ಪರಿಸರ ಮತ್ತು ಅರಣ್ಯ ಸಚಿವಾಲಯ
ಕೇಂದ್ರ ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಂಸದೀಯ ಸಲಹಾ ಸಮಿತಿ ಸಭೆಯು ನವದೆಹಲಿಯಲ್ಲಿ ನಡೆಯಿತು
ತಂತ್ರಜ್ಞಾನ, ಸಮುದಾಯದ ಭಾಗವಹಿಸುವಿಕೆ ಮತ್ತು ಸಂಘಟಿತ ರಾಷ್ಟ್ರೀಯ ಕ್ರಮಗಳ ಮೂಲಕ ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವಿಕೆಯನ್ನು ಬಲಪಡಿಸುವ ಕುರಿತು ಸಮಿತಿಯು ಸುದೀರ್ಘ ಚರ್ಚೆ ನಡೆಸಿತು
प्रविष्टि तिथि:
05 AUG 2026 12:27PM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸಭೆಯು ಇಂದು ನವದೆಹಲಿಯಲ್ಲಿ ನಡೆಯಿತು. ಮಾನವ-ವನ್ಯಜೀವಿ ಸಂಘರ್ಷ (ಎಚ್ ಡಬ್ಲೂ ಸಿ) ಸಮಸ್ಯೆಯ ಕುರಿತು ಮತ್ತು ಜನರು ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ತಡೆಗಟ್ಟುವಿಕೆ, ತಗ್ಗಿಸುವಿಕೆ ಮತ್ತು ಸುದೀರ್ಘ ಸಹಬಾಳ್ವೆಯನ್ನು ಬಲಪಡಿಸಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸುವುದು ಈ ಸಭೆಯ ಕಾರ್ಯಸೂಚಿಯಾಗಿತ್ತು. ಸಭೆಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್, ಸಮಿತಿಯ ಭಾಗವಾಗಿರುವ ಸಂಸದರು, ಸಚಿವಾಲಯದ ಹಿರಿಯ ಅಧಿಕಾರಿಗಳು, ಭಾಗವಹಿಸಿದ ರಾಜ್ಯಗಳ ಪಿ ಸಿ ಸಿ ಎಫ್ ಗಳು ಮತ್ತು ಮುಖ್ಯ ವನ್ಯಜೀವಿ ಪಾಲಕರು ಉಪಸ್ಥಿತರಿದ್ದರು.

18.12.2025 ರಂದು ನಡೆದ ತನ್ನ ಹಿಂದಿನ ಸಭೆಯಲ್ಲಿ ನೀಡಲಾದ ನಿರ್ದೇಶನಗಳ ಮೇರೆಗೆ ಕೈಗೊಳ್ಳಲಾದ ಅನುಸರಣಾ ಕ್ರಮಗಳ ಬಗ್ಗೆ ಸಮಿತಿಗೆ ತಿಳಿಸಲಾಯಿತು. ಸಂಘರ್ಷ ಪೀಡಿತ ಪ್ರದೇಶಗಳ ಸಂಸದರೊಂದಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಡೆಸಿದ ಸಮಾಲೋಚನೆಗಳು ಇದರಲ್ಲಿ ಸೇರಿವೆ. ಸಭೆಯಲ್ಲಿ, ಸಂಘರ್ಷದ ಮಾದರಿಗಳು ವಿವಿಧ ಭೂದೃಶ್ಯಗಳಲ್ಲಿ ಭಿನ್ನವಾಗಿವೆ ಎಂದು ಸಚಿವಾಲಯವು ಎತ್ತಿ ತೋರಿಸಿತು. ಹಲವಾರು ರಾಜ್ಯಗಳಲ್ಲಿ ಮಾನವ-ಆನೆ ಸಂಘರ್ಷವು ಪ್ರಮುಖವಾಗಿದ್ದರೆ; ಹುಲಿಗಳು, ಚಿರತೆಗಳು, ಕರಡಿಗಳು, ಖಡ್ಗಮೃಗಗಳು, ಕಾಡುಹಂದಿಗಳು, ಕಾಡೆಮ್ಮೆಗಳು, ಪ್ರೈಮೇಟ್ ಗಳು (ಕೋತಿ ವರ್ಗ) ಮತ್ತು ಇತರ ಪ್ರಭೇದಗಳನ್ನು ಒಳಗೊಂಡ ಸಂಘರ್ಷಗಳಿಗೆ ಸ್ಥಳ-ನಿರ್ದಿಷ್ಟ ನಿರ್ವಹಣಾ ವಿಧಾನಗಳ ಅಗತ್ಯವಿದೆ ಎಂದು ಹೇಳಿತು.
