ಜವಳಿ ಸಚಿವಾಲಯ
ಭಾರತದ ಕೈಮಗ್ಗ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಯನ್ನು ಗುರುತಿಸಿ, ಆಗಸ್ಟ್ 7 ರ ರಾಷ್ಟ್ರೀಯ ಕೈಮಗ್ಗ ದಿನದಂದು 2025ರ ಕೈಮಗ್ಗ ಪ್ರಶಸ್ತಿಗಳನ್ನು ರಾಷ್ಟ್ರಪತಿಯವರು ಪ್ರದಾನ ಮಾಡಲಿದ್ದಾರೆ
प्रविष्टि तिथि:
04 AUG 2026 6:53PM by PIB Bengaluru
ಭಾರತದ ಕೈಮಗ್ಗ ರಂಗಕ್ಕೆ ನೀಡಿದ ಮಹೋನ್ನತ ಕೊಡುಗೆಯನ್ನು ಪುರಸ್ಕರಿಸಲು, 2026ರ ಆಗಸ್ಟ್ 7 ರಂದು ನಡೆಯಲಿರುವ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರು ಪ್ರತಿಷ್ಠಿತ ಕೈಮಗ್ಗ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಈ ಸಮಾರಂಭದಲ್ಲಿ ಕೇಂದ್ರ ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್, ಹಿರಿಯ ಗಣ್ಯರು, ಕೈಮಗ್ಗ ಉದ್ಯಮದ ಪ್ರತಿನಿಧಿಗಳು, ಶ್ರೇಷ್ಠ ನೇಕಾರರು, ವಿನ್ಯಾಸಕರು, ರಫ್ತುದಾರರು, ಕುಶಲಕರ್ಮಿಗಳು ಮತ್ತು ಇತರ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಭಾರತದ ಭವ್ಯ ಕೈಮಗ್ಗ ಪರಂಪರೆಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡೊಯ್ದ 22 ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತಿದ್ದು, ಇವರಲ್ಲಿ 3 ಮಂದಿಗೆ 'ಸಂತ ಕಬೀರ್ ಕೈಮಗ್ಗ ಪ್ರಶಸ್ತಿ' ಹಾಗೂ 19 ಮಂದಿಗೆ 'ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ' ನೀಡಿ ಪುರಸ್ಕರಿಸಲಾಗುವುದು.
(List of Sant Kabir and National Handloom Awardees for 2025)
ಕೈಮಗ್ಗ ಕ್ಷೇತ್ರದಲ್ಲಿನ ಶ್ರೇಷ್ಠತೆಯ ಆಚರಣೆ
ನೇಯ್ಗೆ, ತಾಂತ್ರಿಕ ನಾವೀನ್ಯತೆ, ನವೀನ ವಿನ್ಯಾಸ, ಮಾರುಕಟ್ಟೆ ವಿಸ್ತರಣೆ, ನವೋದ್ಯಮ ಹಾಗೂ ಉತ್ಪಾದಕ ಸಂಸ್ಥೆಗಳ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಸಾಧಕರಿಗೆ ಜವಳಿ ಸಚಿವಾಲಯವು 2025 ರ ‘ಸಂತ ಕಬೀರ್’ ಮತ್ತು ‘ರಾಷ್ಟ್ರೀಯ ಕೈಮಗ್ಗ’ ಪ್ರಶಸ್ತಿಗಳನ್ನು ಘೋಷಿಸಿದೆ.
‘ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಯೋಜನೆ’ಯ (ಎನ್ ಎಚ್ ಡಿ ಪಿ) ಮಾರುಕಟ್ಟೆ ನೆರವು ಘಟಕದ ಅಡಿಯಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಇದು ದೇಶದ ಕೈಮಗ್ಗ ವಲಯದಲ್ಲಿ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಗೌರವವಾಗಿದೆ.
