ಪ್ರಧಾನ ಮಂತ್ರಿಯವರ ಕಛೇರಿ

ಆಯುಷ್ ಸಾಧಕರೊಂದಿಗೆ ಪ್ರಧಾನಿ ಸಂವಾದ

Posted On: 28 MAR 2020 1:16PM by PIB Bengaluru

ಆಯುಷ್ ಸಾಧಕರೊಂದಿಗೆ ಪ್ರಧಾನಿ ಸಂವಾದಆಯುಷ್ ಕ್ಷೇತ್ರವು ರಾಷ್ಟ್ರವನ್ನು ಆರೋಗ್ಯವಾಗಿಡುವ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ; ಇದು COVID-19 ರ ಹರಡುವಿಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ: ಪ್ರಧಾನಿ
ರೋಗವನ್ನು ಗುಣಪಡಿಸುವ ಆಯುಷ್‌ನ ಆಧಾರರಹಿತ ಹಕ್ಕುಗಳನ್ನು ಪರಿಶೀಲನೆಗೊಳಪಡಿಸುವುದು
ಮುಖ್ಯವಾಗಿದೆ: ಪ್ರಧಾನಿ
ಸಾರ್ವಜನಿಕರನ್ನು ತಲುಪಲು ಮತ್ತು ನಿರಂತರ ಜಾಗೃತಿ ಮೂಡಿಸಲು ಟೆಲಿಮೆಡಿಸಿನ್‌ ವೇದಿಕೆಯನ್ನು ಬಳಸಿಕೊಳ್ಳಿ: ಪ್ರಧಾನಿ
ಮನೆಯಲ್ಲಿ ಯೋಗವನ್ನು ಉತ್ತೇಜಿಸಲು ಆಯುಷ್ ಸಚಿವಾಲಯ ಮಾಡುತ್ತಿರುವ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಆಯುಷ್ ಕ್ಷೇತ್ರದ ಸಾಧಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಆಯುಷ್ ಕ್ಷೇತ್ರವು ರಾಷ್ಟ್ರವನ್ನು ಆರೋಗ್ಯವಾಗಿಡುವ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ ಮತ್ತು COVID-19 ಅನ್ನು ನಿಭಾಯಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಅದರ ಪ್ರಾಮುಖ್ಯತೆಯು ಅನೇಕ ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆಯುಷ್ ಜಾಲ ದೇಶದ ಉದ್ದಗಲಕ್ಕೂ ಹರಡಿದೆ. WHO ಮಾರ್ಗಸೂಚಿಗಳ ಪ್ರಕಾರ ಕೆಲಸ ಮಾಡುವಾಗ ಉತ್ತಮ ಅಭ್ಯಾಸಗಳ ಸಂದೇಶವನ್ನು ಹರಡಲು ಹಾಗೂ ವೈರಸ್ ಹರಡುವುದನ್ನು ನಿಯಂತ್ರಿಸಲು ಅವರು ಈ ಜಾಲವನ್ನು ಬಳಸಿಕೊಳ್ಳುವುದು ಮಹತ್ವದ್ದಾಗಿದೆ ಎಮದರು. ಈ ಕಷ್ಟದ ಸಂದರ್ಭದಲ್ಲಿ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಮನೆಯಲ್ಲಿಯೇ ಯೋಗವನ್ನು ಉತ್ತೇಜಿಸಲು ಆಯುಷ್ ಸಚಿವಾಲಯ ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಆಯುಷ್ ರೋಗವನ್ನು ಗುಣಪಡಿಸುತ್ತದೆ ಎಂಬ ಆಧಾರರಹಿತ ಹಕ್ಕುಗಳನ್ನು ಪರಿಶೀಲಿಸುವ ಮಹತ್ವವನ್ನು ಪ್ರಧಾನಿಯವರು ಒತ್ತಿಹೇಳಿದರು. ಆಯುಷ್ ವಿಜ್ಞಾನಿಗಳು, ಐಸಿಎಂಆರ್, ಸಿಎಸ್ಐಆರ್ ಮತ್ತು ಇತರ ಸಂಶೋಧನಾ ಸಂಸ್ಥೆಗಳು ಸಾಕ್ಷ್ಯಾಧಾರಿತ ಸಂಶೋಧನೆಗಾಗಿ ಒಟ್ಟಾಗಬೇಕು ಎಂದು ಹೇಳಿದರು. ಸವಾಲನ್ನು ಎದುರಿಸಲು ಇಡೀ ಆರೋಗ್ಯ ಕಾರ್ಯಪಡೆಗಳನ್ನು ಬಳಸಲು ದೇಶವು ಸಿದ್ಧರಾಗಿರಬೇಕು ಮತ್ತು ಅಗತ್ಯವಿದ್ದಲ್ಲಿ ಆಯುಷ್‌ನೊಂದಿಗೆ ಸಂಪರ್ಕ ಹೊಂದಿರುವ ಖಾಸಗಿ ವೈದ್ಯರ ಸಹಾಯವನ್ನು ಸರ್ಕಾರ ಪಡೆಯಬಹುದು ಎಂದು ಅವರು ಹೇಳಿದರು.
