ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕ್ಷಯರೋಗ ನಿರ್ಮೂಲನೆಯತ್ತ ಮಹತ್ವದ ದಾಪುಗಾಲು ಹಾಕಿದ ಭಾರತ: ಕ್ಷಯರೋಗ ಮರಣದಲ್ಲಿ ಶೇ.38 ರಷ್ಟು ಇಳಿಕೆ, ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಶೇ.94 ಕ್ಕೆ ಏರಿಕೆ


ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2026 ರಲ್ಲಿ ಕ್ಷಯರೋಗ ಸಾವುಗಳನ್ನು ತಗ್ಗಿಸುವಲ್ಲಿ ಮತ್ತು ಚಿಕಿತ್ಸೆಯ ಫಲಿತಾಂಶ ಬಲವರ್ಧನೆಯಲ್ಲಿ ಭಾರತದ ಗಮನಾರ್ಹ ಪ್ರಗತಿ ಪ್ರಮುಖ ಪ್ರಸ್ತಾಪ

ಕ್ಷಯರೋಗ ಮರಣದಲ್ಲಿ ಶೇ.38 ರಷ್ಟು ಅತ್ಯಧಿಕ ಇಳಿಕೆ ದಾಖಲಿಸಿದ ಭಾರತ; ಶೇ.35 ರಷ್ಟಿರುವ  ಜಾಗತಿಕ ಕುಸಿತ ಮೀರಿಸಿದೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕ್ಷಯರೋಗ ಮುಕ್ತ ಭಾರತ ದೂರದೃಷ್ಟಿಯು ಆರಂಭಿಕ ಪತ್ತೆ, ಸುಧಾರಿತ ರೋಗಪತ್ತೆ, ಪೌಷ್ಟಿಕಾಂಶ ಬೆಂಬಲ ಮತ್ತು ಜನ ಭಾಗೀದಾರಿ ಮೂಲಕ ರಾಷ್ಟ್ರವ್ಯಾಪಿ ಪರಿವರ್ತನೆಗೆ ಮುನ್ನಡಿ

25 ಕೋಟಿಗೂ ಅಧಿಕ ಜನರನ್ನು ಒಳಗೊಂಡ ಕ್ಷಯರೋಗ ಮುಕ್ತ ಭಾರತ ಅಭಿಯಾನ; 11 ಕೋಟಿಗೂ ಅಧಿಕ ಎದೆಯ ಎಕ್ಸ್-ರೇಗಳು ಮತ್ತು 3 ಕೋಟಿ ಮಾಲಿಕ್ಯೂಲರ್ ಪರೀಕ್ಷೆ

ತೀವ್ರ ತಪಾಸಣೆಯ ಮೂಲಕ 14.97 ಲಕ್ಷ ಲಕ್ಷಣರಹಿತ ಪ್ರಕರಣ ಸೇರಿ 48.64 ಲಕ್ಷ ಕ್ಷಯರೋಗ ಪ್ರಕರಣಗಳ ಪತ್ತೆ

ಟಿಬಿ ಕಾರ್ಯಕ್ರಮದ ಹಣಕಾಸಿನ ಅವಶ್ಯಕತೆಗಳಲ್ಲಿ ಶೇ.96 ರಷ್ಟು ದೇಶೀಯ ಸಂಪನ್ಮೂಲಗಳ ಮೂಲಕ ಪೂರೈಕೆ; ಇದು ಕ್ಷಯರೋಗ ನಿರ್ಮೂಲನೆಗೆ ಭಾರತದ ಬಲವಾದ ಬದ್ಧತೆಯ ಪ್ರತಿಬಿಂಬ

