ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮುಂದಿನ ಪೀಳಿಗೆಯ ಭಾರತೀಯ ಕಥೆಗಾರರಿಗೆ 6 ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿವೇತನದ ಮೂಲಕ ಬೆಂಬಲ ನೀಡಲಿರುವ ‘ಐಐಸಿಟಿ’ ಮತ್ತು ‘ನೆಟ್‌ಫ್ಲಿಕ್ಸ್‌’

ಪ್ರಕಟಣಾ ದಿನಾಂಕ: 26 AUG 2026 12:40PM by PIB Bengaluru

'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್'(ಐಐಸಿಟಿ) ಮತ್ತು 'ನೆಟ್‌ಫ್ಲಿಕ್ಸ್‌' 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಘೋಷಿಸಿವೆ. ಎರಡು ಒಂದು-ವರ್ಷದ ಡಿಪ್ಲೊಮಾ ಕಾರ್ಯಕ್ರಮಗಳು ಮತ್ತು ನಾಲ್ಕು ಆರು-ತಿಂಗಳ ಪ್ರಮಾಣಪತ್ರ (ಸರ್ಟಿಫಿಕೇಟ್) ಕಾರ್ಯಕ್ರಮಗಳನ್ನು ಒಳಗೊಂಡಂತೆ ಆರು ವೃತ್ತಿಪರ ಕೋರ್ಸ್‌ಗಳಿಗೆ ಶೇಕಡಾ 80 ರಷ್ಟು ಆರ್ಥಿಕ ಬೆಂಬಲವನ್ನು ಇವು ನೀಡಲಿವೆ.

ವಿದ್ಯಾರ್ಥಿವೇತನ ಉಪಕ್ರಮದ ಅಡಿಯಲ್ಲಿ ಬರುವ  ಆರು ಕೋರ್ಸ್‌ಗಳು ಹೀಗಿವೆ: ಇಂಟರಾಕ್ಟಿವ್ ಕಾಮಿಕ್ಸ್ & ಸೀಕ್ವೆನ್ಷಿಯಲ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ, ವಿಶುವಲ್ ಎಫೆಕ್ಟ್ಸ್ ಮಾಸ್ಟರಿಯಲ್ಲಿ ಡಿಪ್ಲೊಮಾ,ರ್ಚುವಲ್ ಆರ್ಟ್ ಡಿಪಾರ್ಟ್‌ಮೆಂಟ್ ಕಂಟೆಂಟ್ ಕ್ರಿಯೇಷನ್‌ನಲ್ಲಿ ಸರ್ಟಿಫಿಕೇಟ್, ಮೀಡಿಯಾ ಟೆಕ್ ವರ್ಕ್‌ಫ್ಲೋದಲ್ಲಿ ಸರ್ಟಿಫಿಕೇಟ್,ಆರ್ಟ್ ಆಫ್ ಕ್ಯಾರೆಕ್ಟರ್ ಅನಿಮೇಷನ್‌ನಲ್ಲಿ ಸರ್ಟಿಫಿಕೇಟ್,ಇ-ಸ್ಪೋರ್ಟ್ಸ್ & ಗೇಮಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸರ್ಟಿಫಿಕೇಟ್.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೆಟ್‌ಫ್ಲಿಕ್ಸ್‌ನ ಸಹ-ಸಿಇಒ ಶ್ರೀ ಟೆಡ್ ಸರಂಡೋಸ್ ಅವರ ನಡುವೆ ಆಗಸ್ಟ್ 5, 2026 ರಂದು ನಡೆದ ಸಭೆಯ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಭಾರತವು ಕಥೆ ಹೇಳುವ ಶ್ರೀಮಂತ ಸಂಪ್ರದಾಯವನ್ನು ಮತ್ತು ಅಸಾಧಾರಣ ಸೃಜನಶೀಲ ಪ್ರತಿಭೆಗಳನ್ನು ಹೊಂದಿದೆ. ಕಂಟೆಂಟ್ ಕ್ರಿಯೇಷನ್‌ನ (ವಿಷಯ ರಚನೆ) ಜಾಗತಿಕ ಕೇಂದ್ರವಾಗಿ ನಮ್ಮ ದೇಶದ ಸ್ಥಾನವನ್ನು ಬಲಪಡಿಸಲು ಈ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು ಎಂದು ಶ್ರೀ ಮೋದಿಯವರು ಹೇಳಿದ್ದರು. ಭಾರತದ 'ಆರೆಂಜ್ ಎಕಾನಮಿ'ಯ  ಪ್ರಮುಖ ಚಾಲಕಶಕ್ತಿಯಾಗಿರುವ ಅನಿಮೇಷನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಪರಿಸರ ವ್ಯವಸ್ಥೆಯಾದ್ಯಂತ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳೊಂದಿಗೆ ಮುಂದಿನ ಪೀಳಿಗೆಯ ಕಥೆಗಾರರನ್ನು ಸಜ್ಜುಗೊಳಿಸಲು ಸಹಾಯ ಮಾಡಲು 'ನೆಟ್‌ಫ್ಲಿಕ್ಸ್‌' ನಿರ್ಧರಿಸಿತು. ಇದಕ್ಕಾಗಿ, ಭಾರತದ ಸೃಜನಶೀಲ ಪ್ರತಿಭೆಗಳಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ 'ನೆಟ್‌ಫ್ಲಿಕ್ಸ್ ಇಂಡಿಯಾ ಸ್ಟೋರಿಟೆಲ್ಲಿಂಗ್ ಇನಿಶಿಯೇಟಿವ್' ಅನ್ನು ಆಗ ಪ್ರಾರಂಭಿಸಲಾಯಿತು.

