ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ನಿಭಾವಣೆಗೆ ಮುಂದಿನ ಕಾರ್ಯತಂತ್ರ ರೂಪಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಚರ್ಚೆ

Posted On: 11 APR 2020 4:39PM by PIB Bengaluru

ಕೋವಿಡ್-19 ನಿಭಾವಣೆಗೆ ಮುಂದಿನ ಕಾರ್ಯತಂತ್ರ ರೂಪಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಚರ್ಚೆ

ಎರಡು ವಾರಗಳವರೆಗೆ ಲಾಕ್ಡೌನ್ ವಿಸ್ತರಿಸಲು ಮುಖ್ಯಮಂತ್ರಿಗಳ ಸಲಹೆ

ಮೊದಲು ನಮ್ಮ ಮಂತ್ರಜಾನ್ ಹೈ ತೊ ಜಹಾನ್ ಹೈಆಗಿತ್ತು.  ಆದರೆ ಈಗಜಾನ್ ಭಿ ಜಹಾನ್ ಭಿಆಗಿದೆ: ಪ್ರಧಾನಿ

ವೈರಸ್ ಹರಡುವಿಕೆ ತಡೆಯಲು ಇದುವರೆಗೆ ಕೈಗೊಂಡ ಕ್ರಮಗಳ ಪರಿಣಾಮವನ್ನು ನಿರ್ಧರಿಸಲು ಮುಂದಿನ 3-4 ವಾರಗಳು ನಿರ್ಣಾಯಕ: ಪ್ರಧಾನಿ

ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಎಪಿಎಂಸಿ ಕಾನೂನುಗಳ ಮಾರ್ಪಾಡು ಸೇರಿದಂತೆ ಕೃಷಿ ಮತ್ತು ಸಂಬಂಧಿತ ವಲಯಕ್ಕೆ ನಿರ್ದಿಷ್ಟ ಕ್ರಮಗಳನ್ನು ಸಲಹೆ ಮಾಡಿದ ಪ್ರಧಾನಿ

ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಅತ್ಯಗತ್ಯ ಸಾಧನವಾಗಿದೆ, ನಂತರ ಇದು ಪ್ರಯಾಣಕ್ಕೆ ಅನುಕೂಲವಾಗುವ -ಪಾಸ್ ಆಗಿ ಕಾರ್ಯನಿರ್ವಹಿಸಬಹುದು: ಪ್ರಧಾನಿ

ಆರೋಗ್ಯ ವೃತ್ತಿಪರರ ಮೇಲಿನ ದಾಳಿ ಮತ್ತು ಈಶಾನ್ಯ ಮತ್ತು ಕಾಶ್ಮೀರದ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆಗಳನ್ನು ಖಂಡಿಸಿದ ಪ್ರಧಾನ ಮಂತ್ರಿ

ದೇಶವು ಅಗತ್ಯ ಔಷಧಿಗಳ ಸಾಕಷ್ಟು ಸರಬರಾಜು ಹೊಂದಿದೆ: ಪ್ರಧಾನಿ ಭರವಸೆ; ಕಾಳ ಮಾರುಕಟ್ಟೆ ಮತ್ತು ಅಕ್ರಮ ದಾಸ್ತಾನುಗಾರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

 

ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸಲು ಮುಂದಿನ ಕಾರ್ಯತಂತ್ರ ರೂಪಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು. ಇದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನ ಮಂತ್ರಿಯ ಮೂರನೆಯ ಸಂವಾದವಾಗಿತ್ತು, ಮೊದಲು 2020 ಏಪ್ರಿಲ್ 2 ಮತ್ತು ಮಾರ್ಚ್ 20 ರಂದು ಚರ್ಚೆ ನಡೆದಿಸಿದ್ದರು.