ಭಾರತದ ಕೈಮಗ್ಗ ಪರಂಪರೆಯನ್ನು ಮತ್ತಷ್ಟು ಗಟ್ಟಿಗಳಿಸಿ, ದೇಶ-ವಿದೇಶಗಳ ಮಾರುಕಟ್ಟೆಯಲ್ಲಿ ನಮ್ಮ ಕಲೆಗೆ ಸೂಕ್ತ ಸ್ಪರ್ಧಾತ್ಮಕ ಬಲ ನೀಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಈ ಸಮಾರಂಭದಲ್ಲಿ ಸಂಸದರು, ಹಿರಿಯ ಆಡಳಿತಾಧಿಕಾರಿಗಳು, ಉದ್ಯಮ ರಂಗದ ತಜ್ಞರು, ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ದೇಶದ ಮೂಲೆಮೂಲೆಗಳಿಂದ ಆಗಮಿಸುವ ನೇಕಾರರು ಪಾಲ್ಗೊಳ್ಳಲಿದ್ದಾರೆ.
ಕೈಮಗ್ಗ ಪ್ರಶಸ್ತಿಗಳು
ಕೈಮಗ್ಗ ವಲಯದಲ್ಲಿ ಶ್ರೇಷ್ಠತೆ, ಹೊಸತನ ಮತ್ತು ನಿರಂತರ ಬದ್ಧತೆಯನ್ನು ಪ್ರೋತ್ಸಾಹಿಸುವುದೇ ಈ ಪ್ರಶಸ್ತಿಗಳ ಮುಖ್ಯ ಉದ್ದೇಶ. ಸಾಂಪ್ರದಾಯಿಕ ಕೌಶಲಗಳನ್ನು ಉಳಿಸಿಕೊಳ್ಳುತ್ತಲೇ ಆಧುನಿಕ ತಂತ್ರಜ್ಞಾನ ಬಳಸುವುದು, ಉತ್ಪನ್ನಗಳಲ್ಲಿ ವೈವಿಧ್ಯತೆ ತರುವುದು ಮತ್ತು ನೇಕಾರ ಸಮುದಾಯದ ಸಾಮಾಜಿಕ-ಆರ್ಥಿಕ ಪ್ರಗತಿಗೆ ಕೊಡುಗೆ ನೀಡುವುದನ್ನು ಈ ಪ್ರಶಸ್ತಿಗಳು ಗೌರವಿಸುತ್ತವೆ.
ಸಂತ ಕಬೀರ್ ಕೈಮಗ್ಗ ಪ್ರಶಸ್ತಿ
ಭಾರತದ ಸಾಂಪ್ರದಾಯಿಕ ನೇಯ್ಗೆ ಕಲೆಯನ್ನು ಉಳಿಸಿ-ಬೆಳೆಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಅಪ್ರತಿಮ ಕರಕುಶಲತೆ ಪ್ರದರ್ಶಿಸಿದ ನೇಕಾರರಿಗೆ ನೀಡಲಾಗುವ ದೇಶದ ಅತ್ಯುನ್ನತ ಗೌರವವಿದು.
ಅಸಾಧಾರಣ ತಾಂತ್ರಿಕ ನೈಪುಣ್ಯ, ಹೊಸತನ, ಕ್ಷೇತ್ರಕ್ಕೆ ನೀಡಿದ ನಿರಂತರ ಕೊಡುಗೆ, ಪಾರಂಪರಿಕ ನೇಯ್ಗೆಯ ಪ್ರಚಾರ, ಉದಯೋನ್ಮುಖ ಕುಶಲಕರ್ಮಿಗಳಿಗೆ ಮಾರ್ಗದರ್ಶನ ಮತ್ತು ಸಮುದಾಯದ ಏಳಿಗೆಗೆ ಶ್ರಮಿಸಿದ ಆಧಾರದ ಮೇಲೆ ಪುರಸ್ಕೃತರನ್ನು ಆಯ್ಕೆ ಮಾಡಲಾಗುತ್ತದೆ.
ಈ ಪ್ರಶಸ್ತಿಯು ಒಳಗೊಂಡಿರುವ ಗೌರವಗಳು:
· ಸ್ಮರಣಿಕೆಯಲ್ಲಿ ಅಳವಡಿಸಿದ ಚಿನ್ನದ ನಾಣ್ಯ
· ತಾಮ್ರಪತ್ರ
· ಶಾಲು
· ಪ್ರಶಸ್ತಿ ಪತ್ರ
ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ
ತಮ್ಮ ಕ್ಷೇತ್ರಗಳಲ್ಲಿ ಅಪಾರ ಸೃಜನಶೀಲತೆ, ಗುಣಮಟ್ಟ ಹಾಗೂ ನಾವೀನ್ಯತೆ ಮೆರೆದ ನೇಕಾರರು ಮತ್ತು ಪಾಲುದಾರರನ್ನು 'ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ' ಗೌರವಿಸುತ್ತದೆ.
