PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
12 APR 2020 7:00PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)
ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ದೇಶದಲ್ಲಿ ನಿನ್ನೆಯಿಂದ ಇಲ್ಲಿಯವರೆಗೆ 909 ಕೋವಿಡ್ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ, ಈ ದಿನದವರೆಗೆ 716 ಜನರು ಗುಣಮುಖರಾಗಿ/ಚೇತರಿಕೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಇವತ್ತಿನವರೆಗೆ 273 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಸಮರ್ಪಿತ ಆಸ್ಪತ್ರೆಗಳು, ಪ್ರತ್ಯೇಕೀಕರಣ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ದಿಗ್ಬಂಧನ ಸೌಲಭ್ಯ ಸೇರಿದಂತೆ ಪ್ರಾಥಮಿಕ ವೈದ್ಯಕೀಯ ಮೂಲಸೌಕರ್ಯ ಸಾಮರ್ಥ್ಯವರ್ಧನೆಗೆ ಸರ್ಕಾರ ಗಮನ ಹರಿಸಿದೆ. ಕೋವಿಡ್ -19 ರೋಗಿಗಳ ನಿರ್ವಹಣೆಗೆ ಸಮರ್ಪಿತ ಆಸ್ಪತ್ರೆಗಳನ್ನು ದೇಶದಾದ್ಯಂತ ಸ್ಥಾಪಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಜೊತೆಗೆ ವಿವಿಧ ಖಾಸಗಿ ವಲಯದ ಆಸ್ಪತ್ರೆಗಳು, ಸಾರ್ವಜನಿಕ ವಲಯದ ಘಟಕಗಳು, ಮಿಲಿಟರಿ ಆಸ್ಪತ್ರೆಗಳು, ಭಾರತೀಯ ರೈಲ್ವೆ ಈ ಪ್ರಯತ್ನದಲ್ಲಿ ತನ್ನ ಯೋಗದಾನ ನೀಡುತ್ತಿವೆ.
ಪರಿಹಾರ ಶಿಬಿರಗಳು/ ಆಶ್ರಯದಲ್ಲಿರುವ ವಲಸೆ ಕಾರ್ಮಿಕರ ಕಲ್ಯಾಣ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಅನುಸರಣೆಯ ಖಾತ್ರಿ ಪಡಿಸಿಕೊಳ್ಲುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದ ಎಂ.ಎಚ್.ಎ.
ದೇಶದ ವಿವಿಧ ಭಾಗಗಳಲ್ಲಿ ಪರಿಹಾರ ಶಿಬಿರ/ ಆಶ್ರಯಗಳಲ್ಲಿರುವ ವಲಸೆ ಕಾರ್ಮಿಕರ ಕಲ್ಯಾಣ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ಆದೇಶದ ಅನುಸರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಕೋವಿಡ್ -19 ವಿರುದ್ಧ ಸಮರ್ಥ ಹೋರಾಟಕ್ಕೆ ಲಾಕ್ ಡೌನ್ ಕ್ರಮಗಳ ಜಾರಿಗೆ ಸೂಚಿಸಿದೆ.
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.ಎ. ನಿರ್ದೇಶನ
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಆಯಾ ಪೊಲೀಸ್ ಪ್ರಾಧಿಕಾರಗಳು ಕೋವಿಡ್ -19 ಸೋಂಕು ದೃಢಪಟ್ಟ ರೋಗಿಗಳಿರುವ ಅಥವಾ ಕ್ವಾರಂಟೈನ್ ಮಾಡಲಾದ ಶಂಕಿತರಿರುವ ಆಸ್ಪತ್ರೆಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ಎಲ್ಲ ರಾಜ್ಯಗಳು /ಯುಟಿಗಳಿಗೆ ನಿರ್ದೇಶನ ನೀಡಿದೆ.