ಪ್ರಕಟಣಾ ದಿನಾಂಕ: 12 NOV 2026 8:40PM by PIB Bengaluru

ಕ್ಷಯರೋಗ (ಟಿಬಿ) ವಿರುದ್ಧದ ಹೋರಾಟದಲ್ಲಿ ಭಾರತವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, 2015 ರಿಂದೀಚೆಗೆ ಕ್ಷಯರೋಗ ಮರಣದಲ್ಲಿ ಶೇ.38 ರಷ್ಟು ಇಳಿಕೆಯನ್ನು ದಾಖಲಿಸಿದೆ, ಜಾಗತಿಕವಾಗಿ ಶೇ.35ರಷ್ಟು ಇಳಿಕೆ ಪ್ರಮಾಣಕ್ಕೆ ಹೋಲಿಸಿದರೆ ಇದು ಗಮನಾರ್ಹ ಸಾಧನೆಯಾಗಿದೆ. ಜೊತೆಗೆ ಔಷಧ-ಪೀಡಿತ ಟಿಬಿ ರೋಗಿಗಳಲ್ಲಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಶೇ.94ರಷ್ಟು ಪರಿಣಾಮಕಾರಿಯಾಗಿದೆ. 2026ರ ನವೆಂಬರ್ 12 ರಂದು ಬಿಡುಗಡೆಯಾದ ವಿಶ್ವ ಆರೋಗ್ಯ ಸಂಸ್ಥೆಯ (WHO) ಜಾಗತಿಕ ಕ್ಷಯರೋಗ ವರದಿ 2026 ರಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾದ ಈ ಸಾಧನೆಗಳು, ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ, ತಾಂತ್ರಿಕ ನಾವೀನ್ಯತೆ ಮತ್ತು ಸಮಗ್ರ ರೋಗಿಯ ಆರೈಕೆಯ ಮೂಲಕ ಕ್ಷಯರೋಗ ನಿರ್ಮೂಲನೆ ಮಾಡುವಲ್ಲಿ ಭಾರತದ ನಿರಂತರ ಪ್ರಗತಿಯನ್ನು ಪ್ರತಿಬಿಂಬಿಸುತ್ತವೆ.

ಭಾರತದಲ್ಲಿ ಕ್ಷಯರೋಗ ಮರಣ ಪ್ರಮಾಣ ಕಡಿಮೆಯಾಗಿರುವುದು ಕ್ಷಯರೋಗ ಸಂಬಂಧಿತ ಸಾವುಗಳನ್ನು ತಗ್ಗಿಸುವಲ್ಲಿ ದೇಶದ ಸದೃಢವಾದ ಕಾರ್ಯಕ್ಷಮತೆಯನ್ನು ಉಲ್ಲೇಖಿಸುತ್ತದೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್ ಟಿ ಇ ಪಿ) ಅಡಿಯಲ್ಲಿ ತೀವ್ರ ಮಧ್ಯಸ್ಥಿಕೆಗಳ ಪರಿಣಾಮವನ್ನು ಈ ಪ್ರಗತಿಯು ಪ್ರತಿಬಿಂಬಿಸುತ್ತದೆ, ಇದರಲ್ಲಿ ಕೃತಕ ಬುದ್ಧಿಮತ್ತೆ ಆಧರಿಸಿದ ಎಕ್ಸ್-ರೇಗಳ ಬಳಕೆ, ತ್ವರಿತ ರೋಗಪತ್ತೆ, ತ್ವರಿತ ಚಿಕಿತ್ಸೆ ಆರಂಭ, ವಿಭಿನ್ನ ಕ್ಷಯರೋಗ ಆರೈಕೆ ಮತ್ತು ನಿ-ಕ್ಷಯ ಪೋಷಣ್ ಯೋಜನೆ ಮತ್ತು ನಿ-ಕ್ಷಯ ಮಿತ್ರ ಉಪಕ್ರಮದ ಮೂಲಕ ಪೌಷ್ಠಿಕಾಂಶದ ನೆರವು ಸೇರಿ ಪೂರ್ವಭಾವಿ ಪ್ರಕರಣ ಪತ್ತೆ ಸೇರಿವೆ. ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು, ಪ್ರತಿಕೂಲ ಫಲಿತಾಂಶಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯದ ಕ್ಷಯರೋಗ ಪ್ರಕರಣಗಳ ಮುನ್ಸೂಚನೆ, ಖುಷಿ - ಎಐ ಚಾಟ್‌ಬಾಟ್ ಮತ್ತು ಅವತಾರ್ ವಿಡಿಯೋಬಾಟ್ ಇತ್ಯಾದಿಗಳಿಗೆ ಕೃತಕ ಬುದ್ಧಿಮತ್ತೆ ಸಾಧನಗಳು ಈ ಮಧ್ಯಸ್ಥಿಕೆಗಳನ್ನು ಬೆಂಬಲಿಸಿದವು.

ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಶೇ.94 ರಷ್ಟು ಏರಿಕೆಯಾಗಿರುವುದು, ಭಾರತದ ರೋಗಿ-ಸ್ನೇಹಿ ವಿಧಾನದ ಪರಿಣಾಮಕಾರಿ ಜಾರಿ, ಚಿಕಿತ್ಸೆಯ ವಿತರಣೆ ಬಲಪಡಿಸುವುದು ಮತ್ತು ಕ್ಷಯರೋಗದಿಂದ ಬಾಧಿತ ಜನರಿಗೆ ನಿರಂತರ ಬೆಂಬಲವನ್ನು ಮತ್ತಷ್ಟು ಪ್ರದರ್ಶಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಕ್ಷಯರೋಗದ ವಿರುದ್ಧದ ಭಾರತದ ಹೋರಾಟವು ರಾಷ್ಟ್ರವ್ಯಾಪಿ ಜನಾಂದೋಲನವಾಗಿ ವಿಕಸನಗೊಂಡಿದೆ, ಕ್ಷಯರೋಗ-ಮುಕ್ತ ಭಾರತವನ್ನು ಸಾಧಿಸುವ ಪ್ರಯತ್ನ ಸರ್ಕಾರಿ ಸಂಸ್ಥೆಗಳು, ಆರೋಗ್ಯ ವೃತ್ತಿಪರರು, ಸಮುದಾಯಗಳು ಮತ್ತು ನಾಗರಿಕರನ್ನು ಒಗ್ಗೂಡಿಸುತ್ತದೆ. ಪ್ರಧಾನ ಮಂತ್ರಿಯವರ ಜನ ಭಾಗೀದಾರಿಗೆ ಹೆಚ್ಚಿನ ಒತ್ತು ನೀಡಿರುವುದು ಟಿಬಿ ಮುಕ್ತ ಭಾರತ ಅಭಿಯಾನವು ಸಮುದಾಯ ಆಧಾರಿತ ತಪಾಸಣೆ, ಕೃತಕ ಬುದ್ಧಿಮತ್ತೆ ಆಧರಿಸಿದ ಎದೆಯ ಎಕ್ಸ್-ರೇಗಳು, ಕ್ಷಿಪ್ರ ಮಾಲಿಕ್ಯೂಲರ್ ರೋಗಪತ್ತೆ, ಟಿಬಿ ತಡೆಗಟ್ಟುವ ಚಿಕಿತ್ಸೆ ಮತ್ತು ಪೌಷ್ಠಿಕಾಂಶ ನೆರವನ್ನು ವೇಗಗೊಳಿಸಿದೆ, ಅಗತ್ಯ ಸೇವೆಗಳನ್ನು ದುರ್ಬಲ ಜನಸಂಖ್ಯೆಗೆ ಹತ್ತಿರವಾಗಿಸುತ್ತಿದೆ.

ಶೇ.96 ರಷ್ಟು ಟಿಬಿ ಕಾರ್ಯಕ್ರಮದ ಹಣಕಾಸಿನ ಅವಶ್ಯಕತೆಗಳನ್ನು ದೇಶೀಯ ಸಂಪನ್ಮೂಲಗಳ ಮೂಲಕ ಪೂರೈಸುತ್ತಿರುವುದು ಭಾರತದ ಬದ್ಧತೆಯು ಮತ್ತಷ್ಟು ಪ್ರತಿಫಲಿಸುತ್ತದೆ, ನಿರಂತರ ರಾಷ್ಟ್ರೀಯ ಹೂಡಿಕೆ, ಸದೃಢ ರಾಜಕೀಯ ಬದ್ಧತೆ ಮತ್ತು ಕ್ಷಯ ನಿರ್ಮೂಲನೆಗೆ ಸಂಪೂರ್ಣ ಸರ್ಕಾರ, ಸಂಪೂರ್ಣ ಸಮಾಜದ ವಿಧಾನವನ್ನು ಪ್ರದರ್ಶಿಸುತ್ತದೆ.

ಟಿಬಿ ಮುಕ್ತ ಭಾರತ ಅಭಿಯಾನ: ತಪಾಸಣೆಗೊಳಗಾದ 25 ಕೋಟಿಗೂ ಅಧಿಕ ಜನರು

ಟಿಬಿ ಮುಕ್ತ ಭಾರತ ಅಭಿಯಾನವು ಭಾರತದ ವೇಗವರ್ಧಿತ ಕ್ಷಯ ನಿರ್ಮೂಲನ ಪ್ರಯತ್ನಗಳ ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ, ಪೂರ್ವಭಾವಿ ತಪಾಸಣೆ, ತಂತ್ರಜ್ಞಾನ ಆಧರಿಸಿದ ರೋಗಪತ್ತೆ ಮತ್ತು ಸಮುದಾಯ ಸಂಪರ್ಕದ ಮೂಲಕ ಕ್ಷಯ ಪತ್ತೆಗೆ ವಿಧಾನವನ್ನು ಪರಿವರ್ತಿಸುತ್ತದೆ.