ರಾಷ್ಟ್ರೀಯ ವನ್ಯಜೀವಿ ಮಂಡಳಿಯ 7ನೇ ಸಭೆಯಲ್ಲಿ ಭಾರತದ ಪ್ರಧಾನ ಮಂತ್ರಿಯವರು ಘೋಷಿಸಿದಂತೆ, ಕೊಯಮತ್ತೂರಿನ SACON, WII ಸೌತ್ ಸೆಂಟರ್ ನಲ್ಲಿ ‘ಮಾನವ-ವನ್ಯಜೀವಿ ಸಂಘರ್ಷದ ಶ್ರೇಷ್ಠತಾ ಕೇಂದ್ರ’ (CoE-HWC) ವನ್ನು ಸ್ಥಾಪಿಸಿರುವ ಬಗ್ಗೆ ಸಮಿತಿಗೆ ಮಾಹಿತಿ ನೀಡಲಾಯಿತು. ಮಾನವ-ವನ್ಯಜೀವಿ ಸಂಘರ್ಷದ ಪರಿಣಾಮಕಾರಿ ನಿರ್ವಹಣೆಗಾಗಿ ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಆವಿಷ್ಕಾರ, ನೀತಿ ಬೆಂಬಲ, ಸಾಮರ್ಥ್ಯ ವೃದ್ಧಿ ಮತ್ತು ಸಮುದಾಯ ಕೇಂದ್ರಿತ ವಿಧಾನಗಳಿಗಾಗಿ ಈ ಕೇಂದ್ರವನ್ನು ರಾಷ್ಟ್ರೀಯ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ. ಸಂಘರ್ಷದ ಘಟನೆಗಳ ದಾಖಲೀಕರಣ, ದತ್ತಾಂಶ ನಿರ್ವಹಣೆ, ಜ್ಞಾನ ಹಂಚಿಕೆ ಮತ್ತು ನಿರ್ಧಾರ ಬೆಂಬಲಕ್ಕಾಗಿ ಏಕೀಕೃತ ಡಿಜಿಟಲ್ ವೇದಿಕೆಯಾಗಿ 10.07.2026 ರಂದು ‘ರಾಷ್ಟ್ರೀಯ ಮಾನವ-ವನ್ಯಜೀವಿ ಸಂಘರ್ಷ ಪೋರ್ಟಲ್’ ಅನ್ನು ಪ್ರಾರಂಭಿಸಿರುವುದನ್ನು ಸಹ ಸಮಿತಿಯು ಗಮನಿಸಿತು. ಇದಲ್ಲದೆ, ದಕ್ಷಿಣ ಭಾರತದ ಆನೆ ಸಂರಕ್ಷಣೆ ಕುರಿತ ಪ್ರಾದೇಶಿಕ ಕ್ರಿಯಾ ಯೋಜನೆಯನ್ನು (ಆರ್ ಎ ಪಿ) ಅನುಮೋದಿಸಲಾಗಿದೆ ಎಂದು ತಿಳಿಸಲಾಯಿತು.
ಅಸ್ಸಾಂ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳು ತಮ್ಮ ಸಂಘರ್ಷದ ಸನ್ನಿವೇಶಗಳು, ತಗ್ಗಿಸುವಿಕೆಯ ಕ್ರಮಗಳು, ಸಮುದಾಯದ ಭಾಗವಹಿಸುವಿಕೆಯ ಉಪಕ್ರಮಗಳು, ತಂತ್ರಜ್ಞಾನದ ಬಳಕೆ, ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ರಾಷ್ಟ್ರೀಯ ಪ್ರಯತ್ನಗಳನ್ನು ಬಲಪಡಿಸುವ ಸಲಹೆಗಳನ್ನು ಪ್ರಸ್ತುತಪಡಿಸಿದವು. ಪ್ರಸ್ತುತಪಡಿಸಿದ ಅನುಭವಗಳು ಭೂದೃಶ್ಯ-ನಿರ್ದಿಷ್ಟ ಯೋಜನೆ, ತ್ವರಿತ ಸ್ಪಂದನಾ ವ್ಯವಸ್ಥೆಗಳು, ಆವಾಸಸ್ಥಾನ ಸುಧಾರಣೆ, ವನ್ಯಜೀವಿ ಕಾರಿಡಾರ್ ಗಳ ರಕ್ಷಣೆ, ವೈಜ್ಞಾನಿಕ ಮೇಲ್ವಿಚಾರಣೆ, ಮುನ್ಸೂಚನಾ ವ್ಯವಸ್ಥೆಗಳು, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಅಂತರ-ರಾಜ್ಯ ಸಮನ್ವಯದ ಪ್ರಾಮುಖ್ಯತೆಯನ್ನು ಒತ್ತಿಹೇಳಿದವು.
