ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಅಪ್ ಡೇಟ್ಸ್

Posted On: 02 APR 2020 5:39PM by PIB Bengaluru

ಕೋವಿಡ್ -19 ಅಪ್ ಡೇಟ್ಸ್

 

ದೇಶದಲ್ಲಿ ಕೋವಿಡ್ -19 ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಭಾರತ ಸರ್ಕಾರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳನ್ನು ಉನ್ನತ ಮಟ್ಟದಲ್ಲಿ ನಿರಂತರ ನಿಗಾ ವಹಿಸಲಾಗುತ್ತಿದೆ.  

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಬಿಕ್ಕಟ್ಟನ್ನು ನಿರ್ವಹಿಸುವಂತೆ ಮತ್ತು ಸೋಂಕು ಪರೀಕ್ಷೆಗೆ ಪ್ರಯೋಗಾಲಯ, ಐಸೋಲೇಶನ್ ಮತ್ತು ಕ್ವಾರಂಟೈನ್ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ರಾಜ್ಯಗಳಿಗೆ ಕರೆ ನೀಡಲಾಯಿತು. ಅಲ್ಲದೆ, ರಾಜ್ಯಗಳಿಗೆ ಆರೋಗ್ಯ ರಕ್ಷಣಾ ಮಾನವ ಸಂಪನ್ಮೂಲವನ್ನು ಉನ್ನತೀಕರಿಸುವಂತೆ ಮನವಿ ಮಾಡಲಾಯಿತು. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ನಿವೃತ್ತ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು, ಎನ್ ಜಿಒ, ಎನ್ ಎಸ್ ಎಸ್ ಮತ್ತು ಎನ್ ಎಸ್ ಒ ಗಳ ಸಹಾಯದಿಂದ ಹಾಲಿ ಇರುವ ಸಾಮರ್ಥ್ಯವನ್ನು ಬಲವರ್ಧನೆಗೊಳಿಸುವ ಜೊತೆಗೆ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಆನ್ ಲೈನ್ ತರಬೇತಿ ನೀಡಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಯಿತು.    

 ಗೌರವಾನ್ವಿತ ಪ್ರಧಾನಮಂತ್ರಿಗಳ ಭಾರೀ ಕಣ್ಗಾವಲಿನೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಲಾಕ್ ಡೌನ್ ಅನ್ನು ರಾಜ್ಯಗಳು ಜಾರಿಗೊಳಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೋಂಕಿತರ ಸಂಪರ್ಕವನ್ನು ಮಾಡಿರುವವರ ಪತ್ತೆ ಕಾರ್ಯದಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇರಿಸಲಾಗುತ್ತಿದೆ ಎಂದು ಅವರು ಹೇಳಿದರು. ಪರಿಹಾರ ಶಿಬಿರಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಹಾಗೂ ಮಾನಸಿಕ – ಸಾಮಾಜಿಕ ಬೆಂಬಲ ನೀಡುವ ಸಮರ್ಪಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯಗಳು ತಿಳಿಸಿದವು. ಕೋವಿಡ್-19ಗೆ ಮೀಸಲಿರಿಸಲಾದ ಆಸ್ಪತ್ರೆಗಳು, ಐಸಿಯು ಹಾಸಿಗೆಗಳು, ಕ್ವಾರಂಟೈನ್ ಸೌಕರ್ಯ, ವೆಂಟಿಲೇಟರ್ ಮತ್ತು ಪಿಪಿಇಗಳ ಕುರಿತು ಮಾಡಿರುವ ಪ್ರಗತಿಯನ್ನು ರಾಜ್ಯಗಳು ವಿವರಿಸಿದವು.

ಗೌರವಾನ್ವಿತ ಸುಪ್ರೀಂಕೋರ್ಟ್ ನ ಆದೇಶದ ಮೇರೆಗೆ ಜನರಲ್ಲಿ ಭಯವನ್ನು ಹೋಗಲಾಡಿಸಲು ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಯಿತು.

ಅಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋವಿಡ್-19 ರೋಗಿಗಳ ಚಿಕಿತ್ಸೆ ಕುರಿತ(ಡಯಾಲಿಸಿಸ್) ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದು ವೆಬ್ ಸೈಟ್  www.mohfw.gov.inನಲ್ಲಿ ಲಭ್ಯವಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಸಹಯೋಗದಲ್ಲಿ ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಒತ್ತಡ ಮತ್ತು ಆತಂಕಕ್ಕೆ ಒಳಗಾಗದಂತೆ ಮಕ್ಕಳು ಹಾಗೂ ವಯೋವೃದ್ಧರ ಮಾನಸಿಕ ಆರೋಗ್ಯ ರಕ್ಷಣೆಯ ಕೈಗೊಳ್ಳಬೇಕಾದ ಕೆಲವು ಸಾಮಾನ್ಯ ಸಾರ್ವಜನಿಕ ಕ್ರಮಗಳನ್ನು ಶಿಫಾರಸ್ಸು ಮಾಡಿದೆ. ಅವುಗಳು ಈ ವೆಬ್ ಸೈಟ್ ನಲ್ಲಿ www.mohfw.gov.inಲಭ್ಯವಿವೆ. ಅಲ್ಲದೆ ಆರೋಗ್ಯ ನಡವಳಿಕೆ ಸಂಬಂಧಿ ಯಾವುದೇ ಪ್ರಶ್ನೆಗಳಿದ್ದರೆ ಅವುಗಳಿಗೆ ಮಾನಸಿಕ-ಸಾಮಾಜಿಕ ಉಚಿತ ಸಹಾಯವಾಣಿ ಸಂಖ್ಯೆ 08046110007 ಕರೆ ಮಾಡಿ ಬಗೆಹರಿಸಿಕೊಳ್ಳಬಹುದು.  

ಈವರೆಗೆ ದೇಶದಲ್ಲಿ 1965 ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 50 ಸಾವುಗಳು ಸಂಭವಿಸಿರುವ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 328 ಹೊಸ ಪ್ರಕರಣಗಳು ದೃಢಪಟ್ಟಿವೆ ಮತ್ತು 12 ಸಾವುಗಳು ಸಂಭವಿಸಿರುವ ವರದಿಯಾಗಿದೆ. 151 ವ್ಯಕ್ತಿಗಳು ಚೇತರಿಕೆಯ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಕೋವಿಡ್-19ಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ವಿಷಯಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳಿಗೆ ಹಾಗೂ ಎಲ್ಲ ಖಚಿತ ಮತ್ತು ಅಪ್ ಡೇಟೆಡ್ ಮಾಹಿತಿಗೆ ನಿರಂತರವಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಬಹುದುhttps://www.mohfw.gov.in/.

ಕೋವಿಡ್-19 ಕುರಿತ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಮತ್ತು  ncov2019[at]gov[dot]in .ಇ-ಮೇಲ್ ವಿಳಾಸಕ್ಕೆ ಬರೆದು ಉತ್ತರ ಪಡೆಯಬಹುದು.

ಕೋವಿಡ್-19 ಕುರಿತ ಯಾವುದೇ ಪ್ರಶ್ನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ: +91-11-23978046 ಅಥವಾ 1075 (ಟೋಲ್ ಫ್ರೀಕರೆ ಮಾಡಬಹುದು. ಕೋವಿಡ್-19 ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳು ಈ ವೆಬ್ ಸೈಟ್ ನಲ್ಲಿ  ಲಭ್ಯ. https://www.mohfw.gov.in/pdf/coronvavirushelplinenumber.pdf .

 

*****


(Release ID: 1610536) Visitor Counter : 263