ಸಂಸ್ಕೃತಿ ಸಚಿವಾಲಯ
azadi ka amrit mahotsav

ಭೋಪಾಲ್ ನಲ್ಲಿ 11ನೇ ಬ್ರಿಕ್ಸ್ ಸಂಸ್ಕೃತಿ ಸಚಿವರ ಸಭೆ ಮುಕ್ತಾಯ; ‘ಭೋಪಾಲ್ ಘೋಷಣೆ’ ಅಂಗೀಕಾರ

प्रविष्टि तिथि: 08 AUG 2026 1:54PM by PIB Bengaluru

ಭೋಪಾಲ್ ನಲ್ಲಿ ಇಂದು ಭಾರತದ  ಅಧ್ಯಕ್ಷತೆಯಲ್ಲಿ 11ನೇ ಬ್ರಿಕ್ಸ್ ಸಂಸ್ಕೃತಿ ಸಚಿವರ ಸಭೆಯು ನಡೆಯಿತು. ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರ ದೇಶಗಳ ನಡುವೆ ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸಲು ಕಾರ್ಯಸಾಧ್ಯವಾದ ಹಾಗೂ ಭವಿಷ್ಯದ ದೃಷ್ಟಿಕೋನದ ಚೌಕಟ್ಟನ್ನು ಒದಗಿಸುವ ‘ಭೋಪಾಲ್ ಘೋಷಣೆ’ಯನ್ನು  ಅಂಗೀಕರಿಸುವುದರೊಂದಿಗೆ ಸಭೆಯು ಮುಕ್ತಾಯಗೊಂಡಿತು.

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಸಾಂಸ್ಕೃತಿಕ ವಿಭಾಗದ ಪ್ರಕ್ರಿಯೆಗಳು ಮೂರು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗಳ ಮೂಲಕ ಮುನ್ನಡೆದವು. ಮೊದಲ ಸಭೆಯು 29–30 ಏಪ್ರಿಲ್ 2026 ರಂದು ವರ್ಚುವಲ್ ಆಗಿ, ಎರಡನೇ ಸಭೆಯು 4–5 ಜೂನ್ 2026 ರಂದು ವಾರಾಣಸಿಯಲ್ಲಿ ಮತ್ತು ಮೂರನೇ ಸಭೆಯು 5–6 ಆಗಸ್ಟ್ 2026 ರಂದು ಭೋಪಾಲ್ ನಲ್ಲಿ ನಡೆದವು. ಇಂದು ನಡೆದ ಸಚಿವರ ಮಟ್ಟದ ಸಭೆಯಲ್ಲಿ 10 ಬ್ರಿಕ್ಸ್ ಸದಸ್ಯ ದೇಶಗಳು ಮತ್ತು 4 ಪಾಲುದಾರ ದೇಶಗಳು ಸೇರಿದಂತೆ ಒಟ್ಟು 14 ದೇಶಗಳು ಭಾಗವಹಿಸಿದ್ದವು. ಭಾಗವಹಿಸಿದ ಬ್ರಿಕ್ಸ್ ಸದಸ್ಯ ದೇಶಗಳೆಂದರೆ — ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾನ್, ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ . ಇದರಲ್ಲಿ ಈಜಿಪ್ಟ್ ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿತು. ಬೆಲಾರಸ್, ಕ್ಯೂಬಾ, ಕಝಿಕಸ್ತಾನ್ ಮತ್ತು ಥೈಲ್ಯಾಂಡ್ ದೇಶಗಳು ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸಿದ್ದವು. ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ ಸಾಂಸ್ಕೃತಿಕ ಸಚಿವರು ಸಚಿವರ ಸಭೆಯಲ್ಲಿ ಭಾಗವಹಿಸಿದ್ದು, ಸಾಂಸ್ಕೃತಿಕ ವಿಭಾಗದಲ್ಲಿದ್ದ ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ತೋರಿಸಿತು. ಈ ಸಭೆಗಳಲ್ಲಿ ಒಟ್ಟು 55 ಪ್ರತಿನಿಧಿಗಳು ಭಾಗವಹಿಸಿದ್ದರು.