2024ರ ಡಿಸೆಂಬರ್ 7 ರಂದು 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 347ಕ್ಕೂ ಅಧಿಕ  ಆದ್ಯತೆಯ ಜಿಲ್ಲೆಗಳಲ್ಲಿ ಆರಂಭಿಸಲಾದ ಮೊದಲ 100 ದಿನಗಳ ಅಭಿಯಾನವನ್ನು ಬಳಿಕ ವಿಶೇಷವಾಗಿ ದುರ್ಬಲ ಮತ್ತು ಹೆಚ್ಚಿನ ಅಪಾಯದ ಜನಸಂಖ್ಯೆಯಲ್ಲಿ ಆರಂಭಿಕ ಪತ್ತೆಹಚ್ಚುವಿಕೆಯನ್ನು ಬಲಪಡಿಸಲು ದೇಶಾದ್ಯಂತ ವಿಸ್ತರಿಸಲಾಯಿತು. ಈಗಾಗಲೇ ಪಡೆದ ಕಲಿಕಾನುಭವ ಮತ್ತು ಸೃಷ್ಟಿಯಾದ ವೇಗದ ಆಧಾರದ ಮೇಲೆ, 2026ರ ಮಾರ್ಚ್ 24ರಂದು ಸರ್ಕಾರವು ಮತ್ತೊಂದು '100 ದಿನಗಳ ಗಂಭೀರ ಅಭಿಯಾನ'ವನ್ನು ಆರಂಭಿಸಿತು. ಅದು 1.58 ಲಕ್ಷ ಹೆಚ್ಚಿನ ಅಪಾಯವಿರುವ ಹಳ್ಳಿಗಳು ಮತ್ತು ವಾರ್ಡ್‌ಗಳು, ಜನಸಂದಣಿ ಇರುವ ಸ್ಥಳಗಳು ಹಾಗೂ ದುರ್ಬಲ ಜನಸಂಖ್ಯೆಯ ಗುಂಪುಗಳಲ್ಲಿ ಕ್ಷಯರೋಗ (TB) ಪರೀಕ್ಷೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.

2024ರ ಡಿಸೆಂಬರ್ 7 ಮತ್ತು 2026ರ ನವೆಂಬರ್ 8 ರ ನಡುವೆ, ಅಭಿಯಾನವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ:

  • 25 ಕೋಟಿಗೂ ಅಧಿಕ ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಟಿಬಿ ತಪಾಸಣಾ ಚಟುವಟಿಕೆಗಳ ವ್ಯಾಪ್ತಿಗೆ ತರಲಾಗಿದೆ.
  • ಆರಂಭಿಕ ಪತ್ತೆಹಚ್ಚುವಿಕೆಯನ್ನು ಬಲಪಡಿಸಲು 11 ಕೋಟಿಗೂ ಅಧಿಕ ಎದೆಯ ಎಕ್ಸ್-ರೇಗಳನ್ನು ತೆಗೆಯಲಾಗಿದೆ.
  • ತ್ವರಿತ ಮತ್ತು ನಿಖರವಾದ ರೋಗಪತ್ತೆಗಾಗಿ 3 ಕೋಟಿಗೂ ಅಧಿಕ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆಗಳನ್ನು (NAAT) ನಡೆಸಲಾಗಿದೆ.
  • 14.97 ಲಕ್ಷ ಲಕ್ಷಣರಹಿತ ಪ್ರಕರಣಗಳು ಸೇರಿ 48.64 ಲಕ್ಷ ಹೊಸ ಟಿಬಿ ಪ್ರಕರಣ ಗುರುತಿಸಲಾಗಿದೆ.

ಸುಮಾರು 15 ಲಕ್ಷ ಲಕ್ಷಣರಹಿತ ಪ್ರಕರಣಗಳ ಪತ್ತೆ ವಿಶೇಷವಾಗಿ ಮಹತ್ವದ್ದಾಗಿದೆ, ಇಲ್ಲದಿದ್ದರೆ ರೋಗಪತ್ತೆ ಮಾಡದೆ ಉಳಿಯಬಹುದಾದ ವ್ಯಕ್ತಿಗಳನ್ನು ಗುರುತಿಸುವಲ್ಲಿ ಪೂರ್ವಭಾವಿ ಸ್ಕ್ರೀನಿಂಗ್‌ನ ಪರಿಣಾಮಕಾರಿತ್ವವನ್ನು ಪ್ರದರ್ಶಿಸುತ್ತದೆ. ಆರಂಭಿಕ ಗುರುತಿಸುವಿಕೆ ಸಕಾಲಿಕ ಚಿಕಿತ್ಸೆಯನ್ನು ಸುಗಮಗೊಳಿಸುತ್ತದೆ ಮತ್ತು ಟಿಬಿ ಹರಡುವಿಕೆ ತಗ್ಗಿಸಲು ಮತ್ತು  ರೋಗವನ್ನು ತಡೆಗಟ್ಟಲು ಅವಕಾಶಗಳನ್ನು ಒದಗಿಸುತ್ತದೆ.

