ಪ್ರಧಾನ ಮಂತ್ರಿಯವರ ಕಛೇರಿ

ಕೊರೊನಾ ಸೋಂಕು ಪಿಡುಗು ಕುರಿತು ವಾರಣಾಸಿಯ ಜನತೆಯನ್ನುದ್ದೇಶಿಸಿ ಪ್ರಧಾನಿ ಭಾಷಣ

Posted On: 25 MAR 2020 6:33PM by PIB Bengaluru

ಕೊರೊನಾ ಸೋಂಕು ಪಿಡುಗು ಕುರಿತು ವಾರಣಾಸಿಯ ಜನತೆಯನ್ನುದ್ದೇಶಿಸಿ ಪ್ರಧಾನಿ ಭಾಷಣ

ಸಂಯಮ, ನಿಶ್ಚಯ ಮತ್ತು ಸೂಕ್ಷ್ಮದಿಂದಿರಲು ಪ್ರಧಾನಿ ಕರೆ: ಕೊರೊನಾ ಸೋಂಕಿನ ಕುರಿತು ಸಹಾಯವಾಣಿ ಸಂಖ್ಯೆ ಪ್ರಕಟಿಸಿದ ಪ್ರಧಾನಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮ್ಮ ಸ್ವಕ್ಷೇತ್ರ ವಾರಣಾಸಿಯ ಜನರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ವಾರಣಾಸಿಯ ಓರ್ವ ಸಂಸದನಾಗಿ ನಾನು ಇಂತಹ ಸಮಯದಲ್ಲಿ ನಿಮ್ಮೊಂದಿಗೆ ಇರಬೇಕು, ಆದರೆ ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ ಎಂದರು. ತೀವ್ರ ಕೆಲಸದ ಒತ್ತಡದ ನಡುವೆಯೂ ನಾನು ವಾರಣಾಸಿಯ ಬಗ್ಗೆ ನನ್ನ ಸಹೋದ್ಯೋಗಿಗಳಿಂದ ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತಿರುತ್ತೇನೆ ಎಂದರು.
ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬಲ ತುಂಬುವ ಸಲುವಾಗಿ ಶೈಲಪುತ್ರಿ ದೇವತೆಗೆ ನಡೆಯುತ್ತಿರುವ ಪ್ರಾರ್ಥನೆಗಳು ಮತ್ತು ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳಲ್ಲಿ ವಾರಣಾಸಿಯ ಜನತೆ ತೊಡಗಿರುವುದಕ್ಕೆ ಪ್ರಧಾನಮಂತ್ರಿ ಅವರು, ಕೃತಜ್ಞತೆಗಳನ್ನು ಸಲ್ಲಿಸಿದರು. ಇಂತಹ ಸಮಯದಲ್ಲಿ ಜನರು ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕೋ ಅದಕ್ಕೆ ನೀಡುತ್ತಿಲ್ಲ, ಈಗ ಭಾರತದಲ್ಲೂ ಕೂಡ ಅದೇ ಆಗುತ್ತಿದೆ ಎಂದು ಅವರು ಹೇಳಿದರು. ಜನರು ವಾಸ್ತವತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದರು. ಕೊರೊನಾ ಸೋಂಕು ಬಡವರು ಮತ್ತು ಶ್ರೀಮಂತರ ನಡುವೆ ತಾರತಮ್ಯ ಮಾಡುವುದಿಲ್ಲ ಮತ್ತು ಅದು ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಅವರು ಹೇಳಿದರು.  ಕಾಬೂಲ್ ನ ಗುರುದ್ವಾರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹತ್ಯೆಗೀಡಾದ ಕುಟುಂಬದವರಿಗೆ ಪ್ರಧಾನಿ ಅವರು, ಇದೇ ವೇಳೆ ಸಂತಾಪ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವರು, ಕೊರೊನಾ ಸೋಂಕಿನ ಬಗ್ಗೆ ನಿಖರ ಮಾಹಿತಿಯನ್ನು ನೀಡಲು ವಾಟ್ಸ್ ಆಪ್ ಸಹಭಾಗಿತ್ವದಲ್ಲಿ ಸಹಾಯ ಕೇಂದ್ರವನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಪ್ರಕಟಿಸಿದರು. ಅದನ್ನು ವಾಟ್ಸ್ ಅಪ್ ಸಂಖ್ಯೆ 9013151515 ಮೂಲಕ ಸಂಪರ್ಕಿಸಬಹುದಾಗಿದ್ದು, ಈ ಸಂಖ್ಯೆಗೆ ‘ನಮಸ್ತೆ’ ಎಂದು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಸಂದೇಶ ಕಳುಹಿಸಬಹುದು. ಮಹಾಭಾರತ ಯುದ್ಧವನ್ನು ಗೆಲ್ಲಲು 18 ದಿನ ಬೇಕಾಯಿತು. ಆದರೆ ಮಾರಕ ಕೊರೊನಾ ಸೋಂಕಿನ ವಿರುದ್ಧದ ಸಮರ ಗೆಲ್ಲಲು ಭಾರತಕ್ಕೆ 21 ದಿನ ಹಿಡಿಯುತ್ತದೆ ಎಂದರು.
ವೈದ್ಯರು ಮತ್ತು ನರ್ಸ್ ಗಳು ಸೇರಿದಂತೆ ಯಾವುದೇ ವೃತ್ತಿಪರರ ವಿರುದ್ಧ ದುರ್ನಡತೆ ತೋರುವಂತಹ ಘಟನೆಗಳಾಗದಂತೆ ಎಲ್ಲ ನಾಗರಿಕರು ನೋಡಿಕೊಳ್ಳಬೇಕಾಗಿದೆ ಎಂದು ಪ್ರಧಾನಮಂತ್ರಿ ಮನವಿ ಮಾಡಿ, ಅವರಿಗೆ ದುರ್ನಡತೆ ತೋರಿದರೆ ಅಂತಹ ಜನರಿಗೆ ಅವರ ತಪ್ಪು ಏನೆಂಬುದನ್ನು ಅರ್ಥಮಾಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮೆಲ್ಲರಿಗೂ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ ಗಳು ಮತ್ತಿತರ ವೃತ್ತಿಪರರಿಗೆ ಯಾವುದೇ ಸಹಕಾರ ನೀಡದಿದ್ದರೆ ಅಥವಾ ಬೆಂಬಲ ನೀಡದಿದ್ದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಗೃಹ ಸಚಿವಾಲಯ ಮತ್ತು ಎಲ್ಲ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿಗಳಿಗೆ) ಸೂಚನೆ ನೀಡಲಾಗಿದೆ ಎಂದು ಹೇಳಿದರು. ಈ ದೇಶದ ಸಾಮಾನ್ಯ ಜನ, ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲಿ ನಂಬಿಎಕೆ ಹೊಂದಿದ್ದಾರೆಂದರು. ಕಳೆದ ಮಾರ್ಚ್ 22ರಂದು ಹೇಗೆ ದೇಶದ ಜನರು ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು ಮತ್ತು ಅದೇ ದಿನ 5 ಗಂಟೆಗೆ ಅಗತ್ಯ ಸೇವೆಗಳಲ್ಲಿ ತೊಡಗಿರುವ ವೃತ್ತಿಪರರಿಗೆ ಹೇಗೆ ಗೌರವ ಸಲ್ಲಿಸಿದರು ಎಂಬುದನ್ನು ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ನೋಡಿದ್ದೇವೆ ಎಂದರು. ಆಸ್ಪತ್ರೆಗಳಲ್ಲಿ ಇಂದು ಶ್ವೇತ ಸಮವಸ್ತ್ರ ಧರಿಸಿ, ಕೆಲಸ ಮಾಡುತ್ತಿರುವ ಆರೋಗ್ಯ ರಕ್ಷಣೆ ವೃತ್ತಿಪರರು ದೇವರಿದ್ದಂತೆ, ಅವರು ರೋಗದಿಂದ ನಮ್ಮನ್ನು ಉಳಿಸುತ್ತಿದ್ದಾರೆ, ಅವರು ತಮ್ಮ ಜೀವವನ್ನೇ ಪಣಕಿಟ್ಟು ನಮ್ಮನ್ನು ಉಳಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.
 


***

​​​



(Release ID: 1608259) Visitor Counter : 190