ಮಾನವ-ವನ್ಯಜೀವಿ ಸಂಘರ್ಷದ ಪರಿಣಾಮಕಾರಿ ನಿರ್ವಹಣೆಗೆ ಮಾನವ ಜೀವ ಮತ್ತು ಜೀವನೋಪಾಯದ ರಕ್ಷಣೆಯೊಂದಿಗೆ ಪರಿಸರ ಸಂರಕ್ಷಣೆಯನ್ನು ಸಂಯೋಜಿಸುವ ಸಮಗ್ರ ವಿಧಾನದ ಅಗತ್ಯವಿರುವ ಬಗ್ಗೆ ಚರ್ಚಿಸಲಾಯಿತು. ಜಿಐಎಸ್, ಕೃತಕ ಬುದ್ಧಿಮತ್ತೆ, ಡ್ರೋನ್ ಗಳು, ರೇಡಿಯೋ ಟೆಲಿಮೆಟ್ರಿ ಮತ್ತು ಮುನ್ಸೂಚಕ ವಿಶ್ಲೇಷಣೆಗಳು ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆಯ ಕುರಿತು ಸದಸ್ಯರು ಚರ್ಚಿಸಿದರು. ಅದೇ ಸಮಯದಲ್ಲಿ ಮುಂಚೂಣಿ ಸಿಬ್ಬಂದಿಯ ಸಾಮರ್ಥ್ಯವನ್ನು ಬಲಪಡಿಸುವುದು, ಪರಿಹಾರ ವಿತರಣೆಯನ್ನು ಸುಧಾರಿಸುವುದು, ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಸಂರಕ್ಷಣೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

ಆರು ರಾಜ್ಯಗಳು ಮಾಡಿದ ಪ್ರಸ್ತುತಿಗಳ ಪ್ರಮುಖ ಅಂಶಗಳು ಕೆಳಗಿನಂತಿವೆ:
- ಅಸ್ಸಾಂ: ಅಸ್ಸಾಂ ಸರ್ಕಾರವು ಆನೆಗಳು, ಹುಲಿಗಳು, ಚಿರತೆಗಳು, ಖಡ್ಗಮೃಗಗಳು, ಕಾಡೆಮ್ಮೆಗಳು ಮತ್ತು ಕಾಡುಹಂದಿಗಳನ್ನು ಒಳಗೊಂಡ ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ತನ್ನ ಭೂದೃಶ್ಯ-ಆಧಾರಿತ ಕಾರ್ಯತಂತ್ರವನ್ನು ಪ್ರಸ್ತುತಪಡಿಸಿತು. ಆವಾಸಸ್ಥಾನ ಮರುಸ್ಥಾಪನೆ, ಕಾರಿಡಾರ್ ರಕ್ಷಣೆ, ಮುನ್ಸೂಚನಾ ವ್ಯವಸ್ಥೆಗಳು, ತ್ವರಿತ ಸ್ಪಂದನೆ, ಸಮುದಾಯದ ಭಾಗವಹಿಸುವಿಕೆ ಮತ್ತು ಜೀವನೋಪಾಯದ ವೈವಿಧ್ಯೀಕರಣದ ಮೇಲೆ ಗಮನಹರಿಸಿ ಪ್ರಾದೇಶಿಕ-ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ತಯಾರಿಸಲು 'ವಲಯ ಮಾನವ-ವನ್ಯಜೀವಿ ಸಂಘರ್ಷ ಅಪಾಯ ತಗ್ಗಿಸುವಿಕೆ ಸಮಿತಿಗಳ' ರಚನೆಯನ್ನು ರಾಜ್ಯವು ಎತ್ತಿ ತೋರಿಸಿತು. ಸಮಿತಿಯು ವಲಯ ಯೋಜನಾ ವಿಧಾನವನ್ನು ಶ್ಲಾಘಿಸಿತು ಮತ್ತು ಇತರ ಸಂಘರ್ಷ-ಪೀಡಿತ ಭೂದೃಶ್ಯಗಳಲ್ಲಿ ಪುನರಾವರ್ತಿಸಲು ಇದರ ಫಲಿತಾಂಶಗಳ ದಾಖಲೀಕರಣವನ್ನು ಒತ್ತಿಹೇಳಿತು.
