57th International Film Festival of India 2026
20 – 28 Nov 2026

ಉಪಶೀರ್ಷಿಕೆ ಕೇವಲ ಅನುವಾದವಲ್ಲ, ಭಾಷೆಗಳಾಚೆಗೆ ಭಾವನೆಗಳನ್ನು ತಲುಪಿಸುವ ಕಲೆ: ಐಎಫ್‌ಎಫ್‌ಐ 2026ರಲ್ಲಿ ರೇಖ್ಸ್

ಪ್ರಕಟಣಾ ದಿನಾಂಕ: 25 NOV 2026 8:54PMby PIB Bengaluruಪ್ರಕಟಣೆ ಐ.ಡಿ.: 2342478Views: 3

ಐದು ಭಾಷೆಗಳಲ್ಲಿ 800ಕ್ಕೂ ಅಧಿಕ ಚಲನಚಿತ್ರಗಳನ್ನು ಅನುವಾದಿಸಿರುವ ಖ್ಯಾತ ಉಪಶೀರ್ಷಿಕೆ ರಚನೆಗಾರ್ತಿ ರೇಖ್ಸ್ ಅವರು, ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ)ಯಲ್ಲಿ ‘ಗಡಿಗಳಾಚೆ ಪದಗಳು: ಸಂಸ್ಕೃತಿಗಳ ನಡುವೆ ಉಪಶೀರ್ಷಿಕೆ’ ಎಂಬ ಮಾಸ್ಟರ್‌ಕ್ಲಾಸ್‌ನಲ್ಲಿ ಉಪಶೀರ್ಷಿಕೆಯ ಕಲೆ ಹಾಗೂ ಭಾರತೀಯ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಅದರ ಪಾತ್ರದ ಕುರಿತು ಮಾತನಾಡಿದರು.

ಉಪಶೀರ್ಷಿಕೆ ನೀಡುವುದು ಕೇವಲ ಪದಗಳ ಅನುವಾದವಲ್ಲ; ಅದು ಭಾಷೆಗಳ ಗಡಿದಾಟಿ ಭಾವನೆಗಳನ್ನು ತಲುಪಿಸುವ ಕಲೆ ಎಂದ ಖ್ಯಾತ ಉಪಶೀರ್ಷಿಕೆ ಅನುವಾದಕಿ ರೇಖ್ಸ್, ಉಪಶೀರ್ಷಿಕೆ ನೀಡಲು ತಾಳ್ಮೆ, ಸೃಜನಶೀಲತೆ, ಸಾಂಸ್ಕೃತಿಕ ತಿಳಿವಳಿಕೆ ಹಾಗೂ ಸಿನಿಮಾದಲ್ಲಿ ಅಡಕವಾಗಿರುವ ಭಾವನೆಗಳನ್ನು ಗ್ರಹಿಸುವ ಸೂಕ್ಷ್ಮತೆ ಅಗತ್ಯ ಎಂದು ಹೇಳಿದರು. ನಿಖರತೆಯ ಮಹತ್ವವನ್ನು ವಿವರಿಸಿದ ಅವರು, ‘‘ಉಪಶೀರ್ಷಿಕೆ ನೀಡುವಲ್ಲಿ ತಾಳ್ಮೆ ಅತ್ಯಗತ್ಯ. ಮತ್ತೆ ಮತ್ತೆ ಪರಿಶೀಲಿಸಬೇಕು,’’ ಎಂದರು.