ಚರ್ಚೆಗಳು ಭಾರತದ ಪ್ರಮುಖ ಬ್ರಿಕ್ಸ್ ಆಶಯವಾದ “ಚೇತರಿಕೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” ಎಂಬುದರ ಮಾರ್ಗದರ್ಶನದಲ್ಲಿ ನಡೆದವು. ಇವು ಸಂವಾದಗಳನ್ನು ಕಾರ್ಯಸಾಧ್ಯವಾದ ಉಪಕ್ರಮಗಳಾಗಿ ಪರಿವರ್ತಿಸುವುದು ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಸಾಂಸ್ಥಿಕ ಸಹಕಾರವನ್ನು ಬಲಪಡಿಸುವುದಕ್ಕೆ ಹೆಚ್ಚಿನ ಒತ್ತು ನೀಡಿದವು.

ಇಂದು ಅಂಗೀಕರಿಸಲಾದ 'ಭೋಪಾಲ್ ಘೋಷಣೆ'ಯು ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮಗಳು ಹಾಗೂ ಸೃಜನಶೀಲ ಆರ್ಥಿಕತೆಯಲ್ಲಿ ಸಹಕಾರವನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಧಾನಗಳು, ಅನುಭವಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ವಿನಿಮಯ, ರಚಿಸುವವರಿಗೆ ಬೆಂಬಲ, ನೆಟ್ ವರ್ಕಿಂಗ್ ಮತ್ತು ಡಿಜಿಟಲ್ ಉಪಕರಣಗಳ ಮೂಲಕ ಮಾರುಕಟ್ಟೆ ಪ್ರವೇಶಕ್ಕೆ ಹೆಚ್ಚಿನ ಅವಕಾಶಗಳನ್ನು ವಿಸ್ತರಿಸುವುದು ಸೇರಿವೆ. ಇದು ಯುನೆಸ್ಕೋ  ಬಹುರಾಷ್ಟ್ರೀಯ ನಾಮನಿರ್ದೇಶನಗಳು, ಕಲಾಕೃತಿಗಳ ಮೂಲ ಶೋಧನೆ  ಮತ್ತು ಸಾಂಸ್ಕೃತಿಕ ಸ್ವತ್ತುಗಳ ಮರುಪಡೆಯುವಿಕೆ ಹಾಗೂ ಮರುಸ್ಥಾಪನೆ ಮೇಲಿನ ಹೆಚ್ಚಿಸಿದ ಸಹಕಾರವನ್ನು ಸಹ ಒಳಗೊಂಡಿದೆ ಇದರಲ್ಲಿಎಐ ಆಧಾರಿತ ಟ್ರೇಸಿಂಗ್ ಪರಿಕರಗಳ ಅನ್ವೇಷಣೆಯೂ ಸೇರಿದೆ. ಹೆಚ್ಚುವರಿಯಾಗಿ, ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು ಮತ್ತು ಸಾಂಪ್ರದಾಯಿಕ ಸಾಂಸ್ಕೃತಿಕ ಅಭಿವ್ಯಕ್ತಿಗಳ ರಕ್ಷಣೆ; ಡಾಕ್ಯುಮೆಂಟರಿ ಪರಂಪರೆ, ಡಿಜಿಟಲೀಕರಣ ಮತ್ತು ಸಂರಕ್ಷಣೆಯಲ್ಲಿ ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ಪತ್ರಾಗಾರ ಗಳ  ನಡುವೆ ಸಹಕಾರ; ಹಾಗೂ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಲ್ಲಿ ಕೃತಿಸ್ವಾಮ್ಯ ಹೊಂದಿರುವ ಕೃತಿಗಳ ಬಳಕೆಗೆ ಸಂಬಂಧಿಸಿದಂತೆ ಸೃಷ್ಟಿಕರ್ತರ ಹಕ್ಕುಗಳ ರಕ್ಷಣೆ, ಪಾರದರ್ಶಕತೆ ಮತ್ತು ನ್ಯಾಯಯುತ ಹಾಗೂ ಸಮಾನ ಸಂಭಾವನೆಯನ್ನು ಒದಗಿಸುವುದನ್ನೂ ಈ ಘೋಷಣೆ ಬೆಂಬಲಿಸುತ್ತದೆ.