ಈ ತಿಂಗಳು ಸುಮಾರು 85 ಲಕ್ಷ ಪಿ.ಎಂ.ಯು.ವೈ ಫಲಾನುಭವಿಗಳು ಎಲ್.ಪಿ.ಜಿ. ಸಿಲಿಂಡರ್ ಪಡೆದಿದ್ದಾರೆ; ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ರಾಷ್ಟ್ರಕ್ಕೆ ಬೆಂಬಲ ನೀಡಲು ಸಿಲಿಂಡರ್ ಪೂರೈಕೆಯ ಜಾಲದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ದಣಿವರಿಯದೆ ದುಡಿಯುತ್ತಿದ್ದಾರೆ
ಭಾರತ ಸರ್ಕಾರ ಕೋವಿಡ್ -19 ಹಿನ್ನಲೆಯಲ್ಲಿ ಆರ್ಥಿಕ ಸ್ಪಂದನೆಯ ಭಾಗವಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಬಡವರ ಪರವಾದ ಉಪಕ್ರಮಗಳನ್ನು ಪ್ರಕಟಿಸಿದೆ. ಈ ಯೋಜನೆಯನ್ವಯ ಮುಂದಿನ 3 ತಿಂಗಳುಗಳ ಕಾಲ ಅಂದರೆ 2020ರ ಏಪ್ರಿಲ್ ನಿಂದ ಜೂನ್ ವರೆಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಜ್ವಲ ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ. ಈ ದಿನಾಂಕದವರೆಗೆ ಫಲಾನುಭವಿಗಳಿಂದ 1.26 ಕೋಟಿ ಸಿಲಿಂಡರ್ ಬುಕಿಂಗ್ ಆಗಿದ್ದು, ಈ ಪೈಕಿ 85 ಲಕ್ಷ ಸಿಲಿಂಡರ್ ಗಳನ್ನು ಪಿಎಂಯುವೈ ಫಲಾನುಭವಿಗಳಿಗೆ ಸರಬರಾಜು ಮಾಡಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆ ಪ್ರೋತ್ಸಾಹಕ್ಕೆ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಉಪಕ್ರಮ
ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆ ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗೆ ಕ್ಷೇತ್ರ ಮಟ್ಟದಲ್ಲಿ ಅವಕಾಶ ನೀಡಲು ಹಲವು ಕ್ರಮಗಳನ್ನು ಕೈಗೊಂಡಿದೆ.
ಕೋವಿಡ್-19 ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಿಎಸ್.ಆರ್. ವೆಚ್ಚದ ಅರ್ಹತೆ ಕುರಿತಂತೆ ಎಂಸಿಎ ಪದೆ ಪದೇ ಕೇಳುವ ಪ್ರಶ್ನೆಗಳು
ಕೊರೊನಾ ವೈರಾಣು ವಿರುದ್ಧದ ಹೋರಾಟಕ್ಕೆ ಐ.ಎ.ಎಫ್. ಬೆಂಬಲ
ವಿವಿಧ ರಾಜ್ಯಗಳ ನೋಡಲ್ ಕೇಂದ್ರಗಳಿಗೆ ಅವಶ್ಯಕ ವೈದ್ಯಕೀಯ ವಸ್ತುಗಳು ಮತ್ತು ದಿನಸಿಯ ಸಕಾಲಿಕ ಪೂರೈಕೆ ಖಾತ್ರಿ ಪಡಿಸಲು ಮತ್ತು ಆ ಮೂಲಕ ರಾಜ್ಯ ಸರ್ಕಾರಗಳಿಗೆ ಮತ್ತು ಬೆಂಬಲಿತ ಸಂಸ್ಥೆಗಳಿಗೆ ಕೋವಿಡ್ ವಿರುದ್ಧ ಸಮರ್ಥವಾಗಿ ಮತ್ತು ದಕ್ಷತೆಯಿಂದ ಹೋರಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ.
ಪೋರ್ಟ್ ಬ್ಲೇರ್ ನಲ್ಲಿ ಕೊವಿಡ್ ವಿರುದ್ಧದ ಹೋರಾಟಕ್ಕೆ ಭಾರತೀಯ ನೌಕಾಪಡೆಯ ಬೆಂಬಲ
ಕೋವಿಡ್ -19ರ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯ ಇರುವವರನ್ನು ತಲುಪಿರುವ ನೇವಲ್ ಏರ್ ಸ್ಟೇಷನ್ (ಎನ್ಎಎಸ್) ಉತ್ಕ್ರೋಶ್ ಮತ್ತು ಮೆಟೀರಿಯಲ್ ಆರ್ಗನೈಸೇಶನ್ (ಪೋರ್ಟ್ ಬ್ಲೇರ್) ಪೋರ್ಟ್ ಬ್ಲೇರ್ನಲ್ಲಿ ಆಹಾರ ವಿತರಣೆ ಮಾಡಿದೆ.