ಕೇಂದ್ರ ಮತ್ತು ರಾಜ್ಯಗಳ ಒಗ್ಗಟ್ಟಿನ ಪ್ರಯತ್ನವು ಕೋವಿಡ್-19 ಪರಿಣಾಮವನ್ನು ತಗ್ಗಿಸಲು ಖಂಡಿತವಾಗಿಯೂ ಸಹಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಆದರೆ ಪರಿಸ್ಥಿತಿ ಬಹಳ ವೇಗವಾಗಿ ಬೆಳೆಯುತ್ತಿರುವುದರಿಂದ, ನಿರಂತರ ಜಾಗರೂಕತೆಯು ಅತ್ಯಗತ್ಯವಾಗಿದೆ ಎಂದರು.  ವೈರಸ್ ಅನ್ನು ನಿಗ್ರಹಿಸಲು ಇದುವರೆಗೆ ತೆಗೆದುಕೊಂಡ ಕ್ರಮಗಳ ಪರಿಣಾಮವನ್ನು ನಿರ್ಧರಿಸಲು ಮುಂಬರುವ 3-4 ವಾರಗಳು ನಿರ್ಣಾಯಕವಾಗಿವೆ ಎಂದು ಒತ್ತಿ ಹೇಳಿದ ಅವರು, ಸವಾಲನ್ನು ಎದುರಿಸಲು ತಂಡವಾಗಿ ಕೆಲಸ ಮಾಡುವುದು ಮುಖ್ಯವಾಗಿದೆ ಎಂದರು.

ಭಾರತವು ಅಗತ್ಯ ಔಷಧಿಗಳ ಸಾಕಷ್ಟು ಸರಬರಾಜುಗಳನ್ನು ಹೊಂದಿದೆ ಎಂದು ಪ್ರಧಾನಿ ಭರವಸೆ ನೀಡಿದರು. ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ರಕ್ಷಣಾ ಸಾಧನ ಮತ್ತು ನಿರ್ಣಾಯಕ ಉಪಕರಣಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದ ಪ್ರಧಾನಿ, ಕಾಳ ಮಾರುಕಟ್ಟೆ ಮತ್ತು ಅಕ್ರಮ ದಾಸ್ತಾನು ವಿರುದ್ಧ ಕಠಿಣ ಕ್ರಮದ ಸಂದೇಶವನ್ನು ನೀಡಿದರು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಈಶಾನ್ಯ ಮತ್ತು ಕಾಶ್ಮೀರದ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆಯ ಘಟನೆಗಳನ್ನು ಖಂಡಿಸಿದ ಅವರು, ಇಂತಹ ಪ್ರಕರಣಗಳನ್ನು ದೃಢವಾಗಿ ನಿಭಾಯಿಸುವ ಅಗತ್ಯವಿದೆ ಎಂದರು. ಲಾಕ್ಡೌನ್ ಉಲ್ಲಂಘನೆಗಳನ್ನು ನಿಗ್ರಹಿಸುವ ಅಗತ್ಯತೆ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸಲಾಗುತ್ತಿದೆಯೇ ಎಂಬ ಬಗ್ಗೆ ಅವರು ಮಾತನಾಡಿದರು.

ಲಾಕ್ಡೌನ್ನಿಂದ ನಿರ್ಗಮನ ಯೋಜನೆ ಕುರಿತು ಮಾತನಾಡಿದ ಪ್ರಧಾನಿಯವರು, ಲಾಕ್ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸುವ ಕುರಿತು ರಾಜ್ಯಗಳ ನಡುವೆ ಒಮ್ಮತವಿದೆ ಎಂದು ತೋರುತ್ತಿದೆ. ಹಿಂದೆ ಸರ್ಕಾರದ ಧ್ಯೇಯವಾಕ್ಯವುಜಾನ್ ಹೈ ತೊ ಜಹಾನ್ ಹೈಆಗಿತ್ತು. ಆದರೆ ಈಗ ‘‘ಜಾನ್ ಭಿ ಜಹಾನ್ ಭಿ ಆಗಿದೆ ಎಂದು ಅವರು ಒತ್ತಿಹೇಳಿದರು.

