ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

Posted On: 04 APR 2020 9:58PM by PIB Bengaluru

ಪ್ರಧಾನಮಂತ್ರಿ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕಾ ಸಂಯುಕ್ತ ಸಂಸ್ಥಾನದ  ಅಧ್ಯಕ್ಷ ಘನತೆವೆತ್ತ ಡೋನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಪ್ರಸಕ್ತ ಬಾಧಿಸುತ್ತಿರುವ ಕೋವಿಡ್-19 ಸಾಂಕ್ರಾಮಿಕ ಮತ್ತು ಜಗತ್ತಿನ ಕ್ಷೇಮ ಮತ್ತು ಆರ್ಥಿಕತೆಯ ಮೇಲೆ ಅದರ ಪರಿಣಾಮ ಕುರಿತೂ ತಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಂಡರು.

ಪ್ರಧಾನಮಂತ್ರಿಯವರು ಅಮೆರಿಕಾದಲ್ಲಿ ಭಾರೀ ಪ್ರಮಾಣದ ಜೀವಹಾನಿ ಆಗಿರುವ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಿದರು, ಇನ್ನೂ ಕಾಯಿಲೆಯಿಂದ ಬಳಲುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಎರಡೂ ದೇಶಗಳ ನಡುವಿನ ವಿಶೇಷ ಬಾಂಧವ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಜಾಗತಿಕ ಬಿಕ್ಕಟ್ಟಿನಿಂದ ಒಟ್ಟಾಗಿ ಹೊರಬರಲು ಅಮೆರಿಕಾದೊಂದಿಗೆ ಭಾರತದ ಏಕಮತ್ಯವನ್ನು ಪುನರುಚ್ಚರಿಸಿದರು. ಕೋವಿಡ್-19 ಅನ್ನು ದೃಢ ನಿಶ್ಚಯದಿಂದ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಭಾರತ - ಅಮೆರಿಕ ಸಹಭಾಗಿತ್ವದ ಸಂಪೂರ್ಣ ಶಕ್ತಿಯನ್ನು ನಿಯೋಜಿಸಲು ಉಭಯ ನಾಯಕರು ಸಮ್ಮತಿಸಿದರು.

ಪ್ರಧಾನಮಂತ್ರಿಯವರು ಮತ್ತು ಅಮೆರಿಕದ ಅಧ್ಯಕ್ಷರು ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಆರೋಗ್ಯ ಮತ್ತು ಆರ್ಥಿಕ ದುಷ್ಪರಿಣಾಮಗಳ ನಿವಾರಣೆಗೆ ಪ್ರತಿ ರಾಷ್ಟ್ರ ಕೈಗೊಂಡಿರುವ ಕ್ರಮಗಳ ಕುರಿತೂ ತಮ್ಮ ಅಭಿಮತ ಹಂಚಿಕೊಂಡರು.

ಇಬ್ಬರೂ ನಾಯಕರು ಸಂಕಷ್ಟದ ಸಮಯದಲ್ಲಿ ಭೌತಿಕ ಮತ್ತು ಮಾನಸಿಕ ಯೋಗಕ್ಷೇಮ ಕಾಪಾಡಿಕೊಳ್ಳಲು ಯೋಗ ಮತ್ತು ಆಯುರ್ವೇದ (ಸಾಂಪ್ರದಾಯಿಕ ಗಿಡಮೂಲಿಕೆ ವೈದ್ಯ ಪದ್ಧತಿ) ಮಹತ್ವದ ಬಗ್ಗೆಯೂ ತಮ್ಮ ಗಮನ ಹರಿಸಿದರು.

ಕೋವಿಡ್-19 ಜಾಗತಿಕ ಬಿಕ್ಕಟ್ಟಿನ ಕುರಿತಂತೆ ಅವರ ಅಧಿಕಾರಿಗಳು ಆಪ್ತ ಸಮಾಲೋಚನೆಯಲ್ಲಿರುವುದಕ್ಕೆ ಇಬ್ಬರೂ ನಾಯಕರು ಸಮ್ಮತಿಸಿದರು.  

 

***



(Release ID: 1611248) Visitor Counter : 608