ಪಿಎಂ ಜನೌಷಧಿ ಕೇಂದ್ರಗಳ ಜನರು ಕೊರೊನಾ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ: ಮಾಂಡವೀಯ
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಪ್ರಸಕ್ತ ಕ್ಲಿಷ್ಟಕರ ಸನ್ನಿವೇಶದಲ್ಲೂ ಪ್ರಧಾನಮಂತ್ರಿ ಜನೌಷಧ ಕೇಂದ್ರ (ಪಿಎಂಜೆಕೆ)ಜನರು ಕೊರೊನಾ ಯೋಧರಂತೆ ದೇಶ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಎಚ್.ಆರ್.ಡಿ. ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ –ಯುಕ್ತಿ (ಯುವ ಭಾರತ ಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಯೊಂದಿಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ) ಎಂಬ ವೆಬ್ ಪೋರ್ಟಲ್ ಗೆ ಚಾಲನೆ ನೀಡಿದ್ದಾರೆ
ಕೋವಿಡ್ -19 ಹಿನ್ನೆಲೆಯಲ್ಲಿ ಎಂಎಚ್ಆರ್.ಡಿ ಕೈಗೊಂಡಿರುವ ಉಪಕ್ರಮಗಳ ನಿಗಾ ವಹಿಸಿ ದಾಖಲಿಸುವ ಉದ್ದೇಶವನ್ನು ಇದು ಹೊಂದಿದೆ.ಈ ಪೋರ್ಟಲ್ ಎಚ್.ಆರ್.ಡಿ. ಸಚಿವಾಲಯ ಮತ್ತು ಸಂಸ್ಥೆಗಳ ನಡುವೆ ದ್ವಿಮುಖ ಸಂವಹನವನ್ನು ಸ್ಥಾಪಿಸುತ್ತದೆ, ಇದರಿಂದ ಸಚಿವಾಲಯ ಸಂಸ್ಥೆಗಳಿಗೆ ಅಗತ್ಯ ಬೆಂಬಲದ ವ್ಯವಸ್ಥೆ ಒದಗಿಸಬಹುದಾಗಿದೆ.
ದೆಹಲಿ ವಲಯದ ಕೇಂದ್ರೀಯ ವಿದ್ಯಾಲಯ ಸಂಘಟನ್ ಕೋವಿಡ್ -19 ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ
ಆರನೆ ತರಗತಿಯಿಂದ 8ನೇ ತರಗತಿವರೆಗೆ ಸೋಮವಾರದಿಂದ ಲೈವ್ ಆನ್ ಲೈನ್ ತರಗತಿ ಆರಂಭವಾಗಲಿದ್ದು, ದೆಹಲಿ ವಲಯದ ಕೆ.ವಿ.ಎಸ್. ಈಗಾಗಲೇ 9 ರಿಂದ 12ರ ವರೆಗಿನ ತರಗತಿಗಳಿಗೆ ಫೇಸ್ ಬುಕ್ ಮತ್ತು ಯೂಟ್ಯೂಬ್ ನಲ್ಲಿ ಲೈವ್ ಆನ್ ಲೈನ್ ಕ್ಲಾಸ್ ಆರಂಭಿಸಿದೆ.
ಎರಡು ಪದರದ ಖಾದಿ ಮಾಸ್ಕ್ ಅಭಿವೃದ್ಧಿ ಪಡಿಸಿದ ಕೆವಿಐಸಿ
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಎರಡು ಪದರದ ಖಾದಿ ಮಾಸ್ಕ್ ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಮತ್ತು ಬೃಹತ್ ಪ್ರಮಾಣದಲ್ಲಿ ಸರಬರಾಜು ಮಾಡಲು ಬೇಡಿಕೆಯನ್ನು ಪಡೆದುಕೊಂಡಿದೆ. ಅದರ ಯಶಸ್ಸಿಗೆ ಇದೇ ಸೇರ್ಪಡೆಯಾಗಿದ್ದು, ಕೆವಿಐಸಿ ಇತ್ತೀಚೆಗೆ 7.5 ಲಕ್ಷ ಖಾದಿ ಮಾಸ್ಕ್ ಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವೊಂದಕ್ಕೇ ಸರಬರಾಜು ಮಾಡಲು ಬೇಡಿಕೆ ಪಡೆದಿದೆ.