- ಕರ್ನಾಟಕ: ಇಂಜಿನಿಯರಿಂಗ್ ಹಸ್ತಕ್ಷೇಪಗಳು, ಎಐ-ಸಶಕ್ತ ಕಣ್ಗಾವಲು, ಕಮಾಂಡ್ ಸೆಂಟರ್ ಗಳು, ತ್ವರಿತ ಸ್ಪಂದನಾ ಪಡೆಗಳು, ಸಮುದಾಯ ಸ್ವಯಂಸೇವಕ ಜಾಲಗಳು ಮತ್ತು 'ಇ-ಪರಿಹಾರ' ಡಿಜಿಟಲ್ ಪರಿಹಾರ ವ್ಯವಸ್ಥೆಗಳನ್ನು ಆಧರಿಸಿದ ಮುನ್ಸೂಚಕ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ತನ್ನ ಸಮಗ್ರ ಆರು-ಸ್ತಂಭಗಳ ಮಾದರಿಯನ್ನು ಕರ್ನಾಟಕವು ಪ್ರಸ್ತುತಪಡಿಸಿತು. ರಾಷ್ಟ್ರೀಯ ಮಾನವ-ವನ್ಯಜೀವಿ ಸಂಘರ್ಷ ಮಿಷನ್, ಸಾಮಾನ್ಯ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳು (ಎಸ್ ಒ ಪಿ), ಕಾರಿಡಾರ್ ಮರುಸ್ಥಾಪನೆ ಮತ್ತು ಗಡಿಯಾಚೆಗಿನ ಆನೆಗಳ ಸಂಖ್ಯೆಯನ್ನು ನಿರ್ವಹಿಸಲು ಬಲವಾದ ಅಂತರ-ರಾಜ್ಯ ಸಮನ್ವಯವನ್ನು ರಾಜ್ಯವು ಸಲಹೆ ಮಾಡಿತು. ಕರ್ನಾಟಕದ ತಂತ್ರಜ್ಞಾನ ಆಧಾರಿತ ವಿಧಾನವನ್ನು ಸಮಿತಿಯು ಶ್ಲಾಘಿಸಿತು ಮತ್ತು ರಾಜ್ಯಗಳ ನಡುವೆ ಉತ್ತಮ ಅಭ್ಯಾಸಗಳ ವ್ಯಾಪಕ ಪ್ರಸಾರವನ್ನು ಶಿಫಾರಸು ಮಾಡಿತು.