ಅಭಿಯಾನವು ತ್ವರಿತ ಚಿಕಿತ್ಸೆಯನ್ನು ಆರಂಭಿಸುವುದು, ವಿಭಿನ್ನ ರೋಗಿಯ ಆರೈಕೆ, ಪೌಷ್ಠಿಕಾಂಶದ ನೆರವು ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಸಮುದಾಯ ಆಧಾರಿತ ಬೆಂಬಲವನ್ನು ಮುಂದುವರಿಸುವುದರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ. ಈ ಪ್ರಯತ್ನಗಳಿಂದಾಗಿ, 2025 ರಲ್ಲಿ 67933 ಪಂಚಾಯತ್‌ಗಳನ್ನು ಕ್ಷಯ ಮುಕ್ತವೆಂದು ಘೋಷಿಸಲಾಗಿದೆ.

ತಂತ್ರಜ್ಞಾನ ಮತ್ತು ನಾವೀನ್ಯತೆಯಿಂದ ಕ್ಷಯ ರೋಗಪತ್ತೆ ಮತ್ತು ಆರೈಕೆಯಲ್ಲಿ  ಪರಿವರ್ತನೆ

ಟಿಬಿ ತಪಾಸಣೆ ಮತ್ತು ರೋಗಪತ್ತೆಯನ್ನು ವೇಗವಾಗಿ, ಹೆಚ್ಚು ನಿಖರವಾಗಿ ಮತ್ತು ಲಭ್ಯವಾಗುವಂತೆ ಮಾಡಲು ಭಾರತವು ಸುಧಾರಿತ ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.

ಪೋರ್ಟಬಲ್ ಎಐ ಆಧರಿಸಿದ ಡಿಜಿಟಲ್ ಎಕ್ಸ್-ರೇಗಳ ನಿಯೋಜನೆ, ಎನ್ ಎಎಟಿ ಸೇರಿ ಕ್ಷಿಪ್ರ ಮಾಲಿಕ್ಯೂಲರ್ ರೋಗಪತ್ತೆ ಪರೀಕ್ಷೆ ತಂತ್ರಜ್ಞಾನಗಳ ವಿಸ್ತರಣೆ ಮತ್ತು ರೋಗಪತ್ತೆಯ ಮೂಲಸೌಕರ್ಯವನ್ನು ಬಲಪಡಿಸುವುದು ವೈವಿಧ್ಯಮಯ ಭೌಗೋಳಿಕ ಮತ್ತು ಸಾಮಾಜಿಕ ಸೆಟ್ಟಿಂಗ್‌ಗಳಲ್ಲಿ ಜನಸಂಖ್ಯೆಯನ್ನು ತಲುಪುವ ಕಾರ್ಯಕ್ರಮದ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

ನಿ-ಕ್ಷಯ್ ಡಿಜಿಟಲ್ ಪ್ಲಾಟ್‌ಫಾರ್ಮ್ ರೋಗಿಗಳ ಮೇಲೆ ನಿಗಾವಹಿಸುವುದು, ಚಿಕಿತ್ಸೆಯ ಮೇಲ್ವಿಚಾರಣೆ ಮತ್ತು ಕಾರ್ಯಕ್ರಮ ನಿರ್ವಹಣೆ, ಆರೈಕೆಯ ನಿರಂತರತೆ ಮತ್ತು ಸಕಾಲಿಕ ಮಧ್ಯಸ್ಥಿಕೆಗಳನ್ನು ಬಲಪಡಿಸುವುದನ್ನು ಬೆಂಬಲಿಸುತ್ತದೆ.

ಮಧುಮೇಹ, ಅಪೌಷ್ಟಿಕತೆ ಮತ್ತು ಇತರ ಸಹ ರೋಗಗಳನ್ನು ಗುರುತಿಸುವಿಕೆ ಮತ್ತು ನಿರ್ವಹಣೆಯೊಂದಿಗೆ ಟಿಬಿ ತಪಾಸಣೆಯ ಸಂಯೋಜನೆಯು ಸಮಗ್ರ ಮತ್ತು ರೋಗಿ-ಸ್ನೇಹಿ ಚಿಕಿತ್ಸೆಯನ್ನು ಮತ್ತಷ್ಟು ಸಕ್ರಿಯಗೊಳಿಸುತ್ತಿದೆ.