ಆರೋಗ್ಯ ಮೂಲಸೌಕರ್ಯಗಳನ್ನು ಬಲವರ್ಧನೆ ಮತ್ತು ಟೆಲಿಮೆಡಿಸಿನ್ ಮೂಲಕ ರೋಗಿಗಳನ್ನು ತಲುಪುವ ಬಗ್ಗೆ ಪ್ರಧಾನಿ ಮಾತನಾಡಿದರು. ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಪ್ರೋತ್ಸಾಹಿಸಬಹುದು, ಇದಕ್ಕಾಗಿ ಎಪಿಎಂಸಿ ಕಾನೂನುಗಳನ್ನು ಶೀಘ್ರವಾಗಿ ಸುಧಾರಿಸಬೇಕು ಎಂದು ಅವರು ಸಲಹೆ ನೀಡಿದರು. ಇಂತಹ ಕ್ರಮಗಳು ರೈತರು ತಮ್ಮ ಮನೆ ಬಾಗಿಲಿನಿಂದಲೇ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತವೆ ಎಂದರು.

ಆರೋಗ್ಯ ಸೇತು ಆ್ಯಪ್ ಹೆಚ್ಚಿನ ಸಂಖ್ಯೆಯಲ್ಲಿ ಡೌನ್ಲೋಡ್ಆಗುವುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಜನಪ್ರಿಯಗೊಳಿಸುವ ಬಗ್ಗೆಯೂ ಪ್ರಧಾನಿಯವರು ಮಾತನಾಡಿದರು. ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವಲ್ಲಿ ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ ಸಾಧಿಸಿದ ಯಶಸ್ಸಿನ ಬಗ್ಗೆ ಅವರು ಉಲ್ಲೇಖಿಸಿದರು. ಅನುಭವಗಳ ಆಧಾರದ ಮೇಲೆ, ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಅತ್ಯಗತ್ಯ ಸಾಧನವಾಗಲಿರುವ ಆರೋಗ್ಯ ಸೇತು ಆ್ಯಪ್ ಮೂಲಕ ಭಾರತ ತನ್ನದೇ ಆದ ಪ್ರಯತ್ನವನ್ನು ಮಾಡಿದೆ ಎಂದು ಅವರು ಹೇಳಿದರು. ಅಪ್ಲಿಕೇಶನ್ ನಂತರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಅನುಕೂಲವಾಗುವ -ಪಾಸ್ ಆಗುವ ಸಾಧ್ಯತೆಯ ಬಗ್ಗೆ ಅವರು ಉಲ್ಲೇಖಿಸಿದರು.

ಆರ್ಥಿಕ ಸವಾಲುಗಳ ಬಗ್ಗೆ ಮಾತನಾಡಿದ ಪ್ರಧಾನಿಯವರು, ಬಿಕ್ಕಟ್ಟು ಸ್ವಾವಲಂಬಿಗಳಾಗಲು ಮತ್ತು ರಾಷ್ಟ್ರವನ್ನು ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡಲು ಒಂದು ಅವಕಾಶವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಬಗ್ಗೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು, ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು, ವಲಸಿಗರ ತೊಂದರೆಗಳನ್ನು ತಗ್ಗಿಸಲು ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ನಿರ್ವಹಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಫೀಡ್ ಬ್ಯಾಕ್ ನೀಡಿದರು. ಲಾಕ್ಡೌನ್ ಅನ್ನು ಎರಡು ವಾರಗಳವರೆಗೆ ವಿಸ್ತರಿಸಬೇಕೆಂದು ಮುಖ್ಯಮಂತ್ರಿಗಳು ಸಲಹೆ ಮಾಡಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಲು ಅವರು ಕೇಂದ್ರ ಸರ್ಕಾರದಿಂದ ಹಣಕಾಸು ಮತ್ತು ಆರ್ಥಿಕ ನೆರವು ಕೋರಿದರು.

ಸಂವಾದದಲ್ಲಿ ಕೇಂದ್ರ ಗೃಹ ಸಚಿವರು, ರಕ್ಷಣಾ ಸಚಿವರು, ಆರೋಗ್ಯ ಸಚಿವರು, ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

***



(Release ID: 1613389) Visitor Counter : 295