ನಮ್ಮ ವೈವಿಧ್ಯಮಯ ಕೈಮಗ್ಗ ಪರಂಪರೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕರಕುಶಲತೆ, ಉತ್ಪನ್ನಗಳ ವೈವಿಧ್ಯತೆ ಹಾಗೂ ಮಾರುಕಟ್ಟೆ ವಿಸ್ತರಣೆಯಲ್ಲಿ ನಿರಂತರವಾಗಿ ಉನ್ನತ ಮಟ್ಟವನ್ನು ತಲುಪಲು ಕುಶಲಕರ್ಮಿಗಳಿಗೆ ಮತ್ತು ಸಂಸ್ಥೆಗಳಿಗೆ ಸ್ಪೂರ್ತಿ ನೀಡುವುದು ಈ ಪ್ರಶಸ್ತಿಯ ಆಶಯ.
ಈ ಪ್ರಶಸ್ತಿಯು ಒಳಗೊಂಡಿರುವ ಗೌರವಗಳು:
· ತಾಮ್ರಪತ್ರ
· ಶಾಲು
· ಪ್ರಶಸ್ತಿ ಪತ್ರ
ಆಯ್ಕೆ ಪ್ರಕ್ರಿಯೆ
ನೇಯ್ಗೆ ವಿಭಾಗದ ಪ್ರಶಸ್ತಿ ವಿಜೇತರನ್ನು ವಲಯ, ಪ್ರಧಾನ ಕಚೇರಿ ಹಾಗೂ ಕೇಂದ್ರ ಮಟ್ಟದ ಆಯ್ಕೆ ಸಮಿತಿಗಳನ್ನು ಒಳಗೊಂಡ ಅತ್ಯಂತ ಕಟ್ಟುನಿಟ್ಟಿನ ಬಹುಹಂತದ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅನುಭವಿ ತಜ್ಞರು, ತಾಂತ್ರಿಕ ನಿಪುಣರು ಮತ್ತು ಹಿರಿಯ ಆಡಳಿತಾಧಿಕಾರಿಗಳನ್ನೊಳಗೊಂಡ ಈ ಸಮಿತಿಗಳು ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಅರ್ಜಿಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡುತ್ತವೆ.
ವಿನ್ಯಾಸ ಅಭಿವೃದ್ಧಿ, ಮಾರುಕಟ್ಟೆ, ನವೋದ್ಯಮಗಳು ಮತ್ತು ಉತ್ಪಾದಕ ಸಂಸ್ಥೆಗಳ ವಿಭಾಗಗಳ ಅರ್ಜಿಗಳನ್ನು ಪ್ರಧಾನ ಕಚೇರಿ ಹಾಗೂ ಕೇಂದ್ರ ಮಟ್ಟದ ಸಮಿತಿಗಳು ರಚನಾತ್ಮಕವಾಗಿ ಮೌಲ್ಯಮಾಪನ ಮಾಡಿದ ನಂತರವೇ ಅಂತಿಮ ಅಂಕಿತ ಬೀಳುತ್ತದೆ.
ಈ ಸಮಗ್ರ ಆಯ್ಕೆ ವಿಧಾನವು ಸಂಪೂರ್ಣ ಪಾರದರ್ಶಕತೆ, ವಸ್ತುನಿಷ್ಠತೆ ಮತ್ತು ನಿಜವಾದ ಸಾಧಕರಿಗೆ ಸೂಕ್ತ ಗುರುತಿಸುವಿಕೆಯನ್ನು ಖಚಿತಪಡಿಸುತ್ತದೆ.
(List of Sant Kabir and National Handloom Awardees for 2025)
*****
(रिलीज़ आईडी: 2294608)
आगंतुक पटल : 12