ಭಾರತದ ಕ್ಷಯರೋಗ ನಿರ್ವಹಣೆಯಲ್ಲಿ ಪೌಷ್ಠಿಕಾಂಶದ ನೆರವು ಪ್ರಮುಖ ಆಧಾರಸ್ತಂಭವಾಗಿ ಉಳಿದಿದೆ. ನಿ-ಕ್ಷಯ್ ಪೋಷಣ್ ಯೋಜನೆಯ ಮೂಲಕ, ಅರ್ಹ ರೋಗಿಗಳು ಚಿಕಿತ್ಸೆಯ ಸಮಯದಲ್ಲಿ ಪೌಷ್ಠಿಕಾಂಶದ ಅವಶ್ಯಕತೆಗಳಿಗೆ ಹಣಕಾಸಿನ ನೆರವು ಪಡೆಯುತ್ತಾರೆ, ಆದರೆ ನಿ-ಕ್ಷಯ್ ಮಿತ್ರ ಉಪಕ್ರಮವು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಸ್ಥೆಗಳನ್ನು ಪೌಷ್ಠಿಕ ಮತ್ತು ಮಾನಸಿಕ ಬೆಂಬಲವನ್ನು ಒದಗಿಸಲು ಸಜ್ಜುಗೊಳಿಸುತ್ತದೆ.

ಈ ಮಧ್ಯಸ್ಥಿಕೆಗಳು, ಸುಧಾರಿತ ರೋಗನಿರ್ಣಯ ಮತ್ತು ರೋಗಿಗಳ ಅನುಸರಣೆಯೊಂದಿಗೆ, ಬಲವಾದ ಚಿಕಿತ್ಸೆಯ ಫಲಿತಾಂಶಗಳಿಗೆ ಮತ್ತು ಕ್ಷಯ ಮರಣ ಪ್ರಮಾಣ ತಗ್ಗಿಸಲು ಕೊಡುಗೆ ನೀಡುತ್ತಿವೆ.

ಭಾರತದ ಕ್ಷಯರೋಗ ಪ್ರಗತಿಗೆ ಬಲವಾದ ವೈಜ್ಞಾನಿಕ ಕಣ್ಗಾವಲು ಮತ್ತು ಸಾಕ್ಷ್ಯಗಳ ಬೆಂಬಲ

ಭಾರತದ ಸಾಧನೆಗಳು ಬಲವರ್ಧಿತ ಸಾಂಕ್ರಾಮಿಕ ರೋಗ ಕಣ್ಗಾವಲು, ವೈಜ್ಞಾನಿಕ ಸಂಶೋಧನೆ ಮತ್ತು ಸಾಕ್ಷ್ಯ ಆಧಾರಿತ ಕ್ಷಯರೋಗ ನೆರವಿನಿಂದ ಬೆಂಬಲಿತವಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2026, ಕ್ಷಯರೋಗ ಮರಣದ ಅಂದಾಜನ್ನು ಬಲಪಡಿಸಲು ಭಾರತದ ರಿಜಿಸ್ಟ್ರಾರ್ ಜನರಲ್ ಅವರ ಮಾದರಿ ನೋಂದಣಿ ವ್ಯವಸ್ಥೆ (RGI/SRS), ಸಮುದಾಯ ಆಧಾರಿತ ಮೌಖಿಕ ಶವಪರೀಕ್ಷೆ ಮೌಲ್ಯಮಾಪನ ಮತ್ತು ನಿ-ಕ್ಷಯ್ ಪೋರ್ಟಲ್‌ನಿಂದ ಕಾರ್ಯಕ್ರಮದ ದತ್ತಾಂಶ ಸೇರಿದಂತೆ ಬಹು ಪೂರಕ ಮೂಲಗಳಿಂದ ಸಾಕ್ಷ್ಯಗಳನ್ನು ಸಂಯೋಜಿಸಿದೆ.