ಸಾಂಸ್ಕೃತಿಕ ವಿಭಾಗದ ಅಡಿಯಲ್ಲಿ ಒಂದು ನಿರ್ದಿಷ್ಟ ಉಪಕ್ರಮವಾಗಿ, ಭಾರತವು ʻಸ್ವಯಂಪ್ರೇರಿತ ಕಲಾವಿದರ ನೋಂದಣಿ' ಯನ್ನು ಅಭಿವೃದ್ಧಿಪಡಿಸುವ ಪ್ರಾಯೋಗಿಕ ಯೋಜನೆಯನ್ನು ಘೋಷಿಸಿತು. ಈ ಉಪಕ್ರಮವನ್ನು ಸಾಂಸ್ಕೃತಿಕ ವಿನಿಮಯವನ್ನು ಸುಗಮಗೊಳಿಸಲು, ವೃತ್ತಿಪರ ಜಾಲಗಳನ್ನು ಬಲಪಡಿಸಲು ಮತ್ತು ಬ್ರಿಕ್ಸ್ ರಾಷ್ಟ್ರಗಳಾದ್ಯಂತ ಇರುವ ಕಲಾವಿದರು ಹಾಗೂ ಸೃಜನಶೀಲ ವೃತ್ತಿಪರರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಕಲ್ಪಿಸಲಾಗಿದೆ.

ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಪ್ರಮುಖ ಸಾಂಸ್ಕೃತಿಕ ಘಟಕವಾಗಿ 6–7 ಆಗಸ್ಟ್ 2026 ರಂದು ಭೋಪಾಲ್ನಲ್ಲಿ ಎರಡು ದಿನಗಳ 'ಬ್ರಿಕ್ಸ್ ಸಂಸ್ಕೃತಿ ಉತ್ಸವ' ನಡೆಯಿತು. ಈ ಉತ್ಸವದಲ್ಲಿ ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ದೇಶಗಳು ಭಾಗವಹಿಸಿದ್ದವು. ಬೆಲಾರಸ್, ಬ್ರೆಜಿಲ್, ಇಂಡೋನೇಷ್ಯಾ, ರಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ತಮ್ಮ ಕಲಾತ್ಮಕ ಪರಂಪರೆಯ ಸಮೃದ್ಧಿ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದವು. ಭಾರತೀಯ ಕಾಲಾತೀತ ತತ್ವವಾದ “ಸರ್ವೇ ಭವಂತು ಸುಖಿನಃ” — “ಎಲ್ಲರಿಗೂ ಸಾಮರಸ್ಯ ಮತ್ತು ಶಾಂತಿ” ಎಂಬುದನ್ನು ಆಧರಿಸಿದ ಈ ಉತ್ಸವವು ಸಾಂಸ್ಕೃತಿಕ ಸಂವಾದ, ಕಲಾತ್ಮಕ ವಿನಿಮಯ ಮತ್ತು ಜನರ ನಡುವಿನ ಸಂಪರ್ಕಕ್ಕೆ ಒಂದು ರೋಮಾಂಚಕ ವೇದಿಕೆಯನ್ನು ಒದಗಿಸಿತು. ಎರಡನೇ ದಿನ, ಭಾಗವಹಿಸಿದ ಬ್ರಿಕ್ಸ್ ದೇಶಗಳ ಭಾಷೆಗಳಲ್ಲಿ ಈ ಆಶಯದ ಜಂಟಿ ಸಾಮೂಹಿಕ ಪ್ರದರ್ಶನವು ಸಾಂಸ್ಕೃತಿಕ ವೈವಿಧ್ಯತೆಯ ಮೂಲಕ ಏಕತೆಯನ್ನು ಸಂಕೇತಿಸಿತು.