- ಕೇರಳ: ಮಾನವ-ವನ್ಯಜೀವಿ ಸಂಘರ್ಷವನ್ನು 'ರಾಜ್ಯ-ನಿರ್ದಿಷ್ಟ ವಿಕೋಪ' ಎಂದು ಘೋಷಿಸುವುದು, ತ್ವರಿತ ಸ್ಪಂದನಾ ಪಡೆಗಳು ಮತ್ತು ಪ್ರಾಥಮಿಕ ಸ್ಪಂದನಾ ಪಡೆಗಳ ನಿಯೋಜನೆ, 273 ಸಂಘರ್ಷ ಪೀಡಿತ ಪಂಚಾಯತಿಗಳ ಗುರುತಿಸುವಿಕೆ ಮತ್ತು 'ಜನ ಜಾಗ್ರತಾ ಸಮಿತಿಗಳು' ಹಾಗೂ 'ಸರ್ಪಾ' (SARPA) ಸ್ವಯಂಸೇವಕ ಕಾರ್ಯಕ್ರಮದಂತಹ ಸಮುದಾಯ ಆಧಾರಿತ ಉಪಕ್ರಮಗಳ ಅನುಷ್ಠಾನ ಸೇರಿದಂತೆ ತನ್ನ ಸಮಗ್ರ ಸಾಂಸ್ಥಿಕ ಚೌಕಟ್ಟನ್ನು ರಾಜ್ಯವು ಎತ್ತಿ ತೋರಿಸಿತು. ವನ್ಯಜೀವಿ ಕಾರಿಡಾರ್ ಮರುಸ್ಥಾಪನೆ, ಆವಾಸಸ್ಥಾನ ನಿರ್ವಹಣೆ, ಜವಾಬ್ದಾರಿಯುತ ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯನ್ನು ಸಹ ರಾಜ್ಯವು ಒತ್ತಿಹೇಳಿತು. ಕೇರಳದ ಬಲವಾದ ಸಾಂಸ್ಥಿಕ ಮತ್ತು ಸಮುದಾಯ ಆಧಾರಿತ ವಿಧಾನವನ್ನು ಸಮಿತಿಯು ಗಮನಿಸಿತು ಮತ್ತು ಇತರ ರಾಜ್ಯಗಳೊಂದಿಗೆ ಯಶಸ್ವಿ ಕ್ರಮಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಲು ಕರೆ ನೀಡಿತು.
- ಮಧ್ಯಪ್ರದೇಶ: ಎಐ-ಸಶಕ್ತ ಕಣ್ಗಾವಲು, ಜಿಪಿಎಸ್ ಟ್ರ್ಯಾಕಿಂಗ್, ಡ್ರೋನ್ ಗಳು, ಗಜರಕ್ಷಕ್, ತ್ವರಿತ ಸ್ಪಂದನಾ ಪಡೆಗಳು, ಪ್ರಭೇದ-ನಿರ್ದಿಷ್ಟ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳು, ಸಮಯೋಚಿತ ಪರಿಹಾರ ಮತ್ತು 'ಬಾಘ್ ಮಿತ್ರ', 'ಹಾಥಿ ಮಿತ್ರ' ಹಾಗೂ ಪರಿಸರ ಅಭಿವೃದ್ಧಿ ಸಮಿತಿಗಳ ಮೂಲಕ ವ್ಯಾಪಕ ಸಮುದಾಯ ಭಾಗವಹಿಸುವಿಕೆಯನ್ನು ಸಂಯೋಜಿಸುವ ಮಾನವ-ವನ್ಯಜೀವಿ ಸಂಘರ್ಷ ಶಮನಕ್ಕಾಗಿ ತನ್ನ 'ತಡೆಗಟ್ಟುವಿಕೆಗೆ ಮೊದಲ ಆದ್ಯತೆ' ಮಾದರಿಯನ್ನು ಮಧ್ಯಪ್ರದೇಶ ಪ್ರಸ್ತುತಪಡಿಸಿತು. ಆವಾಸಸ್ಥಾನ ನಿರ್ವಹಣೆ, ವನ್ಯಜೀವಿ ಆರೋಗ್ಯ ಬೆಂಬಲ ಮತ್ತು ಸಂಘರ್ಷದ ಪ್ರಾಣಿಗಳ ಸ್ಥಳಾಂತರ ಸೇರಿದಂತೆ ವಿಜ್ಞಾನ-ಆಧಾರಿತ ಪ್ರಭೇದ ನಿರ್ವಹಣೆಯನ್ನು ಸಹ ರಾಜ್ಯವು ಎತ್ತಿ ತೋರಿಸಿತು. ತಂತ್ರಜ್ಞಾನ, ಸಮುದಾಯದ ಭಾಗವಹಿಸುವಿಕೆ ಮತ್ತು ಸಕಾಲಿಕ ಪರಿಹಾರ ಕಾರ್ಯವಿಧಾನಗಳ ಸಂಯೋಜನೆಯನ್ನು ಸಮಿತಿಯು ಶ್ಲಾಘಿಸಿತು ಮತ್ತು ಮುನ್ಸೂಚಕ ಸಂಘರ್ಷ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು ಕರೆ ನೀಡಿತುಸಿತು.
