ಚುನಾವಣಾ ಆಯೋಗ
azadi ka amrit mahotsav

ಭಾರತೀಯ ಚುನಾವಣಾ ಆಯೋಗದ ಸಭೆಯು ಇಂದು ಅಂದರೆ 26.09.2026ರಂದು ಮಧ್ಯಾಹ್ನ 3:00 ಗಂಟೆಗೆ ನಡೆಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಯಿತು:

ಪ್ರಕಟಣಾ ದಿನಾಂಕ: 26 SEP 2026 5:36PM by PIB Bengaluru
  1. ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ, ಯಾವುದೇ ವ್ಯಕ್ತಿಗೆ ಮ್ಯಾಪ್ ಮಾಡದಿರುವಿಕೆ (unmapped) ಮತ್ತು ತಾರ್ಕಿಕ ವ್ಯತ್ಯಾಸಗಳಿಗೆ (logical discrepancies) ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದ್ದರೆ, ಅಂತಹ ವ್ಯಕ್ತಿಗಳ ಮನೆಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿ, ಬಳಿಕ ಅವುಗಳನ್ನು ಇಆರ್ಒ ನಿರ್ಧಾರಕ್ಕಾಗಿ ಇಸಿಐನೆಟ್‌ (ECINet) ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅಂತಹ ವ್ಯಕ್ತಿಗಳನ್ನು ಇಆರ್‌ಒ/ಎಇಆರ್‌ಒ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಕರೆಯುವ ಅಗತ್ಯವಿಲ್ಲ. ಇಆರ್‌ಒ ನಿರ್ಧರಿಸುವ ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿಚಾರಣೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ಅಗತ್ಯವಿದ್ದಲ್ಲಿ, ಮತದಾರರು ತಮ್ಮ ಪರವಾಗಿ ವಿಚಾರಣೆಗೆ ಹಾಜರಾಗಲು ಕುಟುಂಬದ ಯಾವುದೇ ವಯಸ್ಕ ಸದಸ್ಯರನ್ನು ಅಧಿಕೃತಗೊಳಿಸಬಹುದು. ಆನ್‌ಲೈನ್ ವಿಚಾರಣೆಗಾಗಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುವುದು.
  2. ಜಿಲ್ಲಾ ಚುನಾವಣಾಧಿಕಾರಿಗಳು (ಡಿಇಒಗಳು), ಅಗತ್ಯಕ್ಕೆ ಅನುಗುಣವಾಗಿ, ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವವರು, ಕಾರ್ಮಿಕರು, ಬಡವರು, ನಿರಾಶ್ರಿತರು ಮತ್ತಿತರರಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸುತ್ತಾರೆ/ವಿಶೇಷ ಶಿಬಿರಗಳನ್ನು ಆಯೋಜಿಸುತ್ತಾರೆ.