ಈ ಮೌಲ್ಯಮಾಪನಗಳ ಆಧಾರದ ಮೇಲೆ, ವರದಿಯು ಭಾರತದ ಅಂದಾಜು ಕ್ಷಯರೋಗ ಮರಣದಲ್ಲಿ ಶೇ38ರಷ್ಟು ಇಳಿಕೆಯನ್ನು ದಾಖಲಿಸುತ್ತದೆ, ದರವು 2015 ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 28 ರಿಂದ 2025 ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 18 ಕ್ಕೆ ಇಳಿದಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ - ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆ (ICMR-NIRT) 2025 ರಲ್ಲಿ ರಾಷ್ಟ್ರೀಯವಾಗಿ ಪ್ರತಿನಿಧಿಸುವ ಕ್ಷಯರೋಗ ಹರಡುವಿಕೆಯ ಸಮೀಕ್ಷೆ ನಡೆಸಿತು, ಅದನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ತಾಂತ್ರಿಕ ಚರ್ಚೆಯಲ್ಲಿದೆ, ಅದರ ನಂತರ WHO ಭಾರತಕ್ಕಾಗಿ ನವೀಕರಿಸಿದ ದೇಶದ ಪ್ರೊಫೈಲ್ ಅನ್ನು ಪ್ರಕಟಿಸುತ್ತದೆ.

ಜನ್ ಭಾಗಿದಾರಿ: ಕ್ಷಯರೋಗ ನಿರ್ಮೂಲನೆ ಜನಾಂದೋಲನವನ್ನಾಗಿ ಪರಿವರ್ತನೆ

ಭಾರತದ ಕ್ಷಯರೋಗ ನಿರ್ಮೂಲನೆ ಪ್ರಯತ್ನಗಳ ಒಂದು ನಿರ್ಣಾಯಕ ಲಕ್ಷಣವೆಂದರೆ ಸಮುದಾಯಗಳು ಮತ್ತು ಸಂಸ್ಥೆಗಳನ್ನು ರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ಸಕ್ರಿಯ ಪಾಲುದಾರರನ್ನಾಗಿ ಸಜ್ಜುಗೊಳಿಸುವುದು.

ಪಂಚಾಯತಿ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ನಾಗರಿಕ ಸಮಾಜ ಸಂಸ್ಥೆಗಳು, ಖಾಸಗಿ ಆರೋಗ್ಯ ಪೂರೈಕೆದಾರರು, ಕಾರ್ಪೊರೇಟ್ ಪಾಲುದಾರರು ಮತ್ತು ಸಮುದಾಯ ನಾಯಕರ ಭಾಗವಹಿಸುವಿಕೆಯು ತಳಮಟ್ಟದಲ್ಲಿ ಜಾಗೃತಿ, ತಪಾಸಣೆ, ಪೌಷ್ಟಿಕಾಂಶ ನೆರವು ಮತ್ತು ರೋಗಿಗಳ ನೆರವನ್ನು ಬಲವರ್ಧನೆಗೊಳಿಸಿದೆ.

ನಿ-ಕ್ಷಯ ಮಿತ್ರ ಉಪಕ್ರಮವು ನಾಗರಿಕರು ಮತ್ತು ಸಂಸ್ಥೆಗಳು ಕ್ಷಯರೋಗ ಚಿಕಿತ್ಸೆಗೆ ಒಳಗಾಗುವ ಜನರ ಚೇತರಿಕೆ ಮತ್ತು ಯೋಗಕ್ಷೇಮಕ್ಕೆ ನೇರವಾಗಿ ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದೆ, ಸಾಮೂಹಿಕ ಜವಾಬ್ದಾರಿಯ ಮನೋಭಾವ ಬಲಪಡಿಸುತ್ತದೆ.

ಅದೇ ವೇಗವನ್ನು ಕಾಯ್ದುಕೊಳ್ಳಲು ಜೋಶ್ ತಂಡಗಳ ಉಪಕ್ರಮವು ಕ್ಷಯರೋಗ ನಿರ್ಮೂಲನ ಆಂದೋಲನಕ್ಕೆ ಹೆಚ್ಚಿನ ಯುವಜನತೆ ಭಾಗವಹಿಸುವಂತೆ ಮಾಡುತ್ತಿದೆ. ಗೊತ್ತುಪಡಿಸಿದ ವರ್ಗ-I ಅಧಿಕಾರಿಗಳ ನೇತೃತ್ವದಲ್ಲಿ ಮತ್ತು ಐದು ಎನ್ ಸಿಸಿ ಕೆಡೆಟ್‌ಗಳು ಮತ್ತು ಐದು ಮೈ ಭಾರತ್ ಸ್ವಯಂಸೇವಕರ ಬೆಂಬಲದೊಂದಿಗೆ ಬ್ಲಾಕ್ ಮತ್ತು ವಾರ್ಡ್ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗುತ್ತಿದೆ.

ಜಾಗೃತಿ ಮೂಡಿಸುವುದು, ಸಮುದಾಯ ಸಂಪರ್ಕ ಮತ್ತು ಸಜ್ಜುಗೊಳಿಸುವಿಕೆಯ ಮೂಲಕ, ಜೋಶ್ ತಂಡಗಳು ತಳಮಟ್ಟದ ಭಾಗವಹಿಸುವಿಕೆ ಬಲಪಡಿಸಲು ಮತ್ತು ಕ್ಷಯರೋಗ ಮುಕ್ತ ಭಾರತದ ದೂರದೃಷ್ಟಿಯನ್ನು ಮುನ್ನಡೆಸಲು ಸಹಾಯ ಮಾಡುತ್ತಿವೆ.

ಕ್ಷಯ-ಮುಕ್ತ ಭಾರತದೆಡೆಗೆ ಅದೇ ವೇಗವನ್ನು ಕಾಯ್ದುಕೊಳ್ಳುವುದು

ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಕ್ಷಯರೋಗ ವರದಿ 2026 ರಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾದ ಸಾಧನೆಗಳು ಸಾರ್ವಜನಿಕ ಆರೋಗ್ಯ, ತಾಂತ್ರಿಕ ನಾವೀನ್ಯತೆ, ವೈಜ್ಞಾನಿಕ ಕಣ್ಗಾವಲು ಮತ್ತು ಸಮುದಾಯ-ಆಧರಿತ ಮಧ್ಯಸ್ಥಿಕೆಗಳಲ್ಲಿ ಭಾರತದ ನಿರಂತರ ಹೂಡಿಕೆಗಳನ್ನು ಪ್ರತಿಬಿಂಬಿಸುತ್ತವೆ.

ಕ್ಷಯರೋಗ ಮರಣದಲ್ಲಿ ಶೇ.38 ರಷ್ಟು ಇಳಿಕೆ, ಕ್ಷಯರೋಗ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಕ್ಷಯರೋಗದ ಯಶಸ್ಸಿನ ಪ್ರಮಾಣ ಶೇ.94 ತಲುಪಿರುವುದು ಮತ್ತು ಅಭೂತಪೂರ್ವ ಪ್ರಮಾಣದ ತಪಾಸಣೆಯು ಕ್ಷಯರೋಗ ನಿರ್ಮೂಲನೆಯತ್ತ ಭಾರತದ ಪಯಣದಲ್ಲಿ ಪ್ರಮುಖ ಪ್ರಗತಿಯನ್ನು ಸೂಚಿಸುತ್ತದೆ.

ಸರ್ಕಾರವು ತೀವ್ರವಾದ ತಪಾಸಣೆ, ಗುಣಮಟ್ಟದ ರೋಗಪತ್ತೆಗೆ ಅಗತ್ಯ ಸಾಧನಗಳ ಲಭ್ಯತೆ, ತ್ವರಿತ ಮತ್ತು ಪರಿಣಾಮಕಾರಿ ಚಿಕಿತ್ಸೆ, ಕ್ಷಯರೋಗ ತಡೆಗಟ್ಟುವ ಚಿಕಿತ್ಸೆ, ಪೌಷ್ಠಿಕಾಂಶದ ನೆರವು ಮತ್ತು ಆಳವಾದ ಸಮುದಾಯ ತೊಡಗಿಸಿಕೊಳ್ಳುವಿಕೆಯ ಮೂಲಕ ಈ ಪ್ರಯೋಜಗಳನ್ನು ಪಡೆಯುವುದನ್ನು ಮುಂದುವರಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಜಾಗತಿಕ ಕ್ಷಯರೋಗ ಗುರಿಗಳತ್ತ ಪ್ರಗತಿಯನ್ನು ವೇಗಗೊಳಿಸಲು ಮತ್ತು ಕ್ಷಯರೋಗ ಮುಕ್ತ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸಲು ಕಟಿ ಬದ್ಧವಾಗಿದೆ ಮತ್ತು ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ, ಸಂಶೋಧನಾ ಸಂಸ್ಥೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಅಭಿವೃದ್ಧಿ ಪಾಲುದಾರರು ಮತ್ತು ಸಮುದಾಯಗಳೊಂದಿಗೆ ಸಹಯೋಗದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಕ್ಷಯರೋಗ ಮುಕ್ತ ಭಾರತ!

 

*****


(ಪ್ರಕಟಣೆ ಐ.ಡಿ.: 2335740) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi , Urdu , Marathi , Nepali , हिन्दी , Bengali , Assamese , Gujarati , Tamil , Malayalam