- ಉತ್ತರಾಖಂಡ: ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, 24×7 ಸಹಾಯವಾಣಿ (1926), ಇ-ಕಣ್ಗಾವಲು, ಜಿಪಿಎಸ್ ಟ್ರ್ಯಾಕಿಂಗ್, ಆವಾಸಸ್ಥಾನ ಮರುಸ್ಥಾಪನೆ, ಬಯೋ-ಫೆನ್ಸಿಂಗ್, ಸಮಯೋಚಿತ ಪರಿಹಾರ ಮತ್ತು ಗ್ರಾಮ ಆಧಾರಿತ ಸ್ವಯಂಸೇವಕ ಜಾಲಗಳ ಮೂಲಕ ಆದ್ಯತೆಯ ಭೂದೃಶ್ಯಗಳಲ್ಲಿ ಸಂಘರ್ಷ ಶಮನಕ್ಕಾಗಿ ತನ್ನ ಆಯಕಟ್ಟಿನ ಮಾರ್ಗಸೂಚಿಯನ್ನು ರಾಜ್ಯವು ಪ್ರಸ್ತುತಪಡಿಸಿತು. 'ಲಿವಿಂಗ್ ವಿತ್ ಲೆಪರ್ಡ್ಸ್/ಟೈಗರ್ಸ್' ಉಪಕ್ರಮದ ಅಡಿಯಲ್ಲಿ ವನ್ಯಜೀವಿ-ಸಂವೇದನಾಶೀಲ ಭೂದೃಶ್ಯ ಯೋಜನೆ, ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಗಳು ಮತ್ತು ಸಹಬಾಳ್ವೆ ಕ್ರಮಗಳನ್ನು ಬಲಪಡಿಸುವುದರ ಮೇಲೆ ಗಮನಹರಿಸುವ ತನ್ನ ದೀರ್ಘಕಾಲೀನ ಕಾರ್ಯತಂತ್ರವನ್ನು ರಾಜ್ಯವು ವಿವರಿಸಿತು. ಉತ್ತರಾಖಂಡದ ಸಮಗ್ರ ಭೂದೃಶ್ಯ ವಿಧಾನವನ್ನು ಸಮಿತಿಯು ಶ್ಲಾಘಿಸಿತು ಮತ್ತು ತಂತ್ರಜ್ಞಾನ ಸಶಕ್ತ ಮುನ್ನೆಚ್ಚರಿಕರ ವ್ಯವಸ್ಥೆಗಳು ಹಾಗೂ ಸಮುದಾಯದ ಸಿದ್ಧತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿತು.
- ಉತ್ತರ ಪ್ರದೇಶ: ರಾಜ್ಯದಲ್ಲಿನ ಹೆಚ್ಚಿನ ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳಿಗೆ ಚಿರತೆ ಸಂಬಂಧಿತ ಘಟನೆಗಳೇ ಕಾರಣವಾಗಿದ್ದು, ತೆರಾಯ್ ಆರ್ಕ್ ಲ್ಯಾಂಡ್‌ಸ್ಕೇಪ್ ಇದರ ಪ್ರಮುಖ ತಾಣವಾಗಿದೆ ಎಂದು ಉತ್ತರ ಪ್ರದೇಶ ಎತ್ತಿ ತೋರಿಸಿತು. ತ್ವರಿತ ಸ್ಪಂದನಾ ಪಡೆಗಳು, ರಕ್ಷಣಾ ಕೇಂದ್ರಗಳು (4 ನಿರ್ಮಿಸಲಾಗಿದೆ), ಸೌರ ಬೇಲಿ, ಮುನ್ನೆಚ್ಚರಿಕೆ ವ್ಯವಸ್ಥೆಗಳು, ಸಮುದಾಯ ಸ್ವಯಂಸೇವಕ ಕಾರ್ಯಕ್ರಮಗಳು, ವೈಜ್ಞಾನಿಕ ಮೇಲ್ವಿಚಾರಣೆ ಮತ್ತು ಸಂರಕ್ಷಿತ ಪ್ರದೇಶಗಳ ಆಚೆಗೆ ಬಲಪಡಿಸಿದ ಸಂರಕ್ಷಣಾ ಹಸ್ತಕ್ಷೇಪಗಳನ್ನು ಆಧರಿಸಿದ ತನ್ನ ಕಾರ್ಯತಂತ್ರವನ್ನು ರಾಜ್ಯವು ಪ್ರಸ್ತುತಪಡಿಸಿತು. ವೈಜ್ಞಾನಿಕ ನಿರ್ವಹಣೆಯ ಮೇಲೆ ರಾಜ್ಯವು ನೀಡಿರುವ ಗಮನವನ್ನು ಸಮಿತಿಯು ಶ್ಲಾಘಿಸಿತು ಮತ್ತು ಹೆಚ್ಚಿನ ಸಂಘರ್ಷದ ಸ್ಥಳಗಳಲ್ಲಿ ಸಮುದಾಯ ಆಧಾರಿತ ಶಮನ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ನಿರಂತರವಾಗಿ ಬಲಪಡಿಸಲು ಸಲಹೆ ನೀಡಿತು.