ಆಯುಷ್ ಔಷಧಿ ಉತ್ಪಾದಕರು ತಮ್ಮ ಸಂಪನ್ಮೂಲಗಳನ್ನು ಈ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆಯಿರುವ ಸ್ಯಾನಿಟೈಜರ್‌ಗಳಂತಹ ಅಗತ್ಯ ವಸ್ತುಗಳನ್ನು ಉತ್ಪಾದಿಸಲು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಸಲಹೆ ನೀಡಿದರು. ಸಾರ್ವಜನಿಕರಿಗೆ ತಲುಪಲು ಮತ್ತು ಸಾಂಕ್ರಾಮಿಕ ರೋಗದ ಬಗ್ಗೆ ನಿರಂತರ ಜಾಗೃತಿ ಮೂಡಿಸಲು ಟೆಲಿಮೆಡಿಸಿನ್‌ ವೇದಿಕೆಯನ್ನು ಬಳಸಿಕೊಳ್ಳುವಂತೆ ಅವರು ಸೂಚಿಸಿದರು. ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮತ್ತು ಅದನ್ನು ಅನುಷ್ಠಾನಗೊಳಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
COVID-19 ವಿರುದ್ಧ ದೇಶದ ಹೋರಾಟವನ್ನು ಮುನ್ನಡೆಸುತ್ತಿರುವುದಕ್ಕಾಗಿ ಆಯುಷ್ ಸಾಧಕರು ಪ್ರಧಾನಿಯವರನ್ನು ಶ್ಲಾಘಿಸಿದರು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಸಾಂಪ್ರದಾಯಿಕ ಪದ್ಧತಿಗಳ ಪ್ರಭಾವ ಕುರಿತು ಅವರು ಮಾತನಾಡಿದರು. ರೋಗಲಕ್ಷಣದ ಚಿಕಿತ್ಸೆಗಾಗಿ ಸಂಶೋಧನೆ ನಡೆಸಲು ತಾವು ಮಾಡಿರುವ ಪ್ರಯತ್ನಗಳನ್ನೂ ಅವರು ಪ್ರಸ್ತಾಪಿಸಿದರು ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಜಗತ್ತಿನಾದ್ಯಂತ ಭಾರತದ ಸಾಂಪ್ರದಾಯಿಕ ಔಷಧಿಗಳು ಮತ್ತು ವೈದ್ಯಕೀಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಜನರ ಸೇವೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಆಯುಷ್ ಸಾಧಕರಿಗೆ ಅವರು ಧನ್ಯವಾದಗಳನ್ನು ತಿಳಿಸಿದ ಪ್ರಧಾನಿಯವರು, COVID-19ರ ವಿರುದ್ಧ ಭಾರತದ ಹೋರಾಟದಲ್ಲಿ ಅವರು ವಹಿಸಬೇಕಾದ ಪ್ರಮುಖ ಪಾತ್ರವನ್ನು ಮತ್ತೊಮ್ಮೆ ಒತ್ತಿ ಹೇಳಿದರು.
ಕೇಂದ್ರ ಆಯುಷ್ ಸಚಿವರು, ಸಂಪುಟ ಕಾರ್ಯದರ್ಶಿ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ಸಂವಾದದಲ್ಲಿ ಭಾಗವಹಿಸಿದ್ದರು.(Release ID: 1608905) Visitor Counter : 202