ದೇಶದಲ್ಲಿ ಕೋವಿಡ್ -19 ಪ್ರಸರಣ ತಡೆಯುವಲ್ಲಿ ಎನ್.ಆರ್.ಎಲ್.ಎಂ. ಸ್ವಸಹಾಯ ಗುಂಪುಗಳ ಮಹಿಳೆಯರು ಸಮುದಾಯ ಸೈನಿಕರಾಗಿದ್ದಾರೆ
ಎರಡು ಲಕ್ಷ ಮಾಸ್ಕ್ ಗಳನ್ನು 78 ಸಾವಿರ ಎಸ್.ಎಚ್.ಜಿ. ಸದಸ್ಯರು 27 ರಾಜ್ಯಗಳ ಗ್ರಾಮೀಣ ಜೀವನೋಪಾಯ ಅಭಿಯಾನದ (ಎಸ್.ಆರ್.ಎಲ್.ಎಂ.ಗಳು) ಅಡಿಯಲ್ಲಿ ತಯಾರಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ 5000ಕ್ಕೂ ಹೆಚ್ಚು ಪಿಪಿಇ ಕಿಟ್ ಗಳನ್ನೂ ಎಸ್.ಎಚ್.ಜಿ.ಗಳು ಉತ್ಪಾದಿಸಿವೆ. 9 ರಾಜ್ಯಗಳ ಸುಮಾರು 900 ಎಸ್.ಎಚ್.ಜಿ. ಉದ್ದಿಮೆಗಳು 1 ಲಕ್ಷ ಲೀಟರ್ ಕರ ನೈರ್ಮಲ್ಯಕಗಳನ್ನು ಉತ್ಪಾದಿಸಿವೆ. ಕೆಲವು ಎಸ್.ಎಚ್.ಜಿ.ಗಳು ಕೈ ನೈರ್ಮಲ್ಯ ಕಾಪಾಡಲು ದ್ರವರೂಪದ ಸಾಬೂನು ತಯಾರಿಕೆ ಮಾಡಿವೆ.
ಎನ್.ಆರ್.ಎಲ್.ಎಂ. ಸ್ವಸಹಾಯ ಗುಂಪುಗಳ ಜಾಲ ದೇಶದಲ್ಲಿ ಕೋವಿಡ್ -19 ಪರಿಸ್ಥಿತಿಯ ಸವಾಲು ಎದುರಿಸಲು ಗರಿಗೆದರಿ ನಿಂತಿದೆ
ಪ್ರಸಕ್ತ ಬಿಕ್ಕಟ್ಟಿನ ನಡುವೆಯೂ ಎಸ್.ಎಚ್.ಜಿ. ಸದಸ್ಯರು ಸಮುದಾಯ ಯೋಧರಂತೆ ಹೊರಹೊಮ್ಮಿದ್ದು, ತಮ್ಮ ಕೈಲಾದ ರೀತಿಯಲ್ಲಿ ಕೋವಿಡ್ 19 ತಡೆಗೆ ಕೊಡುಗೆ ನೀಡುತ್ತಿದ್ದಾರೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡೇ ಎನ್ಆರ್.ಎಲ್.ಎಂ.) ಅಡಿ ಸ್ಥಾಪನೆಯಾದ ಸುಮಾರು 690 ಲಕ್ಷ ಮಹಿಳಾ ಸದಸ್ಯರು ದೇಶಾದ್ಯಂತದ 63 ಲಕ್ಷ ಸ್ವಸಹಾಯ ಗುಂಪುಗಳು (ಎಸ್.ಎಚ್.ಜಿ.) ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿವೆ.