ಕೇಂದ್ರ ಪರಿಸರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ರಾಜ್ಯಗಳು ಕೈಗೊಂಡ ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಮಾನವ-ವನ್ಯಜೀವಿ ಸಂಘರ್ಷದ ಸವಾಲನ್ನು ವೈಜ್ಞಾನಿಕ ನಿರ್ವಹಣೆ, ಸಾಂಸ್ಥಿಕ ಸಮನ್ವಯ, ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ ಮತ್ತು ಸ್ಥಳೀಯ ಸಮುದಾಯಗಳ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಸಂಯೋಜಿಸುವ ಸಮತೋಲಿತ ವಿಧಾನದ ಮೂಲಕ ಪರಿಹರಿಸಬೇಕು ಎಂದು ಹೇಳಿದರು. ರಾಷ್ಟ್ರೀಯ ಮಾನವ-ವನ್ಯಜೀವಿ ಸಂಘರ್ಷ ಪೋರ್ಟಲ್ ಮತ್ತು ಶ್ರೇಷ್ಠತಾ ಕೇಂದ್ರವು ದತ್ತಾಂಶ-ಆಧಾರಿತ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು, ಜ್ಞಾನ ವಿನಿಮಯವನ್ನು ಸುಗಮಗೊಳಿಸಲು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲು ಪ್ರಮುಖ ಸಾಂಸ್ಥಿಕ ಚೌಕಟ್ಟನ್ನು ಒದಗಿಸುತ್ತದೆ ಎಂದು ಒತ್ತಿಹೇಳಿದರು. ಇದಕ್ಕೂ ಮುನ್ನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್, ಆವಾಸಸ್ಥಾನ ಆಧಾರಿತ ವೈಜ್ಞಾನಿಕ ಅಧ್ಯಯನವನ್ನು ಅದರ ಸಾಮರ್ಥ್ಯದ ಮೇಲೆ ನಡೆಸುವ ಅಗತ್ಯವಿದೆ ಮತ್ತು ವನ್ಯಜೀವಿಗಳ ಸಂಖ್ಯೆಯನ್ನು ಪೋಷಿಸಲು ಪರಿಸರ ವ್ಯವಸ್ಥೆಯು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದು ಸಂಪನ್ಮೂಲಗಳನ್ನು ಹೆಚ್ಚಿಸಲು ಮತ್ತು ಮಾನವ-ವನ್ಯಜೀವಿ ಸಂಘರ್ಷವನ್ನು ನಿರ್ವಹಿಸಲು ಉತ್ತಮ ಕಾರ್ಯತಂತ್ರವನ್ನು ಯೋಜಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಭಾರತದ ಸಮೃದ್ಧ ವನ್ಯಜೀವಿ ಪರಂಪರೆಯ ದೀರ್ಘಕಾಲೀನ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಯತ್ನಗಳನ್ನು ಬಲಪಡಿಸಲು ಅಗತ್ಯವಿರುವ ಕ್ರಮಗಳ ಕುರಿತು ಸಂಸದರ ನಡುವಿನ ವಿವರವಾದ ಚರ್ಚೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.
*****
(रिलीज़ आईडी: 2294741)
आगंतुक पटल : 64
इस विज्ञप्ति को इन भाषाओं में पढ़ें:
English
,
Urdu
,
हिन्दी
,
Manipuri
,
Assamese
,
Bengali
,
Bengali-TR
,
Gujarati
,
Tamil
,
Telugu
,
Malayalam