ಸಾಂಸ್ಕೃತಿಕ ವಿಭಾಗವಾದ ʻಕಲ್ಚರ್ ಟ್ರ್ಯಾಕ್ʼ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಗೆ ಅವಕಾಶವನ್ನು ಒದಗಿಸಿತು. ಕೇಂದ್ರ ಸಾಂಸ್ಕೃತಿಕ ಸಚಿವರು ಮತ್ತು ಸಾಂಸ್ಕೃತಿಕ ಸಚಿವಾಲಯದ ಕಾರ್ಯದರ್ಶಿಗಳ ಮಟ್ಟದಲ್ಲಿ ಭಾಗವಹಿಸಿದ ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಾಯಿತು. ಇದು ದ್ವಿಪಕ್ಷೀಯ ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸುವ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳನ್ನು ಅನ್ವೇಷಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿತು.

ಈ ಕಾರ್ಯಕ್ರಮವು ಆಗಮಿಸಿದ ನಿಯೋಗಗಳಿಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ನಾಗರಿಕತೆಯ ಪರಂಪರೆಯನ್ನು ಅನುಭವಿಸುವ ಅವಕಾಶವನ್ನು ನೀಡಿತು. ಆಗಸ್ಟ್ 5 ರಂದು, ನಿಯೋಗಿಗಳು ಭೋಪಾಲ್ ನ 'ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ'ಕ್ಕೆ (ಐಜಿಆರ್ಎಂಎಸ್ ) ಭೇಟಿ ನೀಡಿದರು. ಸಚಿವರ ಸಭೆಯ ನಂತರ, ನಿಯೋಗಗಳನ್ನು ಇಂದು ಸಾಂಚಿಯ ಗಮನಾರ್ಹ ಬೌದ್ಧ ಪರಂಪರೆಯ ಅನುಭವ ಹೊಂದಲು ಕರೆದೊಯ್ಯಲಾಗುತ್ತಿದೆ. ಆಗಸ್ಟ್ 9ರ ಬೆಳಿಗ್ಗೆ ಭೀಮ್ ಬೆಟ್ಕಾಗೆ ಭೇಟಿ ನೀಡಲು ಯೋಜಿಸಲಾಗಿದ್ದು, ಇದು ಭಾಗವಹಿಸುವ ನಿಯೋಗಗಳಿಗೆ ಭಾರತದ ಇತಿಹಾಸಪೂರ್ವ ಬಂಡೆಗಳ ಆಶ್ರಯತಾಣಗಳು  ಮತ್ತು ಪ್ರಾಚೀನ ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸುವ ಅವಕಾಶವನ್ನು ಒದಗಿಸುತ್ತದೆ.

ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ರಚನಾತ್ಮಕ ತೊಡಗಿಸಿಕೊಳ್ಳುವಿಕೆ ಮತ್ತು ಸಕ್ರಿಯ ಭಾಗವಹಿಸುವಿಕೆಗಾಗಿ ಭಾರತವು ಎಲ್ಲಾ ಭಾಗವಹಿಸಿದ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರ ದೇಶಗಳಿಗೆ ತನ್ನ ಧನ್ಯವಾದಗಳನ್ನು ತಿಳಿಸಿತು ಹಾಗೂ ಬ್ರಿಕ್ಸ್ ವ್ಯಾಪ್ತಿಯಲ್ಲಿ ಇನ್ನಷ್ಟು ಸಂಪರ್ಕಿತ, ಒಳಗೊಳ್ಳುವ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸಾಂಸ್ಕೃತಿಕ ಸಹಭಾಗಿತ್ವದತ್ತ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.

 

*****


(रिलीज़ आईडी: 2296505) आगंतुक पटल : 26
इस विज्ञप्ति को इन भाषाओं में पढ़ें: Telugu , English , Marathi , Gujarati , Urdu , हिन्दी , Bengali , Tamil , Malayalam