  3. ಎಸ್‌ಐಆರ್‌ಗಾಗಿ ನಮೂನೆ 6ಕ್ಕೆ ಲಗತ್ತಿಸಲಾದ ಘೋಷಣೆಯನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ. ಎಸ್‌ಐಆರ್‌ ಅವಧಿಯಲ್ಲದ ಸಂದರ್ಭದಲ್ಲಿ, ನಿಯಮಗಳ ಪ್ರಕಾರ (ಮತದಾರರ ನೋಂದಣಿ ನಿಯಮಗಳು, 1960) ಅನ್ವಯವಾಗುವ ನಮೂನೆಗಳನ್ನು ಬಳಸಲಾಗುವುದು.
  4. ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಅವರ ಶಾಸನಬದ್ಧ ಅಧಿಕಾರಗಳಿಗೆ ಅನುಗುಣವಾಗಿ ಇಸಿಐನೆಟ್‌ ವ್ಯವಸ್ಥೆಯಲ್ಲಿ ಅವರ ಜವಾಬ್ದಾರಿಗಳಿಗೆ ಅನುಗುಣವಾದ ಪ್ರವೇಶಾವಕಾಶ ನೀಡಲಾಗಿದೆ. ಇಸಿಐನೆಟ್‌ ವ್ಯವಸ್ಥೆಯು ಕಾಯಿದೆಗಳು ಮತ್ತು ನಿಯಮಗಳ ನಿಬಂಧನೆಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಲು, ಹಿರಿಯ ಉಪ ಚುನಾವಣಾ ಆಯುಕ್ತರ (ಡಿಇಸಿ) ನೇತೃತ್ವದಲ್ಲಿ ಹಾಗೂ ಐಐಟಿ/ಐಐಐಟಿಯ ಸ್ವತಂತ್ರ ತಜ್ಞರನ್ನು ಒಳಗೊಂಡ ಸಮಿತಿಯೊಂದು ಇಸಿಐನೆಟ್‌ ವ್ಯವಸ್ಥೆಯನ್ನು ಪರಿಶೀಲಿಸಿ, ಆಯೋಗಕ್ಕೆ ವರದಿ ಸಲ್ಲಿಸುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಂದ (ಸಿಇಒಗಳು) ಬಂದ ಸಲಹೆಗಳ ಆಧಾರದ ಮೇಲೆ ಪೋರ್ಟಲ್‌ನಲ್ಲಿ ಈಗಾಗಲೇ ವಿವಿಧ ಸುಧಾರಣೆಗಳನ್ನು ಮಾಡಲಾಗಿದೆ. ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಇನ್ನಷ್ಟು ಸೌಲಭ್ಯ/ನಮ್ಯತೆ ಅಗತ್ಯವಿದ್ದಲ್ಲಿ, ಅದನ್ನೂ ಕಾರ್ಯಗತಗೊಳಿಸಲಾಗುವುದು. ಇನ್ನು ಮುಂದೆ, ಮಾಹಿತಿ ತಂತ್ರಜ್ಞಾನ ಮಾಡ್ಯೂಲ್‌ಗಳು ಮತ್ತು ಪೋರ್ಟಲ್‌ಗಳಿಗೆ ಸಂಬಂಧಿಸಿದ ಎಲ್ಲಾ ಹೊಸ ಉಪಕ್ರಮಗಳನ್ನು ಆಯೋಗದ ಅನುಮೋದನೆಗೆ ಮುನ್ನ ಅಧಿಕಾರಿಗಳ ಸಮಿತಿ (ಸಿಒಒ)ಯಲ್ಲಿ ಚರ್ಚಿಸಲಾಗುವುದು.
  5. ದೆಹಲಿ ಮುಖ್ಯ ಚುನಾವಣಾಧಿಕಾರಿಯಿಂದ ಸ್ವೀಕರಿಸಲಾದ ಮನವಿಯನ್ನು ಪರಿಗಣಿಸಿ, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಆಯೋಗವು 30 ಅಕ್ಟೋಬರ್ 2026ರವರೆಗೆ ವಿಸ್ತರಿಸಿದೆ. ನೋಟಿಸ್‌ಗಳು ಹಾಗೂ ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಅವಧಿಯನ್ನು 