ಒಟಿಟಿ ವೇದಿಕೆಗಳು ಬರುವ ಮೊದಲು ಮುಖ್ಯವಾಗಿ ಪ್ರಶಸ್ತಿ ಕಾರ್ಯಕ್ರಮಗಳಿಗೆ ಕಳುಹಿಸುವ ಸಿನಿಮಾಗಳಿಗೆ ಉಪಶೀರ್ಷಿಕೆಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ರೇಖ್ಸ್ ನೆನಪಿಸಿಕೊಂಡರು. ಡಿಜಿಟಲ್ ಸ್ಟ್ರೀಮಿಂಗ್‌ನಿಂದ ಅವುಗಳ ವ್ಯಾಪ್ತಿ ವಿಸ್ತರಿಸಿದ್ದು, ಪ್ರಾದೇಶಿಕ ಸಿನಿಮಾಗಳು ವಿಶ್ವದಾದ್ಯಂತ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ. ಆದರೆ, ಒಟಿಟಿ ವೇದಿಕೆಗಳು ಉಪಶೀರ್ಷಿಕೆಗಳನ್ನು ಬದಲಾಯಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮೂಲ ಅನುವಾದದ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ತಮ್ಮ ಸೃಜನಶೀಲ ವಿಧಾನವನ್ನು ವಿವರಿಸಿದ ರೇಖ್ಸ್, ಉಪಶೀರ್ಷಿಕೆ ನೀಡಲು ನಿರ್ದಿಷ್ಟ ನಿಯಮಾವಳಿ ಇಲ್ಲ; ಅನೇಕ ಸಂದರ್ಭಗಳಲ್ಲಿ ವೈಯಕ್ತಿಕ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದರು. ಹಾಡಿನ ಸಾಲುಗಳನ್ನು ಸಂಭಾಷಣೆಯಿಂದ ಪ್ರತ್ಯೇಕವಾಗಿ ಗುರುತಿಸಲು ಪ್ರೇಕ್ಷಕರಿಗೆ ನೆರವಾಗುವಂತೆ, ಹಾಡುಗಳ ಉಪಶೀರ್ಷಿಕೆಗಳಲ್ಲಿ ಪ್ರಾಸ ಬಳಸಲು ತಾವು ಆದ್ಯತೆ ನೀಡುವುದಾಗಿ ತಿಳಿಸಿದರು. ಚಿಕ್ಕ ವಾಕ್ಯಗಳನ್ನು ಮೇಲೆ ಹಾಗೂ ಉದ್ದವಾದ ವಾಕ್ಯಗಳನ್ನು ಕೆಳಗೆ ಇರಿಸುವ ಪಿರಮಿಡ್‌ನಂತಹ ವಿನ್ಯಾಸವನ್ನೂ ಅವರು ಬಳಸುತ್ತಾರೆ. ಸುಲಭವಾಗಿ ಕಾಣಿಸುವುದಕ್ಕಾಗಿ ಉಪಶೀರ್ಷಿಕೆಗಳಿಗೆ ಹಳದಿ ಬಣ್ಣದಲ್ಲಿ ನೀಡಲು ಆದ್ಯತೆ ನೀಡಲಾಗುವುದು ಎಂದರು.

ಉಪಶೀರ್ಷಿಕೆ ರಚನೆಯ ಸೂಕ್ಷ್ಮತೆಗಳನ್ನು ವಿವರಿಸಿದ ಅವರು, ಆಡುಮಾತಿನ ಅಭಿವ್ಯಕ್ತಿಗಳು ಹಾಗೂ ‘ಡಂಗಮಾರಿ’ ಸೇರಿದಂತೆ ಹಾಡುಗಳನ್ನು ಅನುವಾದಿಸುವಾಗ ಎದುರಾಗುವ ಸವಾಲುಗಳ ಕುರಿತು ಮಾತನಾಡಿದರು. ತಮಿಳಿನ ‘ವೇಷಂ’ ಮತ್ತು ‘ವಿಷಂ’ ಪದಗಳನ್ನು ಉದಾಹರಿಸಿ, ಉಚ್ಚಾರಣೆಯಲ್ಲಿನ ಸಣ್ಣ ವ್ಯತ್ಯಾಸವು ಅರ್ಥವನ್ನು ವೇಷದಿಂದ ವಿಷಕ್ಕೆ ಹೇಗೆ ಬದಲಾಯಿಸುತ್ತದೆ ಎಂಬುದನ್ನು ವಿವರಿಸಿದರು. ‘ಕಬಾಲಿ’ ಚಿತ್ರಕ್ಕೆ ಉಪಶೀರ್ಷಿಕೆ ನೀಡಿದ ಅನುಭವ ಹಂಚಿಕೊಂಡ ಅವರು, ರಜನಿಕಾಂತ್ ಅವರ ನಗುವಿನ ವಿಭಿನ್ನ ಛಾಯೆಗಳನ್ನು ಹಿಡಿದಿಡಲು ‘‘ಸಲುಗೆಯ ನಗು’’ ಹಾಗೂ ‘‘ಸಂಶಯದ ಕಿರುನಗು’’ ಎಂಬಂತಹ ಅಭಿವ್ಯಕ್ತಿಗಳನ್ನು ಬಳಸಿದ್ದಾಗಿ ತಿಳಿಸಿದರು.