ಹೈದರಾಬಾದ್ನ ಸಿಎಸ್ಐಆರ್-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಬಹು ವಿಭಾಗಗಳಲ್ಲಿ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ನಿರತವಾಗಿದೆ
ಕೋವಿಡ್-19 ವಿರುದ್ಧ ಹೋರಾಡಲು ಹೈದರಾಬಾದ್ ಮೂಲದ ಸಿಎಸ್.ಐಆರ್.ನ ಪ್ರಮುಖ ಜೀವಶಾಸ್ತ್ರ ಪ್ರಯೋಗಾಲಯ ಸಿಸಿಎಂಬಿ ದೇಶಗಳಲ್ಲಿ ಹಲವಾರು ಸಾಧನಗಳು ಮತ್ತು ವಿಧಾನಗಳನ್ನು ಬಳಸುತ್ತಿದೆ
ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ
- ಕೇರಳ: - ರಾಜ್ಯದ ಒಂದು ಹಾಟ್ ಸ್ಪಾಟ್- ಕಸರಗೋಡಿನಲ್ಲಿ 26 ಕೋವಿಡ್ ರೋಗಿಗಳನ್ನು ಗುಣಪಡಿಸಲಾಗಿದೆ ಮತ್ತು ಇಂದು ಬಿಡುಗಡೆ ಮಾಡಲಾಗಿದೆ; ಜಿಲ್ಲೆಯಲ್ಲಿ ಈಗಾಗಲೇ 60ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 105 ಸಕ್ರಿಯ ಪ್ರಕರಣಗಳಿವೆ. ರಾಜ್ಯಕ್ಕೆ ಕೇಂದ್ರ ಸರಿಯಾದ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ರಾಜ್ಯ ಹಣಕಾಸು ಸಚಿವರು ಟೀಕಿಸಿದ್ದಾರೆ. ಅಕ್ರಮ ವಾಹನಗಳ ಓಡಾಟದ ಹಿನ್ನೆಲೆಯಲ್ಲಿ ತಮಿಳುನಾಡಿನ ಗಡಿಯಲ್ಲಿರುವ ಎಲ್ಲಾ ಉಪ-ಮಾರ್ಗಗಳನ್ನು ಪೊಲೀಸರು ಬಂದ್ ಮಾಡುತ್ತಾರೆ.
- ತಮಿಳುನಾಡು: ರಾಜ್ಯದಲ್ಲಿ12 ನೇ ಸಾವು ವರದಿಯಾಗಿದೆ; 45/ಎಫ್ ಚೆನ್ನೈನ ಸರ್ಕಾರಿ ಎಂ.ಸಿ.ಗೆ ದಾಖಲಾಗಿದ್ದಾರೆ. ರಾಜ್ಯದಲ್ಲಿ 8 ವೈದ್ಯರಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳು 969. ವಿಲ್ಲುಪುರಂನಿಂದ ನಾಪತ್ತೆಯಾಗಿರುವ ದೆಹಲಿ ಮೂಲದ ಕೋವಿಡ್ ಸೋಂಕಿತನ ವಿರುದ್ಧ ರಾಷ್ಟ್ರವ್ಯಾಪಿ ಎಚ್ಚರಿಕೆ ನೀಡಲಾಗಿದೆ. ಲಾಕ್ ಡೌನ್ನಿಂದಾಗಿ ರಾಜ್ಯವು 10,000 ಕೋಟಿ ರೂ. ಆದಾಯದ ಕೊರತೆ ಅನುಭವಿಸುತ್ತಿದೆ.
- ಕರ್ನಾಟಕ: ರಾಜ್ಯದಲ್ಲಿ 11 ಹೊಸ ಪ್ರಕರಣಗಳು ಇಂದು ಮಧ್ಯಾಹ್ನದವರೆಗೆ ವರದಿಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 226 ಆಗಿದೆ. ಬೆಳಗಾವಿಯಲ್ಲಿ 4 ಪ್ರಕರಣ ದೃಢಪಟ್ಟಿವೆ. ವಿಜಯಪುರವೀಗ ರಾಜ್ಯದಲ್ಲಿ ಕೋವಿಡ್ ಬಾಧಿತವಾದ 19ನೇ ಜಿಲ್ಲೆಯಾಗಿದೆ. 60/ಎಫ್ ನಲ್ಲಿ ಸೋಂಕು ದೃಢಪಟ್ಟಿದೆ. ಇಂದಿನಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಸಮೀಕ್ಷೆ ಮಾಡಲಾಗುತ್ತಿದೆ.
- ಆಂಧ್ರಪ್ರದೇಶ: 12 ಹೊಸ ಪ್ರಕರಣಗಳು ಇಂದು ವರದಿಯಾಗಿವೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 417ಕ್ಕೆ ಏರಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾನ್, ತಂಬಾಕುರಹಿತ ಉತ್ಪನ್ನ ಮತ್ತು ಕಫ ಉಗುಳುವುದನ್ನು ದಂಡನೀಯ ಅಪರಾಧವಾಗಿ ಮಾಡಿದೆ. ಮುಖ್ಯಮಂತ್ರಿಯವರು ಪ್ರತಿಯೊಬ್ಬರಿಗೂ 3 ಮಾಸ್ಕ್ ವಿತರಿಸಲು ಆದೇಶ ನೀಡಿದ್ದಾರೆ. ರಾಜ್ಯ 1.47 ಕೋಟಿ ಕುಟುಂಬಳ ಪೈಕಿ 1.43 ಕೋಟಿ ಕುಟುಂಬಗಳ 3ನೇ ಹಂತದ ಸಮೀಕ್ಷೆ ಪೂರ್ಣಗೊಳಿಸಿದೆ.
- ತೆಲಂಗಾಣ: ತೆಲಂಗಾಣದ ನಿರ್ಮಲ್ ನಿಂದ ಮತ್ತೆರೆಡು ಸೋಂಕಿನ ಪ್ರಕರಣ ದೃಢಪಟ್ಟಿದೆ. ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 505ಕ್ಕೆಏರಿದೆ. ರಾಜ್ಯದಾದ್ಯಂತ ಕೋವಿಡ್ -19 ತಡೆಗೆ ಡ್ರೋನ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಸೋಂಕು ನಿವಾರಣೆಯ ಸಿಂಚನಕ್ಕೆ ನಿಯುಕ್ತಿಗೊಳಿಸಲಾಗಿದೆ.
- ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಪಾಸಿಘಾಟ್ ಜೆಎನ್ ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಮುಂಚೂಣಿಯ ಯೋಧರಾದ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ.
- ಅಸ್ಸಾಂ: ಆರೋಗ್ಯ ಸಚಿವ ಹಿಮಂತ್ ಬಿಸ್ವಾಸ್ ಶರ್ಮಾ ಟ್ವೀಟ್ ಮಾಡಿದ್ದು, ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಯಾವುದೇ ಕೋವಿಡ್ -19 ರೋಗಿ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.
- ಮಣಿಪುರ: ಮುಖ್ಯ ಕಾರ್ಯದರ್ಶಿ ರಾಜ್ಯದಲ್ಲಿ ಆಮ್ಲಜನಕ ಪೂರೈಕೆ (ಕೊಳವೆಯ ಅಥವಾ ಬೆಡ್ ಸೈಡ್ ಸಿಲಿಂಡರ್) ಲಭ್ಯತೆಯ ಪರಿಶೀಲನೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
- ಮಿಜೋರಾಂ: ಮಿಜೋರಾಂನಲ್ಲಿ ಅವಶ್ಯಕ ವಸ್ತುಗಳ ಪೂರೈಕೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಚಾಲಕರು ಮತ್ತು ಇತರ ಕಾರ್ಮಿಕರ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಸಾರಿಗೆ ಸಚಿವರು, ಅವರ ಬಗ್ಗೆ ಹೆಚ್ಚಿನ ಕಾಳಜಿ ತೋರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
- ಮೇಘಾಲಯ: ಜಿಲ್ಲೆಯ ಜನರಿಗೆ ನೆರವಾಗಲು ಬಯಸುವ, ರಾಜ್ಯದ ಮತ್ತು ಜಿಲ್ಲೆಯ ಹೊರಗಿನ ಎಲ್ಲಾ ಎನ್.ಜಿ.ಓಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳು ತಮ್ಮ ಹೆಸರುಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಲ್ಲಿ ನೋಂದಾಯಿಸಿಕೊಳ್ಳಲು ಮೇಘಾಲಯದ ಪೂರ್ವ ಮತ್ತು ಪಶ್ಚಿಮ ಜಿಂತಿಯಾ ಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.