ಈ ವಿದ್ಯಾರ್ಥಿವೇತನವು ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ವೃತ್ತಿಪರರಿಗೆ ಲಭ್ಯವಿರುತ್ತದೆ.

ಐಐಸಿಟಿಯ ವಿಷುಯಲ್ ಎಫೆಕ್ಟ್ಸ್ ಮಾಸ್ಟರಿ ಮತ್ತು ಮೀಡಿಯಾ ಟೆಕ್ ವರ್ಕ್‌ಫ್ಲೋ ಕೋರ್ಸ್‌ಗಳ  ಪಠ್ಯಕ್ರಮವನ್ನು ನೆಟ್‌ಫ್ಲಿಕ್ಸ್‌ನ ಸಲಹೆಗಳೊಂದಿಗೆ, ಸಮಕಾಲೀನ ಉದ್ಯಮದ ಕಾರ್ಯಹರಿವು ಮತ್ತು ಜಾಗತಿಕ ಮಾನದಂಡಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಹಾಗೂ ಐಐಸಿಟಿ ಮಂಡಳಿಯ ಅಧ್ಯಕ್ಷರಾದ ಶ್ರೀ ಚಂಚಲ್‌ ಕುಮಾರ್‌ ಅವರು ಮಾತನಾಡಿ, "ಭಾರತದ ಸೃಜನಶೀಲ ಆರ್ಥಿಕತೆಯು ಒಂದು ಮಹತ್ವದ ಘಟ್ಟದಲ್ಲಿದೆ. ತಂತ್ರಜ್ಞಾನವು ಕಥೆಗಳನ್ನು ರಚಿಸುವ ವಿಧಾನವನ್ನು ಬದಲಾಯಿಸುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಪೀಳಿಗೆಯ ಪ್ರತಿಭೆಯನ್ನು ರೂಪಿಸುವ ಸಂಸ್ಥೆಗಳು ಸಹ ಅದರೊಂದಿಗೆ ವಿಕಸನಗೊಳ್ಳಬೇಕು. ಭಾರತದ ಬೃಹತ್ ಸೃಜನಶೀಲ ಪ್ರತಿಭಾ ಸಮೂಹ ಮತ್ತು ಜಾಗತಿಕ 'ಎವಿಜಿಸಿ-ಎಕ್ಸ್‌ಆರ್‌' ಉದ್ಯಮದ ವೇಗವಾಗಿ ಬದಲಾಗುತ್ತಿರುವ ಅಗತ್ಯಗಳ ನಡುವಿನ ಸೇತುವೆಯಾಗಿ ‘ಐಐಸಿಟಿ’ಯನ್ನು ಸ್ಥಾಪಿಸಲಾಗಿದೆ. ಪ್ರಮುಖ ಜಾಗತಿಕ ಕಂಪನಿಗಳೊಂದಿಗಿನ ಪಾಲುದಾರಿಕೆಗಳು ಆ ಸೇತುವೆಯ ಪ್ರಮುಖ ಭಾಗವಾಗಿವೆ. ಇಂತಹ ಸಹಯೋಗಗಳು ತರಗತಿಯೊಳಗೆ ಉದ್ಯಮದ ಜ್ಞಾನವನ್ನು ತರುತ್ತವೆ ಮತ್ತು ಭಾರತದ ಪ್ರತಿಭೆಗಳನ್ನು ನಾಳಿನ ಸೃಜನಶೀಲ ವೃತ್ತಿಪರರಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ," ಎಂದು ಹೇಳಿದರು.