ಉಪಶೀರ್ಷಿಕೆಗಳು ಎಲ್ಲರನ್ನೂ ಒಳಗೊಳ್ಳುವ ಸಾಧನವಾಗಿವೆ ಎಂದು ಹೇಳಿದ ಅವರು, ಶ್ರವಣ ದೋಷ ಹೊಂದಿರುವವರಿಗೆ ಅವುಗಳ ಮಹತ್ವವನ್ನು ಒತ್ತಿಹೇಳಿದರು. ನಿರ್ದಿಷ್ಟ ಸಂಸ್ಕೃತಿಗೆ ಸಂಬಂಧಿಸಿದ ಅಭಿವ್ಯಕ್ತಿಗಳು ಮತ್ತು ಸಂಬಂಧಗಳನ್ನು ಅಕ್ಷರಶಃ ಅನುವಾದಿಸುವ ಬದಲು, ಅವುಗಳ ಅರ್ಥವನ್ನು ಸೂಕ್ಷ್ಮವಾಗಿ ಗ್ರಹಿಸಿ ನಿರೂಪಿಸಬೇಕು ಎಂದರು.

ಕೃತಕ ಬುದ್ಧಿಮತ್ತೆಯ ಬಳಕೆಯು ಹೆಚ್ಚುತ್ತಿರುವ ಕುರಿತು ಮಾತನಾಡಿದ ರೇಖ್ಸ್, ಎಐ ಸೃಷ್ಟಿಸುವ ಉಪಶೀರ್ಷಿಕೆಗಳು ಅರ್ಥವನ್ನು ತಿರುಚಬಹುದು, ಲಿಂಗ ಸೂಚನೆಗಳನ್ನು ಬದಲಾಯಿಸಬಹುದು ಹಾಗೂ ದೃಶ್ಯದ ಭಾವನಾತ್ಮಕ ಸಂದರ್ಭವನ್ನು ಗ್ರಹಿಸುವಲ್ಲಿ ವಿಫಲವಾಗಬಹುದು ಎಂದು ಎಚ್ಚರಿಸಿದರು. ‘‘ಎಐಗೆ ನಿಘಂಟು ಗೊತ್ತು. ಆದರೆ ಅದಕ್ಕೆ ನಾಟಕೀಯತೆಯಾಗಲಿ, ಅಂತರಂಗದ ಭಾವನೆಯಾಗಲಿ ತಿಳಿದಿಲ್ಲ,’’ ಎಂದು ಹೇಳುವ ಮೂಲಕ ಮಾನವ ಸೃಜನಶೀಲತೆಯ ಮಹತ್ವವನ್ನು ವಿವರಿಸಿದರು.

‘‘ಉಪಶೀರ್ಷಿಕೆಗಳು ನಿರ್ಮಾಣೋತ್ತರ ಪ್ರಕ್ರಿಯೆಯಲ್ಲಿ ಉಳಿದುಹೋದ ಕೆಲಸವಲ್ಲ,’’ ಎಂದ ಅವರು, ಉತ್ತಮ ಉಪಶೀರ್ಷಿಕೆಗಳು ಕೇವಲ ಸಂಭಾಷಣೆಯನ್ನು ಮರುರೂಪಿಸುವ ಬದಲು ಸಿನಿಮಾದ ಆಶಯ ಮತ್ತು ಭಾವನೆಯನ್ನು ತಲುಪಿಸಬೇಕು ಎಂದು ಹೇಳಿದರು. ಆ ಮೂಲಕ ಕಥೆಗಳು ಭಾಷೆ ಮತ್ತು ಸಂಸ್ಕೃತಿಗಳ ಗಡಿದಾಟಿ ವಿಶ್ವದಾದ್ಯಂತ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2342478
•
Media Centre: Goa
•
Festival Dates: Nov 20 – 28, 2026