30 ನವೆಂಬರ್ 2026ರವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಯಿಂದ ಸ್ವೀಕರಿಸಲಾದ ಮನವಿಯಂತೆ, ಮಹಾರಾಷ್ಟ್ರದಲ್ಲಿ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಆಯೋಗವು 12 ಅಕ್ಟೋಬರ್ 2026ರವರೆಗೆ ವಿಸ್ತರಿಸಿದೆ. ಮಹಾರಾಷ್ಟ್ರದಲ್ಲಿ ನೋಟಿಸ್‌ಗಳು ಹಾಗೂ ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಅವಧಿಯನ್ನು 10 ನವೆಂಬರ್ 2026ರವರೆಗೆ ವಿಸ್ತರಿಸಲಾಗಿದೆ.
  6. ಆಯೋಗದ ಎಲ್ಲಾ ಸಭೆಗಳಿಗೆ ಕಾರ್ಯಸೂಚಿಯನ್ನು ಮುಂಚಿತವಾಗಿಯೇ ಹಂಚಿಕೆ ಮಾಡಲಾಗುತ್ತದೆ ಮತ್ತು ಸಭೆಯ ನಡಾವಳಿಗಳನ್ನು ಹೊರಡಿಸಲಾಗುತ್ತದೆ.
  7. ಎಲ್ಲಾ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ಮೌಲ್ಯಮಾಪನ ವರದಿಗಳನ್ನು (ಎಪಿಎಆರ್) ನಿಗದಿತ ಅವಧಿಯೊಳಗೆ, ಅಂದರೆ ಪ್ರತಿ ವರ್ಷ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸಲಾಗುವುದು.
  8. ಅಧಿಕಾರಿಗಳ ವಿದೇಶ ಪ್ರವಾಸಗಳಿಗೆ ಆಯೋಗದ ಅನುಮೋದನೆ ಪಡೆಯಲಾಗುವುದು.
  9. ಆಯೋಗದ ಆಯುಕ್ತರು ಆಯೋಗದ ಅಧಿಕಾರಿಗಳಿಗೆ ನೀಡುವ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
  1. ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ಈಗಾಗಲೇ ಪೂರ್ಣಗೊಂಡಿದೆ. ಎಸ್‌ಐಆರ್‌ ಸಂದರ್ಭದಲ್ಲಿ ಅಥವಾ ಅದರ ನಂತರ ಯಾವುದೇ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದರೆ, ಹಾಗೂ ಯುವ/ಮೊದಲ ಬಾರಿಗೆ ಮತ ಚಲಾಯಿಸುವ ಮತದಾರರು ಸೇರಿದಂತೆ ಯಾವುದೇ ವ್ಯಕ್ತಿಯು ನಿರಂತರ ನವೀಕರಣ ಪ್ರಕ್ರಿಯೆಯಡಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಂಬಂಧಪಟ್ಟ ಇಆರ್‌ಒ ಅವರಿಗೆ ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇಂತಹ ಮತದಾರರ ನೋಂದಣಿಗಾಗಿ ಸಿಇಒಗಳು, ಡಿಇಒಗಳು, ಇಆರ್‌ಒಗಳು ತಕ್ಷಣವೇ ವಿಶೇಷ ಅಭಿಯಾನವನ್ನು ಆರಂಭಿಸಲಿದ್ದಾರೆ.

 

  1. ಈ ಕೆಳಗಿನ ಅಂಶಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ:
  1. ಸಂಪುಟ ಕಾರ್ಯದರ್ಶಿಯವರಿಗೆ ಕಳುಹಿಸಲಾದ ಪತ್ರವು ಆಯೋಗ ಅಥವಾ ಮಾಹಿತಿ ತಂತ್ರಜ್ಞಾನ ವಿಭಾಗದ ಯಾವುದೇ ನೀತಿ ವಿಷಯಕ್ಕೆ ಸಂಬಂಧಿಸಿದ್ದಲ್ಲ; ಅದು ಭಾರತೀಯ ಚುನಾವಣಾ ಆಯೋಗಕ್ಕೆ ನಿಯೋಜನೆಯ ಮೇರೆಗೆ ಬಂದಿರುವ ಒಬ್ಬ ಅಧಿಕಾರಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದಾಗಿತ್ತು. ಸಂಬಂಧಪಟ್ಟ ಅಧಿಕಾರಿಯು ಹೊರಡಿಸಿದ ಕೆಲಸದ ಮರುಹಂಚಿಕೆ ಆದೇಶಗಳನ್ನು ಇಬ್ಬರು ಆಯುಕ್ತರ ಆದೇಶದ ನಂತರ ವಾಸ್ತವವಾಗಿ ಜಾರಿಗೊಳಿಸಲಾಗಿಲ್ಲ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮೇಲಿನ ಉಪ ಚುನಾವಣಾ ಆಯುಕ್ತರ (ಡಿಇಸಿ) ಮೇಲ್ವಿಚಾರಣೆಯನ್ನು ಎಂದಿಗೂ ಹಿಂಪಡೆದಿರಲಿಲ್ಲ.
  2. ಇತ್ತೀಚಿನ ತಿಂಗಳುಗಳಲ್ಲಿ, ದೇಶಾದ್ಯಂತ ಎಸ್‌ಐಆರ್‌ ಸೇರಿದಂತೆ ಆಯೋಗವು ಹಲವಾರು ನಿರ್ಧಾರಗಳನ್ನು ಕೈಗೊಂಡಿದೆ. ಬಿಹಾರದಿಂದ ಆರಂಭಿಸಿ, ನಂತರ ಪಶ್ಚಿಮ ಬಂಗಾಳ ಮತ್ತು ಇತರ 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸುವಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 24.6.2025ರಂದು ಹೊರಡಿಸಲಾದ ಎಸ್‌ಐಆರ್‌ ಆದೇಶವನ್ನು ಆಯೋಗವು ಸರ್ವಾನುಮತದಿಂದ ಅನುಮೋದಿಸಿತ್ತು. ಈ ಆದೇಶವನ್ನು 27.5.2026ರಂದು ಹೊರಡಿಸಿದ ಆದೇಶದ ಮೂಲಕ ಭಾರತದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್‌ಐಆರ್‌ನ ವೇಳಾಪಟ್ಟಿಯನ್ನು 27.10.2025ರಂದು ಹಾಗೂ 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ವೇಳಾಪಟ್ಟಿಯನ್ನು 14.05.2026ರಂದು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿತ್ತು. ಮೂರನೇ ಹಂತದ ಉಳಿದ 12 ರಾಜ್ಯಗಳಲ್ಲಿ ಅಂತಿಮ ಪ್ರಕಟಣೆ ಹೊರಬಂದ ನಂತರವೇ ಮತದಾರರ ಅಂತಿಮ ಸಂಖ್ಯೆಯು ತಿಳಿದುಬರಲಿದೆ.
  3. ಗೋವಾದ ಮುಖ್ಯ ಚುನಾವಣಾಧಿಕಾರಿಗಳು, ಮತದಾರರ ಪಟ್ಟಿಯಿಂದ ಹೊರಗುಳಿದ ಮತದಾರರ ಮನೆಗಳಿಗೆ ಭೇಟಿ ನೀಡಿ ಅವರ ನಮೂನೆಗಳನ್ನು ಸಂಗ್ರಹಿಸುವಂತೆ ಸಂಬಂಧಪಟ್ಟ ಬಿಎಲ್‌ಒಗಳಿಗೆ ನಿರ್ದೇಶನ ನೀಡಿದ್ದಾರೆ. 97 ಮತದಾರರ ಪೈಕಿ 81 ಮತದಾರರು ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ನಮೂನೆ 6ನ್ನು ಭರ್ತಿ ಮಾಡಿದ್ದಾರೆ.

4. 26.09.2026ರಂದು ನಡೆದ ಆಯೋಗದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಂತೆ ಈ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಇದಕ್ಕೆ ಪೂರ್ಣ ಆಯೋಗದ ಅನುಮೋದನೆ ಇದೆ.

26 ಸೆಪ್ಟೆಂಬರ್ 2026ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ನಿರ್ವಚನ ಸದನದಲ್ಲಿ ನಡೆದ ಚುನಾವಣಾ ಆಯೋಗದ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಶ್ರೀ ಜ್ಞಾನೇಶ್ ಕುಮಾರ್ ಅವರೊಂದಿಗೆ ಚುನಾವಣಾ ಆಯುಕ್ತರಾದ ಡಾ. ಎಸ್.ಎಸ್. ಸಂಧು ಮತ್ತು ಡಾ. ವಿವೇಕ್ ಜೋಶಿ ಪಾಲ್ಗೊಂಡರು.

 

*****


(ಪ್ರಕಟಣೆ ಐ.ಡಿ.: 2315331) ವಿಸಿಟರ್ ಕೌಂಟರ್ : 68
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , हिन्दी , Marathi , Bengali , Punjabi , Gujarati , Odia , Tamil , Telugu , Malayalam