- ನಾಗಾಲ್ಯಾಂಡ್: ದಿಮಾಪುರದ 3 ಪರಿಹಾರ ಶಿಬಿರಗಳಲ್ಲಿ 363 ಜನರಿಗೆ ಪುನಃ ಆಶ್ರಯ ನೀಡಲಾಗಿದ್ದು, ಇನ್ನೂ 2000 ಜನರಿಗೆ ಆಹಾರ ಧಾನ್ಯಗಳು ಮತ್ತು ಪಡಿತರವನ್ನು ಜಿಲ್ಲಾಡಳಿತ ಮತ್ತು ಎನ್ಜಿಒಗಳಿಂದ ಪೂರೈಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
- ಸಿಕ್ಕಿಂ: ಕೋವಿಡ್- 19 ರ ಕಾರಣದಿಂದಾಗಿ ಎದುರಾಗುತ್ತಿರುವ ಸವಾಲುಗಳ ಕುರಿತು ಹೆಚ್ಚಿನ ನಿರ್ಧಾರ ತೆಗೆದುಕೊಳ್ಳಲು 2020 ರ ಏಪ್ರಿಲ್ 15 ರಂದು ಸಂಪುಟ ಸಭೆ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ
- ತ್ರಿಪುರ: 21,899 ಇಟ್ಟಿಗೆ ಗೂಡು ವಲಸೆ ಕಾರ್ಮಿಕರಿಗೆ ರೂ .3.58ಕೋಟಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ವಲಸೆ ಕಾರ್ಮಿಕರು ರೂ. 1000 ಮತ್ತು 20 ದಿನಗಳ ಪಡಿತರ ಪಡೆಯಲಿದ್ದಾರೆ.
- ಮಹಾರಾಷ್ಟ್ರ: ಲಾಕ್ಡೌನ್ ಸಮಯದಲ್ಲಿ ನಿರ್ಬಂಧದ ಆದೇಶಗಳು ಮತ್ತು ಕ್ವಾರಂಟೈನ್ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ರಾಜ್ಯಾದ್ಯಂತ 35,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಏತನ್ಮಧ್ಯೆ, ಇನ್ನೂ 134 ಜನರಲ್ಲಿ ಸೋಂಕು ದೃಢಪಟ್ಟಿದೆ, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,895 ಕ್ಕೆ ಏರಿದೆ.
- ಮಧ್ಯಪ್ರದೇಶ: ಮಹಾರಾಷ್ಟ್ರದ ನಂತರ, ಮಧ್ಯಪ್ರದೇಶವು ಭಾರತದಲ್ಲಿ ಇದುವರೆಗೆ ಎರಡನೇ ಅತಿ ಹೆಚ್ಚು ಕೋವಿಡ್ -19 ಸಾವುಗಳನ್ನು ದಾಖಲಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 127 ಸಾವುಗಳು ಸಂಭವಿಸಿದ್ದರೆ, ಮಧ್ಯಪ್ರದೇಶದಲ್ಲಿ ಈವರೆಗೆ 36 ಕರೋನ ವೈರಾಣು ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ.
- ರಾಜಸ್ಥಾನ: ರಾಜಸ್ಥಾನದಲ್ಲಿ 151 ಹೊಸ ಕೊರೊನಾ ವೈರಾಣು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 751 ಕ್ಕೆ ಏರಿದೆ. ಈ ದಿನಾಂಕದವರೆಗೆ ಸೋಂಕಿತರಲ್ಲಿ 21 ಮಂದಿ ಚೇತರಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ.
- ಗುಜರಾತ್: ಗುಜರಾತ್ನಲ್ಲಿ 67 ಹೊಸ ಕೊರೊನಾವೈರಾಣು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ನಲ್ಲಿ ಕೋವಿಡ್ 19 ಪ್ರಕರಣಗಳು 308 ಕ್ಕೆ ಏರಿವೆ. ಈ ದಿನಾಂಕದವರೆಗೆ ಸೋಂಕಿತರಾದವರ ಪೈಕಿ 31 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 19 ಮಂದಿ ಮೃತಪಟ್ಟಿದ್ದಾರೆ.
- ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ 21 ಹೊಸ ಪ್ರಕರಣಗಳು ವರದಿಯಾಗಿವೆ. 17 ಕಾಶ್ಮೀರ ವಿಭಾಗದಲ್ಲಿ ಮತ್ತು ಜಮ್ಮು ವಲಯದಲ್ಲಿ 4 ಪ್ರಕರಣ ವರದಿಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 245 ಆಗಿದೆ.
Fact Check on #Covid19
***
(Release ID: 1613781)
Visitor Counter : 352
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam