದರು.

***



(Release ID: 1615659) Visitor Counter : 240