ಐಐಸಿಟಿಯ ಸಿಇಒ ಡಾ. ವಿಶ್ವಾಸ್ ದೇವ್ಸ್ಕರ್ ಅವರು ಮಾತನಾಡಿ, "ಐಐಸಿಟಿಯಂತಹ ಸಂಸ್ಥೆಯ ಉದ್ದೇಶವು ಕೇವಲ ಕೌಶಲ್ಯಗಳನ್ನು ನೀಡುವುದಷ್ಟೇ ಅಲ್ಲ, ಉದ್ಯಮವು ವಿಕಸನಗೊಳ್ಳುತ್ತಿರುವ ರೀತಿಗೆ ತಕ್ಕಂತೆ ಆ ಕೌಶಲ್ಯಗಳು ಪ್ರಸ್ತುತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನೆಟ್‌ಫ್ಲಿಕ್ಸ್‌ನೊಂದಿಗಿನ ಈ ಸಹಯೋಗವು ಪಠ್ಯಕ್ರಮದ ವಿನ್ಯಾಸ ಮತ್ತು ವೃತ್ತಿಪರ ಕಾರ್ಯಹರಿವಿನಿಂದ ಹಿಡಿದು ವಿದ್ಯಾರ್ಥಿಗಳು ಪೂರೈಸಬೇಕಾದ ಮಾನದಂಡಗಳವರೆಗೆ ಉದ್ಯಮದ ದೃಷ್ಟಿಕೋನವನ್ನು ನೇರವಾಗಿ ನಮ್ಮ ಶೈಕ್ಷಣಿಕ ಚೌಕಟ್ಟಿಗೆ ತರುತ್ತದೆ. ಸೃಜನಶೀಲ ಶಿಕ್ಷಣವನ್ನು ನೇರ ಉದ್ಯಮದ ಅಭಿಪ್ರಾಯಗಳು ಮತ್ತು ಆರ್ಥಿಕ ಪ್ರವೇಶದೊಂದಿಗೆ ಸಂಯೋಜಿಸುವ ಮೂಲಕ, ಭಾರತದ ಬೆಳೆಯುತ್ತಿರುವ ಸೃಜನಶೀಲ ಆರ್ಥಿಕತೆಗೆ ಕೊಡುಗೆ ನೀಡಲು ಸಜ್ಜಾದ ಪ್ರತಿಭೆಗಳ ಭಂಡಾರವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಹೇಳಿದರು.

ಎಫ್‌ಐಸಿಸಿಐ (ಫಿಕ್ಕಿ) ಎವಿಸಿಜಿ-ಎಕ್ಸ್ಆರ್‌ ಫೋರಂನ ಅಧ್ಯಕ್ಷ ಮುಂಜಾಲ್ ಶ್ರಾಫ್ ಅವರು ಮಾತನಾಡಿ, 'ಫಿಕ್ಕಿ-ಐಐಸಿಟಿ-ನೆಟ್‌ಫ್ಲಿಕ್ಸ್' ಸಹಯೋಗವು ಭಾರತದ ಎವಿಸಿಜಿ-ಎಕ್ಸ್ಆರ್‌ ವಲಯಕ್ಕಾಗಿ ಭವಿಷ್ಯಕ್ಕೆ ಸನ್ನದ್ಧವಾದ ವೃತ್ತಿಪರರನ್ನು ನಿರ್ಮಿಸಲು ಉದ್ಯಮ-ಹೊಂದಾಣಿಕೆಯ ಪ್ರತಿಭಾ ಅಭಿವೃದ್ಧಿಯತ್ತ ಆಗಿರುವ ಬದಲಾವಣೆಯನ್ನು ಸೂಚಿಸುತ್ತದೆ ಎಂದರು.

'ಐಐಸಿಟಿ' - ಇದು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಹಾರಾಷ್ಟ್ರ ಸರ್ಕಾರ, 'ಎಫ್‌ಐಸಿಸಿಐ’ ಮತ್ತು 'ಸಿಐಐ’ ಸಹಭಾಗಿತ್ವದಲ್ಲಿ ಸ್ಥಾಪಿಸಿದ ಅನಿಮೇಷನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ (ಎವಿಸಿಜಿ-ಎಕ್ಸ್‌ಆರ್‌) ವಲಯದ ಭಾರತದ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರವಾಗಿದೆ. ಈ ಸಂಸ್ಥೆಯು ಪ್ರಸ್ತುತ ಮುಂಬೈನ ಪೆದ್ದರ್ ರಸ್ತೆಯಲ್ಲಿರುವ 'ಎನ್‌ಎಫ್‌ಡಿಸಿ' ಕಾಂಪ್ಲೆಕ್ಸ್‌ನಿಂದ ಕಾರ್ಯನಿರ್ವಹಿಸುತ್ತಿದೆ, ಹಾಗೂ ಇದರ 10-ಎಕರೆಗಳ ಶಾಶ್ವತ ಕ್ಯಾಂಪಸ್ ಅನ್ನು ಗೋರೆಗಾಂವ್‌ನ ಫಿಲ್ಮ್ ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ವಿದ್ಯಾರ್ಥಿವೇತನಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, iict.org ಗೆ ಭೇಟಿ ನೀಡಿ.

 

*****


(ಪ್ರಕಟಣೆ ಐ.ಡಿ.: 2303501) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Bengali , Tamil , Malayalam